ಭಾನುವಾರ, ಏಪ್ರಿಲ್ 18, 2021
33 °C

ಅಂಗಾರಕನ ಅಂಗಳದಲ್ಲೊಂದು ಕುತೂಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್(ಪಿಟಿಐ): ಮಂಗಳ ಗ್ರಹದಲ್ಲಿ ಜೀವಿಗಳ ಬದುಕಿಗೆ ಪೂರಕ ವಾತಾವರಣ ಇರುವುದರ ಸಂಶೋಧನೆಗಾಗಿ ಕಳೆದ ವರ್ಷ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಉಡಾವಣೆ ಮಾಡಿದ್ದ `ರೋವರ್ ಕ್ಯೂರಿಯಾಸಿಟಿ~ ಹೆಸರಿನ `ವಿಜ್ಞಾನ ಪ್ರಯೋಗಾಲಯ~ ಸೋಮವಾರ ಯಶಸ್ವಿಯಾಗಿ ಮಂಗಳನ ಅಂಗಳ ಸ್ಪರ್ಶಿಸಿದೆ.ಬಾಹ್ಯಾಕಾಶ ನೌಕೆಯಿಂದಿಳಿದು ಮಂಗಳದ ಅಂಗಳ  ಸ್ಪರ್ಶಿಸಿದ `ಕ್ಯೂರಿಯಾಸಿಟಿ~ ರೋವರ್ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಕಪ್ಪು - ಬಿಳುಪಿನ ಚಿತ್ರಗಳನ್ನು ಭೂಮಿಗೆ ರವಾನಿಸಿದೆ. ಚಿತ್ರಗಳನ್ನು ಕಂಡ `ನಾಸಾ~ ಎಂಜಿನಿಯರ್ ಅಲೆನ್ ಚೆನ್, `ನಾವು ಮಂಗಳನ ಅಂಗಳದಲ್ಲಿ ಸುರಕ್ಷಿತವಾಗಿದ್ದೇವೆ~- ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.`ಕ್ಯೂರಿಯಾಸಿಟಿ~ - ಮಂಗಳ ವಿಜ್ಞಾನ ಪ್ರಯೋಗಾಲಯ  `ಅಂಗಾರಕ~ನ ಅಂಗಳದಲ್ಲಿ ಅಡಿಯಿಟ್ಟು ಅಂಗಾಂಗಳನ್ನು ಸಡಿಲಿಸುತ್ತಿದ್ದಂತೆ ಇತ್ತ ಹ್ಯೂಸ್ಟನ್‌ನಲ್ಲಿರುವ ಜೆಟ್ ಪ್ರೊಪುಲ್ಷನ್ ಪ್ರಯೋಗಾಲಯದ ರೋವರ್ ನಿಯಂತ್ರಣ ಕೊಠಡಿಯಲ್ಲಿ  ವಿಜ್ಞಾನಿಗಳ ಸಂಭ್ರಮ ಮುಗಿಲು ಮುಟ್ಟಿತು. `ರೋವರ್~ ರವಾನಿಸಿರುವ ಚಿತ್ರಗಳನ್ನು ಕಂಡು ಹರ್ಷ ಚಿತ್ತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ವಿಜ್ಞಾನಿಗಳ ಕಣ್ಣುಗಳಲ್ಲಿ ಆನಂದಬಾಷ್ಪ ಹರಿಯಿತು.ಈ `ವಿಜ್ಞಾನ ಪ್ರಯೋಗಾಲಯ~ ಎರಡು ವರ್ಷಗಳ ಕಾಲ ಮಂಗಳ ಗ್ರಹದಲ್ಲಿದ್ದು ಕಾರ್ಯಾಚರಣೆ ನಡೆಸಲಿದೆ. ಭೂತಕಾಲದಲ್ಲಿದ್ದ ಜೀವಿಗಳ ಕುರುಹುಗಳ ಪತ್ತೆ ಹಾಗೂ ಭವಿಷ್ಯತ್ತಿನಲ್ಲಿ ಜೀವಿಗಳು ಬದುಕಲು ಪೂರಕವಾದ ವಾತಾವರಣವಿರುವ ಕುರಿತು ಮಾಹಿತಿ ಸಂಗ್ರಹಿಸಲಿದೆ~. ಇದು ಜೀವಿಗಳನ್ನು ಹುಡುಕುವುದಿಲ್ಲ.

 

ಜೀವಿಗಳು ಬಿಟ್ಟಿರಬಹುದಾದ ಕುರುಹುಗಳನ್ನು ಮಾತ್ರ ಹುಡುಕುತ್ತದೆ~ ಎಂಬುದು ವಿಜ್ಞಾನಿಗಳು ಅಭಿಪ್ರಾಯವಾಗಿದೆ. ಇದಕ್ಕಾಗಿ `ಕ್ಯೂರಿಯಾಸಿಟಿ~ ಮಂಗಳನ ಅಂಗಳದಾದ್ಯಂತ ಸಂಚರಿಸಿ ಬಂಡೆಗಳ ಮೇಲಿನ ಕಣಗಳು, ಮಣ್ಣಿನ ಕಣಗಳನ್ನು ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸಿ ಮಾಹಿತಿಯನ್ನು ಭೂಮಿಗೆ ರವಾನಿಸಲಿದೆ.

 

ಈ ಮಾಹಿತಿ  ಜೀವಿಗಳ ವಾಸಕ್ಕೆ ಪೂರಕ ವಾತಾವರಣದ ವಿಶ್ಲೇಣೆಗೆ ನೆರವಾಗಲಿದೆ. ಈ ಮೊದಲೇ ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ನೀರಿನ ಸೆಲೆ ಪತ್ತೆ ಹಚ್ಚಿದ್ದರು. ಈಗ ಆ ಸ್ಥಳ ಒಣಗಿದೆ. ಅಲ್ಲೆಗ ಚಳಿಗಾಲದ ವಾತಾವರಣ ಜೊತೆಗೆ ದೂಳುಯುಕ್ತ ಸುಂಟರಗಾಳಿ ವ್ಯಾಪಿಸಿರುವಂತಹ ಸೂಚನೆಗಳು ವಿಜ್ಞಾನಿಗಳಿಗೆ ಲಭ್ಯವಾಗಿವೆ.`ಕ್ಯೂರಿಯಾಸಿಟಿ~ ಕೇವಲ ಜೀವಿಗಳನ್ನು ಅಥವಾ  ಸೂಕ್ಷ್ಮಾಣುಜೀವಿ ಪಳೆಯುಳಿಕೆಗಳ ಪತ್ತೆಗಾಗಿ ನಿರ್ಮಿಸಿದ್ದಲ್ಲ. ಜೀವಿಗಳ ಬದುಕಿಗೆ ಬೇಕಾದ ಇಂಗಾಲ, ಸಾರಜನಕ, ರಂಜಕ, ಗಂಧಕ ಮತ್ತು ಆಮ್ಲಜನಕದಂತಹ ರಾಸಾಯನಿಕ ಅಂಶಗಳನ್ನು ಪತ್ತೆ ಹಚ್ಚುವಲ್ಲಿಯೂ ಇದು ನೆರವಾಗಲಿದೆ~ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.ಈ `ಕ್ಯೂರಿಯಾಸಿಟಿ~ಯನ್ನು ಬಾಹ್ಯಾಕಾಶ ನೌಕೆಯ ನೆರವಿನೊಂದಿಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಭೊ ಮಂಡಲಕ್ಕೆ ಉಡಾಯಿಸಲಾಗಿತ್ತು. ಇದು ಒಟ್ಟು 570 ದಶಲಕ್ಷ ಕಿಲೋ ಮೀಟರ್‌ಗಳಷ್ಟು ದೂರವನ್ನು ಕ್ರಮಿಸಿದೆ.ರೋವರ್ ಜೊತೆಯಲ್ಲಿ

ಕ್ಯೂರಿಯಾಸಿಟಿ ರೋವರ್ - ಹತ್ತು ವೈಜ್ಞಾನಿಕ ಉಪಕರಣಗಳನ್ನು ಹೊತ್ತು ಸಾಗಿದೆ.  ಕಳೆದ ಬಾರಿ ಮಂಗಳ ಗ್ರಹಕ್ಕೆ ಕಳುಹಿಸಿದ್ದ ರೋವರ್‌ಗಿಂತ ಎರಡು ಪಟ್ಟು ಉದ್ದ ಹಾಗೂ ಐದು ಪಟ್ಟು ಭಾರದ್ದಾಗಿದೆ. ಕೊಂಡೊಯ್ದಿರುವ ಉಪಕರಣಗಳಲ್ಲಿ ದೂರದಿಂದಲೇ ಬಂಡೆಗಳನ್ನು ಕೊರೆದು ಮಣ್ಣಿನ ಕಣಗಳನ್ನು ಸಂಗ್ರಹಿಸುವ `ಲೇಸರ್ ಫೈರಿಂಗ್ ಸಾಧನ~ ವಿಶೇಷವಾಗಿದೆ.ಮಂಗಳ ಗ್ರಹದಲ್ಲಿ ಕಾರ್ಯಾಚರಣೆ ಆರಂಭಿಸಿರುವ `ಕ್ಯೂರಿಯಾಸಿಟಿ~, ತನ್ನ ಉದ್ದದ ತೋಳನ್ನು ಚಾಚಿ ಮಂಗಳದ ಅಂಗಳದಲ್ಲಿರುವ ಬಂಡೆಗಳನ್ನು ಲೇಸರ್ ಗನ್ ಮೂಲಕ ಒಡೆಯುತ್ತದೆ. ಅಲ್ಲಿಂದ ಕಣಗಳನ್ನು ಸಂಗ್ರಹಿಸಿ, ರೋವರ್‌ನ ಒಳಗೆ ಸಂಗ್ರಹಿಸುತ್ತದೆ. ಇದೇ ಸಂಗ್ರಹದ ವಿಶ್ಲೇಷಿಸಿದ ವಿವರಗಳನ್ನು ಹ್ಯೂಸ್ಟನ್ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ.

ಆತಂಕದ ಆ ಏಳು ನಿಮಿಷಗಳು!

ಕ್ಯೂರಿಯಾಸಿಟಿ ಮಂಗಳ ಗ್ರಹದಲ್ಲಿ ಇಳಿಯುವ ಆ ಏಳು ನಿಮಿಷಗಳು ನಿಜಕ್ಕೂ ನಮಗೆ ಆತಂಕದ ಕ್ಷಣಗಳು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕಾರಣ ಇಷ್ಟೆ; ಗಂಟೆಗೆ ಮಂಗಳ ಗ್ರಹದ ವಾತಾವರಣದಲ್ಲಿ 13,000 ಕಿ.ಮೀ ವೇಗದಲ್ಲಿ ಚಲಿಸುವ ಕ್ಯೂರಿಯಾಸಿಟಿ ಹೊತ್ತ ನೌಕೆ, ಇಳಿಯುವ ಹೊತ್ತಿಗೆ ಗಂಟೆಗೆ 2 ಕಿ.ಮೀ ವೇಗಕ್ಕೆ ಇಳಿಸಬೇಕಿತ್ತು. ಇದರ ಜೊತೆಗೆ ಭೂಮಿಯ ವಾತಾವರಣ ಹಾಗೂ ಮಂಗಳ ಗ್ರಹದ ವಾತಾವರಣದ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸವಿತ್ತು. ಹೀಗಾಗಿ ಮಂಗಳ ಗ್ರಹದ ಮೇಲೆ ಕ್ಯೂರಿಯಾಸಿಟಿ ರೋವರ್ ಇಳಿಯುವ ಆ ಕ್ಷಣಗಳು ವಿಜ್ಞಾನಿಗಳಲ್ಲಿ ಆತಂಕವನ್ನು ಸೃಷ್ಟಿಸಿದ್ದವು. ಈ ಎಲ್ಲ ನಾಟಕೀಯ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.