ಸೋಮವಾರ, ನವೆಂಬರ್ 18, 2019
29 °C

ಅಂದು ಚುನಾವಣೆಗೆ ್ಙ40 ಸಾವಿರ ಖರ್ಚು!

Published:
Updated:

ಬೀದರ್: ವೃತ್ತಿಯಿಂದ ವಕೀಲರಾಗಿದ್ದ ಚಂದ್ರಕಾಂತ್ ಸಿಂಧೋಲ್ 1967 ರಲ್ಲಿ ಬೀದರ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಮೊದಲ ಚುನಾವಣೆಗೆ ಖರ್ಚು ಮಾಡಿದ್ದು ರೂ. 40 ಸಾವಿರ ಮಾತ್ರ.ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಕ್ಸೂದ್ ಅಲಿಖಾನ್ ಅವರ ವಿಜಯದ ಓಟಕ್ಕೆ `ತಡೆ' ಒಡ್ಡಿದ್ದರು. 5,634 ಮತಗಳ ಅಂತರದಿಂದ ಜಯ ಗಳಿಸಿದ್ದ ಅವರು ಶೇ 57.53 ರಷ್ಟು ಮತ ಪಡೆದಿದ್ದರು. `ಪ್ರಜಾವಾಣಿ' ಜೊತೆಗೆ ಮಾತನಾಡಿದ ಅವರು ಚುನಾವಣಾ ದಿನಗಳ ನೆನಪಿನಂಗಳವನ್ನು ತೆರೆದಿಟ್ಟರು.`ಆಗಿನ ಚುನಾವಣೆ ಜನರ ಚುನಾವಣೆ ಆಗಿತ್ತು. ಜನ ಮತ ನೀಡುವ ಜೊತೆಗೆ ಚುನಾವಣೆ ಖರ್ಚಿಗಾಗಿ ದುಡ್ಡು ಕೊಡುತ್ತಿದ್ದರು. ನನ್ನ ಚುನಾವಣೆಗೆ ರೂ. 40 ಸಾವಿರ ಮಾತ್ರ ಖರ್ಚಾಗಿತ್ತು. ಅದನ್ನು ಕೂಡ ಚುನಾವಣೆ ನಂತರ ಖರ್ಚು- ವೆಚ್ಚ ನೋಡಿಕೊಂಡಿದ್ದ ಬೆಂಬಲಿಗರಿಗೆ ನೀಡಿದ್ದೆ' ಎಂದು ಸ್ಮರಿಸಿದರು.ಅಂದಿನ ಮತ್ತು ಇಂದಿನ ಚುನಾವಣೆಗೆ ಅಜಗಜಾಂತರ ವ್ಯತ್ಯಾಸ ಇದೆ. ಹಿಂದೆ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗುತ್ತಿರಲಿಲ್ಲ. ಜನ ಸೇವೆ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದರು. ಹಣಬಲ, ತೋಳ್ಬಲದ ಬಗೆಗೂ ಗೊತ್ತಿರಲಿಲ್ಲ. ಆದರೆ, ಈಗ ಅದುವೇ ಪ್ರಧಾನ ಆಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಇಂದು ರಾಜಕಾರಣಿಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ. ವ್ಯವಸ್ಥೆ ಬದಲಿಸಲು ಸಾಮೂಹಿಕ ಪ್ರಯತ್ನ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಡುತ್ತಾರೆ.ವ್ಯಕ್ತಿ ಪರಿಚಯ: ಅವರು 28ನೇ ವಯಸ್ಸಿಗೇ ವಿಧಾನಸಭೆ ಮೆಟ್ಟಿಲು ಹತ್ತಿದವರು. ಆ ವೇಳೆ ಜನಸಂಘದಿಂದ ನಾಲ್ವರು ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇವರು ಹೈದರಾಬಾದ್ ಕರ್ನಾಟಕ ಭಾಗದಿಂದ ಆಯ್ಕೆಯಾದ ಪಕ್ಷದ ಏಕೈಕ ಪ್ರತಿನಿಧಿ.

ಸಿಂಧೋಲ್ ನಾಲ್ಕು ವರ್ಷಗಳ ಕಾಲ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ವಿಧಾನಸಭೆ ವಿಸರ್ಜಿಸಿದ್ದರಿಂದ ಇನ್ನೂಒಂದು ವರ್ಷ ಬಾಕಿ ಇರುವಾಗಲೇ ಶಾಸಕತ್ವ ಕಳೆದುಕೊಳ್ಳಬೇಕಾಯಿತು.`ಆರ್ಥಿಕ ಸಮಸ್ಯೆಯಿಂದಾಗಿ ನಂತರದ ಚುನಾವಣೆಯಿಂದ ದೂರ ಉಳಿದೆ. ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲ' ಎನ್ನುತ್ತಾರೆ ಸಿಂಧೋಲ್. ಜನಸಂಘದ ಸಂಬಂಧ ಕಡಿದು 1975-76 ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 10 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಾಲ್ಕು ಬಾರಿ ಬಿಎಸ್‌ಎಸ್‌ಕೆ ನಿರ್ದೇಶಕರಾಗಿದ್ದರು.ರಾಜಕೀಯದ ನಡುವೆಯೂ ವಕೀಲ ವೃತ್ತಿಯನ್ನು ಬಿಟ್ಟುಕೊಡಲಿಲ್ಲ. 2010 ರಲ್ಲಿ ಪಾರ್ಶ್ವವಾಯು ಪೀಡಿತರಾದ ನಂತರ ವೃತ್ತಿ ಹಾಗೂ ಸಕ್ರಿಯ ರಾಜಕಾರಣದಿಂದ ದೂರ ಸರಿದರು. ಈಗ ಅವರಿಗೆ 76 ವರ್ಷ ವಯಸ್ಸು. ಪತ್ನಿ ನಿಧನರಾಗಿದ್ದು, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.

ಪ್ರತಿಕ್ರಿಯಿಸಿ (+)