ಅಂತರ ವಿವಿ ಈಜು: ಮಿಂಚಿದ ಫರಿಹಾ, ಸುರಭಿ

7

ಅಂತರ ವಿವಿ ಈಜು: ಮಿಂಚಿದ ಫರಿಹಾ, ಸುರಭಿ

Published:
Updated:

ಕೋಲ್ಕತ್ತ: ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಫರಿಹಾ ಜಮಾನ್, ಸುರಭಿ ತಿಪ್ರೆ, ಎ.ಪಿ. ಗಗನ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಆ್ಯರನ್ ಡಿ ಸೋಜಾ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಹೊಸ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

ಬುಧವಾರ ನಡೆದ ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಫರಿಹಾ 31.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಈ ಹಾದಿಯಲ್ಲಿ ಹೊಸ ಕೂಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಮಹಿಳೆಯರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಸುರಭಿ 4:36.75 ಸೆ.ಗಳಲ್ಲಿ ಗುರಿಮುಟ್ಟಿದರು.

ಉತ್ತಮ ಪ್ರದರ್ಶನ ನೀಡಿದ ಎ.ಪಿ. ಗಗನ್ ಪುರುಷರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 4:09.79 ಸೆ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿ ಕೂಟ ದಾಖಲೆ ಸ್ಥಾಪಿಸಿದರು.

ಆ್ಯರನ್‌ಗೆ ಎರಡು ಚಿನ್ನ: ಆ್ಯರನ್ ಡಿ ಸೋಜಾ ಪುರುಷರ ವಿಭಾಗದ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ 56.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದರು. ಈ ವಿಭಾಗದ ಬೆಳ್ಳಿ ಜೈನ್ ವಿವಿಯ ರೆಹಾನ್ ಪೂಂಚ (56.72 ಸೆ.) ಪಾಲಾಯಿತು.

ಆ್ಯರನ್ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲೂ ಬಂಗಾರ ತಮ್ಮದಾಗಿಸಿಕೊಂಡರು. ಅವರು 27.54 ಸೆಕೆಂಡ್‌ಗಳೊಂದಿಗೆ ಮೊದಲಿಗರಾಗಿ ಗುರಿಮುಟ್ಟಿದರು. ಬೆಂಗಳೂರು ವಿವಿಯ ರೋಹಿತ್ ಹವಾಲ್ದಾರ್ (28.15 ಸೆ.) ಬೆಳ್ಳಿ ಗೆದ್ದರೆ, ರೆಹಾನ್ (28.23 ಸೆ.) ಮೂರನೇ ಸ್ಥಾನ ಪಡೆದರು.

ಮಹಿಳೆಯರ 100 ಮೀ. ಬಟರ್‌ಫ್ಲೈ ವಿಭಾಗದ ಸ್ಪರ್ಧೆಯಲ್ಲಿ ವಿಟಿಯುವಿನ ಪೂಜಾ ಆಳ್ವ ಚಿನ್ನ ಗೆದ್ದರು. ಅವರು 1:06.47 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಜೈನ್ ವಿವಿಯ ಫರಿಹಾ ಜಮಾನ್ (1:09.65) ಹಾಗೂ ಕ್ಷಿಪ್ರಾ (1:10.28) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry