ಅಂಚೆ ಇಲಾಖೇತರ ನೌಕರರ ಮುಷ್ಕರ

7

ಅಂಚೆ ಇಲಾಖೇತರ ನೌಕರರ ಮುಷ್ಕರ

Published:
Updated:

ಜಮಖಂಡಿ: ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಕಾಯಂಗೊಳಿಸುವುದು ಸೇರಿದಂತೆ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಮಖಂಡಿ ಉಪವಿಭಾಗದ ವ್ಯಾಪ್ತಿಯ ಗ್ರಾಮೀಣ ಭಾಗದ ಅಂಚೆ ಇಲಾಖೇತರ ನೌಕರರು ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನವಾದ ಗುರುವಾರವೂ ಮುಂದುವರಿದಿತ್ತು.ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘ ಕೊಟ್ಟ ಕರೆಯ ಮೇರೆಗೆ ಸಂಘದ ಜಮಖಂಡಿ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಮುಷ್ಕರ ನಡೆಸುತ್ತಿದ್ದಾರೆ. ಜಮಖಂಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಮುಧೋಳ, ಬೀಳಗಿ ಹಾಗೂ ಜಮಖಂಡಿ ತಾಲ್ಲೂಕುಗಳ 94 ಗ್ರಾಮ ಗಳ ಅಂಚೆ ಇಲಾಖೇತರ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.ಅಂಚೆ ಇಲಾಖೇತರ ನೌಕರರನ್ನು ಹಗಲಿರುಳು ದುಡಿಸಿಕೊಂಡರೂ ಅಂಚೆ ಇಲಾಖೆ ನೌಕಕರೆಂದು ಪರಿಗಣಿಸುತ್ತಿಲ್ಲ. ಬ್ರಿಟಿಷರು ದೇಶವನ್ನು ಬಿಟ್ಟು ತೊಲಗಿದ್ದರೂ ಅಂಚೆ ಇಲಾಖೆಯಲ್ಲಿ ಬ್ರಿಟಿಷರ ಪದ್ಧತಿಗಳು ಇನ್ನೂ ಮುಂದುವರಿದುಕೊಂಡು ಹೋಗುತ್ತಿವೆ ಎಂದು ಪ್ರತಿಭಟನಾನಿರತ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಅಂಚೆ ಇಲಾಖೆ ನೌಕರರಿಗೆ ದೊರೆ ಯುವ ಯಾವೊಂದು ಸೌಲಭ್ಯ ಇಲಾಖೇತರ ನೌಕರರಿಗೆ ಲಭ್ಯವಿಲ್ಲ. ಬೋನಸ್ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬಟವಡೆ ಆಗ ಬೇಕಾದ ಹಣ ಬಿಡುಗಡೆಯಾದ ಮೇಲೆ ಮೊದಲು ಇಲಾಖೆ ನೌಕರರಿಗೆ ಬಟವಡೆ ಮಾಡಿ ನಂತರ ಎಷ್ಟೋ ದಿನಗಳು ಕಳೆದ ಮೇಲೆ ಕೂಲಿ ಆಳುಗಳಿಗೆ ವಿತರಿಸುವ ರೀತಿಯಲ್ಲಿ ಬಟವಡೆ ಮಾಡುವ ಕೆಟ್ಟ ಪದ್ಧತಿ ಇದೆ ಎಂದು ದೂರಿದರು.ಅಂಚೆ ಇಲಾಖೆ ನೌಕರರಿಗೆ ನೀಡುವಷ್ಟೇ ಬೋನಸ್ ಹಣವನ್ನು ಇಲಾಖೇತರ ನೌಕರರಿಗೂ ನೀಡಬೇಕು. ಪ್ರತಿ 20 ಸಾವಿರ ರೂಪಾಯಿ ವ್ಯವ ಹಾರಕ್ಕೆ ಒಂದು ಪಾಯಿಂಟ್ ಎಂಬ ಕಾರ್ಯಭಾರ ಲೆಕ್ಕಾಚಾರವನ್ನು ಕೈಬಿಟ್ಟು ಮೊದಲಿನಂತೆ ಒಂದು ಸಾವಿರ ರೂಪಾಯಿಯನ್ನು ಮುಂದುವರಿ ಸಬೇಕು ಎಂದು ಒತ್ತಾಯಿಸಿದರು.ಕಾಯಂ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ವಿಮಾ ಮತ್ತು ವೈದ್ಯಕೀಯ ಸೌಲಭ್ಯ ನೀಡಬೇಕು. ಅನುಕಂಪದ ಶೇಕಡಾವಾರು ನೇಮಕಾತಿ ಕೈಬಿಟ್ಟು ನೂರಕ್ಕೆ ನೂರರಷ್ಟು ಅನುಕಂಪ ಆಧಾರದ ನೇಮಕಾತಿ ನಡೆಯಬೇಕು. ಯಾವುದೇ ಹುದ್ದೆಗಳನ್ನು ಕಡಿತ ಮಾಡಬಾರದು. ಪೋಸ್ಟ್‌ಮನ್ ಮತ್ತು ಎಂಟಿಎಸ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡದೇ ಆ ಹುದ್ದೆಗಳಿಗೆ ಇಲಾಖೇತರ ನೌಕರರನ್ನು ನೇಮಕ ಮಾಡಿ ಕೊಳ್ಳಬೇಕು. ಇವು ಪ್ರತಿಭಟನಾ ನಿರತರ ಪ್ರಮುಖ ಬೇಡಿಕೆಗಳಾಗಿವೆ.ಸಂಘದ ಅಧ್ಯಕ್ಷ ವಿ.ವಿ.ಅರುಟಗಿ, ಕಾರ್ಯದರ್ಶಿ ಎ.ಜಿ.ರಡ್ಯಾರಟ್ಟಿ, ಖಜಾಂಚಿ ಬಿ.ಎಸ್.ತೇಲಿ ಮುಷ್ಕರದ ನೇತೃತ್ವ ವಹಿಸಿದ್ದಾರೆ. ಬಿ.ಬಿ. ಜಾಮಗೌಡ, ಡಿ.ಬಿ.ಪ್ರಥಮಶೆಟ್ಟಿ, ಜಿ.ಜಿ. ದೇಶಪಾಂಡೆ, ಮಲ್ಲು ಪಡಸಲಗಿ, ಎ.ಎಸ್. ಕುಲಕರ್ಣಿ, ಎಸ್.ಎಂ. ಮಠಪತಿ, ಎಸ್.ಡಿ.ಕೊಕಟನೂರ, ಎ.ವಿ. ಅಮಾತೆ, ವಿ.ಎಚ್.ದೇಶಪಾಂಡೆ, ಎಚ್.ಬಿ.ಕವಟೇಕರ ಮತ್ತಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.ಜಿ.ಪಂ ಕೆ.ಡಿ.ಪಿ ಸಭೆ 30ರಂದು

ಬಾಗಲಕೋಟೆ:
ಜಿಲ್ಲಾ ಪಂಚಾಯಿತಿಯ ಕರ್ನಾಟಕ ಅಬಿವೃದ್ಧಿ ಕಾರ್ಯಕ್ರಮಗಳ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದೇ 30ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆಯಲಿದೆ

 ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ  ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ  ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry