ಅಂತರಂಗದತ್ತ ನಯನ

7

ಅಂತರಂಗದತ್ತ ನಯನ

Published:
Updated:

ವರಕವಿ ಬೇಂದ್ರೆ ಅವರ ಸಾಹಿತ್ಯ ಹಾಗೂ ವ್ಯಕ್ತಿತ್ವವನ್ನು ಕನ್ನಡದ ಜಾಣ ಜಾಣೆಯರಿಗೆ ಮುಟ್ಟಿಸುವ ಕೆಲಸವನ್ನು ವ್ರತದಂತೆ ಮಾಡುತ್ತಿರುವ ಸಹೃದಯರು ಡಾ.ಜಿ.ಕೃಷ್ಣಪ್ಪ. ಅವರು ಏನನ್ನಾದರೂ ಬರೆಯುತ್ತಾರೆಂದರೆ ಅದು ಬೇಂದ್ರೆ ವ್ಯಕ್ತಿತ್ವದ ಕುರಿತೋ, ಕವಿತೆಯ ಕುರಿತೋ ಬರವಣಿಗೆಯಾಗಿರುವುದು ಸಹಜ. ಆದರೆ, ಬೇಂದ್ರೆ ಪ್ರೀತಿಯ ನಡುವೆಯೂ ಅವರ ಓದು ಭಿನ್ನ ನೆಲೆಗಳಲ್ಲಿ ಚಾಚಿಕೊಂಡಿರುವುದು ವಿಶೇಷ. ಕೃಷ್ಣಪ್ಪನವರ ಸಹೃದಯ ವಿಮರ್ಶೆಯ ಮನಸ್ಸು ಅನೇಕ ಲೇಖಕರ ಕೃತಿಗಳನ್ನು ಧ್ಯಾನಿಸಿದೆ. ಅದರ ಫಲ- ‘ಅಂತರಂಗದತ್ತ ನಯನ’.ಕೃಷ್ಣಪ್ಪನವರ ಕೃತಿಯನ್ನು ಅಧ್ಯಯನದ ಅನುಕೂಲಕ್ಕಾಗಿ ಎರಡು ಭಾಗಗಳಲ್ಲಿ ವಿಂಗಡಿಸಬಹುದು. ಮೊದಲ ಭಾಗದ ಲೇಖನಗಳು ಬೇಂದ್ರೆ ಕಾವ್ಯಕ್ಕೆ ಮೀಸಲಾದವು. ಎರಡನೆಯ ಭಾಗ ಕೃತಿ ವಿಮರ್ಶೆಗೆ ಸಂಬಂಧಿಸಿವೆ. ಈ ವಿಮರ್ಶೆಗಳು ಕೃತಿಕಾರರ ವ್ಯಕ್ತಿತ್ವವನ್ನೂ ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ಮಾಡುತ್ತವೆ.ಹತ್ತೊಂಬತ್ತು ಲೇಖನಗಳ ಪುಸ್ತಕದ ಮೊದಲ ಮೂರು ಲೇಖನಗಳು ಬೇಂದ್ರೆ ಕಾವ್ಯದ ಕುರಿತಾಗಿವೆ. ‘ಬೇಂದ್ರೆ ಕಾವ್ಯ: ಅನುಭವ ಮತ್ತು ಅನುಭಾವ’, ‘ಬೇಂದ್ರೆ ಕಾವ್ಯ: ಸ್ತ್ರೀ’, ‘ಬೇಂದ್ರೆ ಕಾವ್ಯ: ದೇಶಭಕ್ತಿ’ ಎನ್ನುವ ಈ ಅಧ್ಯಾಯಗಳು ವರಕವಿಯ ಕಾವ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವ ಒಳನೋಟಗಳುಳ್ಳ ಬರಹಗಳಾಗಿವೆ.

 

ಶಾಸ್ತ್ರೀಯ ವಿಮರ್ಶೆಯ ಧಾಟಿಗೆ ಹೊರತಾದ ಈ ಬರಹಗಳು ಸಾಮಾನ್ಯ ಓದುಗರಿಗೂ ಪ್ರಿಯವಾಗುವಂತಿವೆ. ತೀನಂಶ್ರೀ ಅವರ ಕಾವ್ಯ ಸಮೀಕ್ಷೆ, ಚದುರಂಗರ ‘ಹೆಜ್ಜಾಲ’, ವೀರೇಂದ್ರ ಸಿಂಪಿ ಅವರ ಪ್ರಬಂಧಗಳು, ಬಿಳುಮಲೆ ರಾಮದಾಸರ ‘ಅನಾವರಣ’ ಕಾದಂಬರಿ, ಬೊಳುವಾರರ ಕಥೆಗಳು, ಸುಗತ ಶ್ರೀನಿವಾಸರಾಜು ಅವರ ‘ಮಾತೃಭಾಷೆ ಮತ್ತು ಸ್ಥಳೀಯ ಸಂಸ್ಕೃತಿ’- ಹೀಗೆ ಅನೇಕ ಕೃತಿಗಳನ್ನು ಕೃಷ್ಣಪ್ಪನವರು ಪರಿಚಯಿಸಿದ್ದಾರೆ. ಅವರದ್ದು ಸಹೃದಯಿ ವಿಮರ್ಶೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry