ಅಂತರ್ಜಲ ವೃದ್ಧಿಸಲು ಶಾಸಕ ಸಲಹೆ

7

ಅಂತರ್ಜಲ ವೃದ್ಧಿಸಲು ಶಾಸಕ ಸಲಹೆ

Published:
Updated:

ಚಿಕ್ಕನಾಯಕನಹಳ್ಳಿ: ಅಂತರ್ಜಲ ಅಭಿವೃದ್ಧಿಯಲ್ಲಿ ಮೈಮರೆತರೆ 2020ಕ್ಕೆ ಭೀಕರ ಜಲಕ್ಷಾಮ ತಲೆದೋರಲಿದೆ ಎಂದು ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಗೋಪಾಲಹಳ್ಳಿಯಲ್ಲಿ ಸೋಮವಾರ ರೂ. 85 ಲಕ್ಷ ವೆಚ್ಚದ ನೂತನ ಕೆಂಚವೀರಯ್ಯನಕೆರೆ ನಿರ್ಮಾಣ ಕಾರ್ಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮಳೆ ಕಡಿಮೆಯಾಗುತ್ತಿದೆ ಎಂಬ ಭಾವನೆಯಿದೆ. ಆದರೆ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿದ್ದ ಪರಿಸರದಲ್ಲಿನ ಪಂಚಭೂತಗಳಲ್ಲಿನ ಸಮತೋಲನದ ನಿರ್ವಹಣೆಯನ್ನು ಮರೆತಿದ್ದು, ಮಳೆ ಪ್ರಮಾಣ ಏರುಪೇರಾಗಿದೆ ಎಂದರು.ಇನ್ನಾದರೂ ಮಳೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಸಲು ತೊಡಗಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಜಾಸ್ತಾನ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ ಅಂತರ್ಜಲದ ರಕ್ಷಣೆಯಿಂದಾಗಿ ಎರಡು ನದಿಗಳು ಮತ್ತೆ ಪ್ರತ್ಯಕ್ಷವಾಗಿವೆ. ಈ ನೂತನ ಕೆರೆಯ ನಿರ್ಮಾಣದಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ಧಿಯಾಗಲಿದೆ. 300 ಮೀಟರ್ ಏರಿ ನಿರ್ಮಾಣದಿಂದ 6 ಎಂಸಿಎಫ್‌ಸಿ ನೀರು ಸಂಗ್ರಹವಾಗಲಿದೆ ಎಂದರು.ಕಾಮಗಾರಿ ಉದ್ಘಾಟಿಸಿದ ಕುಪ್ಪೂರು ತಮ್ಮಡಿಹಳ್ಳಿ ಮಠಾಧೀಶ ಡಾ.ಅಭಿನವ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಕೆರೆಕಟ್ಟೆ ನಿರ್ಮಾಣ 12ನೇ ಶತಮಾನದ ಸಿದ್ದರಾಮರ ಕಲ್ಪನೆಯಲ್ಲಿ ಮೂಡಿಬಂದಂತಹ ಪುಣ್ಯ ಕಾರ್ಯ ಎಂದು ಅಭಿಪ್ರಾಯಪಟ್ಟರು.ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ಬಿ.ನಂದೀಶ್. ಜಿ.ಪಂ. ಸದಸ್ಯ ಎಚ್.ಬಿ.ಪಂಚಾಕ್ಷರಿ, ತಾ.ಪಂ. ಸದಸ್ಯ ಎ.ಬಿ.ರಮೇಶ್ ಕುಮಾರ್, ಗ್ರಾ.ಪಂ. ಅಧ್ಯಕ್ಷ ಶಶಿಧರ್, ಸದಸ್ಯರಾದ ಜಿ.ಎಂ.ನಾಗರಾಜು, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ವಿಜಯ್‌ಕುಮಾರ್ ಇದ್ದರು. ಉಪನ್ಯಾಸಕ ಜಿ.ಎಸ್.ರಘು ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry