ಅಂತರ್ಜಲ ವೃದ್ಧಿ ಧರಣಿ 2ನೇ ದಿನಕ್ಕೆ

7

ಅಂತರ್ಜಲ ವೃದ್ಧಿ ಧರಣಿ 2ನೇ ದಿನಕ್ಕೆ

Published:
Updated:

ಚಿಕ್ಕಬಳ್ಳಾಪುರ: ಅಂತರ್ಜಲ ವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ಮಠಾಧೀಶರಿಂದಲೂ ಬೆಂಬಲ ವ್ಯಕ್ತವಾಯಿತು.ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರವೂ ಕೂಡ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಧರಣಿ ನಡೆಯಿತು. ಸಮಿತಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರದಿಂದ ಇತರ ಸಂಘಸಂಸ್ಥೆಗಳ ಸದಸ್ಯರು ಧರಣಿಯಲ್ಲಿ ಭಾಗವಹಿಸಲಿದ್ದಾರೆ.ಧರಣಿಯಲ್ಲಿ ಪಾಲ್ಗೊಂಡ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, `ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ದಶಕದಿಂದ ನೀರಾವರಿಗಾಗಿ ಹೋರಾಟ ನಡೆಯುತ್ತಿರುವ ಬಗ್ಗೆ ಪ್ರತಿಯೊಬ್ಬರು ಚರ್ಚಿಸುತ್ತಾರೆ. ಸರ್ಕಾರದವರು ಭರವಸೆ ನೀಡುತ್ತಾರೆ. ಯೋಜನೆಯು ಸುಗಮವಾಗಿ ಅನುಷ್ಠಾನಗೊಳ್ಳಲಿದೆ ಎಂಬ ಆಶಾಭಾವನೆ ಮೂಡಿಸಲಾಗುತ್ತದೆ. ಆದರೆ ವರ್ಷಗಳೇ ಕಳೆದರೂ ನೀರಾವರಿ ಯೋಜನೆ ಮತ್ತು ಸಮಸ್ಯೆ ಯಥಸ್ಥಿತಿಯಲ್ಲಿದೆಯೇ ಹೊರತು ಯಾವುದೇ ಪ್ರಗತಿ ಕಂಡಿಲ್ಲ~ ಎಂದರು.ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಮಾತನಾಡಿ, `ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳ್ಳುವವರೆಗೆ ಸಮಸ್ಯೆಯು ಬಗೆಹರಿಯುವುದಿಲ್ಲ. ಈ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು. ಜಾಗೃತರಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು~ ಎಂದರು.ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ಸಂಚಾಲಕಿ ರತ್ನಮ್ಮ, ರಾಣಿ ಅಬ್ಬಕ್ಕ ಮಹಿಳಾ ವೇದಿಕೆಯ ಸುಷ್ಮಾ ಶ್ರೀನಿವಾಸ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry