ಅಂಧತ್ವದಲ್ಲೂಅಂದದ ಹಗ್ಗ!

7

ಅಂಧತ್ವದಲ್ಲೂಅಂದದ ಹಗ್ಗ!

Published:
Updated:
ಅಂಧತ್ವದಲ್ಲೂಅಂದದ ಹಗ್ಗ!

ಹೆಸರು ಮಹದೇವ್. ಊರು ನಂಜನಗೂಡು ತಾಲ್ಲೂಕಿನ ಹುಸ್ಕೂರು ಗ್ರಾಮ. ಹುಟ್ಟಿದ ನಾಲ್ಕೇ ತಿಂಗಳಿಗೆ ತಾಯಿ ಇಹಲೋಕ ತ್ಯಜಿಸಿದರೆ, ಬಾಲಕನಾಗಿರುವಾಗಲೇ ತಂದೆಯೂ ತಾಯಿಯ ಹಾದಿ ಹಿಡಿದರು.ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತನ್ನ ವಯಸ್ಸಿನ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿದ್ದರೆ, ಈತ ಮಾತ್ರ ಬಿಸಿಲಲ್ಲಿ ಒಣಗಿ ಸಾಹುಕಾರರ ಮನೆಯ ದನ, ಎಮ್ಮೆ ಕಾಯಬೇಕಾದ ಪರಿಸ್ಥಿತಿ. ಇದು ಪ್ರತಿ ದಿನ ಹೊಟ್ಟೆ ತುಂಬಿಸುವ ಕಾಯಕ. ಪ್ರೌಢಾವಸ್ಥೆಯವರೆಗೂ ಇದೇ ಕಾಯಕ.ಎಳೆಯ ವಯಸ್ಸಿನಲ್ಲಿಯೇ ವಿವಾಹ, ಪತ್ನಿಯ ಜೊತೆ ಕೊಡಗಿನ ಕಾಫಿ ತೋಟದಲ್ಲಿ ಕೆಲಸಕ್ಕೆ ತೊಡಗಿ, ಆಲೆಮನೆಯಲ್ಲಿ ಕೆಲಸವನ್ನೂ ಮಾಡತೊಡಗಿದರು. ಹುಟ್ಟಿನಿಂದ ಇಲ್ಲಿಯವರೆಗೂ ಕಷ್ಟದ ಸುರಿಮಳೆಯನ್ನೇ ನೋಡಿ, ಇನ್ನೇನು ಬದುಕನ್ನು ರೂಪಿಸಿಕೊಳ್ಳಬೇಕು ಎಂದುಕೊಳ್ಳುತ್ತಿರುವಾಗಲೇ ವಿಧಿ ಮತ್ತೆ ಕೈಕೊಟ್ಟಿತು. ಅವರ ಕಣ್ಣನ್ನು ಕಿತ್ತುಕೊಂಡಿತು.ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಜ್ಞೆತಪ್ಪಿ ಕುಸಿದು ಬಿದ್ದರು. ಆಸ್ಪತ್ರೆಗೆ ಸೇರಿಸಿದಾಗ ಕಾಲುಗಳಿಗೇನೋ ಶಕ್ತಿ ಬಂದಿತು. ಆದರೆ ಕಣ್ಣುಗಳು ಮಂಜಾಗತೊಡಗಿದವು. ಕೆಲವೇ ದಿನಗಳಲ್ಲಿ ಎರಡು ಕಣ್ಣುಗಳು ಕತ್ತಲೆಯನ್ನಲ್ಲದೆ ಮತ್ತೆನನ್ನೂ ಗುರುತಿಸಲಾದವು. ಆಗ ಅವರಿಗೆ ಕೇವಲ 28 ವರ್ಷ. ಅಲ್ಲಿಂದ ಬಾಳಿನುದ್ದಕ್ಕೂ ಕತ್ತಲೆಯೇ.ಕೈ ಹಿಡಿದ ಹಗ್ಗ

ಇನ್ನೂ ದಿಕ್ಕು ತೋಚದೆ ಕುಳಿತಿದ್ದ ಅವರಿಗೆ ಕೈ ಹಿಡಿದಿದ್ದು ಹಗ್ಗ ನೇಯುವುದು. ಅಕ್ಕ ಪಕ್ಕದ ಪರಿಚಯದ ಹಳ್ಳಿಗಳಿಗೆ ತೆರಳಿ ಹಗ್ಗದ ನೇಯ್ಗೆ. ಇದರಿಂದ ಬರುವ ಅಲ್ಪ ಹಣ ಹಾಗೂ ಸರ್ಕಾರ ನೀಡುವ 400 ರೂಪಾಯಿಗಳಿಂದ ಇವರ ಜೀವನ ಸಾಗಬೇಕಿದೆ. ದೂರದೂರದ ಊರುಗಳಲ್ಲಿ ಕೆಲಸ ಮಾಡುವ ಇಬ್ಬರು ಗಂಡು ಮಕ್ಕಳಿದ್ದರೂ ನೆಮ್ಮದಿ ಇಲ್ಲದಂತಾಗಿದೆ.ಪ್ರತಿದಿನ ಕೋಲಿನ ಸಹಾಯದಿಂದ ದೂರದ ಹಳ್ಳಿಗಳಿಗೆ ನಡೆದುಕೊಂಡು ಹೋಗಿ ನೇಯ್ಗೆಗಳನ್ನು ಮಾರಾಟ ಮಾಡುತ್ತಾರೆ. ಎಲ್ಲ ಕಷ್ಟಗಳ ನಡುವೆಯೂ ಲವಲವಿಕೆಯಿಂದಲೇ ಮಾತನಾಡುತ್ತಾರೆ. `ಬಾಳು ಅಂಧಕಾರದಲ್ಲಿದ್ದರೂ ದುಡಿದು ಬದುಕುವ ಛಲ ಮಾತ್ರ ಕುಂದಿಲ್ಲ, ಕುಂದುವುದೂ ಇಲ್ಲ. ಕಣ್ಣಿಗೆ ಕವಿದಿರುವ ಕತ್ತಲು ನನ್ನ ಕೆಲಸಕ್ಕೆ ಅಡ್ಡಿಯುಂಟುಮಾಡಿಲ್ಲ' ಎನ್ನುವ ಧೀಶಕ್ತಿ ಇವರದ್ದು. ಒಮ್ಮೆ ಕೆಲಸದಲ್ಲಿ ನಿರತರಾದರೆಂದರೆ, ಅವರ ವೈಖರಿ ಕಣ್ಣಿದ್ದವರೂ ಇವರ ಮುಂದೆ ಅಂಧರನ್ನಾಗಿ ಮಾಡುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry