ಅಂದು ಜೀರೊ, ಇಂದು ಹೀರೊ

7

ಅಂದು ಜೀರೊ, ಇಂದು ಹೀರೊ

Published:
Updated:

ಅಮೃತ ಭೂಮಿ

ಮನೆ ಭಾಷೆ- ಮನದ ಭಾಷೆ ಕನ್ನಡ. ಹೊಕ್ಕು ಬಳಕೆಯ ಸಂಬಂಧವೂ ಕರ್ನಾಟಕದೊಂದಿಗೇ ಹೆಚ್ಚು. ಆದರೆ ಕಂದಾಯ ದಾಖಲೆಗಳಲ್ಲಿ ಮಾತ್ರ ಇವರು ಇರುವುದು ಆಂಧ್ರ ಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನಲ್ಲಿ. ತಮ್ಮ `ಕನ್ನಡಾಂಧ್ರ' ಸ್ಥಿತಿಯನ್ನು ತಾವು ನಂಬಿದ ಕೃಷಿ ಪದ್ಧತಿಯ ಪ್ರಚಾರಕ್ಕೆ ಏಣಿಯಾಗಿಸಿಕೊಂಡಿರುವ ತಿಪ್ಪನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಎರಡೂ ರಾಜ್ಯಗಳ ನೂರಾರು ರೈತರಿಗೆ ಬದುಕು ಬದಲಿಸಿಕೊಳ್ಳುವ ವಿಧಾನದ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.12 ವರ್ಷಕ್ಕೆ ಮೊದಲು ಎಲ್ಲ ರಾಯಲಸೀಮೆ ರೈತರಂತೆ ಇವರೂ ಶೇಂಗಾ ಬೆಳೆಯನ್ನೇ ನಂಬಿದ್ದರು. ನಂತರ ಪಾವಗಡ ಸೀಮೆಯಲ್ಲಿ ಪ್ರಾರಂಭವಾದ ದಾಳಿಂಬೆ ಅಲೆಯಲ್ಲಿ ಕೊಚ್ಚಿ ಹೋದರು. `ವೈಜ್ಞಾನಿಕ' ಕೃಷಿ ಪದ್ಧತಿಯನ್ನು ಚಾಚೂತಪ್ಪದೆ ಅನುಸರಿಸಬೇಕೆಂದು, ಕೃಷಿ ವಿಜ್ಞಾನದಲ್ಲಿ ಎಂಎಸ್‌ಸಿ ಸ್ನಾತಕೋತ್ತರ ಪದವಿ ಪಡೆದಿರುವ ತಜ್ಞನನ್ನು ಸಲಹೆಗಾಗಿ ನೇಮಿಸಿಕೊಂಡರು. ಅದೇ ಉತ್ಸಾಹದಲ್ಲಿ 2000ನೇ ಇಸವಿಯಲ್ಲಿ ಸುಮಾರು 1200 ದಾಳಿಂಬೆ ಗಿಡಗಳನ್ನು ನೆಟ್ಟರು.ಅವುಗಳ ಆರೈಕೆಯ ಖರ್ಚು ಗಿಟ್ಟುವಷ್ಟೂ ಇಳುವರಿ ಬರಲಿಲ್ಲ. ಕೃಷಿ ಪಂಡಿತರ ಸಲಹೆಗಳನ್ನು ಅನುಸರಿಸಿ ರಾಸಾಯನಿಕ ಔಷಧಿಗಳನ್ನು ಸುರಿದು ಹೈರಾಣಾದರು. ಸದಾ ಒಂದಿಲ್ಲೊಂದು ರೋಗ, ಕೀಟ ಬಾಧೆಯಿಂದ ಗಿಡಗಳು ನರಳುತ್ತಿದ್ದವು. ಕರ್ನಾಟಕ ಮತ್ತು ಆಂಧ್ರದ ಹತ್ತಾರು ವಿಜ್ಞಾನಿಗಳ ಸಲಹೆ ಪಡೆದು, ಅವರು ಹೇಳಿದ ಔಷಧೋಪಚಾರ ಮಾಡಿದರು. ಆದರೂ ಗಿಡಗಳು ಚೇತರಿಸಿಕೊಳ್ಳಲಿಲ್ಲ. 2006ರಲ್ಲಿ ಕೃಷಿ ಸಾಲದ ಬಡ್ಡಿ ಕಟ್ಟಲು ಸಾಧ್ಯವಾಗದ ಸ್ಥಿತಿ ಎದುರಾದಾಗ ಜಮೀನನ್ನು ಇಡಿಯಾಗಿ ಮಾರಿ `ಕೈತೊಳೆದುಕೊಳ್ಳುವ' ಆಲೋಚನೆ ಮಾಡಿದರು.ದಾರಿ ತೋರಿದ ಪುಸ್ತಕ

