ಅಂಧರ ಮನಕ್ಕೆ ಕ್ರಿಕೆಟ್ ಆನಂದ

7

ಅಂಧರ ಮನಕ್ಕೆ ಕ್ರಿಕೆಟ್ ಆನಂದ

Published:
Updated:
ಅಂಧರ ಮನಕ್ಕೆ ಕ್ರಿಕೆಟ್ ಆನಂದ

`ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ಖಂಡಿತ ತೆರೆದಿರುತ್ತದೆ. ಆದರೆ ