ಬುಧವಾರ, ಜೂನ್ 16, 2021
28 °C

ಅಂದು ಜಡಿಮಳೆ, ಇಂದು ಉರಿಬಿಸಿಲು

ಪ್ರಜಾವಾಣಿ ವಾರ್ತೆ/ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಕೊಪ್ಪಳ:  ಅಕಾಲಿಕ ಮಳೆಯಿಂದ ಜಿಲ್ಲೆ­ಯಲ್ಲಿ ಒಂದೆಡೆ ವ್ಯಾಪಕ ಬೆಳೆ ಹಾನಿ ಉಂಟಾಗಿದ್ದರೆ ಇದೀಗ ಉರಿಬಿಸಿ­ಲಿನಿಂದ ಜಿಲ್ಲೆಯ ಉಳಿದ ಹಲವೆಡೆ ಕುಡಿಯುವ ನೀರು, ಜಾನುವಾರು ಮೇವಿಗೆ ತತ್ವಾರ ಉಂಟಾಗಿದೆ.ಜಲಮೂಲಗಳು ಪಾತಾಳ­ಕ್ಕಿಳಿ­ದಿದ್ದು, ಗ್ರಾಮೀಣ ಪ್ರದೇಶದ ಜನತೆ ದೂರದ ಹಳ್ಳ, ಕೆರೆ, ಬಂಡೆಗಳ ಎಡೆಯಲ್ಲಿರುವ ಒಸರು ಹುಡುಕುತ್ತಾ ಸಾಗಿದ್ದಾರೆ.

ಈ ದೃಶ್ಯಗಳು ಕೊಪ್ಪಳ ತಾಲ್ಲೂಕಿನ ಬೂದುಗುಂಪಾ, ಜಬ್ಬಲಗುಡ್ಡ ಗ್ರಾಮ­ಗಳಲ್ಲಿ ಕಂಡುಬರುತ್ತಿವೆ.ಊರಿಂದ ಊರಿಗೆ ಜಾನುವಾರು ಮೇಯಿಸುತ್ತಾ ಸಾಗುವ ದನಗಾಹಿ­ಗಳೂ ಕಂಗಾಲಾಗಿದ್ದಾರೆ. ಭೂಮಿ­ಯಲ್ಲಿ ಹಸಿರು ಮೇವು ಸಿಗದೇ ಬಡಕಲಾ­ ಗಿರುವ ಅವುಗಳ ಬೆನ್ನು ಮೂಳೆಗಳು ಎದ್ದು ಕಾಣುತ್ತಿವೆ. ಬೆಟ್ಟ­ಗಳಲ್ಲಿನ ಒಣಹುಲ್ಲು, ಮೆಕ್ಕೆಜೋಳದ ದಂಟು, ಕುರುಚಲು ಗಿಡಗಳು ಜಾನು­ವಾರುಗಳ ಪಾಲಿಗೆ ಸಂಜೀವಿನಿ. ಕರುಗಳೂ ಈ ಮಂದೆಯಲ್ಲಿವೆ. ಜಿಲ್ಲೆಯ ಸರಾಸರಿ ಗರಿಷ್ಠ ತಾಪಮಾನ ಸುಮಾರು 36 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇನ್ನಷ್ಟು ಏರುವ ನಿರೀಕ್ಷೆ ಇದೆ.ಬಳ್ಳಾರಿ ಭಾಗದಲ್ಲಿ ದನಕರುಗಳನ್ನು ಮೇಯಿಸದಂತೆ ಡಂಗುರ ಸಾರಲಾಗಿದೆ. ಅಲ್ಲಿ ರೈತರು ಮೆಣಸಿನ ಗಿಡ ನೆಟ್ಟಿ­ರುವು­ದರಿಂದ ಅವುಗಳ ಕೊಯ್ಲು ಮುಗಿಯು­ವವರೆಗೆ ದನಕರುಗಳನ್ನು ಗಡಿ ದಾಟಿಸು­ವಂತಿಲ್ಲ. ಊರಿನ ಭಾಗದ ಜಮೀನು­ಗಳಲ್ಲಿ ತರಕಾರಿ ಬೆಳೆಸಲಾಗಿದೆ. ಹಾಗಾಗಿ ಇರುವ ಬೆಟ್ಟಗುಡ್ಡಗಳಲ್ಲಿನ ಕುರು­ಚಲನ್ನು ತಿನ್ನಿಸಬೇಕು. ನೀರಿಗೆ ದೂರದ ಕೆರೆಯನ್ನು ಆಶ್ರಯಿಸಬೇಕು ಎಂದು ಜಾನುವಾರುಗಳನ್ನು ಬಳ್ಳಾರಿ ಗಡಿ­ವರೆಗೆ ಮೇಯಿಸಿಕೊಂಡು ಹೋಗು­ತ್ತಿದ್ದ ವೆಂಕಟೇಶ ಹೇಳಿದರು. ಬೇಸಿಗೆ ಕಳೆಯುವವರೆಗೆ ಜಾನು­ವಾರು­ಗಳಿಗೆ ಇದೇ ಸಮಸ್ಯೆಯಿದೆ. ಜಾನುವಾರುಗಳ ಜತೆಯಲ್ಲಿ ದನ­ಗಾಹಿಗಳ ಹೊಟ್ಟೆ ಹೊರೆಯಬೇಕು. ಇರುವ ಒಂದೆರಡು ಹಸುಗಳ ಹಾಲು ಹಿಂಡುತ್ತೇವೆ. ಕೆಲವು ಜಮೀನುಗಳಲ್ಲಿ ಜಾನುವಾರು ನಿಲ್ಲಿಸಿದರೆ ಅಲ್ಲಿನ ರೈತರು ಕೊಡುವ ಅಕ್ಕಿ, ಬೇಳೆ ಕಾಳು­ಗಳಲ್ಲೇ ನಮ್ಮ ಅಡುಗೆ. ಹೀಗೆ ಬದುಕು ಸಾಗುತ್ತಲೇ ಇರಬೇಕು ಎಂದರು ವೆಂಕಟೇಶ.ಇದೇ ಬೆಟ್ಟದ ಸಾಲಿನಲ್ಲಿ ಉರಿ ಬಿಸಿಲಿನಲ್ಲಿ ಕುರಿ ಕಾಯುತ್ತಿರುವವರ ಪಾಡೂ ಭಿನ್ನವೇನಲ್ಲ. ಇಲ್ಲಿಯೇ ಈ ಪರಿಸ್ಥಿತಿಯಾದರೆ, ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ನಿಂಗಾಪುರ, ಮನ್ನಾಪುರ ತಾಂಡಾದ ಹೊರವಲಯ, ಬೆಣಕಲ್‌ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಜತೆಗೆ ನೀರಿನಲ್ಲಿ ಫ್ಲೋರೈಡ್‌ ಇದೆ.

ಒಂದೆರಡು ತಿಂಗಳ ಕಾಲ ಜನರು ಎಲ್ಲದಕ್ಕೂ ತತ್ವಾರ ಪಡಬೇಕು. ಅತ್ತ ಹೊಲದಲ್ಲಿ ದುಡಿಮೆಯೂ ಇಲ್ಲ. ಇತ್ತ ಕಿತ್ತು ತಿನ್ನುವ ಬಡತನದ ಮಧ್ಯೆ ಗ್ರಾಮೀಣ ಜನರು ನಲುಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.