ಮಂಗಳವಾರ, ನವೆಂಬರ್ 12, 2019
28 °C

ಅಂಚೆ ಮತಪತ್ರ ಪಡೆಯಲು ಸರ್ಕಾರಿ ನೌಕರರಲ್ಲಿ ಮನವಿ

Published:
Updated:

ಸಿಂಧನೂರು: ಸರ್ಕಾರಿ ನೌಕರರು ಮೇ 5ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಫಾರಂ ನಂ.12ನ್ನು ಭರ್ತಿ ಮಾಡಿಕೊಳ್ಳುವಂತೆ ತಹಸೀಲ್ದಾರ್ ಬಿ.ಟಿ.ಕುಮಾರಸ್ವಾಮಿ ಮತ್ತು ಇ.ಡಿ.ಸಿ. ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವೃಷಬೇಂದ್ರಯ್ಯ ಸರ್ಕಾರಿ ನೌಕರರಲ್ಲಿ ಮನವಿ ಮಾಡಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ಸರ್ಕಾರಿಗಳು ತಪ್ಪದೇ ಮತದಾನ ಮಾಡಬೇಕು ಎಂದು ನಿರ್ದೇಶಿಸಿದ್ದು, ಚುನಾವಣಾ ಗುರುತಿನ ಚೀಟಿ ಫಾರಂ ನಂ.12ನ್ನು ಭರ್ತಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿಸಿದರೆ ಮತಪತ್ರವನ್ನು ಚುನಾವಣಾ ಪೂರ್ವದಲ್ಲಿ ಕೊಡಲು ಅನುಕೂಲವಾಗುತ್ತದೆ. ಏಪ್ರಿಲ್ 22ರಿಂದ 28ರ ಒಳಗಾಗಿ ಮತಪತ್ರವನ್ನು ಸರ್ಕಾರಿ ನೌಕರರಿಗೆ ಕೊಡಲಾಗುತ್ತದೆ. ಸಿಂಧನೂರು ಕ್ಷೇತ್ರಕ್ಕೆ ಬೇಕಾಗುವ ಮತಪತ್ರವನ್ನು ಜಿಲ್ಲಾಧಿಕಾರಿಗಳಿಂದಲೇ ಪಡೆಯಬೇಕಾಗಿರುವುದರಿಂದ ಮುಂಚಿತವಾಗಿಯೇ ನೌಕರರು ಮತದಾರರ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ, ಭಾಗ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಸಲ್ಲಿಸಬೇಕಾಗಿದೆ. 22ರಂದು ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಆಗಲೂ ಸಹ ಮತದಾರರು ತಮ್ಮ ವಿವರಗಳನ್ನು ಸಲ್ಲಿಸಿ ಮತಪತ್ರಗಳನ್ನು ಪಡೆಯಬಹುದಾಗಿದೆ. ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೂ ಮತಪತ್ರಗಳನ್ನು ಕೊಡುವುದಾಗಿ ವೃಷಬೇಂದ್ರಯ್ಯ ಮತ್ತು ಕುಮಾರಸ್ವಾಮಿ ತಿಳಿಸಿದರು. 22ರ ನಂತರ ಸಿಂಧನೂರು ಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿಯೇ ಮತಪೆಟ್ಟಿಗೆಯ ವ್ಯವಸ್ಥೆ ಮಾಡಲಾಗುತ್ತಿದೆ. ಮತದಾರರು ತಮ್ಮ ಮತವನ್ನು ಪೆಟ್ಟಿಗೆಯಲ್ಲಾದರೂ ಹಾಕಬಹುದು ಅಥವಾ ಅಂಚೆಯಲ್ಲಾದರೂ ಕಳುಹಿಸಬಹುದು. ಯಾವುದೇ ಕಾರಣಕ್ಕೂ ಪವಿತ್ರವಾದ ಮತದಾನದಿಂದ ವಂಚಿತರಾಗಬಾರದು ಎಂದು ತಹಸೀಲ್ದಾರ್ ಕುಮಾರಸ್ವಾಮಿ ಸೂಚಿಸಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಹಸೀಲ್ದಾರ ಸೇರ್ಪಡೆಗೊಂಡ ಮತದಾರರ ಪಟ್ಟಿಯನ್ನು ಇಷ್ಟರಲ್ಲಿಯೇ ಕೊಡುತ್ತೇವೆ ಎಂದ ಅವರು ಈಗಾಗಲೇ ಸಿಂಧನೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸೇರ್ಪಡೆಗೊಂಡ ಮತ್ತು ರದ್ದಾದ ಮತದಾರರ ಪಟ್ಟಿಯ ವಿವರಗಳ ಸಿ.ಡಿ.ಯನ್ನು ವಿತರಿಸಿರುವುದಾಗಿ ಹೇಳಿದರು.

ಪ್ರತಿಕ್ರಿಯಿಸಿ (+)