ಅಂತರಂಗ ಮೀಟಿದ ಕವಿ-ಕಾವ್ಯ ಲಹರಿ

7

ಅಂತರಂಗ ಮೀಟಿದ ಕವಿ-ಕಾವ್ಯ ಲಹರಿ

Published:
Updated:

ಮೈಸೂರು:`ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು

ಕಡಲು ನಿನ್ನದೆ, ಹಡಗು ನಿನ್ನದೆ ಮುಳುಗದಿರಲಿ ಬದುಕು....~ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನವನ್ನು ಶಂಕರ್ ಶಾನಭೋಗ್ ಮನತುಂಬಿ ಹಾಡುತ್ತಿದ್ದರೆ, ಪಕ್ಕದಲ್ಲೇ ಕುಳಿತಿದ್ದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹಾಡಿನ ಮೋಡಿಗೆ ತಲೆದೂಗಿದರು, ಜೊತೆ ಕೇಳುಗರೂ ಸಹ.ಸಮರ್ಪಣ ಸಂಸ್ಥೆ ಹಾಗೂ ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಪ್ರೀಮಿಯರ್ ಹೌಸ್‌ನಲ್ಲಿ ಭಾನುವಾರ ಏರ್ಪಡಿಸಿದ್ದ `ಅಂತರಂಗ- 4 ಕವಿ, ಕಾವ್ಯ ಸಂಗೀತ~ ಕಾರ್ಯಕ್ರಮದಲ್ಲಿ ಇಂಥದ್ದೊಂದು ಅಪರೂಪದ ಕ್ಷಣ ಕಾವ್ಯಾಸಕ್ತರ ಹೃನ್ಮನ ತಣಿಸಿತು.ಕಲಾವಿದರ ಮನೋಧರ್ಮ ಏಕೀಕರಣಗೊಂಡು ಭಾವ ತಳೆದ ಈ ಹಾಡು ಕೇಳುಗರಿಗೆ ಹಿತ ನೀಡಿತು.

ಸತತ ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಕುವೆಂಪು, ದ.ರಾ.ಬೇಂದ್ರೆ, ಬಿ.ಎಂ.ಶ್ರೀಕಂಠಯ್ಯ, ಡಿ.ವಿ.ಗುಂಡಪ್ಪ, ಡಾ.ಬಿ.ಆರ್. ಲಕ್ಷ್ಮಣ್‌ರಾವ್, ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯ ಸಂಗೀತರಸಧಾರೆಯಾಗಿ ಹರಿಯಿತು. ಪ್ರತಿ ಹಾಡಿಗೂ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅರ್ಥಗಾರಿಕೆ ನೀಡಿದ ಬಳಿಕ ಶಂಕರ್ ಶಾನಭೋಗ್ ಅವರ ಸಂಗೀತ ಆರಂಭವಾಗುತ್ತಿತ್ತು. ಆ ಕವಿ, ಕಾವ್ಯ- ಸಂಗೀತದ ಜುಗಲ್‌ಬಂದಿ ಇಲ್ಲಿದೆ.`ಕರುಣಾಳು ಬಾ ಬೆಳಕೆ ಕೈ ಹಿಡಿದು ನಡೆಸೆನ್ನನು....~ ಬಿಎಂಶ್ರೀ ಅವರ ಕವನದ ಹಾಡು ಗಾರಿಕೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಳೆಗನ್ನಡ, ಸಂಸ್ಕೃತದ ಸೋಂಕಿಲ್ಲದೆ ರಚಿಸಿದ ಕಾವ್ಯ ಜನಮಾನಸದಲ್ಲಿ ಮಿಳಿತಗೊಂಡ ಬಗೆಯನ್ನು ನಿರೂಪಕರು ಹಾಡಿಗೆ ಪೀಠಿಕೆಯಾಗಿ ನೀಡಿದರು. ಅಚ್ಚ ಕನ್ನಡದಲ್ಲೇ ರಚನೆಯಾದ ಕವನ ಎಲ್ಲ ವರ್ಗದ ಜನರನ್ನು ತಲುಪಿದ ಬಗೆಯನ್ನು ತಿಳಿದು ಪ್ರೇಕ್ಷಕರು ಬೆರಗಾದರು.ಬಳಿಕ ಡಿ.ವಿ.ಜಿ ಅವರ `ಮನಸು ಮೊದವೋಲ್ ಎನ್ನ ಜೀವನವು ವಿಕಸಿಸು....~ ಕವನ ಅಂತರಾಳಕ್ಕೆ ಇಳಿಯಲು ಸ್ವಲ್ಪ ಕಷ್ಟವಾಯಿತು. ನವೋದಯ ಕಾಲಘಟ್ಟಕ್ಕೂ ಮುನ್ನ ಕನ್ನಡದ ಕಾವ್ಯ ಹೇಗಿತ್ತು ಎಂಬುದನ್ನು ಈ ಹಾಡಿನ ಮೂಲಕ ಕಟ್ಟಿಕೊಡಲಾಯಿತು.

 

ಈ ಪದ್ಯ ರಚನೆಯಾದ ಹತ್ತಿಪ್ಪತ್ತು ವರ್ಷದಲ್ಲಿ ಕಾವ್ಯಲೋಕದಲ್ಲದ  ಬದಲಾವಣೆಯನ್ನು ಕೆ.ಎಸ್.ನರಸಿಂಹಸ್ವಾಮಿ ಅವರ ಕವನದ ಮೂಲಕ ಅರ್ಥಪಡಿಸಲಾಯಿತು. ಪ್ರಾರ್ಥನೆಗೆ ಸೀಮಿತವಾಗಿದ್ದ ಪ್ರಾಚೀನ ಕನ್ನಡ ಕಾವ್ಯ, ಆಶಯವಾಗಿ, ಸಂಕಲ್ಪವಾಗಿ ಪರಿವರ್ತನೆಯಾಗುತ್ತಾ ಸಾಗಿದ ದಾರಿಯನ್ನು ಇವು ತಿಳಿಸಿಕೊಟ್ಟವು. ಹಾಡುಗಾರನಿಗೆ ಕಾವ್ಯ ನಿಲುಕಿದ ಬಗೆಯನ್ನು ಆಗಾಗ ಶಾನಭೋಗರೂ ಹಂಚಿಕೊಂಡರು.ಸಂಪೂರ್ಣ ವಿರುದ್ಧ ಭಾವಗಳು ಒಟ್ಟಿಗೆ ಸೇರಿ ಮೈತಳೆದ ಕವನಕ್ಕೆ ಗಾರುಡಿಗ ಕವಿ ದ.ರಾ.ಬೇಂದ್ರೆ ಅವರ `ಬದುಕು ಮಾಯೆಯ ಮಾಟ, ಮಾತು ನೊರೆ ತೊರೆ ಆಟ....~ ಸಾಕ್ಷಿಯಾಯಿತು. ಡಾ.ಬಿ.ಆರ್.ಲಕ್ಷ್ಮಣ್‌ರಾವ್ ಅವರಿಗೆ ಅಂಟಿದ್ದ ತುಂಟ ಕವಿ ಎಂಬ ಬ್ರಾಂಡ್ ಅನ್ನು ತೊಡೆದು ಹಾಕಿದ `ಎಲ್ಲ ಋತುಗಳು ವಸಂತವಲ್ಲ, ತಾಳಿ ನಿಲ್ಲು ಮನವೆ, ಎಲ್ಲ ಪ್ರೇಮಕತೆ ಸುಖಾಂತ್ಯವಲ್ಲ, ತಾಳಿ ನಿಲ್ಲು ಮನವೆ...~ ಕವನಕ್ಕೆ ಎಲ್ಲರೂ ಮನಸೋತರು.ಕುವೆಂಪು ಅವರ `ಬಾ ಚಕೋರಿ, ಬಾ ಚಕೋರಿ ಚಂದ್ರ ಮಂಚಕೆ....~, ಜಿ.ಎಸ್.ಶಿವರುದ್ರಪ್ಪ ಅವರ `ಮಬ್ಬು ಕವಿದರೇನು ನಿನ್ನ ಹಬ್ಬಿದಿರುಳ ದಾರಿಗೆ, ನಡೆ ಮುಂದಕೆ ಧೈರ್ಯದಿಂದ ಅರುಣೋದಯ ತೀರಕೆ....~ಕವನಗಳು ಹಾಡುಗಳಾದವು. ಆಗ ನಿರಂತರವಾಗಿ ಹರಿಯುತ್ತಿದ್ದ ವೆಂಕಟೇಶಮೂರ್ತಿ ಅವರ ವಾಗ್ಝರಿ, ಅವರದೇ ಕವನ `ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರು ಅರಿತರೇನು ನಮ್ಮ ಅಂತರಾಳವ...~ ಹಾಡಿದಾಗ ಮಂತ್ರಮುಗ್ಧರಾಗಿ ಆಲಿಸಿದರು. ವೀರಭದ್ರಯ್ಯ ಹಿರೇಮಠ ಹಾರ್ಮೋನಿಯಂ, ರಘು ತಬಲಾ ಸಾಥ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry