ಮಂಗಳವಾರ, ಏಪ್ರಿಲ್ 20, 2021
32 °C

ಅಂತರಂಗದ ದೈವದೊಂದಿಗೆ ಅನುಸಂಧಾನ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಅಂತರಂಗದ ದೈವದೊಂದಿಗೆ ಅನುಸಂಧಾನ

`ಮೂಮಿನೂ ಸಾಹ್ರಿಕೂ ಉಠೋ...~ ಎಂದು ದೊಡ್ಡ ಧ್ವನಿಯಲ್ಲಿ ಹೇಳುತ್ತಾ ದಪ್ಪು, ದಾಯರ ಎಂಬ ವಾದ್ಯವನ್ನು ಬಡಿಯುವ ದರ್ವೇಶಿಗಳ ಸದ್ದು ಅಲ್ಲಿರಲಿಲ್ಲ. ಸಹರಿಯ ಹೊತ್ತು ಮುಗಿಯಿತು ಎಂದು ತಿಳಿಸುವ ಆದಾನ್‌ನ ಧ್ವನಿಯೂ ಅಲೆ ಅಲೆಯಾಗಿ ತೇಲಿ ಬರುವ ಯಾವ ಸಾಧ್ಯತೆಯೂ ಆ ಊರಿನಲ್ಲಿರಲಿಲ್ಲ.

 

ಹತ್ತಿರದ ಮಸೀದಿಗೆ ಕನಿಷ್ಠ ಆರು ಕಿಲೋ ಮೀಟರು. ಅಲ್ಲಿರುವ ಮಸೀದಿಗೆ ಆಗಿನ್ನೂ ಧ್ವನಿವರ್ಧಕ ಬಂದು ತಲುಪಿರಲಿಲ್ಲ. ಸಹರಿಯ ಸಮಯವನ್ನು ಹೇಳುತ್ತಿದ್ದುದು ಗಡಿಯಾರದ ಅಲಾರ್ಮ್‌. ಪ್ರತೀ ವರ್ಷ ಬಹಳ ಮರೆಯದೇ ಕೇರಳದಿಂದ ತರಿಸಿಕೊಳ್ಳುತ್ತಿದ್ದ ಸುರುಳಿ ಸುರುಳಿ ಅಕ್ಷರಗಳ ಕ್ಯಾಲೆಂಡರಿನಲ್ಲಿದ್ದ ನಮಾಜಿನ ಸಮಯಕ್ಕೆ ಪ್ರತೀ ನೂರು ಕಿಲೋಮೀಟರಿಗೆ ಅದೆಷ್ಟೋ ನಿಮಿಷಗಳನ್ನು ಸೇರಿಸಿಕೊಂಡು ಅಥವಾ ಕಳೆದು `ಅಬ್ಬ~* ಎಲ್ಲವನ್ನೂ ನಿರ್ಧರಿಸುತ್ತಿದ್ದರು.

 

ಆ ಸಮಯಕ್ಕೆ ಅಲಾರ್ಮ್‌ ಬಡಿದುಕೊಳ್ಳುತ್ತಿದ್ದಂತೆಯೇ ಮನೆಯೊಳಗೆ ಆರಂಭವಾಗುತ್ತಿದ್ದ ಚಟುವಟಿಕೆಗಳು ಹಲವು. ಸೀಮೆಎಣ್ಣೆ ಬುಡ್ಡಿಯ ಕುತ್ತಿಗೆ ತಿರುಗಿಸಿ ಒಂದಷ್ಟು ಎಣ್ಣೆಯನ್ನು ಬೂದಿಯ ಮೇಲೆ ಚೆಲ್ಲಿ `ಉಮ್ಮ~* ಒಲೆ ಹೊತ್ತಿಸಿದರೆ ಎಣ್ಣೆಯ ವಾಸನೆ ಹಜಾರಕ್ಕೂ ಹೊಡೆಯುತ್ತಿತ್ತು.ರಾತ್ರಿಯೆಲ್ಲಾ ಬಿಸಿಯಾಗಿರುತ್ತಿದ್ದ ಸ್ನಾನದ ಮನೆಯ ಹಂಡೆಯ ನೀರು ಕುದಿಯುತ್ತಲೇ ಇರುತ್ತಿತ್ತು. ಚಳಿಯೊಡನೆ ಹೊಡೆದಾಡಿ ಹಲ್ಲುಜ್ಜಿ ಮುಗಿಸುವ ಹೊತ್ತಿಗೆ ಸಿದ್ಧವಾಗಿರುತ್ತಿದ್ದ ಊಟವನ್ನು ಮುಗಿಸುವ ತನಕವೂ ಅಬ್ಬನ ಕಣ್ಣು ಗಡಿಯಾರದ ಮೇಲೇ ಇರುತ್ತಿತ್ತು. ಅಬ್ಬನ ಕಾಫಿ , ನಮ್ಮ ಟೀಗಳು ಮುಗಿಯುವ ಹೊತ್ತಿಗೆ ಸಮಯ ಸರಿಯಾಗಿರುತ್ತಿತ್ತು.ಮುಂದಿನದ್ದು ವುಝೂ*ವಿನ ಸಮಯ. ಅದು ಊಟದ ಮೊದಲೇ ಆಗಿರುತ್ತಿದ್ದರೆ ಒಳ್ಳೆಯದಿತ್ತೆಂದು ನಮಗನ್ನಿಸುತ್ತಿದ್ದುದು ನಿಜವೇ. ಆದರೆ ಅದು ನಿಯಮಗಳನ್ನು ಮರು ವ್ಯಾಖ್ಯಾನಿಸುವ ಕಾಲವಾಗಿರಲಿಲ್ಲ. ಬೆಳಗಿನ ನಮಾಜು ಮುಗಿದ ಮೇಲೆ ಕುರಾನ್ ಪಠಣ. ಒಂದು ತಿಂಗಳೊಳಗೆ ಇಡೀ ಕುರಾನ್ ಅನ್ನು ಒಮ್ಮೆಯಾದರೂ ಪೂರ್ಣಗೊಳಿಸಲೇಬೇಕೆಂಬ ಗುರಿಯನ್ನು ರಂಜಾನ್ ತಿಂಗಳು ಆರಂಭವಾಗುವ ಮೊದಲೇ ನಿಗದಿ ಪಡಿಸಿರುತ್ತಿದ್ದುದರಿಂದ ಓದುವುದು ಅನಿವಾರ್ಯವೇ.

 

ಇದೇ ತಿಂಗಳಲ್ಲಿ ಕೆಲವೊಮ್ಮೆ ಮೂರು ಬಾರಿ, ಕೆಲವೊಮ್ಮೆ ಐದು ಬಾರಿ ಕುರಾನ್ ಪಠಣವನ್ನು ಪೂರ್ಣಗೊಳಿಸುತ್ತಿದ್ದ ಅಬ್ಬನ ಎದುರು ಈ ವಿಷಯದಲ್ಲಿ ಪ್ರತಿವಾದ ಮಂಡಿಸುವ ಧೈರ್ಯ ನಮಗೆಲ್ಲಿಂದ! ಈ ಎಲ್ಲಾ ನಿಯಮಗಳ ಮಧ್ಯೆಯೂ ಸಂತೋಷ ತರುತ್ತಿದ್ದುದು ಆಟವಾಡಲು ದೊರೆಯುತ್ತಿದ್ದ ಸಮಯ.ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಕಾಫಿ  ಯಾವುದೂ ಇಲ್ಲದೆ ಎಲ್ಲೆಂದರಲ್ಲಿ ಆಟದಲ್ಲಿ ಮುಳುಗುವ ಸ್ವಾತಂತ್ರ್ಯವನ್ನಂತೂ ರಂಜಾನ್ ತಂದುಕೊಡುತ್ತಿತ್ತು. ಇದರ ಮಧ್ಯೆಯೇ ನಮಾಜಿಗಾಗಿ ಮನೆಗೆ ಓಡುತ್ತಿದ್ದರೂ ಅದೊಂದು ದೊಡ್ಡ ಸವಾಲೇನೂ ಆಗಿರಲಿಲ್ಲ.ಪ್ರತಿಯೊಬ್ಬನ/ಳ ರಂಜಾನ್ ನೆನಪೂ ಆರಂಭವಾಗುವುದು ಯಾವುದೋ ಒಂದು ಋತುವಿನಲ್ಲಿ. ಆತ ಅಥವಾ ಆಕೆಯ ನೆನಪುಗಳು ಬೆಳೆಯುತ್ತಾ ಹೋದಂತೆ ಋತುಮಾನವೂ ಬದಲಾಗುತ್ತಲೇ ಹೋಗಿರುತ್ತದೆ. ವರ್ಷ ಋತುವಿನಲ್ಲಿ ಬಾಲ್ಯದ ರಂಜಾನ್ ಉಪವಾಸವಿದ್ದರೆ ವಯಸ್ಕನಾಗುವ ಹೊತ್ತಿಗೆ ಅದು ವಸಂತವನ್ನು ತಲುಪಿರುತ್ತದೆ.

 

ವರ್ಷಗುಳುರುಳಿದಂತೆ ರಂಜಾನ್‌ನ ಋತುಗಳೂ ಬದಲಾಗುತ್ತಾ ಹೋಗುವುದೇಕೆ ಎಂಬ ಪ್ರಶ್ನೆ ಹುಟ್ಟಿದ ಕ್ಷಣದಿಂದ ರಂಜಾನ್ ಅರ್ಥವಾಗುವ ಪರಿಯೇ ಬದಲಾಗಿ ಬಿಡುತ್ತದೆಯೇನೋ? ಈಜಿಪ್ಟ್‌ನ ಲೇಖಕ ನಗೀಬ್ ಮಹಫೂಜ್ ನೆನಪಿನ ರಂಜಾನ್‌ಗೆ ಸಾಹಿತ್ಯದ ಸ್ಪರ್ಶವಿದೆ. ಕುರಾನ್‌ನ ಪಠಣದ ಜೊತೆ ಜೊತೆಗೇ ಷೇಕ್ಸ್‌ಪಿಯರ್, ಎಲಿಯಟ್ ಕೂಡಾ ಬಂದು ಬಿಡುತ್ತಾರೆ.

 

ಅಷ್ಟೇಕೆ ರಂಜಾನ್ ದಿನಗಳಲ್ಲಿ ಉಪವಾಸನ್ನೇನೂ ಮಾಡದ ಕೆ.ಎಸ್.ನರಸಿಂಹಸ್ವಾಮಿಯವರ ಮಟ್ಟಿಗೆ ಗೆರೆಯಾಗಿ ಕಾಣಿಸುವ ಚಂದ್ರ ಬರುವುದೂ ರಂಜಾನಿಗೇ. ಭಿನ್ನ ಋತುಗಳಲ್ಲಿ ಭಿನ್ನ ದೇಶಗಳಲ್ಲಿ ಭಿನ್ನ ಅನುಭವಗಳನ್ನು ನೀಡುವ ರಂಜಾನ್‌ಗೆ ಒಂದು ಸಾರ್ವತ್ರಿಕ ಗುಣವಿದೆ, ಅದು ವ್ರತನಿಷ್ಠ ನಡೆಸುವ ಒಳಗಣ ಪಯಣ.ಮುಸ್ಲಿಮರು ಅನುಸರಿಸುವುದು ಚಾಂದ್ರಮಾನ ಪಂಚಾಂಗ. ಚಂದ್ರನ ಚಲನೆಗಳ ಮೂಲಕ ಲೆಕ್ಕ ಹಾಕುವ ಒಂದು ವರ್ಷದ ಅವಧಿಗೂ ಸೂರ್ಯನ ಚಲನೆಯನ್ನು ಅನುಸರಿಸಿ ಲೆಕ್ಕ ಹಾಕುವ ಒಂದು ವರ್ಷದ ಅವಧಿಗೂ ಕೆಲ ಭಿನ್ನತೆಗಳಿವೆ. ಸೌರಮಾನ ಪಂಚಾಂಗದ ಲೆಕ್ಕಾಚಾರಗಳಲ್ಲಿ ಒಂದು ಬಗೆಯ ಸ್ಥಿರತೆ ಭಾಸವಾಗುತ್ತದೆ (ವಾಸ್ತವದಲ್ಲೂ ಅವೂ ಚಲನಶೀಲವೇ).

 

ಚಾಂದ್ರಮಾನ ಪಂಚಾಂಗದಂತೆ 32 ವರ್ಷ 5 ತಿಂಗಳ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ರಂಜಾನ್ ಎಂಬ ಉಪವಾಸದ ತಿಂಗಳು ಎಲ್ಲಾ ಋತುಗಳಲ್ಲಿಯೂ ಬಂದು ಬಿಟ್ಟಿರುತ್ತದೆ. ಬಾಲ್ಯದ ರಂಜಾನ್ ಬಿರುಬೇಸಗೆಯ ದಿನಗಳಲ್ಲಿದ್ದರೆ `ವುಳೂ~ ಮಾಡುವ ಹೊತ್ತಿನಲ್ಲಿ ಒಂದು ಗುಟುಕು ನೀರನ್ನು ಕುಡಿದು ಬಿಡಬೇಕೆಂದು ಆಸೆಯಾದ ಕ್ಷಣಗಳಿರುತ್ತವೆ.ಜೊತೆ ಜೊತೆಗೇ `ಎಲ್ಲವನ್ನೂ ನೋಡುವವನೂ ನಿಯಂತ್ರಿಸುವವನೂ ಆದ ಅಲ್ಲಾಹು~ವಿನ ನೆನಪು ಆ ಕ್ಷಣದಲ್ಲಿ ಹೇಗೆ ಕಾಡಿತ್ತು ಎಂಬುದೂ ನೆನಪಾಗುತ್ತದೆ. ಕೊರೆವ ಚಳಿಯಲ್ಲಿ ಒಂದೇ ಝರಕಿ ಹೊಗೆಯನ್ನು ಶ್ವಾಸಕೋಶದೊಳಕ್ಕೆ ಎಳೆದುಕೊಂಡು ಬಿಟ್ಟರೆ ಒಳ್ಳೆಯದಿತ್ತು ಎಂದು ಅನ್ನಿಸಿಯೂ ಅಲ್ಲಾಹುವಿನಲ್ಲಿ ಪ್ರಾರ್ಥಿಸಿ ಆಸೆಯ ಕ್ಷಣವನ್ನು ದಾಟಿದ ನೆನಪು ಧೂಮಪಾನಿ ವ್ರತನಿಷ್ಠನೊಳಗೆ ಅಚ್ಚಳಿಯದೇ ಇರುತ್ತದೆ.ರಂಜಾನ್ ಉಪವಾಸ ಆಚರಣೆಗೆ ಸಂಬಂಧಿಸಿದ ಧಾರ್ಮಿಕ ಕಟ್ಟುಪಾಡುಗಳನ್ನು ನೋಡುತ್ತಾ ಹೋದರೆ ಅಲ್ಲಿ ಕಾಣ ಸಿಗುವುದೆಲ್ಲವೂ ನಿಯಮಗಳೇ. ಸೂರ್ಯನ ಮೊದಲ ಕಿರಣಗಳು ಭೂಮಿಯನ್ನು ತಲುಪುವ ಮೊದಲೇ `ಸಹರಿ~ ಮುಗಿದಿರಬೇಕು. ಹಾಗೆಂದು ಇದು ರಾತ್ರಿಯೂಟವಷ್ಟೇ ಆಗಿಬಿಡಬಾರದು. ನಸುಕು ಹರಿಯುವುದಕ್ಕೆ ಸ್ವಲ್ಪ ಮೊದಲು ಸ್ವೀಕರಿಸುವ ಆಹಾರವಷ್ಟೇ `ಸಹರಿ~ಯಾಗಲು ಸಾಧ್ಯ.

 

ದಿನವಿಡೀ ಊಟವೇಕೆ ಒಂದು ತೊಟ್ಟು ನೀರೂ ಗಂಟಲೊಳಗೆ ಇಳಿಯುವಂತಿಲ್ಲ. ಕಫ ಕಟ್ಟಿಕೊಂಡಿದ್ದರೆ ಅದನ್ನು ತಪ್ಪಿಯೂ ನುಂಗುವಂತಿಲ್ಲ.  ಉಪವಾಸವನ್ನು ಕೊನೆಗೊಳಿಸುವ ಕ್ಷಣವೂ ಅಷ್ಟೇ. ಸೂರ್ಯಾಸ್ತವಾಗುವ ಆ ಕ್ಷಣದಲ್ಲಿ ಉಪವಾಸವನ್ನು ಕೊನೆಗೊಳಿಸಬೇಕು. ಉಪವಾಸದ ಆರಂಭಕ್ಕೆ ಇರುವ ನಿಖರ ನಿಯಮಗಳೇ ಅದನ್ನು ಕೊನೆಗೊಳಿಸುವುದಕ್ಕೂ ಅನ್ವಯಿಸುತ್ತವೆ.

 

ಈ ನಡುವೆ ದೇಹದಿಂದ ಒಂದು ತೊಟ್ಟು ರಕ್ತ ಬರುವಂಥ ಗಾಯವಾದರೂ ಸಂಕಲ್ಪಿತ ಉಪವಾಸ ಪೂರ್ಣಗೊಳ್ಳುವುದಿಲ್ಲ. ಹಾಗೆಂದು ಹಗಲಿಡೀ ಅನ್ನ ನೀರು ಸೇವಿಸದೆ, ಮೈಗೊಂದು ಗಾಯ ಮಾಡಿಕೊಳ್ಳದೆ ಕುಳಿತು ಬಿಟ್ಟರೆ ರಂಜಾನ್ ಉಪವಾಸವಾದೀತೇ? ಖಂಡಿತಾ ಇಲ್ಲ.ಇದು ಆರಾಧನೆ ಮತ್ತು ಧ್ಯಾನದ ಮಾಸವೂ ಹೌದು. ಪಠಣ ಮತ್ತು ಪಾರಾಯಣಗಳಿಗಷ್ಟೇ ಸೀಮಿತಗೊಳ್ಳದ ಪ್ರಾರ್ಥನೆಯ ದಿನಗಳಿವು. ಉಪವಾಸದ ಸಂಕಲ್ಪ ಮಾಡುವಾಗಲೇ ಪ್ರಜ್ಞಾಪೂರ್ವಕವಾಗಿ ಒಳಿತಾದುದನ್ನಷ್ಟೇ ಮಾಡಬೇಕಾದ ಸಂಕಲ್ಪವನ್ನೂ ಮಾಡಿದ್ದೇನೆಂಬ ನೆನಪು ವ್ರತಧಾರಿಗೆ ಇರಬೇಕಾಗುತ್ತದೆ.ಉಪವಾಸವೆಂಬುದು ಎಲ್ಲಾ ಸಂಸ್ಕೃತಿಗಳನ್ನೂ ಧರ್ಮಗಳನ್ನೂ ವ್ಯಾಪಿಸಿಕೊಂಡಿರುವ ಒಂದು ಆಚರಣೆ. ಯಹೂದಿಗಳು ಇದನ್ನು ಪ್ರಾಯಶ್ಚಿತ್ತದ ದಿನ (ಈ ಟ್ಛ ಠಿಟ್ಞಛಿಞಛ್ಞಿಠಿ) ಎಂದು ಆಚರಿಸುತ್ತಾರೆ. ಕ್ರೈಸ್ತರ ಉಪವಾಸ ಗುಡ್‌ಫ್ರೈಡೇಗೆ ಮುಂಚಿನ ನಲವತ್ತು ದಿನಗಳಷ್ಟು ದೀರ್ಘವಾಗಿರುತ್ತದೆ.ಹಿಂದೂಗಳಲ್ಲಿ ಉಪವಾಸದ ಆಚರಣೆಗೆ ಇರುವ ಅವಕಾಶಗಳು ಹಲವು. ಏಕಾದಶಿಯ ಉಪವಾಸವೆಂಬುದು ಹೆಚ್ಚು ಪರಿಚಿತವಿರುವ ದಿನ ಮಾತ್ರ. ಮೌಂಟ್ ಅಥೋಸ್‌ನ ಸನ್ಯಾಸಿಗಳು ವರ್ಷದ 200 ದಿನ ಉಪವಾಸ ಮಾಡುತ್ತಾರಂತೆ. ಜೈನ ಮತ್ತು ಬೌದ್ಧ ಧರ್ಮಗಳೆರಡೂ ಉಪವಾಸವೆಂಬ ಪರಿಕಲ್ಪನೆಯ ಆಧ್ಯಾತ್ಮಿಕ ಆಯಾಮಗಳನ್ನು ಹಲಬಗೆಯಲ್ಲಿ ಶೋಧಿಸಿವೆ.ಯಾವ ಧರ್ಮದಲ್ಲಿಯೂ ಈ ಉಪವಾಸ ಎಂಬ ಪರಿಕಲ್ಪನೆ ಕೇವಲ ಹಸಿವನ್ನು ಅನುಭವಿಸುವುದಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ ಎಂಬುದು ಖಚಿತ. ಶಿಸ್ತುಬದ್ಧವಾಗಿ ಆಚರಿಸಬೇಕಾದ ಒಂದು ವ್ರತವನ್ನಾಗಿ ಉಪವಾಸವನ್ನು ಕಲ್ಪಿಸಿಕೊಂಡಿರುವುದರಲ್ಲಿಯೇ ಹಲವು ಪಾಠಗಳಿವೆ.ರಂಜಾನ್ ಉಪವಾಸವನ್ನೂ ಇದೇ ಅರ್ಥದಲ್ಲಿ ಗ್ರಹಿಸಬೇಕೆನಿಸುತ್ತದೆ. ಚಾಂದ್ರಮಾನ ಪಂಚಾಂಗಕ್ಕೆ ಅನುಗುಣವಾಗಿ ಎಲ್ಲಾ ಋತುಗಳಲ್ಲಿಯೂ ಸಂಚರಿಸುವ ಈ ತಿಂಗಳು ವ್ರತಧಾರಿಗಳಿಗೆ ಅವರ ಜೀವಿತಾವಧಿಯಲ್ಲೇ ಎಲ್ಲಾ ಬಗೆಯ ವಾತಾವರಣಗಳಲ್ಲೂ ಸ್ವಯಂ ನಿಯಂತ್ರಣದ ಶಿಸ್ತೊಂದನ್ನು ಕಲಿಸುತ್ತಿರುತ್ತದೆ.ಇಲ್ಲಿ ವ್ರತಧಾರಿ ಅನುಸರಿಸಬೇಕಾಗಿರುವುದು ಕೇವಲ ಆಹಾರ ಮತ್ತು ಪಾನೀಯಗಳಿಂದ ದೂರವಿರುವುದಷ್ಟೇ ಅಲ್ಲ. ತನ್ನ ಮನಸ್ಸು, ನಾಲಗೆ ಮತ್ತು ಎಲ್ಲಾ ಬಗೆಯ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವ ಇಚ್ಛೆಯಿಂದ ದೂರವಿರಬೇಕಾಗುತ್ತದೆ.

ಮುಸ್ಲಿಮರ ಮಟ್ಟಿಗೆ ರಂಜಾನ್ ಉಪವಾಸ ಐತಿಹಾಸಿಕವಾಗಿ ಮುಖ್ಯವಾಗುತ್ತದೆ.ಇಸ್ಲಾಮಿ ಪಂಚಾಂಗದ ಒಂಬತ್ತನೆಯ ತಿಂಗಳಾಗಿ ಬರುವ ರಂಜಾನ್‌ನಲ್ಲಿಯೇ ಕುರಾನ್‌ನ ಮೊದಲ ಸೂಕ್ತಿಗಳು ಧರೆಗಿಳಿದು ಬಂದವು. ಬಹುಶಃ ಈ ಕಾರಣದಿಂದಾಗಿಯೇ ಈ ತಿಂಗಳಿಗೊಂದು ಆಧ್ಯಾತ್ಮಿಕ ಮಹತ್ವವಿದೆ. ಹಾಗೆಯೇ ಪ್ರವಾದಿ ಮಹಮ್ಮದರ (ಸ.ಅ.) ಹಿಜ್ರಾ ಅಥವಾ ವಲಸೆ ನಡೆದದ್ದೂ ಇದೇ ತಿಂಗಳಿನಲ್ಲಿಯೇ.  ಕ್ರಿಸ್ತಶಕ 622ರಲ್ಲಿ ರಂಜಾನ್ ತಿಂಗಳಿನಲ್ಲಿ ಅವರು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋದರು. ಅವರು ರಂಜಾನ್‌ನ ಕೊನೆಯ ಹತ್ತು ದಿನಗಳನ್ನು ಮಸೀದಿಯಲ್ಲೇ ಪ್ರಾರ್ಥನೆಯಲ್ಲಿ ಕಳೆದರು. ಇದು ಕಡ್ಡಾಯವಲ್ಲವಾದರೂ ಬಹುತೇಕ ವ್ರತನಿಷ್ಠರು ರಂಜಾನ್‌ನ ಕೊನೆಯ ಹತ್ತು ದಿನಗಳ ಹಗಲು ಮತ್ತು ರಾತ್ರಿಗಳನ್ನು ಈಗಲೂ ಮಸೀದಿಯಲ್ಲಿ ಪ್ರಾರ್ಥನೆ ಮತ್ತು ಧ್ಯಾನಗಳೊಂದಿಗೆ ಪೂರೈಸುತ್ತಾರೆ.ಉಪವಾಸದ ಕೇಂದ್ರವಿರುವುದು ದೈವಕೇಂದ್ರಿತ ಅಧ್ಯಾತ್ಮದಲ್ಲಿ. ಇಸ್ಲಾಮಿನ ಮಟ್ಟಿಗೂ ಇದು ನಿಜ. ಉಪವಾಸವೆಂಬುದು ಅತ್ಯುನ್ನತವಾಗಿರುವ ಆದರೆ ಹೃದಯದಲ್ಲೇ ಇರುವ ದೇವರ ಅರಿವಿನೊಂದಿಗೆ ನಡೆಸುವ ಅನುಸಂಧಾನ. ಆಹಾರ ಮತ್ತು ಪಾನೀಯಗಳನ್ನು ತ್ಯಜಿಸುವುದು ಅದರ ಭೌತಿಕವಾದ ಒಂದು ಲಕ್ಷಣ ಮಾತ್ರ.ಆದರೆ ಆಂತರಿಕವಾಗಿ ನಡೆಸುವ ಅನುಸಂಧಾನದಲ್ಲಿ ವ್ರತಧಾರಿ ಮತ್ತೆ ತನ್ನ ಬದುಕನ್ನು ದೈವ ಕೇಂದ್ರಿತವಾಗಿಸಲು ಪ್ರಯತ್ನಿಸುತ್ತಿರುತ್ತಾನೆ. ಕೇವಲ ತನ್ನನ್ನಷ್ಟೇ ಕೇಂದ್ರೀಕೃತವಾಗಿರಿಸಿಕೊಂಡಿರುವ ಆಧುನಿಕ ಮನುಷ್ಯನ ಸಂದರ್ಭದಲ್ಲಿ ತಾನಲ್ಲದ ಒಂದು ಕೇಂದ್ರವನ್ನು ಕಂಡುಕೊಳ್ಳುವ ಮಾರ್ಗವಾಗಿಯೂ ತನ್ನ ಮಿತಿಯನ್ನು ಅರಿಯುವ ವ್ರತವಾಗಿಯೂ ರಂಜಾನ್ ಮುಖ್ಯವಾಗುತ್ತದೆ.

*ಅಬ್ಬ- ತಂದೆ

*ಉಮ್ಮ- ತಾಯಿ

*ವುಝೂ - ವಿಧಿವತ್ತಾಗಿ ಕೈಕಾಲು ಮುಖ ತೊಳೆದುಕೊಳ್ಳುವ ಕ್ರಿಯೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.