ಶುಕ್ರವಾರ, ಏಪ್ರಿಲ್ 23, 2021
24 °C

ಅಂಧರಿಗೆ ಆಶಾಕಿರಣ ಜೈವಿಕ ಕಣ್ಣು

ಡಾ. ಎಚ್.ಎಸ್. ಮೋಹನ್ Updated:

ಅಕ್ಷರ ಗಾತ್ರ : | |

ಇರುಳುಗುರುಡತನ ಅಥವಾ ರಾತ್ರಿ ದೃಷ್ಟಿಮಾಂದ್ಯ ಕಣ್ಣಿನ ಒಂದು ರೋಗಲಕ್ಷಣ. ಇದರಲ್ಲಿ ವ್ಯಕ್ತಿಗೆ ರಾತ್ರಿ ಹೊತ್ತು ಅಥವಾ ಕಡಿಮೆ ಬೆಳಕಿನಲ್ಲಿ ದೃಷ್ಟಿ ಮಂಜಾಗುತ್ತದೆ ಅಥವಾ ಕುಂಠಿತಗೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ‘ಎ’ ಜೀವಸತ್ವದ ಕೊರತೆ ಮತ್ತು ಕಣ್ಣಿನ ಅಕ್ಷಿಪಟಲದ ಕಾಯಿಲೆ  ‘ರೆಟಿನೈಟಿಸ್ ಪಿಗ್‌ಮೆಂಟೊಸಾ’.ಶಾಲೆಯ ಹುಡುಗರಲ್ಲಿ ಕಾಣಿಸಿಕೊಳ್ಳುತ್ತಿದ್ದ ‘ಎ’ ಜೀವಸತ್ವದ ಕೊರತೆ ಕಳೆದ 25-30 ವರ್ಷಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ರೆಟಿನೈಟಿಸ್ ಪಿಗ್‌ಮೆಂಟೊಸಾ ಕಾಯಿಲೆ ಕಣ್ಣಿನ ಅಕ್ಷಿಪಟಲದ ಡಿಜನರೇಟಿವ್ ಕಾಯಿಲೆಗಳ ಗುಂಪಿಗೆ ಸೇರಿದೆ. ಸಾಮಾನ್ಯವಾಗಿ ಇದು ಹದಿಹರೆಯದವರಲ್ಲಿ 20-30 ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆ, ನಿಧಾನವಾಗಿ ಕಾಯಿಲೆಯ ಪ್ರಮಾಣ ಹೆಚ್ಚುತ್ತಾ, ಅಂಧತ್ವದ ಅಂಶ ಜಾಸ್ತಿಯಾಗುತ್ತಾ ಹೋಗುತ್ತದೆ.ಈ ಪ್ರಮಾಣ ವ್ಯಕ್ತಿ ವ್ಯಕ್ತಿಗಳಲ್ಲಿ ಭಿನ್ನವಾಗಿರುತ್ತದೆ. ಈ ಕಾಯಿಲೆಗೆ ಒಳಗಾದ ಹೆಚ್ಚಿನವರು 40 ವರ್ಷ ತಲುಪುವುದರಲ್ಲಿ ಕುರುಡರಾಗುತ್ತಾರೆ ಎಂಬುದು ದೌರ್ಭಾಗ್ಯ. ಕೆಲವರಿಗೆ 20 ಡಿಗ್ರಿಯಷ್ಟು ಮಾತ್ರ ಮಧ್ಯಭಾಗದ ದೃಷ್ಟಿ ಉಳಿದಿರಬಹುದು. ಅಂದರೆ ನೇರವಾಗಿ ಒಂದು ವಸ್ತುವನ್ನು ದಿಟ್ಟಿಸಿ ನೋಡಿದರೆ ಆ ವಸ್ತುವಿನ ಮಧ್ಯದ ಸ್ವಲ್ಪ ಭಾಗ ಅಸ್ಪಷ್ಟವಾಗಿ ಕಾಣಿಸುತ್ತದೆ. ಇದು ವಂಶವಾಹಿಗಳಿಂದ ಬರುವ ಕಾಯಿಲೆ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಅನುವಂಶಿಕವಾಗಿರುತ್ತದೆ.ಈಗ ನಾವು ಕಣ್ಣಿನ ಅಕ್ಷಿಪಟಲದತ್ತ ಸ್ವಲ್ಪ ಗಮನ ಹರಿಸೋಣ. ಎಲ್ಲರ ಅಕ್ಷಿಪಟಲದಲ್ಲಿ ಬೆಳಕನ್ನು ಗ್ರಹಿಸುವ ಸೂಕ್ಷ್ಮ ಅಂಗಗಳನ್ನು ಒಳಗೊಂಡ ಒಂದು ಪದರವಿರುತ್ತದೆ. ಈ ಪದರದಲ್ಲಿರುವ ಸೂಕ್ಷ್ಮ ಜೀವಕೋಶಗಳು ಬೆಳಕನ್ನು ವಿದ್ಯುಚ್ಛಕ್ತಿಯಾಗಿ ಮಾರ್ಪಡಿಸಿ ದೃಷ್ಟಿನರವಾದ ಆಪ್ಟಿಕ್ ನರದ ಮೂಲಕ ಮೆದುಳಿಗೆ ರವಾನಿಸುತ್ತವೆ. ಆಗ ನಮಗೆ ಆಕೃತಿ ಅಥವಾ ವಸ್ತುವಿನ ಸ್ಪಷ್ಟತೆ ತಿಳಿದು ದೃಷ್ಟಿ ಗೋಚರವಾಗುತ್ತದೆ.ರೆಟಿನೈಟಿಸ್ ಪಿಗ್‌ಮೆಂಟೊಸಾ ಕಾಯಿಲೆಯಲ್ಲಿ ಅಕ್ಷಿಪಟಲದಲ್ಲಿ ಬೆಳಕನ್ನು ಗ್ರಹಿಸುವ ಶಕ್ತಿ ಕುಂಠಿತಗೊಂಡಿರುತ್ತದೆ. ಆದರೆ ಮೆದುಳಿಗೆ ಸಂದೇಶ ರವಾನಿಸುವ ನರಗಳ ಶಕ್ತಿ ಹೆಚ್ಚಿನ ಸಂದರ್ಭಗಳಲ್ಲಿ ಸರಿಯಿರುತ್ತದೆ. ಈ ಕಾಯಿಲೆಯಲ್ಲಿ ಬೆಳಕನ್ನು ಗ್ರಹಿಸುವ ಜೀವಕೋಶಗಳಾದ ಶಲಾಕೆ  ( RODS  ) ಮತ್ತು ಶಂಖಗಳು  (CONES) ನಿಧಾನವಾಗಿ ಸಾಯುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಶಲಾಕೆಗಳು ಕಾಯಿಲೆಗೆ ಒಳಗಾಗುತ್ತವೆ. ಇವು ಅಕ್ಷಿಪಟಲದ ಹೊರಗಿನ ಭಾಗದಲ್ಲಿ ಹೆಚ್ಚಿರುತ್ತದೆ.ಕಡಿಮೆ ಬೆಳಕಿನಲ್ಲಿ ಅಂದರೆ ಸಂಜೆ ಹಾಗೂ ರಾತ್ರಿಯ ದೃಷ್ಟಿಗೆ ಇವು ನಮಗೆ ಹೆಚ್ಚು ಅವಶ್ಯಕ. ಹಾಗಾಗಿ ಅಂತಹ ವ್ಯಕ್ತಿಗಳಲ್ಲಿ ಮೊದಲು ಹೊರಗಿನ ಭಾಗದ ದೃಷ್ಟಿ ಮತ್ತು ರಾತ್ರಿಯ ದೃಷ್ಟಿ ಕುಂಠಿತಗೊಳ್ಳುತ್ತದೆ. ಅಂದರೆ ಅಂತಹ ವ್ಯಕ್ತಿ ಮೊದಲು ರಾತ್ರಿ ಕಾಣುವುದಿಲ್ಲ, ಕತ್ತಲೆಯಲ್ಲಿ ಕಣ್ಣು ನಿಧಾನವಾಗಿ ಮಂಜಾಗುತ್ತದೆ ಎಂಬ ಲಕ್ಷಣದಿಂದ ಕಣ್ಣಿನ ವೈದ್ಯರಲ್ಲಿ ಬರುತ್ತಾರೆ. ಶಂಕಗಳು ನಂತರ ಕಾಯಿಲೆಯಿಂದ ತೊಂದರೆಗೊಳಗಾಗುತ್ತವೆ. ಅಕ್ಷಿಪಟಲ ಮಧ್ಯಭಾಗದಲ್ಲಿರುವ ಇವು ಕಾಯಿಲೆಗೆ ತುತ್ತಾದಾಗ, ಅಂತಹ ವ್ಯಕ್ತಿಗೆ ಮಧ್ಯಭಾಗದ ದೃಷ್ಟಿ ಹಾಗೂ ಬಣ್ಣಗಳನ್ನು ನೋಡುವ ಶಕ್ತಿ ಕುಂದುತ್ತವೆ. ಅಂದರೆ ಅಂತಹ ವ್ಯಕ್ತಿ ಕುರುಡನಾದಂತೆಯೇ ಸರಿ.

ಚಿಕಿತ್ಸೆ: ಇದಕ್ಕೆ ಇದುವರೆಗೆ ಹಲವು ಚಿಕಿತ್ಸೆಗಳನ್ನು ಪ್ರಯತ್ನಿಸಿದರೂ ಸಮಾಧಾನಕರ ಚಿಕಿತ್ಸೆ ಲಭ್ಯವಿಲ್ಲ.ಆದರೆ ಈಗ ಹೊಸದಾಗಿ ಸಂಶೋಧಿಸಿದ ‘ಜೈವಿಕ ಕಣ್ಣು’ ಆಶಾಭಾವನೆ ಮೂಡಿಸುತ್ತದೆ.ಆಧುನಿಕ ಜಗತ್ತಿನ ವಿಡಿಯೋ ಕ್ಯಾಮೆರಾಗಳ ಕರಾಮತ್ತು ನಮಗೆ ನಿಮಗೆಲ್ಲಾ ಗೊತ್ತು. ಆದರೆ ಈಗ ಕಣ್ಣಿನಲ್ಲಿ ಅಳವಡಿಸಿದ ಸಣ್ಣ ವಿಡಿಯೋ ಕ್ಯಾಮೆರಾ ವೈದ್ಯಕೀಯ ಜಗತ್ತಿನಲ್ಲಿ ಶಬ್ದಮಾಡುತ್ತಿದೆ. ದೃಷ್ಟಿಹೀನರಿಗೆ ದೃಷ್ಟಿ ಕೊಡುತ್ತಿದೆ. ಕಳೆದ 2-3 ವರ್ಷಗಳಲ್ಲಿ 25-30 ಜನರಿಗೆ ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾಗಳಲ್ಲಿ ಸ್ವಲ್ಪವಾದರೂ ದೃಷ್ಟಿ ದೊರಕಿಸುವಲ್ಲಿ ನೇತ್ರ ವೈದ್ಯರು, ವಿಜ್ಞಾನಿಗಳು ಸಫಲರಾಗಿದ್ದಾರೆ.ಜೈವಿಕ ಕೃತಕ ಕಣ್ಣು  (ಬಯೊನಿಕ್ ಐಸ್) ಅಥವಾ ಜೈವಿಕ ಕಣ್ಣಿನ ಇಂಪ್ಲಾಂಟ್‌ಗಳು ಎಂದು ಕರೆಯಲಾಗುವ ಈ ಉಪಕರಣ ಅಥವಾ ವ್ಯವಸ್ಥೆ, ಮುಖ್ಯವಾಗಿ ಕಣ್ಣಿನ ಅಕ್ಷಿಪಟಲದ ‘ರೆಟಿನೈಟಿಸ್ ಪಿಗ್‌ಮೆಂಟೊಸಾ’ ಕಾಯಿಲೆಗಳಲ್ಲಿ ಉಪಯೋಗವಾಗುತ್ತದೆ.ಅಮೆರಿಕದ ಕ್ಯಾಲಿಫೋರ್ನಿಯಾ-ಲಾಸ್‌ಏಂಜಲೀಸಿನ ಡೊಹೆನಿ ಕಣ್ಣಿನ ವಿಜ್ಞಾನ ಸಂಸ್ಥೆಯ ಕಣ್ಣಿನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಮಾರ್ಕ್ ಹುಮಾಯೂನ್ ಈ ಜೈವಿಕ ಕೃತಕ ಕಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ. (ಇದು ಆರ್ಗನ್-2, ಅಕ್ಷಿಪಟಲದ ಇಂಪ್ಲಾಂಟ್ ಯೋಜನೆಯ ಒಂದು ಅಂಗ). ಇಂಪ್ಲಾಂಟ್‌ನ ಒಂದು ಭಾಗ, ಕಣ್ಣಿನ ಕಪ್ಪುಭಾಗದ(ಪಾರದರ್ಶಕ ಪಟಲ ಕಾರ್ನಿಯಾ) ಬದಿಯ ತೆಳ್ಳಗಿನ ಕೆಂಪುಪದರ ಕಂಜಂಕ್ಟೈವ್‌ದಲ್ಲಿರುತ್ತದೆ. ಇನ್ನೊಂದು ಭಾಗ ಕಣ್ಣಿನ ಹಿಂಭಾಗದ ಅಕ್ಷಿಪಟಲದಲ್ಲಿರುತ್ತದೆ. ಇವೆರಡನ್ನೂ ನೇತ್ರವೈದ್ಯರು ಸೂಕ್ಷ್ಮ ರೀತಿಯ ಶಸ್ತ್ರಕ್ರಿಯೆ ಮಾಡಿ ಆಯಾ ಭಾಗದಲ್ಲಿ ಇರಿಸುತ್ತಾರೆ.ಈ ಶಸ್ತ್ರಕ್ರಿಯೆಗೆ ಸುಮಾರು 3 ಗಂಟೆಗಳ ಅವಧಿ ಬೇಕಾದೀತು. ಬಟಾಣಿಯಷ್ಟು ಚಿಕ್ಕ ಈ ಇಂಪ್ಲಾಂಟ್‌ಗಳು ಹೊರಗಿನಿಂದ ಯಾರಿಗೂ ಕಾಣಿಸುವುದಿಲ್ಲ. ಇವು ಕಣ್ಣಿನ ದೃಷ್ಟಿನರವಾದ ಆಪ್ಟಿಕ್ ನರಕ್ಕೆ ಸಂದೇಶ ರವಾನಿಸುವ ವಿಡಿಯೋ ಕ್ಯಾಮೆರಾಗಳು. ಇವು ರೋಗಿಗಳಿಗೆ ಚಲನೆ ಮತ್ತು ತಡೆಗಳನ್ನು ಗುರುತಿಸಲು ಸಹಾಯ ಮಾಡುವಷ್ಟು ಕಪ್ಪು ಬಿಳುಪಿನ ಅಂದರೆ ವರ್ಣರಹಿತ ದೃಷ್ಟಿಯನ್ನು ಕೊಡುತ್ತವೆ. ಇಂತಹ ವ್ಯಕ್ತಿ ಹೊರಗಿನಿಂದ ಒಂದು ಕಪ್ಪು ಕನ್ನಡಕ ಧರಿಸಬೇಕಾಗುತ್ತದೆ.ಈ ಕಪ್ಪು ಕನ್ನಡಕದಲ್ಲಿ ಹೊರಗಿನ ವಸ್ತುಗಳನ್ನು ಗ್ರಹಿಸುವ ವಿಡಿಯೋ ಕ್ಯಾಮೆರಾ ಇರುತ್ತದೆ. ಇದನ್ನು ‘ಆರ್ಗಸ್ ಉಪಕರಣ’ ಎಂದು ಕರೆಯುತ್ತಾರೆ. ಕಡಿಮೆ ಶಕ್ತಿಯುಳ್ಳ ಕಣ್ಣಿನೊಳಗೆ ಅಳವಡಿಸಬಲ್ಲ ಕಣ್ಣಿನ ಚಲನೆಗೆ ಹೊಂದುವ ಇವು ಅತಿ ಸಣ್ಣ ಕ್ಯಾಮೆರಾಗಳು. ಇವು ಅಕ್ಷಿಪಟಲದ ಹಿಂದೆ ಅಳವಡಿಸಲಾದ ಕೃತಕ ಉಪಕರಣ ಅಥವಾ ಇಂಪ್ಲಾಂಟ್‌ಗೆ (ಕೃತಕ ಅಕ್ಷಿಪಟ) ಯಾವ ತಂತಿಗಳ ಸಹಾಯವಿಲ್ಲದೆ ಸಂದೇಶ ರವಾನಿಸುತ್ತದೆ. ಈ ಉಪಕರಣ ಎಲೆಕ್ಟ್ರೋಡ್ ಸಂಕೇತಗಳನ್ನು ಗ್ರಹಿಸಿ ಅವುಗಳನ್ನು ಕಪ್ಪು ಬಿಳುಪಿನ ಒರಟಾದ ಆಕೃತಿಯಾಗಿ ಮಾರ್ಪಡಿಸುತ್ತದೆ. ಅದು ಆಪ್ಟಿಕ್ ನರದ ಮೂಲಕ ಮೆದುಳಿಗೆ ರವಾನೆಯಾಗುತ್ತದೆ.ರೆಟಿನೈಟಿಸ್ ಪಿಗ್‌ಮೆಂಟೊಸಾ ರೋಗಿಗಳಲ್ಲಿ ಕಣ್ಣಿನಿಂದ ಮೆದುಳಿಗೆ ಸಂದೇಶ ರವಾನಿಸುವ ವಾಹಕಗಳಲ್ಲಿಯೇ ತೊಂದರೆ ಇರುತ್ತದೆ. ಈ ಕೆಲಸವನ್ನು ಚಿಕ್ಕ ಇಂಪ್ಲಾಂಟ್‌ಗಳು ಮಾಡುತ್ತವೆ. ಈ ಇಂಪ್ಲಾಂಟ್‌ಗಳಿಗೆ ಶಕ್ತಿ ಕೊಡುವ ಪ್ರೊಸೆಸಿಂಗ್ ಯುನಿಟ್‌ಗಳು ವಾಕ್‌ಮನ್ ರೀತಿಯಲ್ಲಿರುತ್ತವೆ. ಅದನ್ನು ಸೊಂಟದ ಬೆಲ್ಟಿಗೆ ಸಿಕ್ಕಿಸಿಕೊಳ್ಳಬಹುದು. ಬಟ್ಟೆಯ ಅಡಿಯಲ್ಲಿರಿಸಬಹುದು, ಕೈಯಲ್ಲಿಟ್ಟುಕೊಳ್ಳಬಹುದು ಅಥವಾ ಪರ್ಸ್‌ನಲ್ಲಿಯೂ ಇಟ್ಟುಕೊಳ್ಳಬಹುದು. ಈ ಇಡೀ ಉಪಕರಣದ (ಜೈವಿಕ ಕಣ್ಣು) ಬೆಲೆ ಸದ್ಯ 15,000 ಅಮೆರಿಕನ್ ಡಾಲರ್‌ಗಳು.  ಅಕ್ಷಿಪಟಲದ ಎಷ್ಟೋ ಕಾಯಿಲೆಗಳಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಈ ದಿನಗಳಲ್ಲಿ ಈ ಹೊಸ ಸಂಶೋಧನೆ, ಚಿಕಿತ್ಸೆ ನಿಜಕ್ಕೂ ಆಶಾದಾಯಕ. ಸದ್ಯ ಅದು ‘ರೆಟಿಸೈಟಿಸ್ ಪಿಗ್‌ಮೆಂಟೊಸಾ’ ಕಾಯಿಲೆಗೆ ಮಾತ್ರ ಸೀಮಿತಗೊಂಡಿದ್ದರೂ, ಕಣ್ಣಿನ ದೃಷ್ಟಿನರ ಆಪ್ಟಿಕ್ ನರದಲ್ಲಿ ಬೆಳಕನ್ನು ಗ್ರಹಿಸುವ ಶಕ್ತಿ ಇದ್ದರೆ ಯಾವುದೇ ಅಂಧತ್ವವನ್ನು ಇದು ದೂರ ಮಾಡುವ ಕಾಲ ದೂರವಿಲ್ಲ ಎಂದು ವಿಜ್ಞಾನಿಗಳು ನೇತ್ರವೈದ್ಯರ ಆಶಾಭಾವನೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.