ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

7
ಅಂಗನವಾಡಿ ಕಾರ್ಯಕರ್ತೆಯರ ಬಂಧನ, ಬಿಡುಗಡೆ

ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

Published:
Updated:

ಚಾಮರಾಜನಗರ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಗರದ ಸಂತೇಮರಹಳ್ಳಿ ವೃತ್ತದ ಬಳಿಯ ಅಂಚೆ ಕಚೇರಿ ಮುಂಭಾಗ ಬುಧವಾರ ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಜೈಲ್ ಭರೋ ಚಳವಳಿ ನಡೆಯಿತು.ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.ಅಂಗನವಾಡಿ ನೌಕರರಿಗೆ ಅಗತ್ಯ ಸೌಲಭ್ಯ ನೀಡುವುದರೊಂದಿಗೆ ಸೇವೆ ಕಾಯಂಗೊಳಿಸಲು ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಇದರಿಂದ ನೌಕರರು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಐಸಿಡಿಎಸ್ ಪದ್ಧತಿಯನ್ನು ಖಾಸಗೀಕರಣಗೊಳಿಸಬಾರದು. ಇದರಿಂದ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಸ್ತುತ ನೀಡುತ್ತಿರುವ ಗೌರವಧನ ಪದ್ಧತಿ ಕೈಬಿಡಬೇಕು. ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ನಗರ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಶ್ರಮಿಸುತ್ತಿದ್ದಾರೆ. ಆದರೆ, ಅಗತ್ಯ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ. 6 ತಿಂಗಳ ಹೆರಿಗೆ ರಜೆ ಮಂಜೂರು ವಾಪಸ್ ಪಡೆದಿರುವುದು ಖಂಡನೀಯ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೂಡಲೇ ಕಡಿವಾಣ ಹಾಕಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಸಾರ್ವತ್ರೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಕೆ. ಸುಜಾತಾ, ವಿಮಲಾ, ನಾಗವೇಣಿ, ನಾಗಮಣಿ, ಶಾಹೀದಾಬಾನು, ಪಾರ್ವತಮ್ಮ, ಜಯಮಾಲಾ, ಸೋಮೇಶ್ವರಿ, ಅನಸೂಯ, ಯಶೋದ, ಲೀಲಾವತಿ, ಭಾಗ್ಯಾ ಪಾಲ್ಗೊಂಡಿದ್ದರು.ಹಸಿಕಡಲೆ ವಿತರಣೆ: ಅವ್ಯವಹಾರ ಆರೋಪ

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂಭಾಗ ಪ್ರಜಾ ವಿಮೋಚನಾ ಚಳವಳಿಯ ಜಿಲ್ಲಾ ಘಟಕದಿಂದ ಬುಧವಾರ ಪ್ರತಿಭಟನೆ                   ನಡೆಯಿತು.ಜಿಲ್ಲೆಯ 600 ಹೆಕ್ಟೇರ್ ಪ್ರದೇಶದಲ್ಲಿ ಹಸಿಕಡಲೆ ಪ್ರಾತ್ಯಕ್ಷಿಕೆಗಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಚಾಮರಾಜನಗರ ತಾಲ್ಲೂಕಿನ 200 ಹೆಕ್ಟೇರ್ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 400 ಹೆಕ್ಟೇರ್ ಪ್ರದೇಶ ಗುರುತಿಸಿ ಉಚಿತವಾಗಿ ರೈತರಿಗೆ ನೀಡಲು ಬಿತ್ತನೆ ಹಸಿಕಡಲೆ ಪೂರೈಸಲಾಗಿದೆ. ಆದರೆ, ಅಧಿಕಾರಿಗಳು ಈ ಬಿತ್ತನೆಬೀಜವನ್ನು ಮಾರಾಟ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು             ದೂರಿದರು.ಕೃಷಿ ಸಹಾಯಕ ನಿರ್ದೇಶಕ ಹಾಗೂ ಚಂದಕವಾಡಿ ಹೋಬಳಿಯ ಕೃಷಿ ಅಧಿಕಾರಿ ಸೇರಿಕೊಂಡು 20 ಕೆಜಿ ತೂಕದ ಒಂದು ಬ್ಯಾಗ್‌ಗೆ 1,160 ರೂ ಧಾರಣೆ ನಿಗದಿಪಡಿಸಿ ಮಾರಾಟ ಮಾಡಿದ್ದಾರೆ. ರೈತರಿಗೆ ಹಸಿಕಡಲೆ ನೀಡದೆ ವಂಚಿಸಲಾಗಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ತರಬೇತಿಯಲ್ಲಿ ಪಾಲ್ಗೊಂಡ ರೈತರಿಗೆ ನಿಗದಿಪಡಿಸಿದ ಗೌರವಧನ ನೀಡಿಲ್ಲ. ತರಬೇತಿ ಪಡೆದ ಅನ್ನದಾತರಿಗೆ ಕಡಿಮೆ ಹಣ ನೀಡಿ ವಂಚಿಸಲಾಗಿದೆ. ಚಂದಕವಾಡಿ ಹೋಬಳಿ ಕೇಂದ್ರದಲ್ಲಿ ಅಧಿಕಾರಿಯ ಸಂಬಂಧಿಕರನ್ನು ಅನುವುಗಾರರಾಗಿ ನೇಮಿಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಮುಖಂಡರಾದ ಗಂಗವಾಡಿ ಸೋಮಣ್ಣ, ಕೆ. ಶಿವಮೂರ್ತಿ, ಅಗರ ಕೆ. ರಾಜು, ಶಿವಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry