ಗುರುವಾರ , ನವೆಂಬರ್ 21, 2019
21 °C

ಅಂದು ದೇಶದ ಗಮನ ಸೆಳೆದಿತ್ತು ಶಿಕಾರಿಪುರ

Published:
Updated:
ಅಂದು ದೇಶದ ಗಮನ ಸೆಳೆದಿತ್ತು ಶಿಕಾರಿಪುರ

ಶಿವಮೊಗ್ಗ: ಅದು 2008ರ ವಿಧಾನಸಭಾ ಚುನಾವಣೆ. ರಾಜ್ಯವಷ್ಟೇ ಅಲ್ಲ; ಇಡೀ ದೇಶವೇ ಶಿಕಾರಿಪುರ ಕ್ಷೇತ್ರದತ್ತ ಕುತೂಹಲದ ಕಣ್ಣು ನೆಟ್ಟಿತ್ತು. ಶಿಕಾರಿಪುರ ಅಕ್ಷರಶಃ ಅಂದು ರಾಜಕೀಯ ರಣರಂಗವಾಗಿ ಪರಿವರ್ತನೆಯಾಗಿತ್ತು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸಮರಕ್ಕೆ ವೇದಿಕೆಯಾಗಿತ್ತು.`ಮುಖ್ಯಮಂತ್ರಿ ಅಭ್ಯರ್ಥಿ' ಎಂದೇ ಬಿಂಬಿತರಾಗಿದ್ದ ಬಿ.ಎಸ್. ಯಡಿಯೂರಪ್ಪ, ರಾಜಕೀಯ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನಡುವಿನ ಕದನದಿಂದ ಕ್ಷೇತ್ರ ಪ್ರತಿಷ್ಠೆಯ ಕಣವಾಗಿತ್ತು. ಶಿಕಾರಿಪುರಕ್ಕೆ ಇನ್ನಿಲ್ಲದ ಮಹತ್ವ ಬಂದಿತ್ತು.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಬಂಗಾರಪ್ಪ ಸಮಾಜವಾದಿ ಪಕ್ಷದ ಹುರಿಯಾಳು. ಪ್ರತಿಷ್ಠೆಯ ಕಣವಾಗಿದ್ದರಿಂದ ವಿವಿಧ ಪಕ್ಷಗಳ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಬಂದು ಪ್ರಚಾರ ಮಾಡಿದ್ದರು. ರಾಷ್ಟ್ರಮಟ್ಟದ ಮಾಧ್ಯಮಗಳು ತಿಂಗಳುಗಟ್ಟಲೇ ಶಿಕಾರಿಪುರದಲ್ಲೇ ಠಿಕಾಣಿ ಹೂಡಿದ್ದವು.ಅಂದು ಬಂಗಾರಪ್ಪ ಸಮಾಜವಾದಿ ಪಕ್ಷದ ಸಂಸತ್ ಸದಸ್ಯ ಬೇರೆ. ಆಡಳಿತ ಹಾಗೂ ವಿರೋಧ ಪಕ್ಷಗಳ ಪ್ರಬಲ ಪೈಪೋಟಿಯ ನಡುವೆಯೂ ಬಂಗಾರಪ್ಪ 2005ರಲ್ಲಿ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಸೊರಬಕ್ಕಿಂತ ಶಿಕಾರಿಪುರ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ಮತಗಳು ಬಂದಿದ್ದವು. ಈ ಹುರುಪಿನಿಂದಲೇ ಅವರು ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರಿಗೆ ಮುಖಾಮುಖಿಯಾಗಲು ಮುಂದಾಗಿದ್ದರು.ಯಡಿಯೂರಪ್ಪ ಅಂದು ಕೇವಲ ಎಂಟು ದಿನದ ಮುಖ್ಯಮಂತ್ರಿ. ಜೆಡಿಎಸ್ ಜತೆಗಿನ ನಂಟು ಕಳಚಿಕೊಂಡು ಹೊಸ ಹೋರಾಟಕ್ಕೆ ಸಜ್ಜಾಗಿದ್ದರು. ಇಂತಹ ಸಂದರ್ಭದಲ್ಲಿ ಅನ್ಯ ಪಕ್ಷಗಳ ಅಭ್ಯರ್ಥಿಗಳು ಯಾರು ಎಂದು ತಲಾಶ್ ಮಾಡುತ್ತಿದ್ದಾಗ ದಿಢೀರ್ ಎಂದು ಬಂಗಾರಪ್ಪ ತಾವು ಶಿಕಾರಿಪುರದಲ್ಲಿ ಸ್ಪರ್ಧೆಗಿಳಿಯುವುದಾಗಿ ಘೋಷಣೆ ಮಾಡಿದ್ದರು.ಬಂಗಾರಪ್ಪ ಸ್ಪರ್ಧೆ ಬಗ್ಗೆ ಆರಂಭದಲ್ಲಿ ಯಡಿಯೂರಪ್ಪ, `ಬಂಗಾರಪ್ಪ ಹಿರಿಯರು; ಅವರು ಎಲ್ಲಿಂದ ಬೇಕಾದರೂ ಸ್ಪರ್ಧಿಸಲು ಸ್ವತಂತ್ರರು' ಎನ್ನುತ್ತಿದ್ದವರು, ಕೊನೆಗೆ ಬಂಗಾರಪ್ಪ ಸ್ಪರ್ಧೆ ಖಚಿತಗೊಂಡ ಮೇಲೆ, `ಯಡಿಯೂರಪ್ಪ ಗೆದ್ದರೆ ಮುಖ್ಯಮಂತ್ರಿ ಆಗುತ್ತಾನೆ; ಬಂಗಾರಪ್ಪ ಗೆದ್ದರೆ ಏನಾಗುತ್ತಾರೆ?' ಎಂದು ಮತದಾರರ ಬಳಿ ಪ್ರಶ್ನೆ ಮಾಡಲು ಆರಂಭಿಸಿದರು.ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳನ್ನೇ ನಿಲ್ಲಿಸದೇ ಯಡಿಯೂರಪ್ಪ ವಿರುದ್ಧದ ಸಮರಕ್ಕೆ ಇನ್ನಷ್ಟು ಕಿಚ್ಚು ಹಚ್ಚಿದವು. ಬಂಗಾರಪ್ಪ ನಾಮಪತ್ರ ಸಲ್ಲಿಸುವ ದಿನದಂದು ಬೃಹತ್ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಅಂದು ಸೇರಿದ್ದ ಜನ ನೋಡಿ ಯಡಿಯೂರಪ್ಪಗೆ ಈ ಬಾರಿ ಕಷ್ಟ ಇದೆ ಎಂದೇ  ರಾಜಕೀಯ ವಿಶ್ಲೇಷಣೆಕಾರರು ಭಾವಿಸಿದ್ದರು.ತೀವ್ರ ಪೈಪೋಟಿಯ ಈ ಚುನಾವಣೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಅತಿ ಹೆಚ್ಚು ಬಾರಿ ಚುನಾವಣೆಗೆ ಸ್ಪರ್ಧಿಸಿ ಗಿನ್ನಿಸ್ ದಾಖಲೆ ಮಾಡಿದ್ದ ಡಾ.ಪದ್ಮರಾಜ್ ಕೂಡ ಆಂಧ್ರಪ್ರದೇಶದಿಂದ ಅದೃಷ್ಟ ಪರೀಕ್ಷೆಗೆ ಆಗಮಿಸಿದ್ದರು. ಈಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಯಡಿಯೂರಪ್ಪ ಪರ ಪ್ರಚಾರ ಮಾಡಿದ್ದರೆ, ಬಂಗಾರಪ್ಪ ಪರ ನಟಿ ಹಾಗೂ ಸಂಸತ್ ಸದಸ್ಯೆ ಜಯಾಪ್ರದಾ ನಗು ಚೆಲ್ಲಿ ಹೋಗಿದ್ದರು.    ಬಂಗಾರಪ್ಪ ನಾಮಪತ್ರ ಸಲ್ಲಿಸುವ ದಿನದಂದು ಅವರ ಜತೆಗೆ ನಿಂತವರು ಕಾಂಗ್ರೆಸ್ ಮುಖಂಡ ನಗರದ ಮಹದೇವಪ್ಪ. ಯಡಿಯೂರಪ್ಪ ಜತೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿ ಕಡೆಗೆ ಅಂದು ಹೆಜ್ಜೆ ಹಾಕಿದವರು ಈ ಚುನಾವಣೆಯ (2013) ಎದುರಾಳಿ, ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಹಾಗೂ ಮತ್ತೊಬ್ಬ ಈಗಿನ ರಾಜಕೀಯದ ಕಡುವೈರಿ ಡಿ.ವಿ. ಸದಾನಂದಗೌಡ.ಈ ಮತಸಮರದಲ್ಲಿ ಬಿಜೆಪಿಯ ಯಡಿಯೂರಪ್ಪ 83,491 ಮತ ಪಡೆದು, 45,927 ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಿದರು.ಯಡಿಯೂರಪ್ಪ ಬೆಂಬಲಿಗರು ಪ್ರಸ್ತುತ ಚುನಾವಣೆ ಪ್ರಚಾರದಲ್ಲೂ 2008ರ ಸಮರವನ್ನು ಮೆಲುಕು ಹಾಕುತ್ತಿದ್ದಾರೆ. ಅಂದು ಯಡಿಯೂರಪ್ಪ ಅವರನ್ನು ಸೋಲಿಸಲು ಪಕ್ಷದವರೇ ಸಂಚು ರೂಪಿಸಿದ್ದರು ಎಂದು ಆರೋಪಿಸುತ್ತಿದ್ದಾರೆ. ಪ್ರಚಾರಕ್ಕೆ ಬಂದಿದ್ದ ರಾಜನಾಥಸಿಂಗ್, ಯಡಿಯೂರಪ್ಪ ಅವರನ್ನು ನಾವು ವಿಧಾನಪರಿಷತ್ ಸದಸ್ಯರಾಗಿ ಮಾಡಿಬೇಕಾದರೂ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ ಹೋಗಿದ್ದರ ಅರ್ಥವೇನು? ಎಂದು ಈಗ ಪ್ರಶ್ನಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)