ಈ ಹಂತದಲ್ಲಿ ತಿಪ್ಪೇಸ್ವಾಮಿ ಅವರ ಸ್ನೇಹಿತರೊಬ್ಬರು ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ವಿಧಾನದ ಪುಸ್ತಕ ನೀಡಿ, ಪ್ರಯತ್ನಿಸುವಂತೆ ಪ್ರೋತ್ಸಾಹಿಸಿದರು. ಆಗಾಗ ನಡೆಯುವ ನೈಸರ್ಗಿಕ ಕೃಷಿ ಕಾರ್ಯಾಗಾರಗಳಲ್ಲಿಯೂ ಭಾಗವಹಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. `ಇಷ್ಟು ವರ್ಷವೇ ಆಯ್ತಂತೆ, ಇನ್ನೆರೆಡು ವರ್ಷ ಪ್ರಯತ್ನಿಸ್ತೀನಿ. ಆಗ್ಲೂ ಆಗ್ದಿದ್ರೆ ಜಮೀನು ಮಾರಿ ಸಿಟಿ ಸೇರ‌್ತೀನಿ' ಎಂದು ಗಟ್ಟಿ ನಿರ್ಧಾರ ಮಾಡಿಕೊಂಡೇ ನೈಸರ್ಗಿಕ ಕೃಷಿ ವಿಧಾನ ಪ್ರಾರಂಭಿಸಿದರು.ರಾಸಾಯನಿಕ ತಿಂದು ಸತ್ವ ಕಳೆದುಕೊಂಡಿದ್ದ ದಾಳಿಂಬೆ ಗಿಡಗಳ ರೆಕ್ಕೆ ತರಿದು ಹಾಕಿದರು. ಜೀವಾಮೃತ- ಘನಾಮೃತಗಳ ನಿಯಮಿತ ಬಳಕೆ, ಕಾಲಕಾಲಕ್ಕೆ ವಿವಿಧ ಪೂರಕ ಸತ್ವಗಳ ಸಿಂಪಡನೆಯಿಂದ ತೋಟದ ಜೀವ ಧಾರಕ ಗುಣ ನಿಧಾನವಾಗಿ ಬೆಳೆಯಿತು. ಕತ್ತಾಳೆ ಬೇಲಿಯಿಂದ ಸಂರಕ್ಷಿತವಾಗಿರುವ ತಿಪ್ಪೇಸ್ವಾಮಿ ಅವರ ತೋಟದಲ್ಲಿ ಇಂದು ಸಾವಿರಾರು ಮಾವು, ಮೂಸಂಬಿ, ಸಪೋಟ, ಅಡಿಕೆ ಗಿಡಗಳಿವೆ. 45 ಹುಣಸೆ, 40 ತೆಂಗಿನಗಿಡಗಳೂ ನಳನಳಿಸುತ್ತಿವೆ. ಈ ಹಿಂದೆ ರಾಸಾಯನಿಕಗಳ ದಾಳಿಗೆ ಬಾಡಿ ಹೋಗಿದ್ದ ದಾಳಿಂಬೆ ಗಿಡಗಳ ಹಳೆ ಬೇರಿನಲ್ಲಿ ಹೊಸ ಆರೋಗ್ಯವಂತ ಚಿಗುರು ಎದ್ದು ಕಾಣುತ್ತಿದೆ. ಇದರ ಜೊತೆಗೆ ಹಸುಗಳ ಮೇವು ಹಾಗೂ ಮನೆ ಬಳಕೆಗೆಂದು ಜೋಳ, ಹೆಸರು, ಶೇಂಗಾ, ಹುರುಳಿಯನ್ನೂ ಬೆಳೆಯುತ್ತಾರೆ.