ಅಂದು ತಿರಸ್ಕಾರ, ಇಂದು ಪುರಸ್ಕಾರ...

ಸೋಮವಾರ, ಮೇ 27, 2019
33 °C

ಅಂದು ತಿರಸ್ಕಾರ, ಇಂದು ಪುರಸ್ಕಾರ...

Published:
Updated:

ಲಂಡನ್ (ಪಿಟಿಐ): ನಲವತ್ತು ವರ್ಷಗಳ ಹಿಂದೆ ಲೀಸ್ಟರ್ ನಗರದಲ್ಲಿ ಯಾರಿಗೂ ಬೇಡವಾಗಿದ್ದ ಭಾರತೀಯರು ಇಂದು ಅಲ್ಲಿ ಎಲ್ಲರಿಗೂ ಬೇಕಾದವರಾಗಿದ್ದಾರೆ! 1972ರಲ್ಲಿ ಉಗಾಂಡದ ಇದಿ ಅಮಿನ್ ಆಡಳಿತವು, ಅಲ್ಲಿದ್ದ ಭಾರತೀಯರಿಗೆ 90 ದಿನಗಳ ಗಡುವಿನೊಳಗೆ ರಾಷ್ಟ್ರ ತೊರೆಯುವಂತೆ ಸೂಚಿಸಿತ್ತು.

 

ಅಷ್ಟೇ ಅಲ್ಲ, ಹೀಗೆ ರಾಷ್ಟ್ರ ಬಿಡುವವರು 55 ಪೌಂಡ್‌ಗಿಂತ ಹೆಚ್ಚು ಹಣ ಒಯ್ಯದಂತೆಯೂ ಅದು ಕಟ್ಟುಪಾಡು ಹಾಕಿತ್ತು. ಅಂತಹ ದುಃಸ್ಥಿತಿಯಲ್ಲಿ ಭಾರತೀಯರು ಮನೆಮಠ ಎಲ್ಲವನ್ನೂ ಬಿಟ್ಟು, ಬರಿಗೈಲಿ ಲೀಸ್ಟರ್ ನಗರಕ್ಕೆ ಬಂದಾಗ ಅವರಿಗೆ ಸಿಕ್ಕಿದ್ದು ಆತ್ಮೀಯ ಸ್ವಾಗತವಲ್ಲ, ಬದಲಿಗೆ ಸ್ವಾಭಿಮಾನವನ್ನು ತಿವಿಯುವ ತಿರಸ್ಕಾರ!ಲೀಸ್ಟರ್ ನಗರಾಡಳಿತವು ದಿನ ಪತ್ರಿಕೆಯೊಂದರಲ್ಲಿ, “ನಿಮ್ಮ ಹಾಗೂ ನಿಮ್ಮ ಕುಟುಂಬದ ಹಿತದೃಷ್ಟಿಯಿಂದ ಲೀಸೆಸ್ಟರ್‌ಗೆ ಆಗಮಿಸದಿರುವುದೇ ಒಳಿತು” ಎಂದು ಭಾರತೀಯವರನ್ನು ಉದ್ದೇಶವಾಗಿಟ್ಟುಕೊಂಡು ಜಾಹೀರಾತನ್ನೇ ನೀಡಿತ್ತು.ಆದರೆ ಹೆಚ್ಚಾಗಿ ಗುಜರಾತ್ ಮೂಲದವರಿದ್ದ ಭಾರತೀಯ ಸಮೂಹ ಧೃತಿಗೆಡಲಿಲ್ಲ. ಸ್ವಾಭಿಮಾನಕ್ಕೆ ಆದ ಘಾಸಿಯನ್ನೇ ಕ್ರಿಯಾಶೀಲತೆಗೆ ಪ್ರೇರಣೆಯಾಗಿ ಬಳಸಿಕೊಂಡಿತು. ವ್ಯಾಪಾರ, ಉದ್ದಿಮೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿದ ಭಾರತೀಯರು ಪರಿಶ್ರಮ ಹಾಗೂ ಶ್ರದ್ಧೆಯಿಂದ ದುಡಿದು ಅಭಿವೃದ್ಧಿ ಸಾಧಿಸಿದರು; ತಮಗಷ್ಟೇ ಅಲ್ಲದೆ, ನಾಡಿಗಾಗಿಯೂ ಸಂಪತ್ತು ಸೃಷ್ಟಿಸಿದರು; ವಿವಿಧ ವೃತ್ತಿಗಳಲ್ಲಿ ಉನ್ನತ ಸ್ಥಾನಕ್ಕೇರಿದರು.ಈಗ ಈ ನಗರವು ಸದಾ ಚಟುವಟಿಕೆಗಳಿಂದ ಕೂಡಿದ, ಬಹುಮುಖಿ ಸಂಸ್ಕೃತಿಯ ಹಾಗೂ ತಜ್ಞರು ಅಧ್ಯಯನ ಮಾಡಲು ತವಕಿಸುವ ನಗರವಾಗಿ ಮಾರ್ಪಟ್ಟಿದೆ. ಯಾವ ನಗರಡಾಳಿತಅಂದು ನಗರಕ್ಕೆ ಬರದಂತೆ ಜಾಹೀರಾತು ನೀಡಿತ್ತೋ, ಅದೇ ನಗರಡಾಳಿತ ಇವತ್ತು ಭಾರತೀಯರ ಕೊಡುಗೆಯನ್ನು ಶ್ಲಾಘಿಸುತ್ತಾ, ಅವರ ಚಟುವಟಿಕೆಗಳನ್ನು ಉತ್ತೇಜಿಸಲು ತುದಿಗಾಲ ಮೇಲೆ ನಿಂತಿರುತ್ತದೆ; ಭಾರತೀಯರ ಹಲವು ಆಚರಣೆಗಳನ್ನು ಪ್ರಾಯೋಜಿಸುತ್ತದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry