ಭಾನುವಾರ, ನವೆಂಬರ್ 17, 2019
29 °C

ಅಂತೂ ಇಂತೂ ಅಂಗವಿಕಲರಿಗೆ ನೌಕರಿ ಇಲ್ಲ!

Published:
Updated:

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎನ್ನುವುದು ಗಾದೆ ಮಾತು. ಈ ಮಾತನ್ನು ರಾಜ್ಯದ ಅಂಗವಿಕಲರಿಗೂ ಅನ್ವಯಿಸಬಹುದು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಸಂಸ್ಥೆಗಳು, ಉದ್ದಿಮೆಗಳು, ನಿಗಮ, ಮಂಡಳಿಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವ ಖಾಸಗಿ ಸಂಸ್ಥೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಆದೇಶ ಮಾಡಿ 8 ತಿಂಗಳು ಕಳೆದರೂ ಇನ್ನೂ ಬಹುತೇಕ ಅಂಗವಿಕಲರಿಗೆ ಉದ್ಯೋಗ ಲಭ್ಯವಾಗಿಲ್ಲ.ಅಚ್ಚರಿಯ ಅಂಶ ಎಂದರೆ ಅಂಗವಿಕಲರ ಮೀಸಲಾತಿ ಅನ್ವಯ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವ ಲೆಕ್ಕಾಚಾರ ಕೂಡ ಸರ್ಕಾರದ ಬಳಿ ಇಲ್ಲ. ಖಾಲಿ ಹುದ್ದೆಗಳನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದರೂ ಇನ್ನೂ ಹುದ್ದೆಗಳನ್ನು ಗುರುತಿಸಲಾಗಿಲ್ಲ. ಅಂಗವಿಕಲರಿಗೆ ಉದ್ಯೋಗ ನೀಡಬೇಕು ಎಂದು ಹೈಕೋರ್ಟ್ ಕಳೆದ ಆಗಸ್ಟ್‌ನಲ್ಲಿ ಸೂಚಿಸಿತ್ತು. ಆದರೂ ರಾಜ್ಯ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಅಂಗವಿಕಲರ ಅಧಿನಿಯಮದ ಆಯುಕ್ತರು ಹೇಳುತ್ತಾರೆ. ಅಂಗವಿಕಲರಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಹೈಕೋರ್ಟ್ ಮೂಲಕವೇ ಮಾಡಿಸಿಕೊಳ್ಳಬೇಕಾಗಿದೆ ಎಂದೂ ಅವರು ವಿಷಾದಿಸುತ್ತಾರೆ. ಅಂಗವಿಕಲರಿಗೆ ಉದ್ಯೋಗ ನೀಡಬೇಕು ಎಂಬ ಕಾನೂನು ಇದೆ. ಹೈಕೋರ್ಟ್ ಹೇಳಿದೆ. ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಆದರೂ ಅಂಗವಿಕಲರಿಗೆ ಉದ್ಯೋಗ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದರೆ ಯಾರನ್ನು ದೂರಬೇಕು?ರಾಜ್ಯ ಸಿವಿಲ್ ಸೇವೆಯಲ್ಲಿನ ಸಮೂಹ-ಎ ಮತ್ತು ಸಮೂಹ-ಬಿ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಶೇ 3ರಷ್ಟು ಹಾಗೂ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ 5ರಷ್ಟು ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಾಗಿಡಬೇಕು. ರಾಜ್ಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದನ್ನು ಗುರುತಿಸಿ ತಕ್ಷಣವೇ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.1995ರ ಅಂಗವಿಕಲರ ಕಾಯ್ದೆ ಪ್ರಕಾರ ಅಂಗವಿಕಲರಿಗೆ ನೀಡಲಾಗುವ ಹುದ್ದೆಗಳನ್ನು ಗುರುತಿಸಲು ಸಮಿತಿಯೊಂದನ್ನು ನೇಮಕ ಮಾಡಬೇಕು. ಈ ಸಮಿತಿ ಪ್ರತಿ ಮೂರು ವರ್ಷಕ್ಕೊಮ್ಮೆ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದನ್ನು ಸರ್ಕಾರಕ್ಕೆ ತಿಳಿಸಿ ಅವುಗಳನ್ನು ಭರ್ತಿ ಮಾಡಲು ಸಹಕರಿಸಬೇಕು. ಆದರೆ 2002ರಿಂದ 2011ರವರೆಗೆ ಈ ಸಮಿತಿ ಒಂದೂ ಸಭೆಯನ್ನೇ ನಡೆಸಲಿಲ್ಲ. 1995ರ ಅಂಗವಿಕಲರ ಕಾಯ್ದೆ ರಾಜ್ಯದಲ್ಲಿ 1996ರಲ್ಲಿ ಜಾರಿಗೆ ಬಂತು. ಸಿ ಮತ್ತು ಡಿ ದರ್ಜೆ ನೌಕರಿಗಳು ಎಷ್ಟು ಖಾಲಿ ಇವೆ ಎನ್ನುವುದನ್ನು 2002ರಲ್ಲಿ ಗುರುತಿಸಲಾಯಿತು. ಅದೂ ಕೂಡ ಎಲ್ಲ ಇಲಾಖೆಯಲ್ಲಿನ ಹುದ್ದೆಗಳನ್ನು ಗುರುತಿಸಲಾಗಿಲ್ಲ. ಅಂದರೆ ಕಾಯ್ದೆ ಜಾರಿಗೆ ಬಂದ 7 ವರ್ಷದ ನಂತರ ಕೆಲವು ಹುದ್ದೆಗಳನ್ನು ಹುಡುಕುವ ಕೆಲಸಕ್ಕೆ ಚಾಲನೆ ಸಿಕ್ಕಿತು. ಆದರೂ ಆ ಹುದ್ದೆಗಳಿಗೆ ಅಂಗವಿಕಲರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣವಾಗಲೇ ಇಲ್ಲ. ಎ ಮತ್ತು ಬಿ ದರ್ಜೆಯ ಹುದ್ದೆಗಳ ಸಮೀಕ್ಷೆ 2005ರಲ್ಲಿ ನಡೆಯಿತು. ಅಂದರೆ ಕಾಯ್ದೆ ಜಾರಿಗೆ ಬಂದ 10 ವರ್ಷದ ನಂತರ ಹುದ್ದೆಗಳನ್ನು ಗುರುತಿಸುವ ಕೆಲಸವಾಯಿತು. ಆದರೆ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಮಾತ್ರ ಹಾಗೆಯೇ ಉಳಿಯಿತು.ಸರ್ಕಾರಿ ಅನುದಾನವನ್ನು ಪಡೆಯುವ ಸಂಸ್ಥೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದನ್ನು ಇನ್ನೂ ಗುರುತಿಸಿಲ್ಲ. ವಿ.ವಿಗಳು, ನಿಗಮ, ಮಂಡಳಿಗಳಲ್ಲಿ ಎಷ್ಟು ಹುದ್ದೆಗಳು ಬಾಕಿ ಇವೆ ಎನ್ನುವ ಮಾಹಿತಿ ಕೂಡ ಸಂಗ್ರಹವಾಗಿಲ್ಲ. ಕಾಯ್ದೆ ಜಾರಿಯಾಗಿ 16 ವರ್ಷ ಕಳೆದರೂ ಇನ್ನೂ ಹುದ್ದೆಗಳನ್ನು ಹುಡುಕುವ ಮಟ್ಟದಲ್ಲಿಯೇ ಸರ್ಕಾರ ಇದೆ. ಇದನ್ನು ಯಾವ ನಡಿಗೆ ಎಂದು ಕರೆಯಬೇಕು. ರಾಜ್ಯದಲ್ಲಿ ಅಂಗವಿಕಲರಿಗಾಗಿಯೇ ಪ್ರತ್ಯೇಕ 8 ವಿಶೇಷ ಶಾಲೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತದೆ. ಕಳೆದ 6 ವರ್ಷಗಳಿಂದ ಈ ಶಾಲೆಗಳಿಗೆ 48 ವಿಶೇಷ ಶಿಕ್ಷಕರನ್ನೇ ನೇಮಕ ಮಾಡಿಲ್ಲ.2011ಕ್ಕೆ ಮೊದಲು ಅಂಗವಿಕಲರಿಗೆ ನೀಡಲಾಗುವ ಹುದ್ದೆಗಳನ್ನು ಗುರುತಿಸಲಾಗುವ ಸಮಿತಿಯಲ್ಲಿ ಕೇವಲ ವೈದ್ಯರು ಮಾತ್ರ ಸದಸ್ಯರಾಗಿದ್ದರು. ವೈದ್ಯರು ಅವರ ಕ್ಷೇತ್ರದಲ್ಲಿ ತಜ್ಞರಾಗಿರುತ್ತಾರೆ. ಕೇವಲ ಅಂಗವಿಕಲತೆಯ ಬಗ್ಗೆ ಮಾಹಿತಿ ಅಥವಾ ಅಂಗ ವೈಕಲ್ಯದ ಪ್ರಮಾಣವನ್ನು ಅವರು ನೀಡಬಹುದೇ ವಿನಾ ಸರ್ಕಾರಿ ಉದ್ಯೋಗದ ಮಾಹಿತಿ ಅವರಿಗೆ ಇರುವುದಿಲ್ಲ. ಆದ್ದರಿಂದ ಇದನ್ನು ವೈದ್ಯರಲ್ಲದೆ ಇನ್ನೂ ಕೆಲವು ಕ್ಷೇತ್ರಗಳ ಪ್ರತಿನಿಧಿಗಳು ಈ ಸಮಿತಿಯಲ್ಲಿ ಇರಬೇಕು ಎಂಬ ವಾದ ಹುಟ್ಟಿಕೊಂಡಿತು. ಅಂಗವಿಕಲರ ಅಧಿನಿಯಮದ ಆಯುಕ್ತರು ಕೂಡ ಇದೇ ವಾದದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಾದವನ್ನು ಒಪ್ಪಿಕೊಂಡ ಹೈಕೋರ್ಟ್ ಸಮಿತಿಯನ್ನು ಪುನರ್ ರಚಿಸುವಂತೆ ಆದೇಶ ನೀಡಿತು. ಅದರ ಪ್ರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್ ರಚಿಸಲಾಗಿದೆ. ಅಂಗವಿಕಲರ ನಿರ್ದೇಶನಾಲಯದ ನಿರ್ದೇಶಕರನ್ನು ಇದರ ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ವೈದ್ಯರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಂಗವಿಕಲರ ಆಯುಕ್ತರು ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿ ರಚನೆಯಾಗಿಯೂ ವರ್ಷಗಳೇ ಕಳೆದರೂ ಇನ್ನೂ ರಾಜ್ಯದಲ್ಲಿ ಅಂಗವಿಕಲರಿಗೆ ನೀಡಲಾಗುವ ಹುದ್ದೆಗಳು ಎಷ್ಟು ಇವೆ ಎನ್ನುವುದನ್ನು ಗುರುತಿಸಲು ಸಾಧ್ಯವಾಗಿಲ್ಲ. ದೈಹಿಕ ಅಂಗವಿಕಲರು, ದೃಷ್ಟಿ ದೋಷವುಳ್ಳವರು, ಶ್ರವಣ ದೋಷವುಳ್ಳವರು ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ಆಗಾಗ ತೋರಿಸುತ್ತಲೇ ಇದ್ದಾರೆ. ತಮ್ಮ ಸಾಮರ್ಥ್ಯವನ್ನು ಮೀರಿಯೂ ಅವರು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಎರಡು ಮೂರು ಸ್ನಾತಕೋತ್ತರ ಪದವಿ ಪಡೆದವರೂ ಇದ್ದಾರೆ. ಆದರೂ ಕೂಡ ಅವರಿಗೆ ಸೂಕ್ತ ಪ್ರಮಾಣದಲ್ಲಿ ಸರ್ಕಾರಿ ನೌಕರಿ ಸಿಗುವುದಿಲ್ಲ ಎನ್ನುವುದು ವಿಷಾದದ ಅಂಶ. ದೈಹಿಕ ಅಥವಾ ಇನ್ಯಾವುದೇ ಅಂಗ ವೈಕಲ್ಯವಾಗಿದ್ದರೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ. ಹಾಗೆ ಅವರನ್ನು ನೋಡಿಕೊಳ್ಳದೇ ಇದ್ದರೆ ಸರ್ಕಾರ ಮತ್ತು ಸಮಾಜಕ್ಕೆ ಅಂಗವೈಕಲ್ಯ ಇದೆ ಎನ್ನಬೇಕಾಗುತ್ತದೆ.

 

ಪ್ರತಿಕ್ರಿಯಿಸಿ (+)