ರಾಸಾಯನಿಕಗಳ ಬಳಕೆ ಸಂಪೂರ್ಣ ನಿಂತು ಹೋದ ನಂತರ ಗಿಣಿ, ಗೊರವಂಕ, ನವಿಲು ಸೇರಿದಂತೆ ಹತ್ತಾರು ಜಾತಿಯ ಸಾವಿರಾರು ಪಕ್ಷಿಗಳು ಪ್ರತಿದಿನ ತೋಟಕ್ಕೆ ಭೇಟಿ ನೀಡತೊಡಗಿದವು. ಗಿಡಗಳನ್ನು ಕಾಡುತ್ತಿದ್ದ ಕೀಟಬಾಧೆಯ ಪ್ರಮಾಣ ಅಚ್ಚರಿ ಎನಿಸುವಷ್ಟು ಪ್ರಮಾಣದಲ್ಲಿ ಕಡಿಮೆಯಾಯಿತು. `ನೋಡಿ ಸ್ವಾಮಿ, ಈ ಗಿಣಿಗಳಿಗೆ ಒಂದು ಸಪೋಟ ಹಣ್ಣನ್ನು ಪೂರ್ತಿ ತಿನ್ನೋಕೆ ಆಗಲ್ಲ. ಕಚ್ಚಿಕೊಂಡು ಹಾರೋ ತಾಕತ್ತೂ ಇಲ್ಲ. ಅದ್ಕೆ ಹೀಗೆ ಕಚ್ಚಿ, ಕೆಳಗೆ ಹಾಕಿ ಹಾಳು ಮಾಡ್ತಾವೆ. ಅವು ತಿಂದು ಬಿಟ್ಟಿದ್ದು ನಮಗೆ ಸಾಕು' ಎಂದು ಸಪೋಟ ಮರದ ಕೆಳಗೆ ಬಿದ್ದಿದ್ದ ಗಿಣಿ ಕಚ್ಚಿದ್ದ ಹಣ್ಣನ್ನು ನಗುತ್ತಾ ತೋರಿಸಿದರು ತಿಪ್ಪೇಸ್ವಾಮಿ.ಹಳ್ಳಿಕಾರ್ ತಳಿಯ 5 ಹಸುಗಳು ಹಾಗೂ 2 ಕರುಗಳು ನೈಸರ್ಗಿಕ ಕೃಷಿ ವಿಧಾನಕ್ಕೆ ಅಗತ್ಯವಾಗಿ ಬೇಕಾದ ಸೆಗಣಿ ಮತ್ತು ಗಂಜಲದ ಅಗತ್ಯವನ್ನು ಪೂರೈಸುತ್ತಿವೆ. ಬೆಂಗಳೂರಿನ `ಟೋಟಲ್ ಮಾಲ್' ಕಂಪೆನಿಯವರು ಇವರ ಜಮೀನಿನಿಂದಲೇ ಉತ್ತಮ ಧಾರಣೆಗೆ ಮಾವನ್ನು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಫಲದ ಭಾರಕ್ಕೆ ಬಾಗಿರುವ ಮೂಸಂಬಿ ಹಾಗೂ ಸಪೋಟ ಗಿಡಗಳು ಆರ್ಥಿಕ ಅಗತ್ಯಗಳನ್ನು ಪೂರೈಸುತ್ತಿವೆ.`ಕೇವಲ 6 ವರ್ಷದ ಹಿಂದೆ ಜಮೀನು ಮಾಡಿ, ಪಾಪರ್ ಆಗಿ, ಭೂಮಿ ಮಾರುವ ನಿರ್ಧಾರ ಮಾಡಿದ್ದೆ. ಒಂದು ಪುಸ್ತಕ ನನ್ನ ಕಣ್ತೆರೆಸಿತು. ಇಂದು ನಾನು ಕೃಷಿಯಲ್ಲಿ ಪ್ರಯೋಗ ಮಾಡಿರುವ ಯಶಸ್ವಿ ರೈತ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನೂರಾರು ರೈತರಿಗೆ ಮಾರ್ಗದರ್ಶನ ನೀಡಿದ್ದೇನೆ. ನನ್ನ ಯಶಸ್ಸು ರಾಯಲಸೀಮೆಯ ಸಾವಿರಾರು ಜನರಿಗೆ ಸ್ಫೂರ್ತಿ ನೀಡಿದೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ತಿಪ್ಪೇಸ್ವಾಮಿ.ನೈಸರ್ಗಿಕ ಗುಟ್ಟುಗಳು

ನೈಸರ್ಗಿಕ ವಿಧಾನದಲ್ಲಿ ಬೆಳೆಗಳು ಹುಲುಸಾಗಿ ಬೆಳೆಯುವಂತೆ ಮಾಡುವ ತಿಪ್ಪೇಸ್ವಾಮಿ ಅವರ ಕೆಲವು ಗುಟ್ಟು ಇಲ್ಲಿವೆ.

ಸೀತಾಫಲ, ದತ್ತೂರಿ, ಬೇವು, ಲಂಟಾನ, ಹೊಂಗೆ, ದಾಳಿಂಬೆ ಸೇರಿದಂತೆ ಹಲವು ಔಷಧೀಯ ಎಲೆಗಳನ್ನು ರುಬ್ಬಿ ಗಂಜಲದಲ್ಲಿ ನೆನೆಸಿಟ್ಟು ಈ ಮಿಶ್ರಣವನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡರೆ ತಯಾರಿಸಿದ ದಿನದಿಂದ 6 ತಿಂಗಳವರೆಗೆ ಬಳಸಬಹುದು. 100 ಲೀಟರ್ ನೀರಿಗೆ 5 ಲೀಟರ್‌ನಂತೆ ಈ ಕಷಾಯ ಬೆರೆಸಿ ಸಿಂಪಡಿಸಬಹುದು.ಬೇವಿನಸೊಪ್ಪನ್ನು ರುಬ್ಬಿ, ಗಂಜಲ- ಸೆಗಣಿ ಬೆರೆಸಿ 2 ದಿನ ನೆನೆಸಿ, 100 ಲೀಟರ್ ನೀರಿಗೆ 6 ಲೀಟರ್‌ನಂತೆ ಬೆರೆಸಿ ಇಡಿ ಗಿಡಕ್ಕೆ ಸಿಂಪಡಿಸುವುದು; 1 ಕೆಜಿ ಬೆಳ್ಳುಳ್ಳಿ, 2ಕೆಜಿ ಮೆಣಸಿನಕಾಯಿ, 1 ಕೆಜಿ ಹೊಗೆಸೊಪ್ಪು, 6 ಲೀಟರ್ ಗಂಜಲವನ್ನು ಚೆನ್ನಾಗಿ ರುಬ್ಬಿ 100 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು; 7 ವಿಧದ ಯಾವುದೇ ಧಾನ್ಯಗಳನ್ನು ಮೊಳಕೆ ಬರಿಸಿ, ರುಬ್ಬಿ, ನೀರಿಗೆ ಬೆರೆಸಿ ಸಿಂಪಡಿಸುವುದು. 100 ಲೀಟರ್ ನೀರಿಗೆ ಬಲಿತ ತೆಂಗಿನಕಾಯಿಯ ಎಳನೀರನ್ನು 5 ಲೀಟರ್‌ನಂತೆ ಬೆರೆಸಿ ಸಿಂಪಡಿಸುವುದು; ಹಾಲು, ಗಂಜಲ, ಸಗಣಿ, ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ, ಮಣ್ಣಿನ ಮಿಶ್ರಣವನ್ನು ನೀರಿಗೆ ಬೆರೆಸಿ ಹುದುಗು ಬಂದ ನಂತರ ಗಿಡಕ್ಕೆ ನೀಡುವುದು; ತಿಪ್ಪೆಯ ಸಗಣಿಗೆ ಬದುವಿನ ಮಣ್ಣು, ದ್ವಿದಳ ಧಾನ್ಯದ ಹಿಟ್ಟು, ಬೆಲ್ಲದ ಪುಡಿ, ಗಂಜಲವನ್ನು ಬೆರೆಸಿ, ಮಿಶ್ರಣವು ಮೃದುವಾದ ನಂತರ ಗಿಡಗಳಿಗೆ ನೀಡುವುದು.ತಿಪ್ಪೇಸ್ವಾಮಿ ಅವರ ಸಂಪರ್ಕಕ್ಕೆ 94496 43608.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry