ಶನಿವಾರ, ಮೇ 8, 2021
23 °C
ವ್ಯಕ್ತಿ ಸ್ಮರಣೆ / ವಿದ್ಯಮಾನ

ಅಂಥ ಹಾಡು ಇನ್ನೆಲ್ಲಿ?

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

`ಪೋನಾಲ್ ಪೋಗುಟ್ಟುಂ ಪೋಡ.....' 1960ರ ದಶಕದಲ್ಲಿ ಜನಪದವೇ ಆಗಿದ್ದ ಒಂದು ಚಿತ್ರಗೀತೆ ಇದು. ಜೀವನದ ನಶ್ವರತೆಯ ಬಗ್ಗೆ `ಈ ದೇಹದಿಂದ ದೂರನಾದೆ ಏಕೆ ಆತ್ಮನೇ..' ಎನ್ನುವ ಚಿತ್ರಗೀತೆ ಮಾಡಿದ ಪರಿಣಾಮವನ್ನೂ, `ಮಾನವಾ ದೇಹವೂ ಮೂಳೆ ಮಾಂಸದ ತಡಿಕೆ...' ಎನ್ನುವ ಹಾಡು ಬೀರಿದ ಪರಿಣಾಮವನ್ನು ಈ ಹಾಡೂ ಕೂಡ ಮಾಡಿತ್ತು.`ಪಾಲುಂ ಪಳಮುಂ' (1960) ತಮಿಳು ಚಿತ್ರದ ಈ ಹಾಡು ಅರ್ಥಗರ್ಭಿತ ವಾಕ್ಯಗಳಿಂದ, ಅಪಾರ ಜೀವನಾನುಭವದಿಂದ ಎಲ್ಲರ ಜೀವನದ ಕತೆಯನ್ನು, ಹೇಳುತ್ತಾ ಮತ್ತೆ ಮತ್ತೆ ಕೇಳಬೇಕೆಂಬ ಸಂದೇಶದಿಂದ ಕೂಡಿತ್ತು, ಈ ಗೀತೆಗೆ ಸಾರ್ವಕಾಲಿಕ ಮೌಲ್ಯ ಕಲ್ಪಿಸಿದ ಕೀರ್ತಿ ಗಾಯಕ ತಗುಲ್ವ ಮೀನಾಕ್ಷಿ ಅಯ್ಯಂಗಾರ್ ಸೌಂದರರಾಜನ್ ಅವರದು. (ಟಿ.ಎಂ. ಸೌಂದರರಾಜನ್), 91 ವರ್ಷ ವಯಸ್ಸಿನ ಈ ಗಾಯಕ ನಿಧನರಾದಾಗ ನೆನಪಿಗೆ ಬಂದದ್ದು, ಪೋನಾಲ್ ಪೋಗುಟ್ಟುಂ ಪೋಡ, (ಹೋದರೆ ಹೋಗಲಿ ಹೋಗೋ..... ಬಂದವರೆಲ್ಲಾ ಇಲ್ಲೇ ನೆಲೆಸಿದರಾದರೆ ನೆಲೆ ಎಲ್ಲಿದೆ ಈ ಧರೆಯಲಿ?') ಎನ್ನುವಂತಹ ಸಾಲುಗಳಲ್ಲಿ ಬದುಕಿನ ಪಯಣದ ಬಗ್ಗೆ ಶ್ರೀಸಾಮಾನ್ಯನಿಗೆ ಒಂದು ಸರಳ ಸಂದೇಶವೇ ತಲುಪಿದೆ.ಚಲನಚಿತ್ರ ಹಿನ್ನೆಲೆ ಗಾಯಕರಾಗಿ 60 ವರ್ಷಗಳ ಕಾಲ ಹನ್ನೊಂದು ಸಾವಿರ ಚಿತ್ರಗೀತೆ, ಐದು ಸಾವಿರ ಭಕ್ತಿಗೀತೆಗಳನ್ನು ಹಾಡಿದ ಟಿಎಂಎಸ್ ಅವರದೊಂದು ದಾಖಲೆ. ಕನ್ನಡದ ಆರು ಚಿತ್ರಗಳಲ್ಲಿ ಟಿಎಂಎಸ್ ಹಾಡಿದ್ದಾರೆ. ಭಕ್ತ ಮಲ್ಲಿಕಾರ್ಜುನ (1955), ಸಂತಸಖು (1955), ಓಹಿಲೇಶ್ವರ, ಸದಾರಮೆ (1956), ಸತಿ ನಳಾಯಿನಿ, ರತ್ನಗಿರಿ ರಹಸ್ಯ (1957) ಚಿತ್ರಗಳಲ್ಲಿ ಟಿಎಂಎಸ್ ಹಾಡಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಪಿ.ಬಿ. ಶ್ರೀನಿವಾಸ್ ಇದ್ದಂತೆ, ತಮಿಳು ಚಿತ್ರರಂಗಕ್ಕೆ ಟಿ.ಎಂ. ಸೌಂದರರಾಜನ್, ಪಿಬಿಎಸ್, ರಾಜ್‌ಕುಮಾರ್ ಅವರ ಶಾರೀರವಾದಂತೆ, ಟಿಎಂಎಸ್, ಎಂ.ಜಿ.ಆರ್. ಹಾಗೂ ಶಿವಾಜಿಗಣೇಶನ್ ಅವರಿಗೆ ದನಿಯಾದರು. ಇಬ್ಬರು ಮೇರುನಟರ ಖ್ಯಾತಿಗೆ ಟಿಎಂಎಸ್ ಕೂಡ ಕಾರಣ.ತಮಿಳು ಚಿತ್ರರಂಗದ ಆರಂಭಕಾಲದ ಇತಿಹಾಸವನ್ನು ಅವಲೋಕಿಸಿದರೆ ಸಂಗೀತವೇ ಮುಖ್ಯ ಪಾತ್ರಧಾರಿಯಾಗಿದ್ದುದು ಗೋಚರವಾಗುತ್ತದೆ. ಈ ಪರಂಪರೆ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲೂ ಮುಂದುವರೆಯಿತು. ಸಾಂಬೂರು ವಡಗರೈ ಸುಬ್ಬಯ್ಯ ಭಾಗವತರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಪಾಪನಾಸಂ ಶಿವನ್, ಎಂ.ಎಂ. ದಂಡಪಾಣಿ ದೇಸಿಕರ್ ಅವರುಗಳೆಲ್ಲಾ ಸಂಗೀತವನ್ನು ಸಿನಿಮಾಕ್ಕೆ ತಂದರು.1930 ರಿಂದ 1954ರವರೆಗೆ `ತಮಿಳ್ ಇಸೈ' ಹುಟ್ಟಿಕೊಂಡಿತು. ರಾಜಾಸರ್, ಅಣ್ಣಾಮಲೈ ಚೆಟ್ಟಿಯಾರ್, ಸಿ.ಎಸ್. ರತ್ನಸಭಾಪತಿ ಮೊದಲಿಯಾರ್, ಕಲ್ಕಿ, ಕೆ.ಬಿ. ಸುಂದರಾಂಬಾಳ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಎಂ.ಕೆ. ತ್ಯಾಗರಾಜ ಭಾಗವತರ್ ಇವರುಗಳು ಗಾಯನದಿಂದಲೇ ಜನರಿಗೆ ಮೋಡಿ ಮಾಡಿದ್ದರು. ಮಧುರೆಯ ಪುರೋಹಿತ ಕುಟುಂಬದಿಂದ ಬಂದ ಟಿ.ಎಂ. ಸೌಂದರರಾಜನ್ (ಜನನ 1923) ಕುಟುಂಬಜನ್ಯವಾಗಿ ಬಂದಿದ್ದ ಹಿನ್ನೆಲೆಯಿಂದಾಗಿ ಕರ್ನಾಟಕ ಸಂಗೀತವನ್ನು ಚಿನ್ನಕೊಂಡ ಸಾರಂಗಪಾಣಿ ಭಾಗವತರ್ ಅವರಿಂದ ಕಲಿತರು.ನಂತರ ಕಾರೈಕುಡಿ ರಾಜಮಣಿ ಅಯ್ಯಂಗಾರ್ ಅವರಿಂದ ಎರಡು ವರ್ಷ ತರಬೇತಿ ಪಡೆದು, 23ನೇ ವಯಸ್ಸಿಗೇ ಕಛೇರಿ ನೀಡಿದರು. ಓದಿದ್ದು ಎಸ್‌ಎಸ್‌ಎಲ್‌ಸಿ. ಟೈಪ್‌ರೈಟರ್ ಕಲಿತರೆ ಸರ್ಕಾರಿ ಕೆಲಸ ಸಿಗಬಹುದೇನೋ ಎನ್ನುವ ಹಂಬಲ. 1946ರಲ್ಲಿ ಟಿ.ಎಂ.ಎಸ್.ಗೆ ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕನಾಗಿ ಹಾಡುವ ಅವಕಾಶ ಲಭ್ಯವಾಯಿತು. ಜೂಪಿಟರ್‌ರವರ `ಕೃಷ್ಣ ವಿಜಯಂ' ಚಿತ್ರದಲ್ಲಿ ಟಿಎಂಎಸ್, `ರಾಧೆ ಎನ್ನೈವಿಟ್ಟು ಪೋಗಾದೇ' ಎನ್ನುವ ಹಾಡನ್ನು ಎಂ.ಕೆ. ತ್ಯಾಗರಾಜ ಭಾಗವತರ್ ಶೈಲಿಯಲ್ಲಿ ಹಾಡಿದರು. ಆಗ ತ್ಯಾಗರಾಜ ಭಾಗವತರ್ ಸೂಪರ್‌ಸ್ಟಾರ್.ಆನಂತರ `ಮಂತ್ರಿಕುಮಾರಿ' ಚಿತ್ರದಲ್ಲಿ ಟಿಎಂಎಸ್ ಹಾಡಿದರು. ಈ ಚಿತ್ರಗಳಲ್ಲಿ ಹಾಡಿದ್ದಕ್ಕಾಗಿ ದೊರೆತ 250 ರೂಪಾಯಿ ಸಂಭಾವನೆಯನ್ನೇ ಇಟ್ಟುಕೊಂಡು ಮದ್ರಾಸಿಗೆ ಬಂದ ಟಿ.ಎಂ. ಸೌಂದರರಾಜನ್, ರೂಮೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಸೈಕಲ್ಲೊಂದನ್ನು ಖರೀದಿಸಿದರು. ನಿತ್ಯ ನಿರ್ದೇಶಕರುಗಳ ಮನೆ ಮೆಟ್ಟಿಲು ತುಳಿಯುತ್ತಾ ಅವಕಾಶ ಬೇಡುತ್ತಿದ್ದರು.ಒಮ್ಮೆ (1952) ಸಂಗೀತ ನಿರ್ದೇಶಕ ಆರ್. ಸುದರ್ಶನಂ, ಟಿಎಂಎಸ್ ಅವರನ್ನು ಎವಿಎಂ ಸ್ಟುಡಿಯೊಗೆ ಕರೆದೊಯ್ದು ಮೇಯಪ್ಪ ಚೆಟ್ಟಿಯಾರ್ ಅವರನ್ನು ಭೇಟಿ ಮಾಡಿಸಿದರು. ಆ ವೇಳೆಗಾಗಲೇ ಟಿಎಂಎಸ್ ಅವರದು ಒಡಕು ಕಂಠ ಎಂದು ಬಹಳ ನಿರ್ಮಾಪಕರು ಅವಕಾಶ ನಿರಾಕರಿಸಿದ್ದರು. ಎವಿಎಂನವರು ಆಗ ತಯಾರಿಸುತ್ತಿದ್ದ `ಚೆಲ್ಲ ಪಿಳ್ಳೈ' ಚಿತ್ರದಲ್ಲಿ ಮೂರು ಹಾಡುಗಳನ್ನು ಹಾಡಲು ಮೇಯಪ್ಪ ಚೆಟ್ಟಿಯಾರ್ ಅವಕಾಶ ನೀಡಿದ್ದು, ಟಿಎಂಎಸ್ ಹಿನ್ನೆಲೆಗಾಯನ ಜೀವನಕ್ಕೆ ಹೊಸ ತಿರುವನ್ನೇ ನೀಡಿತು. ಎವಿಎಂ ಸಂಸ್ಥೆಯ ಮೇಯಪ್ಪ ಚೆಟ್ಟಿಯಾರ್ ಅವರು ಹೊಸ ಗಾಯಕನೊಬ್ಬನನ್ನು ಶೋಧಿಸಿದ್ದಾರೆ ಎನ್ನುವುದು ಆಗ ದೊಡ್ಡ ಸುದ್ದಿಯಾಯಿತು. ಟಿಎಂಎಸ್ ಆರು ವರ್ಷಗಳ ಕಾಲ ಕಾದದ್ದು ಸಾರ್ಥಕವಾಯಿತು.ಆ ಸಮಯದಲ್ಲಿ ಶಿವಾಜಿಗಣೇಶನ್ ನಾಯಕನಾಗಿರುವ `ತೂಕ್ಕು ತೂಕ್ಕಿ' ಚಿತ್ರದ ತಯಾರಿ ನಡೆದಿತ್ತು. ಅಂದಿನ ಖ್ಯಾತ ಗಾಯಕ ಸಿ.