ಅಂಚೆ ಧರಣಿ: ವಿಲೇವಾರಿಯಾಗದ ಪಾರ್ಸಲ್

7

ಅಂಚೆ ಧರಣಿ: ವಿಲೇವಾರಿಯಾಗದ ಪಾರ್ಸಲ್

Published:
Updated:

ಯಲಬುರ್ಗಾ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಐದಾರು ದಿನಗಳಿಂದಲೂ ನಡೆಸುತ್ತಿರುವ ಗ್ರಾಮೀಣ ಅಂಚೆ ನೌಕರರ ಧರಣಿಯ ಪರಿಣಾಮವಾಗಿ ಗ್ರಾಮೀಣ ಜನತೆ ತೀವ್ರ ತೊಂದರೆಗೆ ಸಿಲುಕುವಂತಾಗಿದೆ, ವಿವಿಧ ವೇತನಗಳ ವಿತರಣೆ, ವಿವಿಧ ಕಾಗದ ಹಾಗೂ ಪತ್ರಗಳ ವಿಲೇವಾರಿಯಲ್ಲಿನ ವಿಳಂಬದಿಂದ ಗ್ರಾಮೀಣ ಜನತೆಗೆ ಕೊಂಚ ತೊಂದರೆಯಾಗಿದ್ದು ಶನಿವಾರ ಕಂಡು ಬಂತು.ಯಲಬುರ್ಗಾ ಉಪ ಕೇಂದ್ರದ ವ್ಯಾಪ್ತಿಗೆ ಬರುವ ತಾಲ್ಲೂಕಿನ ಬಳೂಟಗಿ, ಚಿಕ್ಕಮ್ಯಾಗೇರಿ, ಕರಮುಡಿ, ದಮ್ಮೂರ ಗೆದಗೇರಿ, ಮಲ್ಕಸಮುದ್ರ, ಹಿರೇಮ್ಯಾಗೇರಿ, ಕಲ್ಲೂರ ಸಂಗನಾಳ, ರಾಜೂರ ಸೇರಿದಂತೆ ಇನ್ನು ಅನೇಕ ಗ್ರಾಮಗಳ ಜನತೆಗೆ ಸಕಾಲದಲ್ಲಿ ಪತ್ರಗಳು ಬಟಾವಡೆಯಾಗದಿರುವುದು ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

 

ವಾರಗಟ್ಟಲೆ ನಡೆಯುತ್ತಿರುವ ಈ ಧರಣಿಯಿಂದಾಗಿ ವಿವಿಧ ಗ್ರಾಮದ ಜನತೆ ಅಂಚೆ ಕಚೇರಿಗೆ ಕದ ತಟ್ಟುತ್ತಿದ್ದಾರೆ. ಅದರಲ್ಲೂ ಅಂಗವಿಲರ ವೇತನ, ವೃದ್ದಾಪ್ಯ ವೇತನ ಹಾಗೂ ಮನಿ ಆರ್ಡರ್ ಹಾಗೂ ಇನ್ನಿತರ ಸೇವೆಗಳು ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಅಧಿಕಾರಿಗಳೆ ನಿಭಾಯಿಸುವ ಪರಿಸ್ಥಿತಿ ಉಂಟಾದಂತಿದೆ. ವಿವಿಧ ಗ್ರಾಮೀಣ ಜನರು ಕಚೇರಿಗೆ ಬಂದು ತಮ್ಮ ಮಾಸಿಕ ವೇತನವನ್ನು ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.ನಾಲ್ಕೈದು ದಿವ್ಸದಿಂದಲೂ ಪೊಸ್ಟ್‌ಮಾಸ್ತರ ಬರ‌್ತಾನಂತ ಕಾದ್ವಿ, ಬರ‌್ಲಿಲ್ಲ ಪಗಾರ ಕೊಡ್ಲಿಲ್ಲ, ಯಾಕ ಬಂದಿಲ್ಲಂತ ಗೊತ್ತಾಗದ ಮೊಮ್ಮಗನ ಕಡ್ಕೊಂಡು ಯಲಬುರ್ಗಿ ಆಪೀಸಿಗೆ ಬಂದ್ವೀವಿ ನೋಡ್ರಿ ಎಂದು ವೃದ್ದಾಪ್ಯ ವೇತನಕ್ಕಾಗಿ ಶನಿವಾರ ಯಲಬುರ್ಗಾ ಅಂಚೆ ಕಚೇರಿಗೆ ಹಾಜರಾಗಿರುವ ಪಕ್ಕದ ಸಂಗನಾಳ ಗ್ರಾಮದ ಯಲ್ಲವ್ವ ಮಡಿವಾಳರ ಹೇಳಿಕೊಂಡರು.ಇದೇ ರೀತಿಯ ಅನೇಕ ಗ್ರಾಮದ ಜನರು ಅಂಚೆ ಕಚೇರಿಗೆ ಮುಖಾಮುಖಿ ಭೇಟಿ ನೀಡಿ ತಮ್ಮ ಊರಿನ ಪತ್ರ ಬಂದಿದ್ದರ ಬಗ್ಗೆ ವಿಚಾರಿಸುತ್ತಿರುವುದು ಕೂಡಾ ಸಾಮಾನ್ಯವಾಗಿದೆ, ಈ ಹಿನ್ನೆಲೆಯಲ್ಲಿ ಉಪ ಅಂಚೆಪಾಲಕ ಕೆ.ಪಿ. ಬೆಣಕಿಕರ್ ಮಾತನಾಡಿ, ಗ್ರಾಮೀಣ ಅಂಚೆ ನೌಕರರ ಮುಷ್ಕರದಿಂದಾ ಪತ್ರಗಳ ವಿಲೇವಾರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಗ್ರಾಮೀಣ ಜನರು ಕಚೇರಿಗೆ ಬಂದು ವಿಚಾರಿಸುತ್ತಿದ್ದಾರೆ.

 

ಅನೇಕ ಪಾರ್ಸಲ್‌ಗಳು ಮೂಟೆಗಳು ಗುಡ್ಡೆತರ ಪ್ರತಿದಿನ ಬಂದು ಬೀಳುತ್ತಿದ್ದು, ಅವುಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ, ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಮರಳಿ ಕೆಲಸಕ್ಕೆ ಹಾಜರಾಗುವವರೆಗೂ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry