ಅಂದದ ಫಲ-ಪುಷ್ಪ ಲೋಕದ ಅನಾವರಣ

7

ಅಂದದ ಫಲ-ಪುಷ್ಪ ಲೋಕದ ಅನಾವರಣ

Published:
Updated:

ಹುಬ್ಬಳ್ಳಿ: ಹೂವಿನಲ್ಲಿ ಜೋಡಿಸಿಟ್ಟ ಜೋಡಿ ನವಿಲುಗಳ ಸ್ವಾಗತ, ಕುಂಬಳಕಾಯಿಯಲ್ಲಿ ಅರಳಿದ ಗಣೇಶ, ಕಲ್ಲಂಗಡಿ ಹಣ್ಣಿನಲ್ಲಿ ಮೂಡಿದ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ, ಚಿತ್ತಾಕರ್ಷಕ ಪುಷ್ಪಗಳು, ಫಲಗಳು, ವಿವಿಧ ಜಾತಿಯ ಸಸ್ಯಗಳು.... ಇದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ.ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕೃಷಿ ಇಲಾಖೆ, ಹಾಪ್‌ಕಾಮ್ಸ ಮತ್ತು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿಯ ಆಶ್ರಯದಲ್ಲಿ ನಗರದ ಇಂದಿರಾಗಾಂಧಿ ಗಾಜಿನ ಮನೆ ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಮಳೆಯ ನಡುವೆಯೇ ಚಾಲನೆ ದೊರೆಯಿತು. ವರುಣ ಸಿಂಚನದ ಕಾರಣ ಪ್ರದರ್ಶನದ ಮೊದಲ ದಿನ ವೀಕ್ಷಕರ ಸಂಖ್ಯೆ ಕಡಿಮೆಯಾಗಿತ್ತು.ಜರ್ಬೆರಾ ಹೂವಿನಿಂದ ಅಲಂಕೃತವಾದ ಜೋಡಿ ನವಿಲುಗಳುಳ್ಳ ಪುಷ್ಪ ವಿನ್ಯಾಸವು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಲಾಂಛನವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಈ ಪ್ರದರ್ಶನದಲ್ಲಿ ಇಡಲಾಗಿದೆ. ಭಾರೀ ಗಾತ್ರದ ಕುಂಬಳಕಾಯಿಯಲ್ಲಿ ವಿಘ್ನೇಶ, ಚಕ್ರ, ಶಿಲುಬೆ, ಮಸೀದಿ, ಹಾಗಲಕಾಯಿಯಲ್ಲಿ ಉದ್ದನೆಯ ಮೊಸಳೆಯನ್ನು ಸೂಕ್ಷ್ಮವಾಗಿ ಕೆತ್ತಲಾಗಿದ್ದು, ಪ್ರದರ್ಶನದಲ್ಲಿ ಇಡಲಾಗಿದೆ. ಶಿವಮೊಗ್ಗದ ಕಲಾವಿದ ಹರೀಶ್ ಕಲ್ಲಂಗಡಿ ಹಣ್ಣಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮೂರ್ತಿಗಳ ಜೊತೆಗೆ ಗಂಗೂಬಾಯಿ ಹಾನಗಲ್, ಸಿದ್ಧಾರೂಢ ಶ್ರೀ, ಭೀಮಸೇನ ಜೋಶಿ ಮೊದಲಾದ ಮೂರ್ತಿಗಳನ್ನು ನಿರ್ಮಿಸಿ ಪ್ರದರ್ಶನದಲ್ಲಿ ಇಟ್ಟಿದ್ದಾರೆ.ಪುಷ್ಪಗಳ ವಿಭಾಗದಲ್ಲಿ ಡೇಲಿಯಾ, ಕೋಲಿಯಾಸ್, ಕ್ರೋಟಾನ್, ಜರ್ಬೆರಾ, ಕಾರ್ನೆಷಿಯಾ, ಹೆಲಿಕಾನಿಯಾ, ಗುಲಾಬಿ, ಸೇವಂತಿಗೆ ಮೊದಲಾದ ಜಾತಿಯ ಹೂವುಗಳು ಗಮನ ಸೆಳೆಯುತ್ತಿವೆ. ವಿವಿಧ ತೋಟಗಳಲ್ಲಿ ಬೆಳೆದ ಸಪೋಟ, ಸೀಬೆ, ಮೆಣಸಿನಕಾಯಿ, ಕುಂಬಳಕಾಯಿ ಸಹಿತ ತರಕಾರಿಗಳೂ ಪ್ರದರ್ಶನದಲ್ಲಿವೆ.ಮನೆಗಳ ಮುಂದೆ ಸಣ್ಣ ಕುಂಡಗಳಲ್ಲಿ ಇಡಬಹುದಾದ ನಾನಾ ಜಾತಿಗಳ ಸಸ್ಯಗಳು, ಭಿನ್ನ ವಿನ್ಯಾಸದ ಗಿಡಗಳು, ಕುಬ್ಜ ಬೊನ್ಸಾಯ್, ಹೂಗಿಡಗಳು, ಔಷಧಿ ಸಸ್ಯಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಪಿ.ಸಿ. ಜಾಬಿನ್ ಮಹಾವಿದ್ಯಾಲಯ, ಬಿವಿಬಿ ಕಾಲೇಜು, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು, ಎಂ.ಎಂ. ಜೋಶಿ ಫಾರ್ಮ್ ಹೌಸ್ ಸೇರಿದಂತೆ ಸುಮಾರು 500 ಸಂಸ್ಥೆ ಹಾಗೂ ವ್ಯಕ್ತಿಗಳು ತಮ್ಮ  ಫಲ-ಪುಷ್ಪಗಳನ್ನು ಪ್ರದರ್ಶನದಲ್ಲಿ ಇರಿಸಿದ್ದಾರೆ.ಉದ್ಘಾಟನೆ: ಫಲಪುಷ್ಪ ಪ್ರದರ್ಶನವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸಿದರು. ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ವಿಧಾನ ಪರಿಷತ್ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಮೇಯರ್ ಪಾಂಡುರಂಗ ಪಾಟೀಲ, ಉಪಮೇಯರ್ ಭಾರತಿ ಪಾಟೀಲ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಬಾಗಲಕೋಟೆ ತೋಟಗಾರಿಕೆ ವಿವಿ ರಿಜಿಸ್ಟ್ರಾರ್ ಡಾ. ಎ.ಬಿ.ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ. ಧನರಾಜ್, ಸಹಾಯಕ ನಿರ್ದೇಶಕಿ ಪಿ. ಸರಳಮ್ಮ, ಉದ್ಯಾನ ಮತ್ತು ಫಲಪುಷ್ಪ ಪ್ರದರ್ಶನ ಸಮಿತಿ ಅಧ್ಯಕ್ಷ ಎ.ಜಿ. ದೇಶಪಾಂಡೆ, ಪರಿಸರವಾದಿ ಶಂಕರ ಕುಂಬಿ ಹಾಜರಿದ್ದರು.ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

ಫಲಪುಷ್ಪ ಪ್ರದರ್ಶನದ ವೀಕ್ಷಣೆ ಸಲುವಾಗಿ ಸೋಮವಾರ ಹಾಗೂ ಮಂಗಳವಾರದಂದು ಗಾಜಿನಮನೆ ಉದ್ಯಾನಕ್ಕೆ ಪಿಯುವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry