ಅಂತರ್ಜಾಲ ಸ್ವಾತಂತ್ರ್ಯ

7

ಅಂತರ್ಜಾಲ ಸ್ವಾತಂತ್ರ್ಯ

Published:
Updated:

 


ಅಂತರ್ಜಾಲಕ್ಕೆ, ವಿಶ್ವಸಂಸ್ಥೆ ನಿಯಂತ್ರಿತ ಸೂತ್ರಗಳನ್ನು ರೂಪಿಸುವಲ್ಲಿ ಇತ್ತೀಚೆಗೆ ದುಬೈನಲ್ಲಿ ಮುಕ್ತಾಯವಾದ ಅಂತರರಾಷ್ಟ್ರೀಯ ಟೆಲಿಸಂಪರ್ಕ ಕುರಿತ ವಿಶ್ವ ಸಮ್ಮೇಳನ ವಿಫಲವಾಗಿದೆ. ಅಂತರರಾಷ್ಟ್ರೀಯ ಟೆಲಿಸಂಪರ್ಕ ನಿಯಮಾವಳಿ (ಐಟಿಆರ್) ಒಡಂಬಡಿಕೆಯನ್ನು ನವೀಕರಿಸುವುದು ಈ ಸಮ್ಮೇಳನದ ಉದ್ದೇಶವಾಗಿತ್ತು.ಅಂತರ್ಜಾಲವಿನ್ನೂ ಶೈಶವಾವಸ್ಥೆಯಲ್ಲಿದ್ದಾಗ, 1988ರಲ್ಲಿ ಈ ಒಡಂಬಡಿಕೆ ಜಾರಿಗೊಂಡಿದ್ದರಿಂದ ಬದಲಾವಣೆ ಅಗತ್ಯವಾಗಿತ್ತು. ಈ ಒಡಂಬಡಿಕೆ ಏರ್ಪಟ್ಟಾಗ ಅನೇಕ ಸಾಮಾಜಿಕ ಜಾಲತಾಣಗಳು ಅಸ್ತಿತ್ವದಲ್ಲಿಯೇ ಇರಲಿಲ್ಲ. ಇದಕ್ಕಾಗಿ 193 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಮ್ಮೇಳನವನ್ನು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ, ಅಂತರರಾಷ್ಟ್ರೀಯ ಟೆಲಿಸಂಪರ್ಕ ಸಂಘ (ಐಟಿಯು), ಸಮಾವೇಶಗೊಳಿಸಿತ್ತು. ಹೊಸದೊಂದು ಒಡಂಬಡಿಕೆ ರೂಪಿಸಿ, 2015ರ ಜನವರಿಯಿಂದ ಜಾರಿಗೊಳಿಸುವುದು ಇದರ ಉದ್ದೇಶವಾಗಿತ್ತು. ಅಂತರ್ಜಾಲ ಆಧರಿತ ವೇದಿಕೆಗಳು, ಆಧುನಿಕ ಬದುಕಿನ ಅನಿವಾರ್ಯ ಭಾಗಗಳಾಗಿರುವುದು ಇಂದಿನ ವಾಸ್ತವ. ಆದರೆ, ಇವುಗಳಿಗೆ ಕಟ್ಟುಪಾಡುಗಳನ್ನು ವಿಧಿಸಿ ನಿಯಂತ್ರಿಸುವ ಉತ್ಸುಕತೆಯನ್ನು ಅನೇಕ ಸರ್ಕಾರಗಳು ತೋರುತ್ತಿರುವುದೂ ಹೆಚ್ಚಾಗುತ್ತಿದೆ. ಸದ್ಯಕ್ಕೆ ಎಲ್ಲಾ ರಾಷ್ಟ್ರಗಳನ್ನು ಒಳಗೊಳ್ಳುವಂತಹ, ಅಂತರ್ಜಾಲವನ್ನು ನಿರ್ವಹಿಸುವ ಯಾವುದೇ ಕೇಂದ್ರೀಯ ನಿಯಂತ್ರಣ ಪ್ರಾಧಿಕಾರ ಇಲ್ಲ.ಹೀಗಾಗಿ, ಅಂತರ್ಜಾಲದ ನಿರ್ವಹಣೆಯಲ್ಲಿ ಐಟಿಯುಗೇ ವಿಸ್ತೃತ ಪಾತ್ರ ನೀಡುವ ಪ್ರಯತ್ನಗಳು ಸಮ್ಮೇಳನದಲ್ಲಿ ನಡೆದವು. ರಷ್ಯಾ, ಚೀನಾ ಹಾಗೂ ಕೆಲವು ಅರಬ್ ಮತ್ತು ಆಫ್ರಿಕಾ ರಾಷ್ಟ್ರಗಳು ಒಟ್ಟಾಗಿಯೇ ಈ ಬಗ್ಗೆ  ಪ್ರಯತ್ನಗಳನ್ನು ಮಾಡಿದವು. ಸೈಬರ್ ಸ್ವಾತಂತ್ರ್ಯ ಹತ್ತಿಕ್ಕುವುದಕ್ಕೆ ಹೆಸರಾದ ಈ ರಾಷ್ಟ್ರಗಳು ಬಿಗಿಯಾದ ನೀತಿಗಳ ಹೇರಿಕೆಗೆ ಅನುವು ಮಾಡಿಕೊಡುವಂತಹ ಒಡಂಬಡಿಕೆಗಾಗಿ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಹೀಗಿದ್ದೂ ಐಟಿಯುಗೆ ಹೆಚ್ಚಿನ ಸಕ್ರಿಯ ಪಾತ್ರ ನೀಡಬೇಕೆಂಬ ವಿಚಾರಕ್ಕೆ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳೂ ಒಮ್ಮತ ತೋರಿದ್ದಾರೆ.

 

ಕಾನೂನು ಹಾಗೂ ನಿರ್ಬಂಧಗಳ ಅನುಷ್ಠಾನಕ್ಕೆ ಸಂಬಂಧಿಸಿದ ಐಟಿಯು ಸೂತ್ರಗಳ ಕುರಿತಂತೆ ಯಾವುದೇ ಒಡಂಬಡಿಕೆ ಆಗದಿದ್ದುದು ಒಳ್ಳೆಯದೇ ಆಯಿತು. ತಮ್ಮ  ಕ್ರಿಯೆಗಳಿಗೆ ಅಂತರರಾಷ್ಟ್ರೀಯ ಕಾನೂನು ಮಾನ್ಯತೆ ಇದೆ ಎಂದು ಪ್ರತಿಪಾದಿಸಿಕೊಳ್ಳುತ್ತಾ ಅನೇಕ ರಾಷ್ಟ್ರಗಳಲ್ಲಿ ಇವುಗಳ ದುರ್ಬಳಕೆಗೆ ಅವಕಾಶಗಳು ಸೃಷ್ಟಿಯಾಗುವುದು ಇದರಿಂದ ತಪ್ಪಿತು. ಈ ಒಡಂಬಡಿಕೆಗೆ ಭಾರತವೂ ಸಹಿ ಹಾಕಿಲ್ಲ. ಆದರೆ ಭಾರತದ ನಿಲುವು ದ್ವಂದ್ವದಿಂದ ಕೂಡಿದೆ. ಐಟಿಆರ್ ಗೆ ಬೆಂಬಲವನ್ನೂ ಭಾರತ ವ್ಯಕ್ತಪಡಿಸಿದೆ. `ಅಂತರ್ಜಾಲ, ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕೆಂಬುದು ಭಾರತದ ನಿಲುವು. ಆದರೆ ಅಂತರ್ಜಾಲ ಸ್ವಾತಂತ್ರ್ಯ ನಿಬರ್ಂಧಿಸುವ ಕ್ರಮಗಳನ್ನು ಕೆಲವೊಮ್ಮೆ ಕೈಗೊಳ್ಳಲಾಗಿದೆ' ಎಂದೂ ಅದು ಹೇಳಿದೆ.`ಅಂತಿಮ ನಿಲುವಿಗೆ ಇನ್ನೂ ಸಮಯಬೇಕು. ಏಕೆಂದರೆ ಈ ಬಗ್ಗೆ ಇನ್ನೂ ಸಮಾಲೋಚನೆಗಳನ್ನು ನಡೆಸಬೇಕಾಗಿದೆ' ಎಂಬುದು ಭಾರತದ ಪ್ರತಿನಿಧಿಯ ನಿಲುವಾಗಿತ್ತು. ಭಾರತ ಮಾತ್ರವಲ್ಲ, ಅಮೆರಿಕ ಮತ್ತಿತರ ಅನೇಕ ರಾಷ್ಟ್ರಗಳು ಈ ಹೊಸ ಐಟಿಆರ್ ಒಡಂಬಡಿಕೆಗೆ ಸಹಿ ಹಾಕಲು ನಿರಾಕರಿಸಿದ್ದರಿಂದ ಈಗ ಯಥಾಸ್ಥಿತಿ ಮುಂದುವರಿದಿದೆ. ಅಂತರ್ಜಾಲದ ಜಾಗತಿಕ ನಿಯಂತ್ರಕನಾಗುವಲ್ಲಿ ಐಟಿಯು ವಿಫಲವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry