ಮಂಗಳವಾರ, ನವೆಂಬರ್ 12, 2019
20 °C

ಅಂಚೆ ಮತ ಖರೀದಿಗೆ ಪೈಪೋಟಿ

Published:
Updated:
ಅಂಚೆ ಮತ ಖರೀದಿಗೆ ಪೈಪೋಟಿ

ತುಮಕೂರು: ಅಂಚೆ ಮತ ಖರೀದಿಗೂ ಪೈಪೋಟಿ ಏರ್ಪಟ್ಟಿದೆ. ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದರೂ ಜಿಲ್ಲೆಯ ಕೆಲ ವಿಧಾನಸಭೆ ಕ್ಷೇತ್ರಗಳಲ್ಲಿ ಅಂಚೆ ಮತ ಸಾವಿರದಿಂದ ಮೂರು ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತಿವೆ. ನೇರ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಈ ಮೊತ್ತ ಐದು ಸಾವಿರಕ್ಕೆ ಏರಿದೆ.ಜಿಲ್ಲೆಯ ತ್ರಿಕೋನ, ಚತುಷ್ಕೋನ ಸ್ಪರ್ಧೆಯಿರುವ ಕಡೆ ಪೈಪೋಟಿ ಕಂಡು ಬರುತ್ತಿಲ್ಲ. ಆದರೆ ನೇರ ಹಣಾಹಣಿ ಕ್ಷೇತ್ರದಲ್ಲಿ ಪ್ರತಿ ಮತಕ್ಕೂ ಬೇಡಿಕೆಯಿದೆ. ಪ್ರತಿ ಮತವೂ ನಿರ್ಣಾಯಕ ಎನ್ನುವ ಕಡೆ ಮತಕ್ಕಾಗಿ ಜಿದ್ದಾಜಿದ್ದಿನ ಹೋರಾಟವೇ ಕಂಡುಬರುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಡುವೆ ಹಣಾಹಣಿ ಇರುವ ಮಧುಗಿರಿ ಕ್ಷೇತ್ರದಲ್ಲಿ ಖರೀದಿ ಭರಾಟೆ ಜೋರಾಗಿದೆ. ಇಲ್ಲಿ 1297 ಅಂಚೆ ಮತಗಳಿವೆ. ಅಂಚೆ ಮತ ಕೀಳಲು ಎರಡೂ ಪಕ್ಷಗಳ ಕಾರ್ಯಕರ್ತರ ಪಡೆಯೇ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರೊಬ್ಬರು.ಮತದಾರ ಶಿಕ್ಷಕರಿಂದ ಅಂಚೆ ಮತಪತ್ರ ಖರೀದಿಸಿ ತಮ್ಮ ಅಭ್ಯರ್ಥಿಯ ಹೆಸರು, ಗುರುತಿನ ಮುಂದೆ `ರೈಟ್ ಮಾರ್ಕ್' ಹಾಕಿ ಅದನ್ನು ಮತ್ತೆ ಶಿಕ್ಷಕರ ಕೈಗೆ ಕೊಡಲಾಗುತ್ತದೆ. ಸಂಶಯ ಇರುವ ಕಡೆ ಕಾರ್ಯಕರ್ತರು ಖುದ್ದು ಮತಪತ್ರ ಅಂಚೆಗೆ ಹಾಕ ತೊಡಗಿದ್ದಾರೆ.`ಮತ ಖರೀದಿಯಲ್ಲಿ  ಸರ್ಕಾರಿ ನೌಕರರ ಸಂಘದ ಕೆಲವು ಪದಾಧಿಕಾರಿಗಳು ನಿರತರಾಗಿರುವುದು ಕೂಡ ಅಚ್ಚರಿ ತಂದಿದೆ. ಅಭ್ಯರ್ಥಿ ಬಳಿ ಮತಕ್ಕೆ ಐದು ಸಾವಿರ ತೆಗೆದುಕೊಂಡು ಮತದಾರನಿಗೆ ಕೇವಲ ಎರಡರಿಂದ ಮೂರು ಸಾವಿರ ರೂಪಾಯಿ ನೀಡುತ್ತಾರೆ. ಇದನ್ನು ತಿಳಿದ ನೌಕರರು ಸಾವಿರ ರೂಪಾಯಿ ಕೊಟ್ಟರೇ ಮಾತ್ರವೇ ಮತಪತ್ರ ನೀಡತೊಡಗಿದ್ದಾರೆ' ಎಂದು ಮಧುಗಿರಿ ಪಟ್ಟಣದ ಶಿಕ್ಷಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಮತ ನೀಡಲು ಹಣ ಪಡೆದರೆ ಜೈಲು ಶಿಕ್ಷೆಯಾಗಲಿದೆ ಎಂಬ ಪ್ರಚಾರದ ನಡುವೆಯೂ ಚುನಾವಣಾ ಕೆಲಸದಲ್ಲಿ ನಿರತರಾದವರೆ ಮತ ಮಾರುವ ಕೆಲಸದಲ್ಲಿ ತೊಡಗಿದ್ದಾರೆ. ಕೊಳೆಗೇರಿ, ಬಡವರ ಕಾಲೋನಿಗಳಿಗೆ ಮಾತ್ರ ಸೀಮಿತವಾಗಿದ್ದ ಮತ ಖರೀದಿ ಭರಾಟೆ ಸರ್ಕಾರಿ ನೌಕರರ ಮನೆ ಅಂಗಳಕ್ಕೂ ಕಾಲಿಟ್ಟಿರುವುದು ವಿಪರ್ಯಾಸ' ಎನ್ನುತ್ತಾರೆ ಮಧುಗಿರಿಯಲ್ಲಿ ವಾಸವಿರುವ ಶಿಕ್ಷಕರಾದ ರಂಗನಾಥ್, ನಾಗರಾಜು.ಜಿಲ್ಲೆಯ ಕೆಲವಡೆ ಸರ್ಕಾರಿ ಸಿಬ್ಬಂದಿಗೆ ನಡೆದ ಚುನಾವಣಾ ತರಬೇತಿ ಸ್ಥಳದಲ್ಲೇ ಮತ ಖರೀದಿಗೆ ಪ್ರಯತ್ನಗಳು ಕೂಡ ವರದಿ ಆಗಿವೆ. ಮೇ 7ರವರೆಗೂ ಅಂಚೆ ಮತ ಚಲಾಯಿಸಲು ಅವಕಾಶವಿದೆ.

ಪ್ರತಿಕ್ರಿಯಿಸಿ (+)