ಶನಿವಾರ, ಮೇ 21, 2022
26 °C

ಅಂತರ್ಜಾತಿ ವಿವಾಹಕ್ಕೆ ಗ್ರಾಮಸ್ಥರ ಬಹಿಷ್ಕಾರ: ದಂಪತಿಗೆ ದೊರೆಯದ ನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವನಿ (ಬೀರೂರು): ಹನ್ನೆರಡು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾದ ಒಂದೇ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಗಾದ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ದಂಪತಿಗೆ ಇನ್ನೂ ತಮ್ಮ ಗ್ರಾಮದ ಒಳಗೆ ಪ್ರವೇಶಕ್ಕೆ ಅನುಮತಿ ದೊರೆತಿಲ್ಲ.

ದೇವಾಂಗ (ನೇಕಾರ) ಜನಾಂಗದ ನಾಗರಾಜ್ ಮತ್ತು ಕುರುಬ ಜನಾಂಗದ  ಶಾಂತಮ್ಮ ಪ್ರೇಮಿಸಿ ಗ್ರಾಮಸ್ಥರ ವಿರೋಧ ಲೆಕ್ಕಿಸದೆ ವಿವಾಹವಾಗಿದ್ದರು. ಇವರಿಗೆ ಬಹಿಷ್ಕಾರ ಹಾಕಿರುವ ಸಂಗತಿ ಎಂಟು ತಿಂಗಳ ಹಿಂದೆ ಬೆಳಕಿಗೆ ಬಂದಾಗ ತರೀಕೆರೆ ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಗ್ರಾಮಕ್ಕೆ ಬಂದು ದಂಪತಿಗೆ ಈ ರೀತಿ ಬಹಿಷ್ಕಾರ ವಿಧಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿ ಹೋಗಿತ್ತು. ಇಷ್ಟಾದರೂ ಇವರಿಗೆ ನ್ಯಾಯ ದೊರೆತಿಲ್ಲ.

ಅಂದಾಜು ಆರು ಸಾವಿರ ಜನಸಂಖ್ಯೆ ಹೊಂದಿರುವ ಮತ್ತು ಬಹುತೇಕ ಕೃಷಿ ಆಧಾರಿತ ಗ್ರಾಮಸ್ಥರೇ ಇರುವ ಶಿವನಿ ಗ್ರಾಮದಲ್ಲಿ ದೇವಾಂಗ, ಕುರುಬ, ಲಿಂಗಾಯತ ಮತ್ತು ಉಪ್ಪಾರ ಜನಾಂಗದ ಪ್ರಾಬಲ್ಯವಿದೆ. ಎಲ್ಲ ಹಳ್ಳಿಗಳಂತೆ ಇ್ಲ್ಲಲೂ ಕಟ್ಟಪಾಡುಗಳು ಮತ್ತು ಜಾತಿ ವ್ಯವಸ್ಥೆ ಪ್ರಬಲವಾಗಿ ಬೇರೂರಿದೆ ಎಂಬುದಕ್ಕೆ ನಾಗರಾಜ್ ದಂಪತಿಗೆ ಒದಗಿರುವ ಸ್ಥಿತಿಯೇ ಸಾಕ್ಷಿ.

ಅವರು ಮತ್ತೆ ಗ್ರಾಮಕ್ಕೆ ಸೇರಬೇಕಾದರೆ ಕುಲಸ್ಥರು ವಿಧಿಸುವ ದಂಡ ಪಾವತಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಈ ಗ್ರಾಮದಲ್ಲಿ ಮೊದಲ ಬಾರಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡ ಈ ಜೋಡಿ ದಂಡ ತೆರಲು ಹಣವಿಲ್ಲದೆ ಪರದಾಡುತ್ತಿದೆ.

ಇವರ ವಿವಾಹದ ನಂತರ ಸತೀಶ-ರೂಪಾ, ಸುರೇಶ-ಸರಸ್ವತಿ, ರವಿ-ಮಮತಾ ಎಂಬುವವರೂ ಸಹ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದಾರೆ. ಇವರಲ್ಲಿ ಸುರೇಶ್ ಸರ್ಕಾರಿ ಕೆಲಸದಲ್ಲಿದ್ದು ಆರ್ಥಿಕವಾಗಿ ಸಬಲರಾದ ಕಾರಣ ದಂಡದ ಹಣ ಕಟ್ಟಿ ಜಾತಿಯವರೊಂದಿಗೆ ಮುಕ್ತವಾಗಿ ಬೆರೆಯುವ ಅವಕಾಶ ಪಡೆದುಕೊಂಡಿದ್ದಾರೆ. ಇಲ್ಲಿನ ಸಹವಾಸವೇ ಬೇಡ ಎಂದು ನಿರ್ಧರಿಸಿ ಸತೀಶ್ ಬೆಂಗಳೂರು ಸೇರಿಕೊಂಡಿದ್ದಾರೆ.

`ನಾನು ಈ ಮೊದಲು ವೈಂಡಿಂಗ್ ಕೆಲಸ ಮಾಡ್ತಿದ್ದೆ. ಮಳೆಗಾಲದಲ್ಲಿ ಕೂಲಿ ಕೆಲಸ ಮಾಡ್ತೀನಿ. ನಿರಂತರವಾಗಿ ಕೆಲಸ ಸಿಗದೇ ಇದ್ದಿದ್ದರಿಂದ ಗ್ರಾಮದಲ್ಲಿ ಒಂದು ಹೋಟೆಲ್ ಪ್ರಾರಂಭಿಸಿದೆ. ಆದರೆ, ಗಿರಾಕಿಗಳು ಬಾರದ ಕಾರಣ ಹೋಟೆಲ್ ಮುಚ್ಚಬೇಕಾಯಿತು. ಮತ್ತೆ ಹಳೇ ಕೆಲಸವೇ ಗತಿ~ ಎನ್ನುತ್ತಾರೆ ನಾಗರಾಜ್.

ಉಪವಿಭಾಗಾಧಿಕಾರಿಗಳ ಭೇಟಿ ನಂತರ ನಾಗರಾಜ್ ದಂಪತಿ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಆದರೆ, ಇವರ ಕುಟುಂಬದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲ.

`ನಗರ ಜೀವನ ಅನುಸರಿಸುವ ಹಳ್ಳಿಗರು ಕ್ರಮೇಣ ಜಾತಿ ಪದ್ಧತಿಯನ್ನೂ ತೊಡೆಯುವತ್ತಲೂ ಮುನ್ನಡೆಯಬೇಕು ಎನ್ನುವುದು ನನ್ನ ಆಸೆ. ಪಟ್ಟಣಗಳಲ್ಲಿ ಇಂದು ನಡೆಯುತ್ತಿರುವ ಎಷ್ಟೋ ವಿವಾಹಗಳು ಜಾತೀಯ ಕಟ್ಟುಪಾಡಿನಿಂದ ಹೊರಗಿವೆ. ಅಂತರ್ಜಾತಿ ವಿವಾಹವಾದವರ ಮಕ್ಕಳಿಗೆ ಯಾವ ಜಾತಿ ಇದೆ ಎಂದು ನಾಗರಾಜ್ ಪ್ರಶ್ನಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.