ಭಾನುವಾರ, ಜೂಲೈ 12, 2020
22 °C

ಅಂಧರ ಬಾಳಿಗೆ ಅಕ್ಷರ ಬೆಳಕು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಧರ ಬಾಳಿಗೆ ಅಕ್ಷರ ಬೆಳಕು...

ಸೊರಬ: ಹುಟ್ಟು ಅಂಧತ್ವವನ್ನು ಮೆಟ್ಟಿ ನಿಂತು ಅಪೂರ್ವ ಸಾಧನೆ ಮಾಡಿದ ಯುವಕನೊಬ್ಬನ ಯಶೋಗಾಥೆ ಇಲ್ಲಿದೆ.

 ತಾಲ್ಲೂಕಿನ ಅಬಸಿ ಗ್ರಾಮದ ಶ್ರೀನಾಥ್ ಅವರ ಏಕೈಕ ಪುತ್ರ, ಹುಟ್ಟು ಅಂಧರಾದ ಟಿ.ಎಸ್. ಶ್ರೀಧರ್ ಅವರು ಅಂಧರು ಅಂತರ್ಜಾಲದಲ್ಲಿ ಕನ್ನಡ ಅಕ್ಷರಗಳನ್ನು ಓದಬಲ್ಲ ‘ಇ ಸ್ಪೀಕ್, ಸ್ಕ್ರೀನ್ ರೀಡರ್’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅಂಧರ ಬಾಳಿಗೆ ಅಕ್ಷರದ ಬೆಳಕು ನೀಡುವ ಮಹತ್ಕಾರ್ಯ ಮಾಡಿದ್ದಾರೆ.6 ವರ್ಷಗಳ ಹಿಂದೆಯೇ ಬೆಳಕಿಗೆ ಬಂದು, ಕಣ್ಣಿದ್ದವರಿಗೆ ಗೋಚರ ಆಗದಿದ್ದ ಈ ತಂತ್ರಾಂಶ, ಅಂಧರೊಬ್ಬರ ಕಣ್ಣಿಗೆ ಬಿದ್ದು, ಅಭಿವೃದ್ಧಿಗೊಂಡಿದೆ. ಈ ತಂತ್ರಾಂಶದ ಸಹಾಯದಿಂದ ಸಾಮಾನ್ಯರಂತೆ ಅಂಧರೂ ಸರಾಗವಾಗಿ ಕನ್ನಡವನ್ನು ಓದಬಹುದು. ‘ಯೂನಿಕೋಡ್’ ಕನ್ನಡ ಅಕ್ಷರ ಇರುವ ಯಾವುದೇ ಕನ್ನಡದ ವೆಬ್‌ಸೈಟ್‌ಗಳನ್ನು ಸಂದರ್ಶಿಸಿ, ಯಾವುದೇ ವಿಷಯವನ್ನು ಧ್ವನಿಯ ಮೂಲಕ ತಿಳಿದುಕೊಳ್ಳಬಹುದು.ಕಂಪ್ಯೂಟರ್ ಪರದೆ ಮೇಲೆ ಮೂಡುವ ಯಾವುದೇ ಪಠ್ಯವನ್ನು ‘ಟೆಕ್ಸ್ಟ್ ಟು ಸ್ಪೀಚ್’ ವಿಶೇಷ ತಂತ್ರಾಂಶದ ಮೂಲಕ ಮಾತಿನ ರೂಪಕ್ಕೆ ಪರಿವರ್ತಿಸುವ ‘ಸ್ಕ್ರೀನ್ ರೀಡರ್’ ತಂತ್ರಾಂಶ ಈ ಮೊದಲು ಇಂಗ್ಲಿಷ್‌ನಲ್ಲಿ ಲಭ್ಯ ಇತ್ತು. ಜೊನಾಥನ್ ಡಡ್ಡಿಂಗ್ಟನ್ ಎಂಬ ವ್ಯಕ್ತಿ ‘ಟೆಕ್ಸ್ಟ್ ಟು ಸ್ಪೀಚ್’ ತಂತ್ರಾಂಶವನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಒಟ್ಟು 74 ವಿವಿಧ ಭಾಷೆಗಳು ಸೇರಿವೆ. ಆಯಾ ಭಾಷೆಯನ್ನು ಮಾತನಾಡುವ ವ್ಯಕ್ತಿಗಳ ನೆರವಿನಿಂದ ವಿವಿಧ ಭಾಷೆಗಳನ್ನು ಅಭಿವೃದ್ಧಿಪಡಿಸುವ ಡಡ್ಡಿಂಗ್ಟನ್, ಅನೇಕ ಅಂಧರಿಗೆ ನೆರವಾಗಿದ್ದಾರೆ.ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ, ತಮಿಳಿನೊಂದಿಗೆ ಈಗ ಕನ್ನಡವೂ ಸೇರ್ಪಡೆಗೊಂಡಿರುವುದು  ಮಹತ್ಸಾಧನೆ. ಈಗಾಗಲೇ ಅನೇಕ ಅಂಧರು ಕನ್ನಡ ತಂತ್ರಾಂಶದ ಪ್ರಯೋಜನ ಹೊಂದುತ್ತಿದ್ದಾರೆ ಎಂದು ಶ್ರೀಧರ್ ಮಾಹಿತಿ ನೀಡಿದ್ದಾರೆ.