ಅಂತರ್ಜಲದ ಅತಿ ಬಳಕೆಯಿಂದ ಕುಡಿಯುವ ನೀರಿಗೆ ಕುತ್ತು

7

ಅಂತರ್ಜಲದ ಅತಿ ಬಳಕೆಯಿಂದ ಕುಡಿಯುವ ನೀರಿಗೆ ಕುತ್ತು

Published:
Updated:

ಬೆಂಗಳೂರು: `ಅಂತರ್ಜಲದ ಅತಿಯಾದ ಬಳಕೆಯಿಂದ ರಾಜ್ಯದ 48 ತಾಲ್ಲೂಕುಗಳಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ~ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿ ತಿಳಿಸಿದರು.

2010ರಲ್ಲಿ ನಡೆಸಿದ ಸಮೀಕ್ಷೆಯಿಂದ ಈ ವಿಷಯ ಗೊತ್ತಾಗಿದೆ. ಒಟ್ಟು 176 ತಾಲ್ಲೂಕುಗಳ ಪೈಕಿ 48 ತಾಲ್ಲೂಕುಗಳಲ್ಲಿ ನೀರು ಕುಡಿಯಲು ಸೂಕ್ತವಾಗಿಲ್ಲ.58 ತಾಲ್ಲೂಕುಗಳಲ್ಲಿ ಶೇ 50ರಷ್ಟು ಪ್ರಮಾಣದ ನೀರು ಕುಡಿಯುವ ಸ್ಥಿತಿಯಲ್ಲಿಲ್ಲ. 70 ತಾಲ್ಲೂಕುಗಳಲ್ಲಿ ಮಾತ್ರ ನೀರು ಕುಡಿಯಲು ಯೋಗ್ಯವಾಗಿದೆ. 200 ಅಡಿಗಿಂತ ಹೆಚ್ಚಿನ ಆಳಕ್ಕೆ ಹೋದಂತೆಲ್ಲ ನೀರಿನಲ್ಲಿ ವಿಷಕಾರಿ ಅಂಶಗಳು ಇರುತ್ತವೆ. ಅಂತರ್ಜಲವನ್ನು ಕಾಪಾಡದಿದ್ದರೆ ಕುಡಿಯಲು ಮಳೆ ನೀರನ್ನು ಅವಲಂಬಿಸ ಬೇಕಾಗುತ್ತದೆ. ಆದ್ದರಿಂದ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 2,578 ಕೆರೆಗಳಿದ್ದು, 1,411 ಕೆರೆಗಳಲ್ಲಿ ಒತ್ತುವರಿಯಾಗಿದ್ದ 1600 ಎಕರೆ ಪ್ರದೇಶವನ್ನು ಗುರುತಿಸಿ ತೆರವುಗೊಳಿಸಲಾಗಿದೆ. ನಗರ ಪ್ರದೇಶಗಳಲ್ಲಿ ಕೆರೆಗಳ ಒತ್ತುವರಿ ಪ್ರಮಾಣ ಹೆಚ್ಚಾಗಿದೆ ಎಂದರು.ತ್ವರಿತ ನೀರಾವರಿ ಅಭಿವೃದ್ಧಿ ಯೋಜನೆಯಡಿ ಈ ವರ್ಷ 350 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಯೋಜನೆಯಡಿ ರಾಜ್ಯಕ್ಕೆ 885.49 ಕೋಟಿ ರೂಪಾಯಿ ನೆರವು ಬಂದಿದ್ದು, 729 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ ಶೇ 70ರಷ್ಟು ಕೆಲಸ ಆಗಿದೆ ಎಂದರು.ದುರಸ್ತಿ, ಪುನರುಜ್ಜೀವನ, ಜೀರ್ಣೋದ್ಧಾರಕ್ಕಾಗಿ 374 ಕೆರೆಗಳನ್ನು ಆಯ್ಕೆ ಮಾಡಿದ್ದು, 227 ಕೋಟಿ ರೂಪಾಯಿ ವೆಚ್ಚದಲ್ಲಿ 245 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿಶೇಷ ಘಟಕ ಯೋಜನೆಯಡಿ 549 ಕೋಟಿ ರೂಪಾಯಿ ವೆಚ್ಚದಲ್ಲಿ 1.16 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry