ಗುರುವಾರ , ಮೇ 19, 2022
24 °C

ಅಂತಿಮ ಪಂದ್ಯದಲ್ಲಿ ಮುಂಬೈಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಬ್ಯಾಟ್ಸ್‌ಮನ್‌ಗಳ ಕೆಟ್ಟ ಪ್ರದರ್ಶನಕ್ಕೆ ಮುಂಬೈ ಇಂಡಿಯನ್ಸ್ ತಕ್ಕ ಬೆಲೆ ತೆತ್ತಿದೆ. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಐದು ವಿಕೆಟ್‌ಗಳಿಂದ ಮುಂಬೈ ವಿರುದ್ಧ ಜಯ ಸಾಧಿಸಿತು.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ಹರಭಜನ್ ಸಿಂಗ್ ಬಳಗ 20 ಓವರ್‌ಗಳಲ್ಲಿ 7 ವಿಕೆಟ್‌ಗೆ ಗಳಿಸಿದ್ದು 100 ರನ್ ಮಾತ್ರ. ಸೌತ್ ವೇಲ್ಸ್ ಆರಂಭಿಕ ಕುಸಿತ ಅನುಭವಿಸಿದರೂ, ಅದ್ಭುತ ರೀತಿಯಲ್ಲಿ ಮರುಹೋರಾಟ ನಡೆಸಿ 17 ಓವರ್‌ಗಳಲ್ಲಿ 5 ವಿಕೆಟ್‌ಗೆ 101ರನ್ ಗಳಿಸಿ ಜಯ ಸಾಧಿಸಿತು.ಲೀಗ್ ವ್ಯವಹಾರ ಕೊನೆಗೊಳಿಸಿದ ಮುಂಬೈ `ಎ~ ಗುಂಪಿನಲ್ಲಿ ಐದು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಲ್ಲಿದೆ. ಆದರೆ ಸೆಮಿಫೈನಲ್ ಸ್ಥಾನ ಖಚಿತವಾಗಿಲ್ಲ. ಲೀಗ್‌ನ ಇತರ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ. ವೇಲ್ಸ್ ವಿರುದ್ಧ ಗೆಲುವು ಪಡೆದಿದ್ದರೆ ಮುಂಬೈ ನಾಲ್ಕರಘಟ್ಟಕ್ಕೆ ಪ್ರವೇಶಿಸುತ್ತಿತ್ತು.ಅಲ್ಪ ಮೊತ್ತ ಬೆನ್ನಟ್ಟಿದ ವೇಲ್ಸ್ ಏಳನೇ ಓವರ್‌ನಲ್ಲಿ ಐದು ವಿಕೆಟ್ ಕಳೆದುಕೊಂಡು 28 ರನ್ ಗಳಿಸಿತ್ತು. ಆದರೆ ಸ್ಟೀವನ್ ಸ್ಮಿತ್ (45) ಮತ್ತು ಬೆನ್ ರೋರೆರ್ (26) ಮುರಿಯದ ಆರನೇ ವಿಕೆಟ್‌ಗೆ 73 ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ ಜೇಮ್ಸ ಫ್ರಾಂಕ್ಲಿನ್ 51 ಎಸೆತಗಳಲ್ಲಿ 42 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಸ್ಟುವರ್ಟ್ ಕ್ಲಾರ್ಕ್ (15ಕ್ಕೆ 2) ಮತ್ತು ಸ್ಟೀವ್ ಒಕೀಫ್ (18ಕ್ಕೆ 2) ಅವರ ಮುಂದೆ ಪರದಾಟ ನಡೆಸಿದರು.ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 100 (ಜೇಮ್ಸ ಫ್ರಾಂಕ್ಲಿನ್ ಔಟಾಗದೆ 42, ಆರ್. ಸತೀಶ್ 14, ಹರಭಜನ್ ಸಿಂಗ್ 15, ಸ್ಟುವರ್ಟ್ ಕ್ಲಾರ್ಕ್ 15ಕ್ಕೆ 2, ಸ್ಟೀವ್ ಒಕೀಫ್ 18ಕ್ಕೆ 2). ನ್ಯೂ ಸೌತ್ ವೇಲ್ಸ್: 17 ಓವರ್‌ಗಳಲ್ಲಿ 5 ವಿಕೆಟ್‌ಗೆ 101 (ಡೇವಿಡ್ ವಾರ್ನರ್ 12, ಸ್ಟೀವನ್ ಸ್ಮಿತ್ ಔಟಾಗದೆ 45, ಬೆನ್ ರೋರೆರ್ ಔಟಾಗದೆ 26, ಅಬು ನೆಚಿಮ್ ಅಹ್ಮದ್ 23ಕ್ಕೆ 3).

ಫಲಿತಾಂಶ: ನ್ಯೂ ಸೌತ್ ವೇಲ್ಸ್‌ಗೆ 5 ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.