ಶನಿವಾರ, ಮೇ 15, 2021
24 °C

ಅಂತರ್‌ಶಿಸ್ತೀಯ ವಿಜ್ಞಾನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರ್‌ಶಿಸ್ತೀಯ ವಿಜ್ಞಾನ ಅಗತ್ಯ

ಗುಲ್ಬರ್ಗ: ಅಂತರ್‌ಶಿಸ್ತೀಯ ವಿಜ್ಞಾನವು ಈ ಸಮಯದ ಅವಶ್ಯಕತೆ ಎಂದು ಕರ್ನಾಟಕ ಜ್ಞಾನ ಆಯೋಗದ ಸದಸ್ಯೆ, ವಿಶ್ರಾಂತ ಕುಲಪತಿ ಎಂ. ಮುನಿಯಮ್ಮ ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗುರುವಾರ 32ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು  ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಯನಗಳು ಜೀವವೈವಿಧ್ಯ ಸುರಕ್ಷತೆ, ನೈತಿಕತೆ ಮತ್ತು ಪರಿಸರಕ್ಕೆ ಸಮಗ್ರ ಆದ್ಯತೆ, ಆಹಾರ ಸುರಕ್ಷತೆ, ನೀರು ಮತ್ತು ಜೀವಿರಕ್ಷಣೆಗಳನ್ನು ಉದ್ದೇಶಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ಆಹಾರ, ನೀರು ಮತ್ತು ಶಕ್ತಿ ಸುಭದ್ರತೆ ಸಂಸ್ಥೆ ಸ್ಥಾಪಿಸುವ ಮೂಲಕ ಬಹು-ಶಿಸ್ತೀಯ ಅನುಸಂಧಾನಕ್ಕೆ ಆದ್ಯತೆ ನೀಡಿದೆ ಎಂದು ಶ್ಲಾಘಿಸಿದರು.ಅರ್ಥಶಾಸ್ತ್ರ ವಿಭಾಗದದಲ್ಲಿ ಆರಂಭಿಸಿದ `ಪ್ರಾದೇಶಿಕ ಅಭಿವೃದ್ಧಿ ಕೇಂದ್ರ~ವು ಈ ಭಾಗದ ಬೆಳವಣಿಗೆಯ ಕೇಂದ್ರಬಿಂದು ಆಗಲಿದೆ ಎಂದ ಅವರು, `ಶ್ರೇಷ್ಠತೆಗೆ ಪ್ರಯತ್ನ~ವು ಅಂತ್ಯವಿಲ್ಲದ ಹಾದಿ. ಇಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೇ, ಹೊರತು ಯಶಸ್ಸಿಗೆ ಯಾವುದೇ ಅಡ್ಡಮಾರ್ಗಗಳಿಲ್ಲ ಎಂದರು.ಜಾಗತೀಕರಣ ಹಾಗೂ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ತರಬೇತಿ ಪಡೆದ, ನುರಿತ, ಕೌಶಲ್ಯಭರಿತ ಮಾನವ ಸಂಪನ್ಮೂಲದ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಶ್ರೇಷ್ಠತೆ, ದಕ್ಷತೆ, ಸರ್ವಸಮ್ಮತವಾದ ಕಾರ್ಯಯೋಜನೆಯನ್ನು ರೂಪಿಸಿ, ಅಭಿವೃದ್ಧಿ ಪಡಿಸಬೇಕು. ಆ ಮೂಲಕ ಜ್ಞಾನಾಧರಿತ, ಆರೋಗ್ಯಕರ, ಸೃಜನಶೀಲ, ಕಾಳಜಿಯುಕ್ತ, ಉತ್ಪಾದಕ ಮಾನವ ಸಂಪನ್ಮೂಲಗಳನ್ನು ರೂಪಿಸಬೇಕು ಎಂದರು.ಉನ್ನತ ಶಿಕ್ಷಣದಲ್ಲಿ ಜೀವನ ಮೂಲ ಮೌಲ್ಯಗಳ ಬಗ್ಗೆ ತಿಳಿ ಹೇಳಬೇಕು. ಧಾರ್ಮಿಕ ಅಂಧಾನುಕರಣೆ, ಹಿಂಸಾಚಾರ, ಸಾಮಾಜಿಕ ಅನ್ಯಾಯ, ಅಂಧಶ್ರದ್ಧೆಗಳನ್ನು ನಿರ್ಮೂಲನೆ ಮಾಡುವ, ಮಹಿಳಾ ಸಬಲೀಕರಣ ಮತ್ತು ಸಮಾನತೆ, ಕ್ಲಿಷ್ಟಕರ ಪರಿಸ್ಥಿತಿ ನಿಭಾಯಿಸುವ ಪರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದರು.ವಿ.ವಿ.ಯನ್ನು ಹಸಿರುಟ್ಟ ಯುವತಿಗೆ ಹೋಲಿಸಿದ ಅವರು, `ಪ್ರಪಂಚದ ಪ್ರತಿಯೊಬ್ಬನೊಳಗೂ ಜ್ಯೋತಿಯಿದೆ. ಅದನ್ನು ಪ್ರಯತ್ನ, ಶಕ್ತಿ ಮತ್ತು ಸಾಮರ್ಥ್ಯದ ಮೂಲಕ ಬೆಳಗಿಸಬೇಕು. ಆಗ ಉನ್ನತಿ ಸಾಧಿಸಬಹುದು~ ಎಂಬ ಮಾಜಿ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್ ನುಡಿಮತ್ತುಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ಹಾರೈಸಿದರು.ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ, ಕುಲಸಚಿವ ಎಸ್.ಎಲ್.ಹಿರೇಮಠ, ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಬಿ.ನಾಯಕ, ವಿ.ವಿ. ವಿತ್ತಾಧಿಕಾರಿ ಪ್ರೊ. ಬಿ.ಎಂ. ಕನಹಳ್ಳಿ, ಸಿಂಡಿಕೇಟ್ ಸದಸ್ಯರಾದ ಆರ್.ವಿ.ಮಾಲಿಪಾಟೀಲ ಮತ್ತು ಮಾರುತಿ ಹೂಗಾರ ಇದ್ದರು. ಯಮನಪ್ಪ ದೊರೆ ಗದ್ಯ ಮಾದರಿಯ ಕಾವ್ಯವಾಚಿಸಿ ರಂಜಿಸಿದರು.ಆರಂಭಕಾರನಿಗೇ ಮೊದಲ `ಹಾರ~

ಗುಲ್ಬರ್ಗ:
ಸಂಸ್ಥಾಪನಾ ದಿನದಲ್ಲಿ ನಿವೃತ್ತ, ವರ್ಗಾವಣೆ ಜೊತೆಗೆ `ಸಾಧಕ~ರನ್ನು ಸನ್ಮಾನಿಸುವ ಹೊಸ ಸಂಪ್ರದಾಯಕ್ಕೆ ಕುಲಪತಿ ಈ.ಟಿ.ಪುಟ್ಟಯ್ಯ ಈ ಬಾರಿ ನಾಂದಿ ಹಾಡಿದರು. ಆದರೆ ಕಾರ್ಯಕ್ರಮ ನಿರೂಪಕರು ಸನ್ಮಾನ ಸ್ವೀಕರಿಸಲು ಮೊದಲಿಗೆ ಕುಲಪತಿ ಹೆಸರನ್ನೇ ಕರೆದರು.ಪುಟ್ಟಯ್ಯ `ತಾನು ಆರಂಭಿಸಿದ ಸಂಪ್ರದಾಯದ ಗೌರವಕ್ಕೆ ತಾನೇ ಚೊಚ್ಚಿಲ ಪಾತ್ರಧಾರಿ~ಯಾದರು. ಮುಜುಗರದಿಂದ ಮುಗುಳ್ನಗುತ್ತಲೇ ಸನ್ಮಾನ ಸ್ವೀಕರಿಸಿದರು.ನಿವೃತ್ತರಾದ ಪಿ.ಎಂ. ನಿಂಬರ್ಗಿ, ಮಹಾದೇವ ಕುಸನೂರ, ಹನುಮಂತರಾಯ ಎಂ. ಕಣಕೇರಿ, ಎಸ್.ಎಸ್.ಗರೂರು, ಲಾಲ್ ಅಹ್ಮದ್, ಆರ್.ಎನ್.ಮುನಿಯ ಅವರನ್ನು ಬೀಳ್ಕೊಡಲಾಯಿತು.ಶೈಕ್ಷಣಿಕ ವರ್ಷದಲ್ಲಿ ಪ್ರಶಸ್ತಿಗೆ ಪಾತ್ರರಾದ ಪ್ರಾಧ್ಯಾಪಕರಾದ  ರಮೇಶ ಅಂಗಡಿ, ಛಾಯಾದೇಗಾಂವಕರ್, ಬಸವರಾಜ ಸಬರದ, ರಾಜಪ್ಪ ದಳವಾಯಿ, ಎಸ್.ಎಲ್.ಹಿರೇಮಠ, ನಾಗಮ್ಮ ವಿ ಬುಳ್ಳಾ, ಜಯಶ್ರೀ ದಂಡೆ, ಡಾ.ಕೆ.ಶ್ರೀರಾಮುಲು, ಸುರೇಶ್ ಜಂಗೆ, ಎಚ್.ಟಿ.ಪೋತೆ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವರಾಗಿ ವರ್ಗಾವಣೆಗೊಂಡ ಪಿ.ಎಸ್.ನಾಯಕ (ಮೈಸೂರು ವಿವಿ) ಹಾಗೂ ಜಿ.ಆರ್.ನಾಯಕ (ವಿಜಾಪುರ ಮಹಿಳಾ ವಿವಿ) ಅವರನ್ನು ಅಭಿನಂದಿಸಲಾಯಿತು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.