ಅಂದು ಕಾರ್ಮಿಕ, ಇಂದು ಮಾಲೀಕ

7

ಅಂದು ಕಾರ್ಮಿಕ, ಇಂದು ಮಾಲೀಕ

Published:
Updated:

ಇರುವುದು ಮನೆಯ ಮುಂದಿನ ಚಿಕ್ಕ ಅಂಗಳ. ಆದರೆ ಇದೊಂದು ಸಮಸ್ಯೆ ಅಂದು ಇವರಿಗೆ ಎನಿಸಲೇ ಇಲ್ಲ. ದುಡಿಯುವ ಇಚ್ಛೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಆನೆಗೊಳ್ಳ ಗ್ರಾಮದ ಕೃಷಿಕ ಮೂರ್ತಿ.ಮನೆಯ ಮುಂದಿನ ಅಂಗಳದಲ್ಲಿ ಕಾಫಿ ಬೆಳೆ ಬೆಳೆದು ಕೇವಲ  5-6 ತಿಂಗಳಿನಲ್ಲಿ ಕೈತುಂಬ ಲಾಭ ಗಳಿಸುತ್ತಿದ್ದಾರೆ. ಕಾರ್ಮಿಕನಿಂದ ಮಾಲೀಕರಾಗಿ ಮೆರೆಯುತ್ತಿದ್ದಾರೆ.

ಮೂರ್ತಿ ಅವರಿಗೆ ಈ ಮೊದಲು ಕೂಲಿ ಕೆಲಸವೆ ಬದುಕಿಗೆ ಆಧಾರವಾಗಿತ್ತು.ಕೂಲಿ ಕೆಲಸಕ್ಕೆಂದು ಬೇರೆಯವರ ತೋಟಗಳಿಗೆ ಹೋಗುತ್ತಿದ್ದಾಗ ಅಲ್ಲಿರುವ ಕಾಫಿ, ಅಡಿಕೆ, ಕಾಳು ಮೆಣಸು, ಬೆಲೆ ಬಾಳುವ ಸಿಲ್ವರ್ ಓಕ್ ಗಿಡಗಳಿಗೆ ಇರುವ ಅಪಾರ ಬೇಡಿಕೆ ಅವರ ಗಮನ ಸೆಳೆಯಿತು. ಇದನ್ನು ತಾವೇ ಏಕೆ ಬೆಳೆಸಬಾರದು ಎಂಬ ಯೋಚನೆ ಬಂತು. ಅದರ ಪರಿಣಾಮವೇ ಅವರ ಮನೆಯ ಎದುರಿಗಿರುವ ಅಂಗಳ ಈಗ ಕಾಫಿ ಸಸಿಗಳಿಂದ ಹಸಿರಾಗಿ ಕಂಗೊಳಿಸುತ್ತಿರುವುದು.ನಿರಂತರ ಬೇಡಿಕೆ: `ಕಾಫಿ ಗಿಡದ ಅಗತ್ಯವಿರುವ ತೋಟದ ಮಾಲೀಕರು ತಾವೇ ಬೀಜಗಳನ್ನು ಒದಗಿಸಿ, ಸಸಿ ಬೆಳೆದುಕೊಡಲು ಹೇಳುತ್ತಾರೆ. ಕಾಫಿ ಮೊಳಕೆ ಒಡೆದು ಎಲೆಯಾಗುವ ಮುನ್ನ ಸಿದ್ಧಪಡಿಸಿದ ಪಾಲಿಥಿನ್ ಚೀಲದೊಳಗೆ ನಿಲ್ಲಿಸಿದರೆ ಮಾತ್ರ ಆರೋಗ್ಯವಂತ ಸಸಿ ಪಡೆಯಬಹುದು~ ಎನ್ನುತ್ತಾರೆ ಮೂರ್ತಿ.ಒಂದು ಟ್ರ್ಯಾಕ್ಟರ್ ಕಾಡುಮಣ್ಣಿನ ಜೊತೆಗೆ ಮೂವತ್ತು ಕೆ.ಜಿ ಸುಣ್ಣ, ಸ್ವಲ್ಪ ಮರಳು, ಕಾಲು ಭಾಗದಷ್ಟು ಸಗಣಿ ಗೊಬ್ಬರ ಮಿಶ್ರ ಮಾಡಿ, ಪಾಲಿಥಿನ್ ಚೀಲಕ್ಕೆ ತುಂಬಿಸಿದರೆ ಚೆನ್ನಾಗಿ ಬೆಳೆ ಬೆಳೆಯಬಹುದು ಎನ್ನುವುದು ಅವರ ಅನಿಸಿಕೆ.ಮಳೆ ಹೆಚ್ಚಾದಾಗ ಮಾತ್ರ ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಆಗ ಬಾವಿಸ್ಟಿನ್ ಮತ್ತು ಕ್ಯಾಡ್‌ಮಿಲ್ ಎಂಬ ಔಷಧಗಳನ್ನು ಹದಿನೈದು ದಿನಕ್ಕೊಮ್ಮೆ ಸಿಂಪಡಿಸುತ್ತಾರೆ. ಪತ್ನಿ ಕುಸುಮ ಅವರ ನೆರವೂ ಇವರಿಗೆ ಇದೆ.ಈ ಬಾರಿ ಇಪ್ಪತ್ತು ಸಾವಿರ ಕಾಫಿ ಗಿಡಗಳನ್ನು ತಲಾ ನಾಲ್ಕು ರೂಪಾಯಿಗಳಂತೆ, ಮೂವತ್ತು ಸಾವಿರ ಸಿಲ್ವರ್ ಓಕ್ ಗಿಡಗಳನ್ನು ತಲಾ ಐದು ರೂಪಾಯಿಗಳಂತೆ ಮಾರಾಟ ಮಾಡಿದ್ದಾರೆ. ಆದರೆ ಇವರಿಗೆ ಗಿಡವೊಂದಕ್ಕೆ ತಗುಲಿರುವ ವೆಚ್ಚ ಎರಡು ರೂಪಾಯಿಗಳು ಮಾತ್ರ.ಇದರ ಜೊತೆಗೆ ಕಾಳು ಮೆಣಸಿನ ಬಳ್ಳಿಗಳನ್ನು 13 ರೂಪಾಯಿಗಳಂತೆ ಮಾರಾಟ ಮಾಡಿದ್ದಾರೆ. ವರ್ಷವಿಡೀ ಕೆಲಸವೂ ಇದೆ, ಆದಾಯವೂ ಚೆನ್ನಾಗಿದೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಮೂರ್ತಿ.  ಇವರ ದೂರವಾಣಿ ಸಂಖ್ಯೆ-9591599954.ಕಾಫಿ ಬೆಳೆ ಹುಲುಸಾಗಿ ಬೆಳೆಯಲು ಮೂರ್ತಿಯವರು ನೀಡುವ ಟಿಪ್ಸ್..

*ಕಾಫಿ ಮಂಡಳಿ ಶಿಫಾರಸು ಮಾಡಿದ ಸಂಶೋಧನಾ ಇಲಾಖೆಗಳಿಂದ ಪಡೆದ ಬೀಜಗಳನ್ನು ಮಾತ್ರ ಬಳಸಬೇಕು.* ಬಿತ್ತನೆ ಬೀಜ ದೊರಕಿದ ಕೂಡಲೆ ಬಿತ್ತಬೇಕು. ತಡವಾದರೆ ಮೊಳೆಯುವಿಕೆ ಪ್ರಮಾಣ ಕಡಿಮೆಯಾಗುತ್ತದೆ.* ಬೀಜ ಬಿತ್ತುವುದಕ್ಕೂ ಮೊದಲು ಮೇಲು ಚಪ್ಪರ ಹಾಕಿರಬೇಕು ಮತ್ತು ಬೀಜಗಳನ್ನು ಆಳವಾಗಿ ಬಿತ್ತಬಾರದು. ಹದವಾಗಿ ನೀರು ನೀಡಬೇಕು.* ಕ್ರಿಮಿಗಳ ನಿವಾರಣೆಗೆ ಚೆನ್ನಾಗಿ ಒಣಗಿದ ಕಾಡು ಮಣ್ಣನ್ನು ಜರಡಿಯಾಡಿ ಬಳಸಬೇಕು.* ಮೊಳಕೆಗಳನ್ನು ಆಳವಾಗಿ ನಾಟಿ ಮಾಡಬಾರದು.* ಪಾಲಿಥಿನ್ ಚೀಲದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ರಂಧ್ರಗಳಿರಬೇಕು.* ಪಾತಿಯಲ್ಲಿರುವ ಸಸಿಗಳಿಗೆ ಬೋರ‌್ಢೋ ಮಿಶ್ರಣ ಬಳಸಬಾರದು. ಬಳಸಿದರೆ ಗಿಡಗಳನ್ನು ನಾಟಿ ಮಾಡಿದ ವರ್ಷದ ನಂತರ ಕ್ಷೀಣವಾಗಿ ಬಿದ್ದು ಹೋಗುತ್ತವೆ ಮತ್ತು ಯೂರಿಯಾವನ್ನು ನೇರವಾಗಿ ಹಾಕಬಾರದು. ಹೀಗೆ ಮಾಡಿದರೆ ಗಿಡಗಳಿಗೆ ನಂಜುಂಟಾಗುತ್ತದೆ.*ಎಳೆಯ ಸಸಿಗಳನ್ನು ಅವಶ್ಯಕತೆಗಿಂತ ಹೆಚ್ಚು ಕಾಲ ಮೊಳಕೆ ಪಾತಿಯಲ್ಲಿಯೇ ಉಳಿಸಿಕೊಂಡರೆ ಕಾಲರ್‌ರಾಟ್ ಅಥವಾ ಕೊರಳಿನ ಕೊಳೆತವೆಂಬ ರೋಗ ಕಾಣಿಸಿಕೊಳ್ಳುತ್ತದೆ. ಹಾಗಾಗದಂತೆ ಎಚ್ಚರಿಕೆ ವಹಿಸಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry