ಶುಕ್ರವಾರ, ನವೆಂಬರ್ 15, 2019
20 °C

ಅಂಧರಿಗೆ ಸೌಕರ್ಯ ಒದಗಿಸದ ಸರ್ಕಾರ: ವಿಷಾದ

Published:
Updated:

ಬೆಂಗಳೂರು: `ರಸ್ತೆಗಳಲ್ಲಿ ಸಾಮಾನ್ಯ ಜನರೇ ಓಡಾಡಲು ತೊಂದರೆಯಾಗುತ್ತಿರೋ ಈ ಕಾಲದಲ್ಲಿ ಅಂಧರು ಹೇಗೆ ನಿರ್ಭಯವಾಗಿ ಓಡಾಡಲು ಸಾಧ್ಯ. ರಸ್ತೆಗಳಲ್ಲಿ ಕೆಂಪು ಸಿಗ್ನಲ್ ಇದ್ದಾಗ ಯಾವುದೇ ವಾಹನ ಚಲಿಸಿದರೂ ಜೋರಾದ ಶಬ್ದ ಬರುವ ವ್ಯವಸ್ಥೆಯನ್ನು ಕೆಲ ಕಡೆಗಳಲ್ಲಿ ಮಾತ್ರ ಮಾಡಲಾಗಿದೆ.ಆದರೆ ನಮ್ಮ ದುರದೃಷ್ಟ ಅವು ಸಹ ಸರಿಯಾಗಿ ಕೆಲಸ ಮಾಡದ ಸ್ಥಿತಿ ತಲುಪಿವೆ. ಇಂಥ ಕನಿಷ್ಠ ಸೌಕರ್ಯವನ್ನೂ ಸರ್ಕಾರದ ಕೈಯಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ' ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಮಾಜಿ ಅಧ್ಯಕ್ಷ ಪರಬ್ರಹ್ಮಮ್ ದೂರಿದರು.ನಗರದಲ್ಲಿ ರಾಷ್ಟ್ರೀಯ ಅಂಧರ ಸಂಸ್ಥೆಯ (ನ್ಯಾಷನಲ್ ಅಸೋಸಿಯೇಷನ್ ಫಾರ್ ಬ್ಲೈಂಡ್) ಕರ್ನಾಟಕ ಶಾಖೆ ಈಚೆಗೆ ಏರ್ಪಡಿಸಿದ್ದ ಪದವಿಪ್ರದಾನ ಸಮಾರಂಭದಲ್ಲಿ ಮಾತನಾಡಿದರು.`ಹಿರೋಶಿಮಾದಲ್ಲಿ ಅಣು ಬಾಂಬ್ ಸ್ಫೋಟದ ನಂತರ ಅಲ್ಲಿ ಜನಿಸುವ ಮಕ್ಕಳು ಅಂಧತ್ವದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಜಪಾನ್ ಸರ್ಕಾರ ಅಂಧರು ಸ್ವಾವಲಂಬನೆಯ ಜೀವನ ನಡೆಸುವ ಸಲುವಾಗಿ ರಸ್ತೆಗಳಿಂದ ಹಿಡಿದು ಪ್ರತಿಯೊಂದು ರಂಗದಲ್ಲೂ ಅವರಿಗೆ ಅನುಕೂಲವಾಗುವ ರೀತಿ ವ್ಯವಸ್ಥೆಯನ್ನು ಮಾಡಿದೆ. ಆದರೆ ನಮ್ಮಲ್ಲಿ ಅಂಧರ ಸ್ವಾವಲಂಬನೆ ಬಗ್ಗೆ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಜವಾಬ್ದಾರಿ ಎಲ್ಲಿದೆ' ಎಂದು ಬೇಸರ ವ್ಯಕ್ತಪಡಿಸಿದರು.ಉದ್ಯಮಿ ನವೀನ್ ಲಕ್ಕೂರು ಅವರು ಮಾತನಾಡಿ, `ಅಂಧರು ಅಂಗವಿಕಲರಲ್ಲ. ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ, ಅದನ್ನು ಬಳಸಿಕೊಳ್ಳುವುದನ್ನು ಕಲಿಯಬೇಕು' ಎಂದು ಸಲಹೆ ನೀಡಿದರು.ಶಾಖೆಯ ಉಪಾಧ್ಯಕ್ಷ ಗೋಪಾಲ್ ಪದ್ಮನಾಭನ್ ಅವರು ಮಾತನಾಡಿ, `ಸಂಸ್ಥೆ ರಾಜ್ಯದ 6 ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಅಲ್ಲಿಯೂ ಅಂಧರಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಸದ್ಯದಲ್ಲೇ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಶಾಖೆಗಳನ್ನು ತೆರೆಯುವ ಯೋಜನೆ ಹೊಂದಿದೆ' ಎಂದರು.ಪುನಶ್ಚೇತನ ಹಾಗೂ ಮೂಲಕ ಶಿಕ್ಷಣ ತರಬೇತಿ ಕೇಂದ್ರದಲ್ಲಿ ತರಬೇತಿ ಮುಗಿಸಿದ ಒಟ್ಟು 40 ಅಂಧ ವಿದ್ಯಾರ್ಥಿಗಳಿಗೆ ನವೀನ್ ಲಕ್ಕೂರು ಪದವಿ ಪ್ರದಾನ ಮಾಡಿದರು. ಜತೆಗೆ ಬಿಳಿಯ ಬೆತ್ತ ವಿತರಿಸಿದರು.ತರಬೇತಿ ಪಡೆದ ಶ್ವೇತಾ ಮಂಡಲ್ ಮಾತನಾಡಿ, `ತರಬೇತಿಯಿಂದ ನನ್ನಲ್ಲಿ ಆತ್ಮವಿಶ್ವಾಸ ಮೂಡಿದೆ. ಸ್ವಾವಲಂಬಿಯಾಗಿ ಜೀವಿಸಲು ನನಗೂ ಅರ್ಹತೆ ಇದೆ ಎಂದು ಕಲಿತ್ತಿದ್ದೇನೆ'  ಎಂದು ನುಡಿದರು.

ಪ್ರತಿಕ್ರಿಯಿಸಿ (+)