ಗುರುವಾರ , ಜೂನ್ 24, 2021
23 °C

ಅಂದರ್ ಒಳಗೆ ಬಾಹರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದರ್ ಒಳಗೆ ಬಾಹರ್!

ಒಬ್ಬನೇ ಮನುಷ್ಯನಲ್ಲಿ ಹಲವು ವ್ಯಕ್ತಿತ್ವಗಳಿರುತ್ತವೆಯಂತೆ. ಅದನ್ನು ತೆರೆಯ ಮೇಲೆ ತರುವ ಯತ್ನ ನಿರ್ದೇಶಕ ಪ್ರಣೀಶ್ ಅವರದ್ದು. ಮನಸ್ಸಿನ `ಅಂದರ್ ಬಾಹರ್~ ಹೇಗಿರುತ್ತದೆ ಎಂಬುದನ್ನು ತಿಳಿಸುವ ಉತ್ಸಾಹದಲ್ಲಿದ್ದಾರೆ ಅವರು.

 

ಚಿತ್ರದ ಮುಹೂರ್ತ ಪೂರ್ಣಗೊಳಿಸಿದ್ದ ಅವರು ಕತೆಯನ್ನು ಅನಾವರಣಗೊಳಿಸುವುದು ಬೇಡ ಎಂದು ಪಟ್ಟು ಹಿಡಿದಂತೆ ಕುಳಿತಿದ್ದರು. ಆದರೂ ಕತೆಯ ಸುತ್ತಲೂ ಮಾತನಾಡಿದರು. ಅವರ ಪ್ರಕಾರ ಇದು ಸೈಕಾಲಜಿಗೆ ಸಂಬಂಧಿಸಿದ ವಿಷಯವಲ್ಲ. ದ್ವಂದ್ವ ವ್ಯಕ್ತಿತ್ವವನ್ನು ಬಿಚ್ಚಿಡುವ ಯತ್ನವೂ ಅಲ್ಲ. ಬದಲಿಗೆ ಅಪರಾಧ ಹಿನ್ನೆಲೆ ಇರುವ ಚಿತ್ರ.ಚಿತ್ರದಲ್ಲಿ ತಾಯಿಯಾಗಿ ನಟಿ ಅರುಂಧತಿ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ. ಜೋಗಿ ಚಿತ್ರದಲ್ಲಿದ್ದ ಭಾವುಕ ಅಭಿನಯ ಇಲ್ಲಿಲ್ಲವಂತೆ. ಅವರ ಪಾತ್ರಕ್ಕೆ ಹಾಸ್ಯದ ಲೇಪನ ಕೂಡ ಇದೆ. ಶಶಿಕುಮಾರ್ ಚಿತ್ರದಲ್ಲಿ ವಿಶೇಷ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಅವರು ಬಿಚ್ಚಿಟ್ಟ ರಹಸ್ಯ.`ಇದು ನನ್ನ ಮೊದಲ ಚಿತ್ರ~ ಎಂದು ಅಚ್ಚರಿ ಹುಟ್ಟಿಸಿದರು ನಟ ಶಿವರಾಜ್‌ಕುಮಾರ್. ಎಷ್ಟೇ ಚಿತ್ರಗಳನ್ನು ಮಾಡಿದರೂ ಕಲಾವಿದ ಮೊದಲ ಚಿತ್ರದಷ್ಟೇ ಶ್ರದ್ಧೆಯಿಂದ ನಿರ್ವಹಿಸಬೇಕು ಎಂಬುದು ಅವರ ಮಾತಿನ ಸಾರವಾಗಿತ್ತು. ಚಿತ್ರದ ಕತೆ ಹೆಣೆದಿರುವ ರೀತಿ ಹಾಗೂ ನಿರೂಪಣೆ ಅವರಿಗೆ ಖುಷಿ ತಂದಿತ್ತಿದೆ. ಅವರ ಪ್ರಕಾರ ಆಕ್ಷನ್ ಜತೆಗೆ ಭಾವುಕತೆಯೂ ಮೇಳೈಸಿರುವುದು ಚಿತ್ರದ ಪ್ಲಸ್ ಪಾಯಿಂಟ್.ಏಳೆಂಟು ವರ್ಷದ ಬಳಿಕ ಅರುಂಧತಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪತ್ರಕರ್ತರ ಕುತೂಹಲಕ್ಕೆ ಕಾರಣವಾಗಿತ್ತು. ಪಾತ್ರದ ಕುರಿತು ಹೋಂವರ್ಕ್ ಮಾಡುತ್ತಿದ್ದಾರಂತೆ.

 

`ಇನ್ನೂ ಮಣ್ಣು ಮುದ್ದೆಯ ರೂಪದಲ್ಲಿದೆ, ಮೂರ್ತಿಯಾಗಲು ಸ್ವಲ್ಪ ಕಾಲ ಕಾಯಬೇಕು. ಪಾತ್ರದ ಬಗ್ಗೆ ಕುತೂಹಲವಿರಲಿ~ ಎಂಬ ತಾತ್ವಿಕ ಸಂದೇಶ ಅವರಿಂದ ಹೊರಬಿತ್ತು!ನಾಯಕನ ಕೃತ್ಯಗಳನ್ನು ಬಯಲಿಗೆಳೆಯುವ ಕಾರ್ಯ ನನ್ನದು ಎಂದರು ಶಶಿಕುಮಾರ್. ಅವರೂ ಕೂಡ ಬಹಳ ವರ್ಷಗಳ ನಂತರ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಖುಷಿ ತಂದಿದೆ.ಲೆಜೆಂಡ್ ಸಂಸ್ಥೆಯ ರಜನೀಶ್, ಪ್ರಸಾದ್ ರಾವ್, ಅಂಬರೀಷ್, ಜಗದೀಶ್, ಅವಿನಾಶ್, ಶ್ರೀನಿವಾಸ್ ಹಾಗೂ ಭಾಸ್ಕರ್ ಚಿತ್ರದ ನಿರ್ಮಾಪಕರು. ಪ್ರಣೀಶ್ ಅವರ ಶ್ರಮವನ್ನು ಮೆಚ್ಚಿಕೊಂಡರು ರಜನೀಶ್. ನಿರ್ದೇಶಕರ ಏಳು ತಿಂಗಳ ಶ್ರಮವೇ ಚಿತ್ರ ಸೆಟ್ಟೇರಲು ಕಾರಣವಂತೆ.ಲಾಸ್ ಏಂಜಲಿಸ್‌ನಲ್ಲಿ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದ ಜೈಹೋ ವಿಜಯ್‌ಪ್ರಕಾಶ್ ಅವರಿಗೆ ಚಿತ್ರದಲ್ಲಿ ಸಂಗೀತ ನಿರ್ದೇಶಕನಾಗುವ ಅವಕಾಶ ದೊರೆಯಿತು. ಸಂಗೀತ ಉತ್ತಮ ರೀತಿಯಲ್ಲಿ ಮೂಡಿ ಬರಲು ಶಿವರಾಜ್‌ಕುಮಾರ್ ನೀಡಿದ ಸ್ವಾತಂತ್ರ್ಯವೇ ಕಾರಣವಂತೆ.ಜಯಂತ್‌ ಕಾಯ್ಕಿಣಿ, ಯೋಗರಾಜ್‌ಭಟ್, ಕವಿರಾಜ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಗೋಕರ್ಣ ಕಾರವಾರ, ಗೋವಾ ಮುಂತಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದ ನಾಯಕಿ ಪಾರ್ವತಿ ಮೆನನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.