ಸೋಮವಾರ, ಮಾರ್ಚ್ 8, 2021
18 °C
ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರವಿ

ಅಂತರ್ಜಾಲ ತೆರಿಗೆ ಪಾವತಿ ವ್ಯವಸ್ಥೆ ಶೀಘ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರ್ಜಾಲ ತೆರಿಗೆ ಪಾವತಿ ವ್ಯವಸ್ಥೆ ಶೀಘ್ರ ಆರಂಭ

ಶಿವಮೊಗ್ಗ: ಆಸ್ತಿ ಖಾತೆಗಳನ್ನು ಗಣಕೀಕರಣ ಮಾಡಿ.. ಎಲ್ಲ ಕಾಮಗಾರಿಯ ಸಂಪೂರ್ಣ ವಿವರವನ್ನು ಸ್ಥಳದಲ್ಲಿ ಪ್ರಕಟಿಸಿ.. ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಿ... ನಿಯಮ ಉಲ್ಲಂಘಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ... ಮೃತದೇಹ ರಕ್ಷಿಸಿಡಲು ಶೈತ್ಯಾಗಾರ ನಿರ್ಮಿಸಿ... ಮರಗಳನ್ನು ಉಳಿಸಿ ರಸ್ತೆ ವಿಸ್ತರಿಸಿ... ನೀರಿನ ಶುದ್ಧೀಕರಣ ಕೇಂದ್ರವನ್ನು ಆಧುನೀಕರಣಗೊಳಿಸಿ...



ಗುರುವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯವ್ಯಯ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಮತ್ತು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ನಗರದ ಸಮಸ್ಯೆಯನ್ನು  ಬಿಡಿಸಿಟ್ಟಿದ್ದು ಹೀಗೆ.



ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಕೆ.ವಿ.ವಸಂತ ಕುಮಾರ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪ್ರತೀ ಬಾರಿ ಬಜೆಟ್‌ನಲ್ಲಿ ಗಣಕೀಕರಣಕ್ಕಾಗಿ ಅನುದಾನ ಮೀಸಲಿಡಲಾಗುತ್ತಿದೆ. ಗಣಕೀಕರಣ ಕಾರ್ಯ ಮಾತ್ರ ಇದುವರೆಗೂ ಅಸ್ತಿತ್ವಕ್ಕೆ ಬಂದಿಲ್ಲ ಎಂದು ದೂರಿದರು.

‘ನಗರದಲ್ಲಿ ನಿಯಮ ಉಲ್ಲಂಘಿಸಿ ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ಅವುಗಳನ್ನು ನಿರ್ಬಂಧಿಸುವ ಕೆಲಸವನ್ನು ಅಧಿಕಾರಿಗಳ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.



ಪರಿಸರ ಹೋರಾಟಗಾರ ಸಿ.ರಮೇಶ್ ಮಾತನಾಡಿ, ಬಜೆಟ್‌ನಲ್ಲಿ ನಗರದ ರಸ್ತೆಗಳ ವಿಸ್ತರಣೆ ಮಾಡುವ ವೇಳೆ ಮರಗಳ ಕಡಿತಲೆಗೆ ಅನುಮತಿ ನೀಡಬೇಡಿ. ಮರಗಳನ್ನು ಉಳಿಸಿ ಕೊಂಡು ರಸ್ತೆ ವಿಸ್ತರಣೆ ಮಾಡುವ ಯೋಜನೆ ರೂಪಿಸಿ. ಹೊಸದಾಗಿ ರಸ್ತೆ ನಿರ್ಮಾಣ ಮಾಡುವ ವೇಳೆ ಗಿಡ ನೆಡಲು ಸೂಕ್ತ ಸ್ಥಳಾವಕಾಶ ಗುರುತಿಸಿ ಎಂದು ಸಲಹೆ ನೀಡಿದರು.



ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಸ್.ಅರುಣ್ ಮಾತ ನಾಡಿ, ನಗರದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲು ಟ್ರಕ್ ಹಾಗೂ ಬಸ್ ಟರ್ಮಿನಲ್‌ಗಳ ಸ್ಥಾಪನೆ ಮಾಡಬೇಕು ಎಂದರು.



ನಾಗರಿಕ ಹಿತರಕ್ಷಣಾ ವೇದಿಕೆಯ ಮುಖಂಡ ಅಶೋಕ್ ಯಾದವ್ ಮಾತನಾಡಿ, ನಂಜಪ್ಪ ಆಸ್ಪತ್ರೆ ಪಾದಚಾರಿ ಮಾರ್ಗಕ್ಕೆ ಹಾಕಿರುವ ಚೈನ್‌ ಅನ್ನು ತೆಗೆಸಲು ಇದುವರೆಗೆ ಸಾಧ್ಯವಾಗಿಲ್ಲ. ಸುಬ್ಬಯ್ಯ ಆಸ್ಪತ್ರೆಯು ನಗರಪಾಲಿಕೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಮಾನಸ ನರ್ಸಿಂಗ್ ಹೋಂ ಎದುರು ವಾಹನ ನಿಲುಗಡೆಗೆ ಅವಕಾಶವೇ ಇಲ್ಲವಾಗಿದೆ. ಇದಕ್ಕೆಲ್ಲಾ ಅನುಮತಿ ನೀಡುವ ಅಧಿಕಾರಿ ಮತ್ತು ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು.



ನವ ಕರ್ನಾಟಕ ನಿರ್ಮಾಣ ವೇದಿಕೆಯ ಗೋ.ರಮೇಶ್ ಗೌಡ ಮಾತನಾಡಿ, ದುರ್ಗಿಗುಡಿಯಲ್ಲಿ ಕನ್ಸರ್‌ವೆನ್ಸಿಯನ್ನು ಮೇಲ್ದರ್ಜೆಗೇರಿಸಿ, ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಿ. ಕೆಎಸ್‌ಆರ್‌ಟಿಸಿ ಡಿಪೋ ಬಳಿ ಆಗಿರುವ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.



ಮಹಾನಗರ ಪಾಲಿಕೆ ಆಯುಕ್ತ ಎ.ಆರ್. ರವಿ ಮಾತನಾಡಿ, 1 ಮತ್ತು 35ನೇ ವಾರ್ಡ್‌ ಹೊರತುಪಡಿಸಿ ಉಳಿದ ಎಲ್ಲಾ ವಾರ್ಡ್‌ಗಳ ನಾಗರಿಕರ ಆಸ್ತಿಗೆ  ಸಂಬಂಧಿಸಿದ ಖಾತೆಗಳನ್ನು ಗಣಕೀಕರಣ ಮಾಡಲಾಗಿದ್ದು, ಒಂದು ತಿಂಗಳಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಸಭೆಗೆ ತಿಳಿಸಿದರು.

ರಾಜ್ಯದಲ್ಲಿಯೇ ಪ್ರಥಮ  ಬಾರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ಅಂತರ್ಜಾಲ ಮೂಲಕ ವಿವಿಧ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಆರಂಭಿಸುತ್ತಿದೆ ಎಂದು ಮಾಹಿತಿ ನೀಡಿದರು.



ಕುವೆಂಪು ರಸ್ತೆ, ಜೈಲ್ ರಸ್ತೆ, ಮಿಳ ಘಟ್ಟ ಹಾಗೂ ಗೋಪಾಳ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಸ್ತುತ ₹ 3 ಕೋಟಿ ಬಿಡುಗಡೆಯಾಗಿದೆ. ಕುವೆಂಪು ರಸ್ತೆಯ ವಿಸ್ತರಣೆಯ ಜವಾಬ್ದಾರಿ ಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.



ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರವಾನಗಿಯನ್ನು ಗಣಕೀಕರಣ ಮಾಡಲಾಗುವುದು. ನಗರದ ಅಶೋಕ ವೃತ್ತದಲ್ಲಿ ₹ 100 ಲಕ್ಷ  ವೆಚ್ಚದಲ್ಲಿ ಸ್ಕೈ ಫ್ಲೈ ವಾಕರ್‌ ನಿರ್ಮಿಸ ಲಾಗುವುದು. ಇದರ ಜತೆಗೆ ಲಿಫ್ಟ್‌ ಅನ್ನು ಅಳವಡಿಸಲಾಗುವುದು ಎಂದರು.



ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಉತ್ತಮಗೊಳಿಸುವ ದೃಷ್ಟಿಯಿಂದ ವಿವಿಧೆಡೆ ಸುಮಾರು 7 ಬೃಹತ್ ನೀರಿನ ಟ್ಯಾಂಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕೆ ಟೆಂಡರ್ ಕರೆಯಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ ಸುಮಾರು 1,200 ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಪಾಲಿಕೆ ವತಿಯಿಂದ ಸಹಾಯಧನ ನೀಡಲು ಯೋಜಿಸಲಾಗಿದೆ. ಮಹಾನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಸರ್ವೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.



ಮೇಯರ್ ಮಂಗಳಾ ಅಣ್ಣಪ್ಪ, ಉಪಮೇಯರ್ ಎಚ್.ಫಾಲಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಐಡಿಯಲ್ ಗೋಪಿ, ವೆಂಕ್ಯಾನಾಯ್ಕ್, ಪಾಲಿಕೆ ಸದಸ್ಯರಾದ ರಾಮು, ಎನ್.ಜೆ.ರಾಜಶೇಖರ್, ವಿವಿಧ ಸಂಘಟನೆಗಳ ಹೋರಾಟಗಾರರು ಉಪಸ್ಥಿತರಿದ್ದರು.ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.