ಗುರುವಾರ , ಮೇ 19, 2022
25 °C

ಅಂಧರ ಬಾಳು ಬೆಳಕಾಯಿತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:

   `ಬಾಳು ಬೆಳಕಾಯಿತು

ಒಲವಿನ ಹೂವೆ ನಿನ್ನ ಸೇರಿ

ಈಗ ಬಾಳು ಬೆಳಕಾಯಿತು...'ಕುವೆಂಪುನಗರದ ಆದಿಶಕ್ತಿ ಬಂದಂತಮ್ಮ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಒಲವಿನ ಗೀತೆ ಕೇಳಿಸಿತು. ಸಂಪೂರ್ಣ ಅಂಧರಾದ ಪ್ರೇಮಿಗಳು ಹೊಸಬಾಳಿಗೆ ಕಾಲಿಟ್ಟ ಶುಭ ಮುಹೂರ್ತವದು! `ಪ್ರೇಮಿಗಳು ಕುರುಡರಾದರೂ ಪ್ರೀತಿ ಕುರುಡಲ್ಲ' ಎಂಬುದನ್ನು ಈ ನವ ಜೋಡಿ ಸಾಬೀತುಪಡಿಸಿತು.ಹೌದು, ಚಿಕ್ಕಮಗಳೂರಿನವರಾದ 32 ವರ್ಷದ ಸಿ. ದೇವರಾಜ್ ಹಾಗೂ ಮೈಸೂರಿನ ದೇವಯ್ಯನವರ ಮಗಳು 30 ವರ್ಷದ ಪಾರ್ವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿ ತಳಿರು- ತೋರಣಗಳ ಸಡಗರವಿರಲಿಲ್ಲ, ಮಂಗಳವಾದ್ಯ, ಮಂತ್ರ-ತಂತ್ರಗಳ ಗೊಡವೆ ಇರಲಿಲ್ಲ, ವರದಕ್ಷಿಣೆ- ಊಟೋಪಚಾರ- ಬಂಧುಗಳ ಗಲಾಟೆ ಯಾವುದೂ ಇರಲಿಲ್ಲ.ಸರಳವಾಗಿ ನಡೆದ ಆ ಮದುವೆಯಲ್ಲಿ ಸಂಭ್ರಮ ಮಾತ್ರ ಇಮ್ಮಡಿಗೊಂಡಿತ್ತು. ಅಚ್ಚರಿ ಎಂದರೆ ಇವರಿಬ್ಬರದೂ ಪ್ರೇಮ ವಿವಾಹ. ಈ ವಿಶಿಷ್ಟ ಮದುವೆಗೆ ಕಾರಣರಾದವರು ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು.ಹುಟ್ಟು ಅಂಧರಾದ ದೇವರಾಜ್ ಮಂಗಳೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ತನ್ನ 5ನೇ ವಯಸ್ಸಿನಲ್ಲೇ ದೃಷ್ಟಿ ಕಳೆದುಕೊಂಡ ಪಾರ್ವತಿ ಬಾಳಸಂಗಾತಿಗಾಗಿ ಹುಡುಕಾಟ ನಡೆಸಿದ್ದರು. ಒಂದೂವರೆ ವರ್ಷದ ಹಿಂದೆ ಸ್ನೇಹಿತರೇ ಇವರಿಬ್ಬರಿಗೂ ಪರಿಚಯ ಮಾಡಿಸಿದರು. ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡ ಈ ಅಂಧ ಜೋಡಿ ಸ್ನೇಹ ಬೆಳೆಸಿಕೊಂಡಿತು.ದಿನಗಳೆದಂತೆ ಭಾವನೆಗಳು ಬಾನಾಡಿಗಳಾದವು, ಆಸೆಗಳು ಜಲಪಾತಗಳಾದವು. ಅವರು ಒಬ್ಬರನ್ನೊಬ್ಬರು  ಮುಂದೆ ನಿಂತು ನೋಡಿಲೇ ಇಲ್ಲ. `ಪ್ರೀತಿ ಹುಟ್ಟುವುದೇ ಕಣ್ಣು-ಕಣ್ಣು ಕಲೆತಾಗ' ಎಂಬುದಕ್ಕೆ ಸವಾಲಾಗಿ ನಿಂತರು. ಬದುಕಬೇಕೆಂಬ ಹಂಬಲ ಅವರಿಬ್ಬರನ್ನು ಒಂದುಗೂಡಿಸಿತು.ಇವರ ಎರಡೂ ಕುಟುಂಬಗಳು ಬಡತನದ ದವಡೆಗೆ ಸಿಲುಕಿವೆ. ಇದನ್ನು ಗಮನಿಸಿದ ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಲ್ಲಿ ಈ ಪ್ರೇಮಿಗಳ ಮದುವೆ ಮಾಡಲು ಮುಂದಾದರು. 25 ಸಾವಿರ ರೂಪಾಯಿ ಕಲೆಹಾಕಿ ಸರಳವಾಗಿ ಮದುವೆ ಮಾಡಿದರು. ಬಂದಂತಮ್ಮ ದೇವಸ್ಥಾನದಲ್ಲಿ ಬಂಧುಗಳ ಸಮ್ಮುಖದಲ್ಲಿ ಅರ್ಚಕರು ಈ ಜೋಡಿಗೆ ದಾಂಪತ್ಯ ಮಂತ್ರ ಹೇಳಿದರು. ಹಾರ ಬದಲಾಯಿಸಿಕೊಂಡು, ಮಾಂಗಲ್ಯ ಕಟ್ಟಿದಾಕ್ಷಣ ಅಲ್ಲಿದ್ದ ಬಂಧುಗಳ ಕಣ್ಣಾಲಿಗಳು ತೇವಗೊಂಡವು.ಸ್ವಾವಲಂಬಿಯಾಗಿ ಬದುಕುತ್ತೇವೆ

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಈ ನವದಂಪತಿ, `ಯಾರಾದರೂ ಉದ್ಯೋಗಕ್ಕೆ ಸಹಾಯ ಮಾಡಿದರೆ ಸಾಕು; ನಾವು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತೇವೆ. ನಾವು ಬಯಸಿದಂತೆಯೇ ಬದುಕು ಸಿಕ್ಕಿದೆ.ಒಬ್ಬರನ್ನೊಬ್ಬರು ಅಕ್ಕರೆಯಿಂದ ನೋಡಿಕೊಳ್ಳುತ್ತೇವೆ. ಮುಂದಿನದು ದೇವರ ಕೃಪೆ...' ಎಂದು ಭಾವುಕರಾದರು.ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜು, ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಕೆ. ರೋಶನ್, ಗೌರವಾಧ್ಯಕ್ಷ ಎನ್. ಶಂಕರ್, ನಗರ ಘಟಕದ ಅಧ್ಯಕ್ಷ ಆರ್. ನವೀನಕುಮಾರ್ ಹಾಗೂ ಬಂಧುಗಳು ದಂಪತಿಯನ್ನು ಹರಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.