ಶ್ರೀಧರ್‌ಗೆ ಈಗ ಇನ್ನೂ 23ರ ಹರೆಯ. ಚಿಕ್ಕಮಗಳೂರಿನ ಆಶಾಕಿರಣ ಅಂಧರ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಮೈಸೂರಿನ ಜೆಎಸ್‌ಎಸ್‌ಪಿಪಿಎಚ್‌ನಲ್ಲಿ ‘ಕಂಪ್ಯೂಟರ್ ಅಪ್ಲಿಕೇಶನ್ಸ್ ಫಾರ್ ದಿ ವಿಶ್ಯುವಲಿ ಇಂಪೇರ್ಡ್‌ ಡಿಪ್ಲೋಮಾ’ ಪಡೆದಿದ್ದಾರೆ. ತಂದೆ, ತಾಯಿ ಹಾಗೂ ಸಹೋದರ ವಿನಾಯಕ ಶ್ರೀಧರ್ ಸಾಧನೆಗೆ ಬೆಂಗಾವಲಾಗಿದ್ದಾರೆ.‘ನನ್ನನ್ನು ಬೆಳಕಿಗೆ ತರುವುದಕ್ಕಿಂತ ನನ್ನ ತಂತ್ರಾಂಶವನ್ನು ಬೆಳಕಿಗೆ ತನ್ನಿ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರ ಮುಂದೆ ಮನವಿ ಮಾಡುವ ಶ್ರೀಧರ್‌ಗೆ, ರಾಜ್ಯಾದ್ಯಂತ ತಂತ್ರಾಂಶ ಎಲ್ಲರಿಗೂ ಉಚಿತವಾಗಿ ದೊರಕಬೇಕು ಎಂಬ ಮಹದಾಸೆ ಇದೆ.ಯಾವುದೇ ವಿಷಯ ಕುರಿತು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ‘ಜ್ಞಾನದ ಸಂಪನ್ಮೂಲವನ್ನು ಒದಗಿಸುವ ಮೂಲಕ ಭಾಷೆಯನ್ನು ಬೆಳೆಸಬೇಕೇ ಹೊರತು, ದಿನಾಚರಣೆ, ಸಮ್ಮೇಳನಗಳಿಂದ ಅಲ್ಲ’ ಎನ್ನುವ ಅವರು, ಸೃಜನಶೀಲತೆ ಇಲ್ಲದ ಮನುಷ್ಯ ಇದ್ದರೂ ಸತ್ತಂತೆ ಎಂದು ನಿಷ್ಠುರವಾಗಿ ನುಡಿಯುತ್ತಾರೆ. ಇಂದಲ್ಲ ನಾಳೆ ಕನ್ನಡದಲ್ಲಿ ‘ಸ್ಪೀಚ್ ಟು ಟೆಕ್ಸ್ಟ್’ ತಂತ್ರಾಂಶ ಅಭಿವೃದ್ಧಿ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.ತಂತ್ರಾಂಶವನ್ನು ಅಂಧರಿಗೆ ಮಾತ್ರ ಅಲ್ಲದೇ ಕನ್ನಡದಲ್ಲಿ ಕಂಪ್ಯೂಟರ್ ಮಾತನಾಡಿಸಲು ಬಯಸುವ ಎಲ್ಲರಿಗೂ ಉಚಿತವಾಗಿ ನೀಡಬೇಕು ಎಂಬ ಉದ್ದೇಶದಿಂದ ಎನ್‌ವಿಡಿಎ ಎಂಬ ಉಚಿತ ಹಾಗೂ ‘ಓಪನ್ ಸೋರ್ಸ್ ಸ್ಕ್ರೀನ್ ರೀಡರ್’ ತಂತ್ರಾಂಶ ನೀಡುತ್ತಿದ್ದಾರೆ.ಆಸಕ್ತರು http://dl.dropbox.com/u/88129 04/nvda.zip ರನ್ ಮಾಡುವ ಮೂಲಕ ಕನ್ನಡದಲ್ಲಿ ಕಂಪ್ಯೂಟರನ್ನು ಮಾತನಾಡಿಸಬಹುದು. ಮಾಹಿತಿಗೆ: tssabs@ gmail.com ಇ-ಮೇಲ್/ಮೊ9980989171.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.