ಬುಧವಾರ, ಮೇ 18, 2022
23 °C

ಅಂತರ್ಜಾಲ ಐಪಿ ವಿಳಾಸ ಬರಿದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಜಗತ್ತಿನಲ್ಲಿ ಅಂತರ್ಜಾಲ ಬಳಕೆ ದಟ್ಟಣೆ ಎಷ್ಟರಮಟ್ಟಿಗೆ ಏರುತ್ತಿದೆಯೆಂದರೆ ಅದಕ್ಕೆ ನಿಗದಿ ಮಾಡಿದ್ದ ಐಪಿ ವಿಳಾಸಗಳೆಲ್ಲಾ (ಇಂಟರ್‌ನೆಟ್ ಪ್ರೊಟೊಕಾಲ್) ಶುಕ್ರವಾರ (ಫೆ.4ರಂದು) ಸಂಪೂರ್ಣ ಬರಿದಾಗಲಿವೆ!ಹಾಗೆಂದ ಮಾತ್ರಕ್ಕೆ ಅಂತರ್ಜಾಲ  ಸ್ಥಗಿತವಾಗುತ್ತದೆಂದು ಯಾರೂ ದಿಗಿಲು ಬೀಳಬೇಕಿಲ್ಲ. ಇದುವರೆಗೆ ಜಾರಿಯಲ್ಲಿದ್ದ ಐಪಿವಿ 4 ಆವೃತ್ತಿಗೆ ಬದಲಾಗಿ ಐಪಿವಿ 6 ಆವೃತ್ತಿ ಅಳವಡಿಕೆಯಾಗಲಿದೆ.

1980ರಲ್ಲಿ ಐಪಿವಿ 4 ಆವೃತ್ತಿ ಜಾರಿಗೊಳಿಸಿದಾಗ 410 ಕೋಟಿ ಐಪಿ ವಿಳಾಸ ನೀಡುವ ಸಾಮರ್ಥ್ಯ ಅದಕ್ಕಿತ್ತು. ಅಷ್ಟೊಂದು ಅಗಾಧ ಸಾಮರ್ಥ್ಯವಿದ್ದ ಹಿನ್ನೆಲೆಯಲ್ಲಿ ಐಪಿ ವಿಳಾಸ ಯಾವತ್ತಿಗೂ ಬರಿದಾಗದು ಎಂದೇ ಆಗ ತಜ್ಞರು ಭಾವಿಸಿದ್ದರು. ಅಂತರ್ಜಾಲ ಬಳಕೆ ಇಷ್ಟೊಂದು ವ್ಯಾಪಕವಾಗುತ್ತದೆಂಬುದು ಅವರ ಎಣಿಕೆಗೂ ನಿಲುಕಿರಲಿಲ್ಲ. ಅದು ಕೇವಲ ಶೈಕ್ಷಣಿಕ ವಲಯದ ಸೀಮಿತ ಉದ್ದೇಶಗಳಿಗೆ ಬಳಕೆಯಾಗಬಹುದು ಎಂಬುದು ಅವರ ಅನಿಸಿಕೆಯಾಗಿತ್ತು.ಆದರೆ ದಿನಗಳೆದಂತೆ ಅಂತರ್ಜಾಲದ ಬಳಕೆ ಎಲ್ಲ ಕ್ಷೇತ್ರಗಳಿಗೂ ಪಸರಿಸಿ ಇದೀಗ 410 ಕೋಟಿ ಐಪಿ ವಿಳಾಸಗಳು ಯಾತಕ್ಕೂ ಸಾಲದಾಗಿವೆ! ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿದ ಪ್ರತಿಯೊಂದು ಸಾಧನಕ್ಕೂ ಪ್ರತ್ಯೇಕ ಸಂಖ್ಯೆ ನೀಡಿ, ಅದನ್ನು ನೋಂದಣಿ ಮಾಡಿಸುವುದು ಅಗತ್ಯವಾಗಿದ್ದು, ಈ ಸಂಖ್ಯೆಯನ್ನೇ ಐಪಿ ವಿಳಾಸ ಎನ್ನಲಾಗುತ್ತದೆ. ಅಂತರ್ಜಾಲ ಬಳಕೆದಾರರಿಗೆ  ತಮಗೆ ಬೇಕೆನಿಸಿದ ತಾಣಕ್ಕೆ ಹೋಗಲು, ನಿರ್ದಿಷ್ಟ ವಿಳಾಸಕ್ಕೆ  ಇ-ಮೇಲ್ ಕಳುಹಿಸಲು ಇದು ಅತ್ಯಗತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.