ಮಂಗಳವಾರ, ಮೇ 17, 2022
24 °C

ಅಂತರರಾಜ್ಯ ವಾಲಿಬಾಲ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಈಗ ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ. ಹಲವೆಡೆ ಭವಾನಿ ಮಾತೆಯ ಪೂಜಾ ಕೈಂಕರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ಆದರೆ ಭಾಲ್ಕಿ ಪಟ್ಟಣದಲ್ಲಿನ ನವರಾತ್ರಿ ಹಬ್ಬ ಮಾತ್ರ ಭಿನ್ನವಾಗಿದೆ. ಇಲ್ಲಿನ ಭವಾನಿ ಮಂದಿರದಲ್ಲಿ ಭಕ್ತಿಯ ಜತೆಗೆ ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಬರಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ದೇವಿನಗರದಲ್ಲಿನ ಭವಾನಿ ಮಂದಿರದ ಮುಂದೆ ಅಂತರ್ ರಾಜ್ಯ ವಾಲಿಬಾಲ್ ಟೂರ್ನಿ ಆಯೋಜಿಸಲಾಗುತ್ತಿದೆ.ಈ ವರ್ಷ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಮುಂಬೈ, ಚೆನೈ, ನಾಗಪೂರ್, ಹೈದ್ರಾಬಾದ, ವಿಶಾಖಪಟ್ಟಣಂನಂಥ ನಗರಗಳ ರಾಷ್ಟ್ರೀಯ ತಂಡ ಆಹ್ವಾನಿಸಲಾಗಿದೆ. ಕಳೆದ ಮೂರು ದಿನಗಳಿಂದ ಭಾಲ್ಕಿಯಲ್ಲಿ ನಡೆಯುತ್ತಿರುವ ವಾಲಿಬಾಲ್ ಟೂರ್ನಿ ಜಿಲ್ಲೆಯ ಕ್ರೀಡಾಸಕ್ತರ ಗಮನ ಸೆಳೆದಿದೆ. 10ಸಾವಿರಕ್ಕೂ ಅಧಿಕ ಸಾರ್ವಜನಿಕರು ಭವಾನಿ ಮಂದಿರದ ಮುಂದೆ ರಾತ್ರಿ ಹಗಲು ಜಮಾಯಿಸಿ ಮನರಂಜನೆ ಪಡೆಯುತ್ತಿದ್ದಾರೆ. ರಾತ್ರಿ 2 ಗಂಟೆಯಾದರೂ ಜನರು ಕದಲುತ್ತಿಲ್ಲ. ಇದೊಂದು ವಿಶಿಷ್ಟ ರೀತಿಯ ದಸರಾ ಆಚರಣೆಯಾಗಿ ಪರಿವರ್ತನೆಗೊಳ್ಳುತ್ತಿದೆ.ತಂಡಗಳು: ತಮಿಳುನಾಡು ಪೊಲೀಸ್ ತಂಡ, ಹೈದ್ರಾಬಾದ್ ರೆಡ್, ಚೆನೈ ಫ್ರೆಂಡ್ಸ್, ಆರ್ಮಿ ಗ್ರೀನ್, ಸೌತ್ ಈಸ್ಟರ್ನ್ ರೇಲ್ವೆ, ನಾಗಪೂರ್, ಆರ್.ಎಸ್.ಸಿ.ಬಿ ಹೈದ್ರಾಬಾದ್ ಮುಂತಾದೆಡೆಯಿಂದ ಮಹಿಳಾ ಮತ್ತು ಪುರುಷ ತಂಡಗಳು ಆಗಮಿಸಿವೆ. ಇವರೆಲ್ಲರಿಗೂ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ರೂರಲ್ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ಮತ್ತು ಪುರುಷ ಹಾಸ್ಟೆಲ್‌ಗಳಲ್ಲಿ ಆಶ್ರಯ ನೀಡಲಾಗಿದೆ.ಸಾರ್ವಜನಿಕರಿಂದಲೇ ಹಣವನ್ನು ಸಂಗ್ರಹಿಸಿ ಕ್ರೀಡಾಪಟುಗಳ ಸಂಭಾವನೆ, ಬಹುಮಾನ ಸಂಗ್ರಹಿಸಲು ಹೆಣಗಾಡುವಂಥ ಪರಿಸ್ಥಿತಿ ಇದೆ. ಆದರೆ ಪಂದ್ಯದ ಆಯೋಜಕ ಯುವಕರ ಉತ್ಸಾಹ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ವಿಲಾಸ ಬಕ್ಕಾ, ಅಶೋಕ ಮಡ್ಡೆ, ಸುರೇಶ ಕಾಳೆ, ಓ.ವಿ. ಬಿರಾದಾರ ಮುಂತಾದವರು ಸಾಕಷ್ಟು ಶ್ರಮಿಸುತ್ತಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮಗಳು: ದೇವಿನಗರದಲ್ಲಿ ಸೆ.27ರಿಂದ ನಡೆಯುತ್ತಿರುವ ದಸರಾ ಕಾರ್ಯಕ್ರಮಗಳಲ್ಲಿ ಕ್ರೀಡೆಯ ಜೊತೆಗೆ ಸಂಗೀತ ರಸಮಂಜರಿ, ಸಾಹಿತ್ಯ ಗೋಷ್ಠಿ, ರಸಪ್ರಶ್ನೆ, ಭಜನೆ, ವಿಚಾರ ಗೋಷ್ಠಿ, ಬಹುಭಾಷಾ ಕವಿ ಗೋಷ್ಠಿ, ನಿರಂತರ ಅನ್ನ ದಾಸೋಹಗಳು ನಡೆಯುತ್ತಿವೆ. ಅ. 12ರ ವರೆಗೂ ಇವು ನಿರಂತರವಾಗಿ ಜರುಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.