ಶುಕ್ರವಾರ, ಏಪ್ರಿಲ್ 23, 2021
22 °C

ಅಂತರರಾಷ್ಟ್ರೀಯ ಕರೆ ಮಾರ್ಪಾಡು: ನಾಲ್ವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳಿಗೆ ಮಾರ್ಪಾಡು ಮಾಡುವ ಜಾಲದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಈಶ್ವರಚಂದ್ರ ವಿದ್ಯಾಸಾಗರ್ (34), ಪ್ರವೀಣ್ (27), ರಾಮರಾವ್ (51) ಮತ್ತು ಜಿ.ಎನ್.ಸಪ್ತಾದ್ರಿ (30) ಬಂಧಿತರು. ಆರೋಪಿಗಳು ರಾಮಮೂರ್ತಿನಗರದ ಚಲುವಯ್ಯ ಗಾರ್ಡನ್‌ನ ಮನೆಯೊಂದರಲ್ಲಿ ಅಕ್ರಮವಾಗಿ ದೂರವಾಣಿ ವಿನಿಮಯ ತಂತ್ರಜ್ಞಾನ ಅಳವಡಿಸಿಕೊಂಡು ಸ್ಪೀಡ್‌ಪ್ಲೋ ಎಂಬ ವಿದೇಶಿ ಕಂಪೆನಿಯೊಂದಿಗೆ ಸೇರಿ ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಈಶ್ವರಚಂದ್ರ ವಿದ್ಯಾಸಾಗರ್, ಈತನ ಸಹಾಯಕ ಪ್ರವೀಣ್ ಮತ್ತು ಮತ್ತೊಬ್ಬ ಆರೋಪಿ ರಾಮರಾವ್ ಮೂಲತಃ ಆಂಧ್ರಪ್ರದೇಶದವರಾಗಿದ್ದಾರೆ. ಈಶ್ವರಚಂದ್ರ ವಿದ್ಯಾಸಾಗರ್ ಎಂಸಿಎ ಪದವೀಧರನಾಗಿದ್ದು, ಆರೋಪಿಗಳು 2011ರ ಮಾರ್ಚ್‌ನಿಂದ ಈ ಕೃತ್ಯದಲ್ಲಿ ತೊಡಗಿದ್ದಾರೆ.ಇಂಟರ್‌ನೆಟ್ ನೆರವಿನಿಂದ ಹಾಗೂ ಖಾಸಗಿ ದೂರವಾಣಿ ಕಂಪೆನಿಗಳ ಸಿಮ್‌ಕಾರ್ಡ್‌ಗಳನ್ನು ಬಳಸಿಕೊಂಡು ಆರೋಪಿಗಳು ವಿದೇಶಿ ಕರೆಗಳನ್ನು ಸ್ಥಳೀಯ ಕರೆಯಾಗಿ ಪರಿವರ್ತಿಸುತ್ತಿದ್ದರು. ಸಿಮ್‌ಕಾರ್ಡ್‌ಗಳನ್ನು ಎಫ್‌ಸಿಟಿ ಬಾಕ್ಸ್‌ಗೆ ಅಳವಡಿಸಿ, ಕಂಪೆನಿ `ಟಾರಿಫ್ ಪ್ಲಾನ್~ಗಳ ಸಹಾಯದಿಂದ ಈ ಕೃತ್ಯ ನಡೆಸುತ್ತಿದ್ದರು. ಇದರಿಂದ ಅಂತರರಾಷ್ಟ್ರೀಯ ಕರೆ ದರಗಳು ಸ್ಥಳೀಯ ಕರೆ ದರಗಳಾಗಿ ಮಾರ್ಪಾಡಾಗುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.ಕೃತ್ಯದಿಂದ ಸ್ಪೀಡ್‌ಪ್ಲೋ ಕಂಪೆನಿಗೆ ಲಾಭವಾಗುತ್ತಿತ್ತು. ಈ ಕೆಲಸಕ್ಕಾಗಿ ಕಂಪೆನಿಯು ಆನ್‌ಲೈನ್ ಮೂಲಕ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಿತ್ತು. ಆರೋಪಿಗಳು ಕೃತ್ಯದಿಂದ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ. ಈ ಕೃತ್ಯದ ಬಗ್ಗೆ ಬಹಳ ದಿನಗಳಿಂದ ಅನುಮಾನವಿತ್ತು. ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದರೇ ಎಂಬ ಬಗ್ಗೆ ಹೆಚ್ಚಿನ ವಿಚಾರಣೆಯಿಂದ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ರಾಮರಾವ್ ಮತ್ತು ಸಪ್ತಾದ್ರಿ ಖಾಸಗಿ ದೂರವಾಣಿ ಕಂಪೆನಿ ಪ್ರತಿನಿಧಿಗಳಾಗಿದ್ದು, ಯಾವುದೇ ದಾಖಲೆ ಪಡೆಯದೇ ಈಶ್ವರಚಂದ್ರ ವಿದ್ಯಾಸಾಗರ್‌ಗೆ  ಸಿಮ್‌ಕಾರ್ಡ್‌ಗಳನ್ನು ಪೂರೈಸುತ್ತಿದ್ದರು. ಬಂಧಿತರಿಂದ ಎಫ್‌ಸಿಟಿ ಬಾಕ್ಸ್, ಕ್ವಿಂಟಮ್,ಮೋಡಮ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ 800 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಏನಿದು ಎಫ್‌ಸಿಟಿ ಬಾಕ್ಸ್?

ಹಲವು ಸಿಮ್‌ಕಾರ್ಡ್‌ಗಳನ್ನು ಅಳವಡಿಸಿ, ಏಕಕಾಲದಲ್ಲೇ ಆ ಎಲ್ಲಾ ಸಿಮ್‌ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗುವ ಉಪಕರಣ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್.ಖಾಸಗಿ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಹಾಗೂ ದೂರಸಂಪರ್ಕ ಕಂಪೆನಿಗಳಲ್ಲಿ ಈ ಎಫ್‌ಸಿಟಿ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ಆರೋಪಿಗಳು ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಲು ಎಫ್‌ಸಿಟಿ ಬಾಕ್ಸ್ ಬಳಸುತ್ತಿದ್ದರು.`ಸೈಬರ್ ಅಪರಾಧ~

`ಆರೋಪಿಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು. ಇದು ಸೈಬರ್ ಅಪರಾಧವಾಗಿದೆ. ಸದ್ಯ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಸ್ಪೀಡ್‌ಪ್ಲೋ ಕಂಪೆನಿಯ ಪಾತ್ರವೇನು ಮತ್ತು ಜಾಲದ ಹಿಂದೆ ಬೇರೆ ಯಾವ ಕಂಪೆನಿಗಳಿವೆ ಎಂಬುದು ಹೆಚ್ಚಿನ ತನಿಖೆಯಿಂದ ತಿಳಿಯಬೇಕಿದೆ~

-ಬಿ. ದಯಾನಂದ, ಜಂಟಿ ಪೊಲೀಸ್ ಕಮಿಷನರ್, ಪೂರ್ವ ಅಪರಾಧ ವಿಭಾಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.