ಅಂತರಿಕ್ಷದಲ್ಲಿ ಹಬೆರೂಪದ ಬೃಹತ್ ಸರೋವರಗಳ ಪತ್ತೆ

7

ಅಂತರಿಕ್ಷದಲ್ಲಿ ಹಬೆರೂಪದ ಬೃಹತ್ ಸರೋವರಗಳ ಪತ್ತೆ

Published:
Updated:

ಲಂಡನ್ (ಪಿಟಿಐ): ಭೂಮಿಯ ಸಾಗರಗಳನ್ನು 2000ಕ್ಕೂ ಹೆಚ್ಚು ಬಾರಿ ತುಂಬಬಹುದಾದಷ್ಟು ದೊಡ್ಡದಾದ ಬೃಹತ್ ಗಾತ್ರದ ನೀರಿನ ಆವಿ ಇಲ್ಲವೇ ಹಬೆ ರೂಪದ ಸರೋವರಗಳನ್ನು ಹೊಸದಾಗಿ ಸೃಷ್ಟಿಯಾಗುತ್ತಿರುವ ಸೂರ್ಯನಂತಹ ನಕ್ಷತ್ರವೊಂದರ ಸನಿಹದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ನೂತನ ಹರ್ಷೆಲ್ ಬಾಹ್ಯಾಕಾಶ ವೀಕ್ಷಣಾಲಯವು ಲಿಂಡ್ಸ್ 1544 ಎಂಬುದಾಗಿ ಗುರುತಿಸಲಾಗಿರುವ ತಾರಸ್ ನಕ್ಷತ್ರಪುಂಜದಲ್ಲಿ ಅನಿಲ ಹಾಗೂ ದೂಳಿನ ರೂಪದಲ್ಲಿರುವ ಈ ಬೃಹತ್ ಸರೋವರಗಳನ್ನು ಪತ್ತೆ ಹಚ್ಚಿದೆ. ನಕ್ಷತ್ರ ರಚನೆಯ ಅಂಚಿನಲ್ಲಿ ಇಂತಹ ಹಬೆ ರೂಪದ ನೀರಿನ ಸರೋವರಗಳ ಪತ್ತೆಯಾಗಿರುವುದು ಇದೇ ಮೊದಲು. ಮೋಡದ ಮೂಲಕ ಪ್ರಬಲವಾದ ಕಾಸ್ಮಿಕ್ ಕಿರಣಗಳು ಹಾದು ಹೋದಾಗ ಮಂಜಿನಂತಹ ದೂಳಿನ ಕಣಗಳಿಂದ ಬೇರ್ಪಟ್ಟ ಭೂಮಿಯ ಸಾಗರಗಳ 2000 ಪಟ್ಟಿಗಿಂತಲೂ ಮಿಗಿಲಾದ ಈ  ನೀರಿನ ಹಬೆಯ ಸಾಗರಗಳು ಪತ್ತೆಯಾಗಿವೆ.ಇಷ್ಟೊಂದು ಬೃಹತ್ ಗಾತ್ರದ ಹಬೆ ಸೃಷ್ಟಿಗೆ ಅಲ್ಲಿ  ಭೂಮಿಯ ಸಾಗರಗಳ 30 ಲಕ್ಷ ಕ್ಕೂ ಹೆಚ್ಚು ಪಟ್ಟಿನ ಘನೀಕೃತ ಮಂಜುಗಡ್ಡೆ ಮೋಡದಲ್ಲಿ ಇರಲೇಬೇಕು ಎಂದು ಲೀಡ್ಸ್ ವಿಶ್ವವಿದ್ಯಾಲಯದ ಪಾವೊಲಾ ಕ್ಯಾಸೆಲ್ಲಿ ಹೇಳಿದರು.ತಂಪಾದ ಅನಿಲ ಮತ್ತು ದೂಳಿನ ದಟ್ಟ ಮೋಡಗಳಿಂದ ನಕ್ಷತ್ರಗಳು ಸೃಷ್ಟಿಯಾಗುತ್ತವೆ. ಈ ನಕ್ಷತ್ರ ಸೃಷ್ಟಿಯ ಪೂರ್ವದಲ್ಲಿನ ಸ್ಥಿತಿಯಲ್ಲಿ ನಮ್ಮ ಸೌರವ್ಯೂಹದಂತಹ ರಚನೆಗಳಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳು ಇರುತ್ತವೆ.ಈ ಮೊದಲೂ ಸೌರವ್ಯೂಹದ ಹೊರಗೆ ನೀರು ಪುಟ್ಟ ದೂಳಿನ ಕಣಗಳಿಗೆ ಲೇಪಿತವಾದ ಅನಿಲ ಮತ್ತು ಮಂಜುಗಡ್ಡೆಗಳ ರೂಪದಲ್ಲಿ ರಚನಾ ಹಂತದದಲ್ಲಿನ ನಕ್ಷತ್ರಗಳ ತಾಣಗಳಲ್ಲಿ ಪತ್ತೆಯಾಗಿದ್ದುಂಟು. ಆದರೆ ಅನಿಲ ರೂಪದಲ್ಲಿ ಇರಲಾರದಷ್ಟು ತಂಪಾದ್ದರಿಂದ ನೀರು ಹರಳುಗಟ್ಟಿದ ಮಂಜುಗಡ್ಡೆಯ ರೂಪದಲ್ಲಿದೆ ಎಂಬುದು ಈಗಿನ ಹಬೆರೂಪದ ನೀರಿನ ಸರೋವರಗಳ ಪತ್ತೆಗೆ ಮೊದಲಿನ ನಮ್ಮ ತಿಳುವಳಿಕೆಯಾಗಿತ್ತು. ಈಗ ನಾವು ನಮ್ಮ ನಂಬಿಕೆಯನ್ನು ಪುನರ್ ಪರಿಶೀಲಿಸಬೇಕಾಗಿ ಬಂದಿದೆ. ಇಂತಹ ದಟ್ಟ ನೀರಿನ ಹಬೆ ಇರುವ ಪ್ರದೇಶಗಳಲ್ಲಿನ ರಾಸಾಯನಿಕ ಪ್ರಕ್ರಿಯೆಯ ಅಧ್ಯಯನ ಮಾಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ನೀರಿನ ಹಬೆಯ ಸ್ವಲ್ಪಾಂಶವನ್ನಾದರೂ ಉಳಿಸುವಲ್ಲಿನ  ಕಾಸ್ಮಿಕ್ ಕಿರಣಗಳ ಮಹತ್ವದ ಅಧ್ಯಯನ ಮಾಡಬೇಕಾಗಿದೆ~ ಎಂದು ಕ್ಯಾಸೆಲ್ಲಿ ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry