ಅಂತರಿಕ್ಷ ಸೌರಶಕ್ತಿ: ಹೊಸ ಸಾಧ್ಯತೆ

7

ಅಂತರಿಕ್ಷ ಸೌರಶಕ್ತಿ: ಹೊಸ ಸಾಧ್ಯತೆ

Published:
Updated:
ಅಂತರಿಕ್ಷ ಸೌರಶಕ್ತಿ: ಹೊಸ ಸಾಧ್ಯತೆ

ಸ್ಕಾಟ್ಲೆಂಡ್‌ನ ಗ್ಲಾಸ್ಕೊದಲ್ಲಿರುವ  ಸ್ಟ್ರಚ್‌ಕ್ಲೈಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ     ವೊಂದು ಅಂತರಿಕ್ಷದಲ್ಲೇ ಸೌರಶಕ್ತಿ ಸಂಗ್ರಹಿಸಿ, ಅಲ್ಲಿಂದ ನೇರವಾಗಿ ಭೂಮಿಗೆ ರವಾನಿಸಬಹುದಾದ ಬೃಹತ್ ಯೋಜನೆಯೊಂದನ್ನು  ಸಿದ್ಧಪಡಿಸಿದೆ.ಅಂತರಿಕ್ಷ ಆಧಾರಿತ (Space-based solar power -SBSP) ಸೌರಶಕ್ತಿ ಕಲ್ಪನೆ ನಾಲ್ಕು ದಶಕಗಳಷ್ಟು ಹಳೆಯದು. ಈಗಾಗಲೇ ಆ ನಿಟ್ಟಿನಲ್ಲಿ ಹಲವು ಪ್ರಯೋಗಗಳು ನಡೆದಿವೆ. ಆದರೆ, ಅಂತರಿಕ್ಷದಲ್ಲಿ ಸಂಗ್ರಹಿಸಿದ ಸೌರಶಕ್ತಿಯನ್ನು ಭೂಮಿಗೆ ರವಾನಿಸಲು ಸಮರ್ಥ ತಂತ್ರಜ್ಞಾನ ಈವರೆಗೂ ಅಭಿವೃದ್ಧಿಯಾಗಿರಲಿಲ್ಲ.ಸ್ಟ್ರಚ್‌ಕ್ಲೈಡ್ ವಿ.ವಿ.ಯ ಏರೊಸ್ಪೇಸ್ ಎಂಜಿನಿಯರ್ ಮ್ಯಾಸಿಮಿಲಿಯನೊ ವಸೈಲ್ ಅವರ ತಂಡ ಇದಕ್ಕೊಂದು ಪರಿಹಾರ ಹುಡುಕಿದೆ. ಅಂತರಿಕ್ಷದಲ್ಲಿ ಸಂಗ್ರಹಿಸುವ ಸೌರಶಕ್ತಿಯನ್ನು ಮೈಕ್ರೊವೇವ್ ಮತ್ತು ಲೇಸರ್ ಕಿರಣಗಳ ಮೂಲಕ ಭೂಮಿಯ ಯಾವುದೇ ಮೂಲೆಗೆ ಬೇಕಾದರೂ  ರವಾನಿಸಬಹುದಾದ ತಂತ್ರಜ್ಞಾನ ಒಂದನ್ನು ಅಭಿವೃದ್ಧಿಪಡಿಸಿದೆ.ಕಾರ್ಯ ನಿರ್ವಹಣೆ

ಅಂತರಿಕ್ಷದಲ್ಲಿ ಸೌರಶಕ್ತಿ ಸಂಗ್ರಹಿಸಲು ಬೃಹತ್ ಸೌರ ಉಪಗ್ರಹವೊಂದನ್ನು (solar satellite)ಹಾರಿಬಿಡಲಾಗಿದೆ. ಇದು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ 24 ಗಂಟೆಗಳ ಕಾಲವೂ ಸೌರಶಕ್ತಿ ಸಂಗ್ರಹಿಸುತ್ತದೆ. ಹೀಗೆ ಸಂಗ್ರಹವಾಗುವ ಸೌರಶಕ್ತಿಯನ್ನು ಉಪಗ್ರಹ ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ, ನಂತರ ಭೂಮಿಯಲ್ಲಿರುವ ಸೌರಶಕ್ತಿ ಸಂಗ್ರಹ ಘಟಕಗಳಿಗೆ (rectenna) ರವಾನಿಸುತ್ತದೆ. ಲೇಸರ್ ಕಿರಣಗಳು ಮೋಡಗಳನ್ನು ಸೀಳಿಕೊಂಡು  ಹಾಯ್ದುಹೋಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ. ಈ ವಿಕಿರಣಗಳಿಂದ ಜೆಟ್ ವಿಮಾನಗಳಿಗೆ, ಅಂತರಿಕ್ಷದಲ್ಲಿ ತೇಲುತ್ತಿರುವ ಇತರೆ ಘನ ವಸ್ತುಗಳಿಗೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.ಉಪಯೋಗ

ಭೂಮಿಯ ಯಾವುದೇ ಮೂಲೆಗೆ ಬೇಕಾದರೂ ಅಂತರಿಕ್ಷದಿಂದ ನೇರವಾಗಿ ಸೌರಶಕ್ತಿ ರವಾನಿಸಬಹುದು. ಇದು ಇಲ್ಲಿನ ಗರಿಷ್ಠ ಲಾಭ. ಸಾಂಪ್ರದಾಯಿಕ ವಿದ್ಯುತ್ ಶಕ್ತಿ ತಲುಪಲು ಸಾಧ್ಯವಿಲ್ಲದ ಸ್ಥಳಗಳಿಗೆ, ಪ್ರವಾಹ, ಭೂಕಂಪದಂತಹ ತುರ್ತು ಅಗತ್ಯ ಬಂದಾಗ ಅಂತಹ ಪ್ರದೇಶಗಳಿಗೂ ವಿದ್ಯುತ್ ಶಕ್ತಿ ಒದಗಿಸಬಹುದು ಎನ್ನುವುದು ಈ ತಂಡದ ವಿವರಣೆ.ಸಂಚಾರಿ ಮಿಲಿಟರಿ ಘಟಕಗಳಿಗೂ(mobile military unit)   ಇದು ಸಹಕಾರಿ.  ಇಂತಹ ಘಟಕಗಳಿಗೆ ನಿಸ್ತಂತು ವಿದ್ಯುತ್ ಸಂಪರ್ಕ ಒದಗಿಸಬಹುದು.`ಸೌರಶಕ್ತಿ ಸಂಗ್ರಹಿಸಲು ಆಗಸಕ್ಕಿಂತ ಉತ್ತಮವಾದ ಸ್ಥಳ ಮತ್ತೊಂದಿಲ್ಲ. ಹವಾಮಾನ ವೈಪರೀತ್ಯವಾಗಲಿ, ಹಗಲಿಗಾಗಿ ಕಾಯುವ ಅಗತ್ಯವಾಗಲಿ ಇಲ್ಲಿಲ್ಲ. 24 ಗಂಟೆಗಳ ಕಾಲವೂ ಶಕ್ತಿ ಸಂಗ್ರಹವಾಗುತ್ತಲೇ ಇರುತ್ತದೆ~ ಎನ್ನುತ್ತಾರೆ ಈ ತಂಡದ ಮುಖ್ಯಸ್ಥ ಮ್ಯಾಸಿಮಿಲಿಯನೊ ವಸಿಲೆ.ಉದಾಹರಣೆಗೆ, ಸಹರಾ ಮರುಭೂಮಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೌರಶಕ್ತಿ ಸಂಗ್ರಹಿಸಬಹುದು. ವರ್ಷಪೂರ್ತಿ ಇಲ್ಲಿ ಸೂರ್ಯನ ಪ್ರಖರ ಬಿಸಿಲು ಲಭಿಸುವುದರಿಂದ ಉಳಿದೆಡೆಗಿಂತ ಹೆಚ್ಚಿನ ಶಕ್ತಿ ಇಲ್ಲಿ ಸಂಗ್ರಹವಾಗುತ್ತದೆ. ಆದರೆ, ಇದರಿಂದ ಯಾರಿಗೆ ಉಪಯೋಗ? ಇಲ್ಲಿಂದ ಸೌರಶಕ್ತಿಯನ್ನು ಮತ್ತೊಂದೆಡೆ ರವಾನಿಸುವುದು ತುಂಬಾ ಕಷ್ಟ ಹಾಗೂ ವೆಚ್ಚದಾಯಕ.  ಬದಲಿಗೆ, ಅಂತರಿಕ್ಷದಲ್ಲೇ ಸೌರಶಕ್ತಿ ಸಂಗ್ರಹಿಸಿ, ಅಲ್ಲಿಂದಲೇ ಅಗತ್ಯವಿದ್ದ ಕಡೆ ರವಾನಿಸಲು ಸಾಧ್ಯವಿದ್ದರೆ? ನಮ್ಮ ಅಧ್ಯಯನದ ಮುಖ್ಯ ಉದ್ದೇಶ ಇದು  ಎನ್ನುತ್ತಾರೆ ವಸೈಲ್.ಅಂತರಿಕ್ಷದಲ್ಲಿ ಸಣ್ಣ ಉಪಗ್ರಹ ಬಳಸಿ ಒಂದು ಹಳ್ಳಿಗೆ ಸಾಕಾಗುವಷ್ಟು ಸೌರಶಕ್ತಿ ಸಂಗ್ರಹಿಸಬಹುದು. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಯತ್ನಗಳು ನಡೆದಿವೆ. ನಾವು ದೊಡ್ಡ ಪ್ರಮಾಣದಲ್ಲಿ ಒಂದು ನಗರಕ್ಕೆ ಸಾಕಾಗುವಷ್ಟು ಸೌರಶಕ್ತಿ ಸಂಗ್ರಹಿಸಲು ಈ ಯೋಜನೆ ರೂಪಿಸಿದ್ದೇವೆ. ಇದಕ್ಕಾಗಿ ಅಮೆರಿಕ, ಜಪಾನ್, ಯೂರೋಪ್ ಸಹಭಾಗಿತ್ವ ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಆರಂಭಿಕ ಯಶಸ್ಸು ಗಳಿಸಿದ್ದೇವೆ ಎನ್ನುವುದು ಅವರ ವಿಶ್ವಾಸದ ಮಾತು.ಅಂತರಿಕ್ಷದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇರುವುದರಿಂದ ಕಡಿಮೆ  ಭಾರದ ಉಪಕರಣಗಳನ್ನು ತೇಲಿಬಿಡುವುದು ಅತ್ಯಂತ ವೆಚ್ಚದಾಯಕ ಮತ್ತು ಸಂಕೀರ್ಣ ಕೆಲಸ. ಆದ್ದರಿಂದ ಜಪಾನ್ ನೆರವಿನಿಂದ ಲಘುವಾದ ಲೋಹದ ಬಲೆಯನ್ನು ಬಳಸಿ ಈ ಸೌರ ಉಪಗ್ರಹ ನಿರ್ಮಿಸಲಾಗಿದೆ ಎಂದು ಅವರು ವಿವರಣೆ ನೀಡುತ್ತಾರೆ. 

 

ಅಂತರಿಕ್ಷ ಸೌರಶಕ್ತಿ

ಅಂತರಿಕ್ಷದಲ್ಲೇ ಸೌರಶಕ್ತಿ ಸಂಗ್ರಹಿಸುವ ಸಂಶೋಧನೆಗಳು ಹುಟ್ಟಿಕೊಂಡದ್ದು 1970ರ ದಶಕದಲ್ಲಿ. ಭೂಮಿಯ ಮೇಲೆ ಸೌರಫಲಕಗಳನ್ನು ಇಟ್ಟು ಸೌರಶಕ್ತಿ ಸಂಗ್ರಹಿಸುವ ವಿಧಾನಕ್ಕಿಂತ ಇದು ಸಂಪೂರ್ಣ ಭಿನ್ನವಾಗಿದೆ. ಅಂತರಿಕ್ಷಕ್ಕೆ ಉಪಗ್ರಹವೊಂದನ್ನು  ಹಾರಿಬಿಟ್ಟು ಆ ಮೂಲಕ ಸೌರಶಕ್ತಿ ಸಂಗ್ರಹಿಸಲಾಗುತ್ತದೆ.

 

ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವ ಈ ಉಪಗ್ರಹ 24ಗಂಟೆಗಳ ಕಾಲವೂ ಸೌರಶಕ್ತಿ ಸಂಗ್ರಹಿಸುತ್ತಲೇ ಇರುತ್ತದೆ. ವಾಯು ಮಂಡಲದ ಒತ್ತಡವೂ ಸೇರಿದಂತೆ, ಮೋಡ, ಗಾಳಿ ಮತ್ತಿತರ ಪ್ರತಿಕೂಲ ಹವಾಮಾನ ಎದುರಿಸಲು ತಕ್ಕಂತೆ ಈ ಉಪಗ್ರಹದ ಹೊರಮೈ ವಿನ್ಯಾಸಗೊಳಿಸಲಾಗಿರುತ್ತದೆ.ನಿಸ್ತಂತು ಶಕ್ತಿ ರವಾನೆ ತಂತ್ರಜ್ಞಾನ ಆಧರಿಸಿ ಉಪಗ್ರಹ ತಾನು ಸಂಗ್ರಹಿಸುವ ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ನಂತರ ಮೈಕ್ರೊವೇವ್ ಅಥವಾ ಲೇಸರ್ ಮೂಲಕ ಭೂಮಿಗೆ ರವಾನಿಸುತ್ತದೆ.              ವಿವಿಧ ಮೂಲಗಳಿಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry