ಮಂಗಳವಾರ, ನವೆಂಬರ್ 19, 2019
29 °C

ಅಂದು ಪಾಲಿಕೆ ಅಧಿಕಾರಿಇಂದು ಕಾಂಗ್ರೆಸ್ ಅಭ್ಯರ್ಥಿ

Published:
Updated:

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದಕ್ಕೆ ನಿವೃತ್ತ ಅಧಿಕಾರಿ ಜೆ.ಆರ್.ಲೋಬೊ ಅವರಿಗೆ ಟಿಕೆಟ್ ದೊರೆತಿದೆ.

ಕೆಎಎಸ್ ಅಧಿಕಾರಿಯಾಗಿದ್ದ ಜಾನ್ ರಿಚರ್ಡ್ ಲೋಬೊ ಅವರು ಕಾಂಗ್ರೆಸ್ ಸೇರುವುದಕ್ಕಾಗಿಯೇ 10 ತಿಂಗಳ ಹಿಂದೆ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರಿಗೆ ಆಗ ಇನ್ನೂ ಒಂದೂವರೆ ವರ್ಷ ಸೇವಾವಧಿ ಇತ್ತು.ಅವರು ಪಕ್ಷ ಸೇರುವುದಕ್ಕೆ ಪಕ್ಷದೊಳಗೆ ಭಾರಿ ವಿರೋಧ ಕೂಡ ಇತ್ತು. ಕಾರಣ ಕ್ರೈಸ್ತ ಸಮುದಾಯಕ್ಕೆ ಸೇರಿದ ಮತ್ತೊಬ್ಬ ನಾಯಕ ಐವನ್ ಡಿಸೋಜ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಸಾರ್ವಜನಿಕ ಸಭೆಗಳಲ್ಲಿ ವಿರೋಧಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಪರಿಪಾಠ ಇಟ್ಟುಕೊಳ್ಳದ ಲೋಬೊ ಅವರನ್ನೇ ಪಕ್ಷ ಕೊನೆಗೂ ನೆಚ್ಚಿಕೊಂಡು ಟಿಕೆಟ್ ನೀಡಿದೆ.ಅಭಿವೃದ್ಧಿಗೆ ಯಾವ ರಾಜಕೀಯ ಲೇಪವೂ ಇರಬಾರದು. ಜನಸೇವಕರಾದ ಮೇಲೆ ಜನರಿಗೆ ನೆರವಾಗುವಂತಹ ಯೋಜನೆಗಳು, ಯೋಚನೆಗಳನ್ನು ನಾವು ಮಾಡಬೇಕು. ಹಲವಾರು ಕನಸು ಕಟ್ಟಿಕೊಂಡು ಇಲ್ಲಿಗೆ ಬಂದಿದ್ದು, ಗೆದ್ದುಬಂದರೆ ಅದಕ್ಕೆ ರೂಪು ಕೊಡುವ ಪ್ರಯತ್ನ ನಡೆಸುವ ವಾಗ್ದಾನ ಲೋಬೊ ಅವರದು.ನೀವು ರಾಜಕೀಯಕ್ಕೆ ಬಂದುದು ಏಕೆ? ಅಧಿಕಾರಿಯಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿತ್ತಲ್ಲ ಎಂದು ಕೇಳಿದಾಗ, `ಅಧಿಕಾರಿಯಾಗಿ ಕೆಲಸ ಮಾಡುವುದಕ್ಕೆ ನಮಗೂ ಒಂದು ಮಿತಿ ಇತ್ತು. ನನ್ನ ಕ್ಷೇತ್ರದ್ಲ್ಲಲಿ ನನ್ನ ಇತಿಮಿತಿಯಲ್ಲಿ ನಾನು ಉತ್ತಮ ಕೆಲಸ ಮಾಡಿದ್ದೇನೆ ಎಂಬ ಆತ್ಮವಿಶ್ವಾಸ ಇದೆ. ಆದರೆ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಎಂಬುದು ಬಹಳ ದೊಡ್ಡ ಪಾತ್ರ ನಿರ್ವಹಿಸಬೇಕಾಗಿದೆ. ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಭಿವೃದ್ಧಿಯ ಮಹತ್ವದ ಮಾನದಂಡಗಳು. ಹೀಗಾಗಿ ಶಾಸಕಾಂಗದ ನಿರ್ಧಾರದಲ್ಲಿ ಬದಲಾವಣೆ ಆಗಬೇಕು ಎಂಬ ಕಾರಣಕ್ಕೆ ನಾನು ರಾಜಕೀಯ ಪ್ರವೇಶಿಸಿದೆ' ಎಂದು ಲೋಬೊ ಹೇಳುತ್ತಾರೆ.ಮಂಗಳೂರು ಹೊರವಲಯದಲ್ಲಿ ಸುಮಾರು 370 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ ಪಿಲಿಕುಳ ನಿಸರ್ಗಧಾಮವನ್ನು ಕಟ್ಟಿ ಬೆಳೆಸುವಲ್ಲಿ ಜೆ.ಆರ್.ಲೋಬೊ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಹಲವೆಡೆ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಕೇಂದ್ರ ಸ್ಥಾನಿಕ ಸಹಾಯಕರಾಗಿ, ಕುಡ್ಸೆಂಪ್ ಉಪ ಯೋಜನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)