ಅಂಗಾರಕನ ಅಂಗಳದಲ್ಲಿ ರೋವರ್

7

ಅಂಗಾರಕನ ಅಂಗಳದಲ್ಲಿ ರೋವರ್

Published:
Updated:

ಕೆಂಪು ಕಾಯ ಮಂಗಳ ಗ್ರಹದ ಅನ್ವೇಷಣೆಗೆ ನಾಸಾ ಹಾರಿಬಿಟ್ಟಿರುವ `ಮಂಗಳ ವಿಜ್ಞಾನ ಪ್ರಯೋಗಾಲಯ ಬಾಹ್ಯಾಕಾಶ ನೌಕೆ~ಗೆ (ಎಂಎಸ್‌ಎಲ್) ಬರುವ ಆಗಸ್ಟ್ 5 ಮಹತ್ವದ ದಿನ. ಅಂದು ನೌಕೆಯು ಆ ಗ್ರಹದ ಹೊರ ವಾತಾವರಣದ ಅಂಚನ್ನು ಸ್ಪರ್ಶಿಸಲಿದೆ. 8500 ಪೌಂಡ್ ತೂಕದ ಈ ನೌಕೆ ಆ ವೇಳೆಗೆ ಗರಿಷ್ಠ ಗಂಟೆಗೆ 13,200 ಮೈಲು ವೇಗದಲ್ಲಿ ಒಟ್ಟಾರೆ 35. ಕೋಟಿ ಮೈಲು ಕ್ರಮಿಸಿರುತ್ತದೆ. ಆದರೂ ಅದರ ನಿರ್ಣಾಯಕ (ನಿಜವಾದ) ಕಾರ್ಯ ಆರಂಭವಾಗುವುದು ಹೊರ ವಾತಾವರಣದ ಅಂಚನ್ನು ಸ್ಪರ್ಶಿಸಿದ ನಂತರವಷ್ಟೇ!ಹೊರ ವಾತಾವರಣ ಸ್ಪರ್ಶಿಸಿದ ನಂತರ ಏಳು ನಿಮಿಷಗಳ ಕಾಲ ನೌಕೆಯು 80 ಮೈಲುಗಳಷ್ಟು ದೂರವನ್ನು ಮಂಗಳನ ನೆಲದೆಡೆಗೆ ನಂತರ ಗೇಲ್ ಕ್ರೇಟರ್ ಎಂಬ ಬೃಹತ್ ಕುಳಿಯಲ್ಲಿ ಹಠಾತ್ ಇಳಿಯಲಿದೆ.ಮಂಗಳ ಗ್ರಹದ ಶೋಧನೆಗೆ ಸಂಬಂಧಿಸಿದಂತೆ ಈವರೆಗೆ ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ನೌಕೆಯ ಜತೆ ಕಳುಹಿಸಲಾಗಿರುವ ರೋವರ್ `ಕ್ಯೂರಿಯಾಸಿಟಿ~ ಹಿಂದೆ ಇದೇ ಗ್ರಹಕ್ಕೆ ತೆರಳಿದ್ದ ಸ್ಪಿರಿಟ್ ಮತ್ತು ಆಪರ್ಚುನಿಟಿ ರೋವರ್‌ಗಳಿಗಿಂತ ಎರಡು ಪಟ್ಟು ಉದ್ದ ಹಾಗೂ ಐದು ಪಟ್ಟು ಹೆಚ್ಚು ತೂಕದ್ದಾಗಿದೆ.ಎಂಎಸ್‌ಎಲ್ ರೋವರ್ ಗ್ರಹದ ಮೇಲೆ ಇಳಿಯುವ ವಲಯ 150 ಚದುರ ಮೈಲುಗಳಾಗಿದ್ದು, ಇದು ಹಿಂದಿನವಕ್ಕಿಂತ ಮೂರನೇ ಒಂದರಷ್ಟು ಚಿಕ್ಕದಾಗಿದೆ. ಹೀಗಾಗಿ ರೋವರ್‌ನ ಇಳಿಯುವಿಕೆ ಅತ್ಯಂತ ನಿಖರವಾಗಿರುವುದು ಅಗತ್ಯ. ಈ ಹಿಂದಿನ ರೋವರ್‌ಗಳು 3 ತಿಂಗಳ ಅವಧಿಯಲ್ಲಿ ಗ್ರಹದ ಮೇಲೆ ಒಂದು ಮೈಲಿಗಿಂತ ಕಡಿಮೆ ದೂರ ಕ್ರಮಿಸಿದ್ದವು. ಆದರೆ ಕ್ಯೂರಿಯಾಸಿಟಿ 687 ದಿನಗಳ ಅವಧಿಯಲ್ಲಿ (ಮಂಗಳ ಗ್ರಹದ 1 ವರ್ಷ) 12 ಮೈಲುಗಳನ್ನು ಕ್ರಮಿಸಲಿದೆ.ಮಂಗಳನ ಮೇಲೆ ಜೀವಪೋಷಕ ವಾತಾವರಣ ಇದೆಯೇ? ಅಥವಾ ಹಿಂದೆ ಎಂದಾದರೊಮ್ಮೆ ಅಲ್ಲಿ ಇಂತಹ ವಾತಾವರಣ ಇತ್ತೇ? ಎಂಬುದನ್ನು ಅರಿಯುವುದು ಈ ಸಾಹಸಯಾನದ ಉದ್ದೇಶ. ಅದಕ್ಕಾಗಿ ಅತ್ಯಾಧುನಿಕ ಸಾಧನ ಸಲಕರಣೆಗಳನ್ನು ಎಂಎಸ್‌ಎಲ್ ನೌಕೆಯಲ್ಲಿ ಅಳವಡಿಸಲಾಗಿದೆ. ಈ ಅರ್ಥದಲ್ಲಿ ಹೇಳುವುದಾದರೆ ಇದು ಕೇವಲ ಮಂಗಳನ ಶೋಧ ಅಷ್ಟೇ ಅಲ್ಲ, ಹೊಸದಾಗಿ ಅಭಿವೃದ್ಧಿಪಡಿಸಿರುವ ಹಲವು ಸಾಧನಗಳು ಹಾಗೂ ತಂತ್ರಜ್ಞಾನಗಳ ಅಗ್ನಿಪರೀಕ್ಷೆಯೂ ಹೌದು. ಒಂದೊಮ್ಮೆ ಈ ಯಾನ ಯಶಸ್ವಿಯಾದರೆ ಮಂಗಳ ಗ್ರಹಕ್ಕೆ ಮನುಷ್ಯನನ್ನು ಕಳುಹಿಸುವ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳಲ್ಲಿ ಇದೇ ತಂತ್ರಜ್ಞಾನ, ಸಾಧನಗಳು ಬಳಕೆಯಾಗಲಿವೆ.ನೌಕೆ ಇಲ್ಲಿಂದ ಮಂಗಳನವರೆಗೆ ಯಾನ ಮಾಡುವುದೇನೂ ಇವತ್ತು ದೊಡ್ಡ ಸಂಗತಿಯಲ್ಲ. ಆದರೆ ಆ ಗ್ರಹದ ವಾತಾವರಣ ಪ್ರವೇಶಿಸಿದ ನಂತರ ಅದಕ್ಕೆ ಯಾವುದೇ ಧಕ್ಕೆಯಾಗದಿರುವುದು ಮುಖ್ಯ. ನೌಕೆಯನ್ನು ರೂಪಿಸುವ ಎಂಜಿನಿಯರ್‌ಗಳಿಗೆ ಕೂಡ ಇದೊಂದು ದೊಡ್ಡ ಸವಾಲು. ಈವರೆಗೆ ಮಂಗಳವನ್ನು ತಲುಪಿದ 11 ನೌಕೆಗಳ ಪೈಕಿ 5 ನೌಕೆಗಳು ಅಲ್ಲಿನ ವಾತಾವರಣವನ್ನು ಸ್ಪರ್ಶಿಸಿದ ಸಂದರ್ಭದಲ್ಲಿ, ಎತ್ತರ ತಗ್ಗಿಸಿಕೊಳ್ಳುವ ವೇಳೆ ಅಥವಾ ಅಲ್ಲಿನ ನೆಲವನ್ನು ಸ್ಪರ್ಶಿಸುವ ಸಂದರ್ಭದಲ್ಲಿ ವಿಫಲವಾಗಿವೆ. ಈ ಪ್ರಕ್ರಿಯೆಗೆ ಹಿಡಿಯುವ ಒಟ್ಟಾರೆ ಸಮಯ ಏಳು ನಿಮಿಷ ಮಾತ್ರ. ಆದರೆ ಈ ಏಳು ನಿಮಿಷಗಳಲ್ಲಿ ಒಂದಿಷ್ಟು ಲೋಪವಾದರೂ ಇಡೀ ಯೋಜನೆ ನಿರರ್ಥಕವಾಗುತ್ತದೆ. ಹೀಗಾಗಿಯೇ ಈ ಏಳು ನಿಮಿಷಗಳನ್ನು ಎಂಜಿನಿಯರ್‌ಗಳು `ಆತಂಕಭರಿತ ಏಳು ನಿಮಿಷಗಳು~ (ಸೆವೆನ್ ಮಿನಿಟ್ಸ್ ಆಫ್ ಟೆರರ್) ಎಂದೇ ಕರೆಯುತ್ತಾರೆ. ಈ ಹಂತದಲ್ಲಿ ನೌಕೆಯ ಸುರಕ್ಷತೆ ಹೆಚ್ಚಿಸುವ ಸಲುವಾಗಿ ಎಂಜಿನಿಯರ್‌ಗಳು ಈ ಹಿಂದೆ ಅನುಸರಿಸುತ್ತಿದ್ದ `ಬ್ಯಾಲಿಸ್ಟಿಕ್ ಎಂಟ್ರಿ~ಗೆ ಬದಲಾಗಿ ಈಗ `ದಿ ಸ್ಕೈ ಕ್ರೇನ್~ ಎಂಬ ಹೊಸ ಲ್ಯಾಂಡಿಂಗ್ ಕ್ರಮ ಅಭಿವೃದ್ಧಿಪಡಿಸಿದ್ದಾರೆ.ನೌಕೆಯಲ್ಲಿ ಇನ್ನೇನಿದೆ?

* ರೋವರ್‌ಗೆ ಚಾಲನಾ ಶಕ್ತಿ ಒದಗಿಸುವ ಸಲುವಾಗಿ 100 ಪೌಂಡ್ ತೂಕದ ಪರಮಾಣು ಜನರೇಟರ್‌ನ್ನು ಇದು ಹೊಂದಿರುತ್ತದೆ. ಇದಕ್ಕಾಗಿ ಅದರಲ್ಲಿ 10.6 ಪೌಂಡ್ ಪ್ಲುಟೋನಿಯಂ ಇರಿಸಲಾಗಿರುತ್ತದೆ.* ತಾನು ಸಾಗಬೇಕಾದ ಮಾರ್ಗ, ಮಾಡಬೇಕಾದ ಕೆಲಸಗಳ ಬಗ್ಗೆ ವಿಜ್ಞಾನಿಗಳು ಇಲ್ಲಿಂದ ನಿರ್ದೇಶನ ನೀಡುತ್ತಾರಾದರೂ ಬಹಳಷ್ಟು ಕಾರ್ಯಗಳನ್ನು ರೋವರ್ ಸ್ವಯಂಚಾಲಿತವಾಗಿ ಮಾಡಬೇಕಾಗುತ್ತದೆ. ಯಾವುದೇ ಅಪಾಯದ ಸಂದರ್ಭಗಳನ್ನು ಮುಂಚೆಯೇ ಊಹಿಸುವ ಸಲುವಾಗಿ `3ಡಿ~ ಛಾಯಾಚಿತ್ರ ತೆಗೆಯಬಲ್ಲ ಒಂದು ಜೊತೆ ಮಾಸ್ಟ್- ಮೌಂಟೆಡ್ ಸ್ಟೀರಿಯೊ ನ್ಯಾವ್‌ಕ್ಯಾಮ್(ಕ್ಯಾಮೆರಾ)ಗಳನ್ನು ಇರಿಸಲಾಗಿರುತ್ತದೆ. ಇಷ್ಟೇ ಅಲ್ಲದೆ ಎರಡು ಜೊತೆ ಸ್ಟೀರಿಯೊ ಫಿಷ್‌ಐ ಹ್ಯಾಜ್‌ಕ್ಯಾಮ್‌ಗಳೂ ಇರುತ್ತವೆ. ಛಾಯಾಚಿತ್ರಗಳನ್ನು ವಿಶ್ಲೇಷಿಸುವ ಫೋಟೊ- ರೆಕಗ್ನಿಷನ್ ಸಾಫ್ಟ್‌ವೇರ್ ಕೂಡ ಇರುತ್ತದೆ. ತನ್ನ ಸುತ್ತ ಇರುವ ಯಾವುದೇ ಅಡೆತಡೆಯನ್ನು ಗುರುತಿಸಿ ಸುರಕ್ಷಾ ಪಥದಲ್ಲಿ ಸಾಗಲು ಇದು ಸಹಾಯ ಮಾಡುತ್ತದೆ. *ಮಂಗಳನ ಅಂಗಳದಲ್ಲಿರಬಹುದಾದ ನಾನಾ ನಮೂನೆಯ ಬಂಡೆಗಳ ಪೈಕಿ ಯಾವ ಬಂಡೆ ಕೊರೆಯುವುದು ಸೂಕ್ತ ಎಂಬುದನ್ನು ತೀರ್ಮಾನಿಸುವ ಕಾರ್ಯವನ್ನು ರೋವರ್‌ನ `ಕೆಮ್‌ಕ್ಯಾಮ್~ ಮಾಡುತ್ತದೆ. ಮೌಂಟೆಡ್ ಲೇಸರ್, ದೂರದರ್ಶಕ, ಕ್ಯಾಮೆರಾ ಮತ್ತು ಸ್ಪೆಕ್ಟ್ರೊಗ್ರಾಫನ್ನು ಈ  ಕೆಮ್‌ಕ್ಯಾಮ್ ಒಳಗೊಂಡಿರುತ್ತದೆ. ಈ ಲೇಸರ್ 23 ಅಡಿ ದೂರದವರೆಗಿನ ವಸ್ತುವಿನವರೆಗೂ ಅವಗೆಂಪು(ಇನ್‌ಫ್ರಾರೆಡ್) ಕಿರಣಗಳನ್ನು ಚಿಮ್ಮಬಲ್ಲದು. ಇದರಿಂದ ಉತ್ಪತ್ತಿಯಾಗುವ ಉಷ್ಣತೆಗೆ ಬಂಡೆಯ ಕಣಗಳು ಬೆಳಕಿನಂತೆ ಮಿಂಚಿ ಆವಿ ರೂಪ ತಾಳುತ್ತವೆ. ದೂರದರ್ಶಕ ಈ ಬೆಳಕನ್ನು ಸೆರೆಹಿಡಿದು ಸ್ಪ್ರೆಕ್ಟ್ರೊಮೀಟರ್‌ಗೆ ರವಾನಿಸುತ್ತದೆ. ಈ ಬೆಳಕಿನ ತರಂಗದೂರಗಳನ್ನು ಆಧರಿಸಿ ಸ್ಟ್ರೆಕ್ಟ್ರೊಮೀಟರ್ ಬಂಡೆ ಯಾವ ಸ್ವರೂಪದ್ದು ಎಂಬುದನ್ನು ತಿಳಿದುಕೊಳ್ಳುತ್ತದೆ.* ಈ ಹಿಂದಿನ ಯಾನಗಳಲ್ಲಿ ರೋವರ್‌ಗಳು ಗ್ರಹದ ಮೇಲ್ಮೈನಿಂದ ಮಾತ್ರ ಮಣ್ಣು, ಬಂಡೆಯ ಮಾದರಿಗಳನ್ನು ಸಂಗ್ರಹಿಸುತ್ತಿದ್ದವು. ಆದರೆ ಸೌರ ವಿಕಿರಣದ ಪ್ರಭಾವದಿಂದಾಗಿ ಮೇಲ್ಮೈ ಮೇಲೆ ಸಾವಯವ ಸಂಯುಕ್ತ ವಸ್ತುಗಳು ಇರುವ ಸಾಧ್ಯತೆ ಕಡಿಮೆ. ಹೀಗಾಗಿ ಈ ಬಾರಿ ರೋವರ್‌ಗೆ ಆರು ಅಡಿ ಉದ್ದದ ರೋಬಾಟಿಕ್ ತೋಳುಗಳನ್ನು ಅಳವಡಿಸಿ, ಇದರ ತುದಿಗೆ ಅತ್ಯಧಿಕ ಸಾಮರ್ಥ್ಯದ ಡ್ರಿಲ್ಲರ್ ಜೋಡಿಸಲಾಗಿದೆ. ಈ ಡ್ರಿಲ್ಲರ್ ಬಂಡೆಯನ್ನು 2 ಇಂಚು ಆಳದವರೆಗೂ ಕೊರೆಯಬಲ್ಲದು.ಆತಂಕಭರಿತ 7 ನಿಮಿಷ ಪ್ರವೇಶ `0~ ನಿಮಿಷದಿಂದ

ಪ್ರವೇಶದ ಹಂತದಲ್ಲಿ ಎಂಎಸ್‌ಎಲ್‌ನಲ್ಲಿ ನಾಲ್ಕು ಪ್ರಮುಖ ಘಟಕಗಳಿರುತ್ತವೆ. ಹಿಂಬದಿ ಕೋಶ, ಉಷ್ಣ ನಿರೋಧಕ ಫಲಕ, ಇಳಿಯುವ ಘಟಕ ಮತ್ತು ಕ್ಯೂರಿಯಾಸಿಟಿ  ರೋವರ್ ಇವೇ ಆ ನಾಲ್ಕು ಅಂಗಗಳು. ಮಂಗಳದ ವಾತಾವರಣ ಪ್ರವೇಶಿಸುವ ಕೆಲವೇ ಕ್ಷಣಗಳ ಮುನ್ನ, ನೌಕೆಯ ಹಿಂಬದಿ ಕೋಶದಿಂದ ತಲಾ 165 ಪೌಂಡ್ ತೂಕದ ಎರಡು ಟಂಗ್‌ಸ್ಟನ್ ತೂಕ ಬೀಳುತ್ತದೆ. ಇದರಿಂದಾಗಿ ತೂಕದಲ್ಲಿ ಆಗುವ ವ್ಯತ್ಯಾಸ ನೌಕೆಯನ್ನು ತನ್ನ ಪ್ರಯಾಣದ ದಿಕ್ಕಿನಿಂದ ಓರೆಯಾಗುವಂತೆ ಮಾಡುತ್ತದೆ. ಇದು ನೌಕೆಗೆ ಮೇಲ್ಮುಖ ಬಲವನ್ನು ನೀಡುವುದಕ್ಕೆ ಪೂರಕವಾಗುವ ರೀತಿಯಲ್ಲಿರುತ್ತದೆ. ನೌಕೆ ಮೇಲೆ ನಿಯಂತ್ರಣ ಸಾಧಿಸಲೂ ಇದರಿಂದ ಅನುಕೂಲವಾಗುತ್ತದೆ. ಹಿಂಬದಿ ಕೋಶದಲ್ಲಿರುವ ಎಂಟು ಥ್ರಸ್ಟರ್‌ಗಳನ್ನು ಬಳಸಿಕೊಂಡು ಎಂಎಸ್‌ಎಲ್ ನೌಕೆ ತಾನು ಇಳಿಯಬೇಕಾದ ವಲಯದೆಡೆಗೆ ಧಾವಿಸುತ್ತದೆ. ಈ ವೇಳೆಗೆ, ಘರ್ಷಣೆಯಿಂದಾಗಿ ನೌಕೆಯ ವೇಗ ಗಂಟೆಗೆ 1000 ಮೈಲಿಗೆ ಇಳಿಯುತ್ತದೆ. ಈ ಹಂತದಲ್ಲಿ ನೌಕೆಯಿಂದ ಇನ್ನೂ ಆರು ತೂಕಗಳು ಕೆಳಗೆ ಬೀಳುತ್ತವೆ. ಇದು ಚಲನೆಗೆ ಅನುಗುಣವಾಗಿ ತನ್ನ ಕೋನವನ್ನು ಪುನರ್‌ಸಮತೋಲನ ಮಾಡಿಕೊಳ್ಳಲು ನೌಕೆಗೆ ನೆರವಾಗುತ್ತದೆ.ಎತ್ತರ ತಗ್ಗಿಸುವಿಕೆ

ಎಂಎಸ್‌ಎಲ್ ವೇಗ ಗಂಟೆಗೆ 900 ಮೈಲುಗಳಿಗೆ ಇಳಿಯುತ್ತಿದ್ದಂತೆ, ಅದು 51 ಅಡಿ ಉದ್ದದ ನೈಲಾನ್- ಪಾಲಿಯೆಸ್ಟರ್ ಪ್ಯಾರಾಚೂಟ್ ಇಳಿಬಿಡುತ್ತದೆ. ಇದಾದ ಒಂದೂವರೆ ನಿಮಿಷದೊಳಗೆ ನೌಕೆಯ ವೇಗ ಗಂಟೆಗೆ 180 ಮೈಲುಗಳಿಗೆ ತಗ್ಗುತ್ತದೆ. ಎಂಎಸ್‌ಎಲ್‌ನ ರಾಡಾರ್, ನೌಕೆಯು ನೆಲದಿಂದ ಐದು ಮೈಲಿ ಎತ್ತರದಲ್ಲಿದೆ ಎಂಬ ಸೂಚನೆ ನೀಡುತ್ತಿದ್ದಂತೆ ಅದರ ಉಷ್ಣ ನಿರೋಧಕ ಫಲಕ ಕೆಳಗೆ ಬೀಳುತ್ತದೆ. ಇದೇ ವೇಳೆ `ಮಾರ್ಸ್‌ ಡಿಸೆಂಟ್ ಇಮೇಜರ್~ ಎಂದು ಕರೆಯಲಾಗುವ ಸ್ಫುಟವಾದ ಚಿತ್ರಗಳನ್ನು ಸೆರೆಹಿಡಿಯಬಲ್ಲ ಕ್ಯಾಮೆರಾ ಕೆಲಸ ಶುರುಮಾಡುತ್ತದೆ. ನಂತರ ವಿಜ್ಞಾನಿಗಳು ಕ್ಯಾಮೆರಾ ಸೆರೆಹಿಡಿದ ದೃಶ್ಯಗಳನ್ನು ಆ ಪ್ರದೇಶದ ಬಗೆಗಿನ ಅಧ್ಯಯನ ಮಾಡಲು ಬಳಸುತ್ತಾರೆ. ಉಷ್ಣ ಫಲಕ ಕಳಚಿಬಿದ್ದ 80 ಸೆಕೆಂಡುಗಳ ನಂತರ ಎಂಎಸ್‌ಎಲ್‌ನ ಹಿಂಬದಿ ಕೋಶ ಹಾಗೂ ಅದರೊಂದಿಗೆ ಪ್ಯಾರಾಚೂಟ್ ಬೇರ್ಪಟ್ಟು, ಇಳಿಯುವ ಕೋಶ ಮತ್ತು ಕ್ಯೂರಿಯಾಸಿಟಿ ಮಾತ್ರ ನೌಕೆಯಲ್ಲಿ ಉಳಿಯುತ್ತವೆ.ನೆಲದ ಮೇಲೆ ಇಳಿಯುವಿಕೆ

ನೌಕೆ ನೆಲದ ಮೇಲ್ಮೈಯಿಂದ ಒಂದು ಮೈಲು ಎತ್ತರದಲ್ಲಿದ್ದಾಗ, ಇಳಿಯುವ ಕೋಶದಲ್ಲಿರುವ ಎಂಟು ರೆಟ್ರೋರಾಕೆಟ್‌ಗಳು ಉರಿಯಲು ಆರಂಭಿಸುತ್ತವೆ. ಇದರಿಂದ ಎಂಎಸ್‌ಎಲ್ ವೇಗ 40 ಸೆಕೆಂಡುಗಳ ಅವಧಿಯಲ್ಲಿ ಗಂಟೆಗೆ 1.7 ಮೈಲಿಗೆ ಕುಸಿಯುತ್ತದೆ. ಭೂಮಿಯಿಂದ 65 ಅಡಿ ಎತ್ತರದಲ್ಲಿರುವಾಗ ಇಳಿಯುವ ಕೋಶವು ರೋವರ್ `ಕ್ಯೂರಿಯಾಸಿಟಿ~ಯನ್ನು ನೈಲಾನ್ ಹುರಿಗಳ ಮೇಲೆ ಇಳಿಸಲು ಆರಂಭಿಸುತ್ತದೆ. ಬಾಹ್ಯಾಕಾಶ ಪರಿಭಾಷೆಯಲ್ಲಿ ಇದಕ್ಕೆ `ಸ್ಕೈ ಕ್ರೇನ್~ ಎನ್ನುತ್ತಾರೆ.

ಆಗ ರೋವರ್‌ನಲ್ಲಿರುವ ಕಂಪ್ಯೂಟರ್ ಅದಕ್ಕೆ ಜೋಡಣೆಯಾಗಿರುವ ವೈರ್ ಮೂಲಕ ಇಳಿಯುವ ಕೋಶಕ್ಕೆ ನಿರ್ದೇಶನಗಳನ್ನು ನೀಡಲು ಶುರುಮಾಡುತ್ತದೆ. ರೋವರ್ ನೆಲವನ್ನು ತಲುಪುತ್ತಿದ್ದಂತೆ 25 ಅಡಿ ಎತ್ತರದಲ್ಲಿರುವ ಇಳಿಯುವ ಕೋಶವು ನೈಲಾನ್ ಹುರಿಯನ್ನು ಇಳಿಬಿಟ್ಟು ಮೇಲೆ ಹಾರಲು ಶುರುಮಾಡುತ್ತದೆ. ಹೀಗೆ ರೋವರ್ ಮಂಗಳನ ಅಂಗಳಕ್ಕೆ ಇಳಿದ ನಂತರ ನಿಗದಿತ ಕೆಲಸಗಳನ್ನು ಕೈಗೊಳ್ಳಲು ಮೊದಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry