ಅಂತರಿಕ್ಷ್ ಅವಸಾನ ನಿಶ್ಚಿತ

7

ಅಂತರಿಕ್ಷ್ ಅವಸಾನ ನಿಶ್ಚಿತ

Published:
Updated:

ದೇವಾಸ್ ವಿವಾದ ಭುಗಿಲೆದ್ದಂತೆಯೇ ಅಂತರಿಕ್ಷ್ ನಿಗಮವನ್ನು ಪುನರ್ ರಚಿಸುವ ಬಗ್ಗೆ ಬಾಹ್ಯಾಕಾಶ ಆಯೋಗ ಪ್ರಕಟಣೆ ನೀಡಿದೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೇ ಇಲ್ಲಿಯ ತನಕ ಇಸ್ರೊ ಮತ್ತು ಅಂತರಿಕ್ಷ್‌ಗಳ ಅಧ್ಯಕ್ಷರಾಗಿದ್ದವರು. ಇನ್ನು ಮುಂದೆ ಅವರು ಅಂತರಿಕ್ಷ್‌ದ ಮುಖ್ಯಸ್ಥರಾಗಿರುವುದಿಲ್ಲ. ಇದುವೇ ಅಂತರಿಕ್ಷ್‌ನ ಪುನರ್ ರಚನೆಯ ಮುಖ್ಯ ಸಾರ. ಇಸ್ರೊದ ಈ ವಾಣಿಜ್ಯ ಘಟಕಕ್ಕೆ ಇನ್ನು ಮುಂದೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ಪ್ರತ್ಯೇಕ ವ್ಯಕ್ತಿಯೊಬ್ಬರನ್ನು ನಿಯೋಜಿಸಲಾಗುತ್ತದೆ.ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ದೇವಾಸ್ ವಿವಾದಕ್ಕೂ, ಅಂತರಿಕ್ಷ್ ಪುನರ್ ರಚನೆಗೂ ಸಂಬಂಧ ಇಲ್ಲ ಎಂಬುದನ್ನು ಸಾಧಿಸಲು ಹೊರಟಿದ್ದು, ಆಂತರಿಕ ಪರಿಶೀಲನೆಯ ಬಳಿಕ ಕೆಲವು ತಿಂಗಳ ಹಿಂದೆಯೇ ಈ ನಿರ್ಧಾರಕ್ಕೆ ಬರಲಾಗಿತ್ತು ಎಂದಿದ್ದಾರೆ. ಅಂತರಿಕ್ಷ್‌ದ ವ್ಯವಹಾರ ವಿಸ್ತರಣೆಗೆ ಈ ಕ್ರಮದಿಂದ ಅನುಕೂಲ ಆಗಲಿದೆ ಎಂದು ಹೇಳಿ ಪುನರ್ ರಚನೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.ಆದರೆ ಈ ಪ್ರಸ್ತಾವಕ್ಕೆ ಇಸ್ರೊದ ಮಾಜಿ ಅಧ್ಯಕ್ಷ ಯು.ಆರ್. ರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1992ರಲ್ಲಿ ಅಂತರಿಕ್ಷ್ ನಿಗಮ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಹೊಸ ಪ್ರಸ್ತಾವದ ಬಗ್ಗೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇದು ಕೆಲಸ ಮಾಡದು, ಇದು ಅಂತರಿಕ್ಷ್ ಅನ್ನು ಕೊಂದುಬಿಡಬಹುದು’ ಎಂದು ಖಡಾಖಂಡಿತವಾಗಿ ಹೇಳಿದರು. ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿಯೊಂದಿಗೆ ಈ ಸಂಸ್ಥೆ ಸಹ ಬೆಳೆಯುತ್ತದೆ ಎಂದು ಅವರು ಪ್ರತಿಪಾದಿಸಿದರು.ಈಗಿರುವ ವ್ಯವಸ್ಥೆಯೇ ಸಮರ್ಪಕವಾಗಿದೆ. ಕಳೆದ ಹಲವು ವರ್ಷಗಳಿಂದ ಇದು ಚೆನ್ನಾಗಿ ಕೆಲಸ ಮಾಡುತ್ತಿದೆ. ‘ಇದನ್ನು ಲಘುವಾಗಿ ಸಿದ್ಧಪಡಿಸಿದ್ದಲ್ಲ. ಅದರ ಹಿಂದೆ ಬಹಳ ಚಿಂತನೆ ಮಾಡಲಾಗಿದೆ. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಇದಕ್ಕೆ ವೈಯಕ್ತಿಕವಾಗಿ ಒಪ್ಪಿಗೆ ಸೂಚಿಸಿದ್ದರು’ ಎಂದು ರಾವ್ ಹೇಳುತ್ತಾರೆ. ‘ಪರಾವಲಂಬಿಯಾಗಿ ನಿಂತಿರುವ ಸಂಸ್ಥೆ ಇದು ಎಂದು ಭಾವಿಸಲಾಗುತ್ತಿದೆ. ಆದರೆ ಕೂಲಂಕಷ ವಿಚಾರ ಮಾಡಿಯೇ ಈ ವ್ಯವಸ್ಥೆ ರೂಪಿಸಲಾಗಿದೆ’ ಎಂಬುದನ್ನು ಅವರು ನೆನಪಿಸುತ್ತಾರೆ.ಇಸ್ರೊ ಮುಖ್ಯಸ್ಥರ ಉಪಸ್ಥಿತಿ ಇಲ್ಲದಿದ್ದರೆ ಅಥವಾ ಅಂತರಿಕ್ಷ್ ಸಹಿ ಹಾಕುವ ವಾಣಿಜ್ಯ ಒಪ್ಪಂದಗಳ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಯಾವ ಯೋಜನೆಗೆ ಆದ್ಯತೆ ನೀಡಬೇಕು ಎಂದು ನಿರ್ಧರಿಸುವುದು ಕಷ್ಟ ಎಂಬ ರಾವ್ ಅವರ ಮಾತನ್ನು ಹಲವರು ಸಮ್ಮತಿಸುತ್ತಾರೆ. ಯಾಕೆಂದರೆ ಅಂತರಿಕ್ಷ್‌ಗೆ ಉತ್ಪಾದನಾ ಸಾಮರ್ಥ್ಯ ಇಲ್ಲ, ಅದು ಕೇವಲ ಒಪ್ಪಂದಗಳಿಗೆ ಸಹಿ ಹಾಕಬಹುದಷ್ಟೇ, ಅದನ್ನು ಇಸ್ರೊ ಮಾತ್ರವಷ್ಟೇ ಜಾರಿಗೆ ತರಬೇಕು.‘ನೂರಾರು ಯೋಜನೆಗಳು ಇರುವಾಗ ಅವುಗಳನ್ನು ಸಕಾಲಕ್ಕೆ ಮುಗಿಸಿಕೊಡುವ ಗುತ್ತಿಗೆ ಹೊಣೆಗಾರಿಕೆಯೂ ಇರುತ್ತದೆ. ಒಪ್ಪಿಕೊಂಡ ಯೋಜನೆಗಳನ್ನು ಕೈಗೆತ್ತಿಕೊಂಡು ನಿರ್ಮಿಸಲಾಗುತ್ತಿದೆ ಎಂಬುದಕ್ಕೆ ಏನು ಖಾತರಿ ಇರುತ್ತದೆ? ಯೋಜನೆ ವಿಳಂಬವಾದರೆ ಅದಕ್ಕೆ ದಂಡವನ್ನೂ ತೆರಬೇಕಾಗುತ್ತದೆ. ಇನ್ನೊಬ್ಬರ ಮನೆಗೆ ಹೋಗಿ ಅಲ್ಲಿ ಅಧಿಕಾರ ಚಲಾಯಿಸುವುದು ಸಾಧ್ಯವಿಲ್ಲ. ಅಂತರಿಕ್ಷ್ ಇಸ್ರೊದ ಕೂಸು, ಕೂಸನ್ನು ಬಿಟ್ಟುಬಿಡಿ ಎಂದು ಸುಮ್ಮನೆ ಕೇಳುವಂತಿಲ್ಲ’ ಎಂದು ಯು. ಆರ್. ರಾವ್ ಖಚಿತ ಧ್ವನಿಯಲ್ಲಿ ಹೇಳುತ್ತಾರೆ.ಅಂತರಿಕ್ಷ್ ನಿಗಮಕ್ಕೆ 2008ರಲ್ಲಿ ‘ಮಿನಿ ರತ್ನ’ದ ಸ್ಥಾನಮಾನ ನೀಡಲಾಗಿತ್ತು. 2009ರಲ್ಲಿ ಅದರ ವ್ಯವಹಾರ 1000 ಕೋಟಿ ರೂಪಾಯಿ ಮೀರಿತ್ತು. 2009-10ರಲ್ಲಿ ಅದರ ವ್ಯವಹಾರ 883.91 ಕೋಟಿ ರೂಪಾಯಿಗಳಿಗೆ ಕುಸಿಯಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದು ಶೇ 16.52ರಷ್ಟು ಕಡಿಮೆಯಾಗಿತ್ತು. ಸಾಮರ್ಥ್ಯದ ಸಮಸ್ಯೆಯೇ ಇದಕ್ಕೆ ಕಾರಣ, ಇಸ್ರೊಗೆ ತನ್ನದೇ ಯೋಜನೆಗಳನ್ನು ಕೊನೆಗೊಳಿಸುವ ಕೆಲಸ ಇದ್ದುದರಿಂದ ತಾನು ಕೈಗೆತ್ತಿಕೊಂಡ ವಾಣಿಜ್ಯ ಯೋಜನೆಗಳನ್ನು ಕೊನೆಗೊಳಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಅಂತರಿಕ್ಷ್ ಆರೋಪಿಸುತ್ತದೆ.ಅಂತರಿಕ್ಷ್ ಕಂಪೆನಿಯನ್ನು ಇನ್ನಷ್ಟು ಪರಿಣಾಮಕಾರಿ ಸಂಸ್ಥೆಯನ್ನಾಗಿ ಮಾಡಬೇಕಾಗಿರುವುದಂತೂ ನಿಜ. ಕಂಪೆನಿ ಇದೀಗ ಅನುಭವಿಸುತ್ತಿರುವ ಅಡ್ಡಿ ಆತಂಕಗಳಿಗೆಲ್ಲ ಉದ್ದೇಶಿತ ಪುನರ್ ರಚನೆಯೇ ಪರಿಹಾರವೇ? ಕಾಲವಷ್ಟೇ ಇದಕ್ಕೆ ಉತ್ತರ ನೀಡಬಹುದಷ್ಟೇ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry