ಭಾನುವಾರ, ಮೇ 9, 2021
18 °C

ಅಂಚೆ ಚೀಟಿಯಲ್ಲಿ ವಿಷ್ಣುವರ್ಧನ್

-ಜೆ.ಪಿ. Updated:

ಅಕ್ಷರ ಗಾತ್ರ : | |

ಅಂಚೆ ಚೀಟಿ ಕೇವಲ ಸಂದೇಶ ವಾಹಕ ಮಾತ್ರವಲ್ಲ. ಅದು ಆಯಾ ದೇಶದ ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ವಿಚಾರಗಳ ಪ್ರತಿಬಿಂಬ ಕೂಡ ಹೌದು. ಭಾರತೀಯ ಚಲನಚಿತ್ರ ನಿರ್ಮಾಣಕ್ಕೆ ನೂರು ವರ್ಷ ಸಂದಿರುವ ಸಂದರ್ಭದಲ್ಲಿ ಭಾರತೀಯ ಸಿನಿಮಾ ಜಗತ್ತನ್ನು ಕಟ್ಟಿಕೊಟ್ಟ ಐವತ್ತು ದಿಗ್ಗಜರ ಅಪರೂಪದ ಅಂಚೆ ಚೀಟಿಗಳನ್ನು ಭಾರತ ಸರ್ಕಾರ ಬಿಡುಗಡೆಗೊಳಿಸಿದೆ. ಸ್ವತಂತ್ರ ಭಾರತದಲ್ಲಿ ಅಂಚೆ ಇಲಾಖೆ ಒಮ್ಮೆಲೆ ಬಿಡುಗಡೆ ಮಾಡಿರುವ ಅಂಚೆ ಚೀಟಿಗಳ ದೊಡ್ಡ ಸಂಖ್ಯೆಯೂ ಇದೇ. ದಾದಾ ಸಾಹೇಬ್ ಫಾಲ್ಕೆಯವರ ಮೊದಲ ಚಿತ್ರ `ರಾಜಾ ಹರಿಶ್ಚಂದ್ರ' ಬಿಡುಗಡೆಯಾದ ಮೇ 3ರಂದು ಬಿಡುಗಡೆಗೊಂಡಿರುವ ಅಂಚೆ ಚೀಟಿಗಳಲ್ಲಿ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಅಂಚೆ ಚೀಟಿಯೂ ಸೇರಿರುವುದೊಂದು ವಿಶೇಷ.  ಕನ್ನಡ ಚಿತ್ರರಂಗದ ಮೇರು ನಟ ರಾಜ್‌ಕುಮಾರ್ ಅವರ ಅಂಚೆ ಚೀಟಿ ನಂತರ ಕನ್ನಡ ಚಿತ್ರರಂಗದ ಕಲಾವಿದರೊಬ್ಬರು ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅಂಚೆ ಇಲಾಖೆ ಪ್ರಕಟಿಸಿರುವ ಐವತ್ತು ಅಂಚೆ ಚೀಟಿಗಳ ಮಿನಿಯೇಚರ್ ಹಾಳೆಯಲ್ಲಿ ಕಲಾವಿದ ದಿಗ್ಗಜರಾದ ಪೃಥ್ವಿರಾಜ್ ಕಪೂರ್, ದುರ್ಗಾ ಕೋಟೆ, ದೇವಾನಂದ್, ಅಶೋಕ್‌ಕುಮಾರ್, ಶ್ರೇಷ್ಠ ನಿರ್ದೇಶಕರಾದ ಬಾಲ್ಜಿ ಪೆಂಡಾರ‌್ಕರ್, ಹೃಷಿಕೇಷ್ ಮುಖರ್ಜಿ, ಸಂಗೀತ ಶ್ರೇಷ್ಠರಾದ ನೌಶಾದ್, ಆರ್.ಡಿ.ಬರ್ಮನ್, ಓ.ಪಿ.ನಯ್ಯರ್ ಹೀಗೆ ಚಲನಚಿತ್ರ ಕ್ಷೇತ್ರದ ಕೆಲವು ಹಿರಿಯರ ಅಂಚೆ ಚೀಟಿಗಳಿವೆ. ಅಂಚೆ ಇಲಾಖೆಯು 1971ರಿಂದ ಚಿತ್ರರಂಗಕ್ಕೆ ಸಂಬಂಧಿಸಿದ ಸ್ಮರಣೀಯ ಅಂಚೆ ಚೀಟಿಗಳನ್ನು ಪ್ರಕಟಿಸಲು ಆರಂಭಿಸಿತು. ಭಾರತೀಯ ಚಲನಚಿತ್ರ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಪ್ರಪ್ರಥಮ ಸಿನಿಮಾ ಕುರಿತ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆನಂತರ ಭಾರತೀಯ ಸಿನಿಮಾಗೆ 75 ವರ್ಷ ತುಂಬಿದ ಸಂದರ್ಭದಲ್ಲಿಯೂ ವಿಶೇಷ ಅಂಚೆ ಚೀಟಿ ಮುದ್ರಿಸಿಲಾಗಿತ್ತು. ಆನಂತರದ ವರ್ಷಗಳಲ್ಲಿ ಸತ್ಯಜಿತ್ ರೇ, ಮೆಹಬೂಬ್ ಖಾನ್, ಮಧುಬಾಲ, ನರ್ಗಿಸ್ ದತ್, ಎಂ.ಜಿ.ರಾಮಚಂದ್ರನ್, ಎನ್.ಟಿ.ರಾಮರಾವ್ ಮೊದಲಾದ ಸಿನಿಮಾ ದಿಗ್ಗಜರ ಕುರಿತ ಅಂಚೆ ಚೀಟಿಗಳನ್ನು ಆಗಿಂದಾಗ್ಗೆ ಬಿಡುಗಡೆ ಮಾಡಲಾಗುತ್ತಿದೆ. 2011ರಲ್ಲಿ ಭಾರತೀಯ ಚಲನಚಿತ್ರ ರಂಗದ ಶ್ರೇಷ್ಠ ನಟಿಯರ ಸ್ಮರಣೀಯ ಅಂಚೆ ಚೀಟಿಗಳ ಸರಣಿಯೊಂದನ್ನು ಅಂಚೆ ಇಲಾಖೆ ವಿಶೇಷವಾಗಿ ಪ್ರಕಟಿಸಿತ್ತು. ಅಂಚೆ ಇಲಾಖೆ ಭಾರತೀಯ ಸಿನಿಮಾ ಹಿರಿಯರಲ್ಲದೆ ವಿಶ್ವ ಖ್ಯಾತ ನಟ ಚಾರ್ಲಿ ಚಾಪ್ಲಿನ್ ಅವರ ಸ್ಮಾರಕ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತು.  ಒಂದೇ ಸಮಾರಂಭದಲ್ಲಿ ಐವತ್ತು ಸ್ಮರಣೀಯ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲು. ಆರು ಮಿನಿಯೇಚರ್ ಹಾಳೆಗಳಿರುವ ಐವತ್ತು ಅಂಚೆ ಚೀಟಿಗಳ ಬೆಲೆ ತಲಾ ಐದು ರೂಪಾಯಿ ಆಗಿರುತ್ತದೆ. ಐವತ್ತು ಅಂಚೆ ಚೀಟಿಗಳು ತಲಾ 8.1 ಲಕ್ಷ ಮುದ್ರಣವಾಗಿದ್ದು ದೇಶದಾದ್ಯಂತ ಮಾರಾಟಕ್ಕೆ ದೊರಕಲಿವೆ. ಇದರಲ್ಲಿ ಕನ್ನಡದ ಹೆಮ್ಮೆಯ ನಟ ವಿಷ್ಣುವರ್ಧನ್ ಅವರ ಅಂಚೆ ಚೀಟಿಯೂ ಸೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.