ಅಂತಿಮ ನಮನಕ್ಕೆ ನಿರೀಕ್ಷೆ ಮೀರಿದ ಜನಸಾಗರ

ಮೈಸೂರು: ರಾಕೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸೋಮವಾರ ರಾಜ್ಯದ ವಿವಿಧೆಡೆಯಿಂದ ಜನ ಸಾಗರವೇ ಹರಿದುಬಂದಿತು. ಬೆಳಿಗ್ಗೆ 7 ಗಂಟೆಯಿಂದಲೇ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದತ್ತ ಹೆಜ್ಜೆ ಇಡಲು ಆರಂಭಿಸಿದರು. ಬ್ಯಾರಿಕೇಡ್ಗಳನ್ನು ನಿರ್ಮಿಸಿ ದೂರದಿಂದಲೇ ಜನಸಾಮಾನ್ಯರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಬೆಳಿಗ್ಗೆ 10.30ರ ಸುಮಾರಿಗೆ ಆವರಣ ಭರ್ತಿಯಾಗಿತ್ತು. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದಿಂದ ರಾತ್ರಿಯೇ ಜನ ಬಂದಿದ್ದರು. ಮಧ್ಯಾಹ್ನ 12ರ ಸುಮಾರಿಗೆ 30 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಗುಂಪನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಕೊನೆಯಲ್ಲಿ ಲಘು ಲಾಠಿ ಪ್ರಹಾರ ನಡೆಸಿದರು.
ಕೆಲವರು ಬ್ಯಾರಿಕೇಡ್ ಜಿಗಿದು ಅಂತಿಮ ದರ್ಶನ ಪಡೆಯಲು ಮುಂದಾದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕುರ್ಚಿ, ಬೆಂಚುಗಳು ಮುರಿದು ಹೋದವು. ಆ ನೂಕುನುಗ್ಗಲಿನಲ್ಲೇ ಬಂದು ಶವ ಇರಿಸಿದ್ದ ಗಾಜಿನ ಪೆಟ್ಟಿಗೆಯನ್ನು ಮುಟ್ಟಿ ನಮಸ್ಕರಿಸಿ ಗೌರವ ಸಲ್ಲಿಸಿದರು. ಕೆಲವರು ಕಂಬ ಹಾಗೂ ಮರಗಳನ್ನೇರಿ ವೀಕ್ಷಿಸಲು ಪ್ರಯತ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರ್ಥಿವ ಶರೀರ ಇಟ್ಟಿದ್ದ ವೇದಿಕೆ ಏರುವಾಗ ಜನ ಭಾವೋದ್ವೇಗಕ್ಕೆ ಒಳಗಾದರು. ‘ರಾಕೇಶಣ್ಣ ಹೋದೆಯಲ್ಲೋ’ ಎಂದು ಜೋರಾಗಿ ಅಳುತ್ತಲೇ ಕೆಲವರು ನಮಿಸಿದರು. ‘ಅಣ್ಣಾ ಸಿದ್ದರಾಮಣ್ಣ’ ಎಂದು ಜೋರಾಗಿ ಕೂಗಿದರು. ಶಾಮಿಯಾನದ ಹೊರಗಡೆ ಕೆಲ ಮಹಿಳೆಯರು ರೋದಿಸುತ್ತಿದ್ದರು.
ದೂರದಿಂದಲೇ ಹೂವಿನ ಹಾರಗಳನ್ನು ಶವಪೆಟ್ಟಿಗೆಯತ್ತ ಎಸೆಯುತ್ತಿದ್ದ ದೃಶ್ಯ ಕಂಡುಬಂತು. ‘ಮತ್ತೆ ಹುಟ್ಟಿ ಬಾ ಗೆಳೆಯ’ ಎಂಬ ಪೋಸ್ಟರ್, ಭಿತ್ತಿಪತ್ರಗಳನ್ನು ನಗರದ ವಿವಿಧೆಡೆ ಹಾಕಲಾಗಿತ್ತು.
ಪರದಾಡಿದ ಜನಪ್ರತಿನಿಧಿಗಳು: ವಿವಿಐಪಿ ದ್ವಾರದಲ್ಲಿ ನೂಕುನುಗ್ಗಲು ಹೆಚ್ಚಿದ್ದರಿಂದ ಕೆಲ ಜನಪ್ರತಿನಿಧಿಗಳು ಒಳಪ್ರವೇಶಿಸಲು ವಿಳಂಬವಾಯಿತು. ಹೀಗಾಗಿ, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ವಿ.ಶ್ರೀನಿವಾಸಪ್ರಸಾದ್ ಒಳಗೆ ಹೋಗಲು ತೊಂದರೆ ಅನುಭವಿಸಿದರು.
ಡಿ.ವಿ.ಸದಾನಂದಗೌಡ ಅವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಕಣ್ಣೀರಿಟ್ಟರು. ಡಿ.ಕೆ.ಶಿವಕುಮಾರ್ ಕೂಡ ಗದ್ಗದಿತರಾದರು. ರಾಕೇಶ್ ತಾಯಿ ಪಾರ್ವತಿ, ಪತ್ನಿ ಸ್ಮಿತಾ, ಮಕ್ಕಳು ಹಾಗೂ ಸೋದರ ಡಾ.ಯತೀಂದ್ರ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಟಿ.ಕಾಟೂರಿನ ತೋಟದ ಮನೆಗೆ ತೆರಳಿದರು.
ಸಿ.ಎಂ ಕಿವಿಯಲ್ಲಿ ಗುನುಗಿದ ಎಚ್ಡಿಕೆ
ರಾಕೇಶ್ ಸಿದ್ದರಾಮಯ್ಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಳಿ ಹೋದರು.
ಕೈಹಿಡಿದು ಸಾಂತ್ವನ ಹೇಳಿದ ನಂತರ ಕೊಂಚ ಬಾಗಿ ಸಿದ್ದರಾಮಯ್ಯ ಕಿವಿಯಲ್ಲಿ ಏನನ್ನೋ ಗುನುಗಿದರು. ಮುಖ್ಯಮಂತ್ರಿ ಪಕ್ಕದಲ್ಲಿ ಡಿ.ಕೆ.ಶಿವಕುಮಾರ್ ಕೂಡ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.