ಎಸ್. ಜಯರಾಮನ್ ಆ ಹಾಡುಗಳನ್ನು ಹಾಡಬೇಕಿತ್ತು. ಆದರೆ ಜಯರಾಮನ್ ಕೈಗೆ ಸಿಗುತ್ತಿರಲಿಲ್ಲ. ಹೀಗಾಗಿ ಈ ಚಿತ್ರದ ಎಂಟು ಹಾಡುಗಳನ್ನು ಹಾಡುವಂತೆ ಟಿಎಂಎಸ್ ಅವರನ್ನು ಕರೆಯಲಾಯಿತು.ಒಂದೇ ದಿನ ಅಷ್ಟೂ ಹಾಡುಗಳು ಧ್ವನಿಮುದ್ರಣವಾದವು. ಶಿವಾಜಿಗಣೇಶನ್ ಎಲ್ಲ ಹಾಡುಗಳನ್ನು ಆಲಿಸಿ, ಪ್ರಶಂಸಿಸಿದರಲ್ಲದೆ, ಇನ್ನು ಮುಂದೆ ನನ್ನ ಚಿತ್ರದ ಎಲ್ಲ ಹಾಡುಗಳನ್ನು ನೀನೇ ಹಾಡಬೇಕೆಂದು ಹೇಳಿಬಿಟ್ಟರು. ಅಂದಿನಿಂದ ಟಿಎಂಎಸ್ ಹಿಂತಿರುಗಿ ನೋಡಿದ್ದೇ ಇಲ್ಲ. ಆಗ ಪ್ರಖ್ಯಾತರಾಗಿದ್ದ ಎಂಜಿಆರ್ ಹಾಗೂ ಶಿವಾಜಿಗಣೇಶನ್ ಈ ಇಬ್ಬರೂ ಮೇರು ನಟರಿಗೆ ತಕ್ಕಂತೆ ದನಿ ಬದಲಿಸಿ ಹಾಡುವ ಶೈಲಿ ಟಿಎಂಎಸ್‌ಗೆ ಒಂದು ವರವಾಗಿ ಸಿದ್ಧಿಸಿತ್ತು. ಹಾಡಿನ ಮೂಲಕವೇ ಯಾವ ನಟನಿಗೆ ಹಾಡಿದ್ದಾರೆ ಎಂದು ಕಂಡು ಹಿಡಿಯಬಹುದಾದಷ್ಟು ಮಾದರಿಯೊಂದನ್ನು ಟಿಎಂಎಸ್ ರೂಪಿಸಿದ್ದರು.ಶಿವಾಜಿಗಣೇಶನ್ ಅವರ ಅಭಿನಯ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಭಾವಾತಿರೇಕದ ಅಭಿನಯ. ರಭಸದಿಂದ ಸಂಭಾಷಣೆ ಹೇಳುವ ವಿಧಾನ. ಎಂ.ಜಿ.ಆರ್ ಅವರದು ನೀತಿ ಹೇಳುವ ಹಾಡುಗಳು. ಮಧುರ, ಜೊತೆಗೆ ನಾಡಪ್ರೇಮ, ಜನಪ್ರೇಮ ಮೊದಲಾದ ಸರಳತೆಯಿಂದ ಕೂಡಿರುತ್ತಿದ್ದವು. ಟಿ.ಎಂ.ಸೌಂದರರಾಜನ್ ಈ ಇಬ್ಬರು ನಟರ ಮಾತಿನ ಜಾಡು ಹಿಡಿದರು. ಅವರು ಸ್ವಭಾವವನ್ನು ಅಧ್ಯಯನ ಮಾಡಿದರು.ಅದೇ ಪ್ರಕಾರ ತಮ್ಮ ದನಿಯನ್ನೂ ಪಳಗಿಸಿ ಹಾಡಲಾರಂಭಿಸಿದರು. ಟಿಎಂಎಸ್ ಹಾಡಿದ ಯಾವುದಾದರೂ ಒಂದು ಚಿತ್ರಗೀತೆಯನ್ನು ಆಲಿಸಿದರೆ ಅವರು ಯಾವ ನಟನಿಗೆ ಅದನ್ನು ಹಾಡಿದ್ದಾರೆ ಎಂದು ಹೇಳುವಷ್ಟು ಶೈಲಿಯನ್ನು ಅವರು ಕುದುರಿಸಿಕೊಂಡರು. ಎಂಜಿಆರ್ ಹಾಗೂ ಶಿವಾಜಿಗಣೇಶನ್ ಅವರು ದಕ್ಷಿಣ ಭಾರತದಲ್ಲಿ ಅಭಿನಯದ ಮೇರುಶಿಖರ ಏರಿದ್ದರೆ ಅದರಲ್ಲಿ ಟಿ.ಎಂ.ಸೌಂದರರಾಜನ್ ಅವರ ಪಾಲೂ ಸೇರಿದೆ ಎನ್ನುವುದನ್ನು ಇತಿಹಾಸ ಮರೆಯುವಂತಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.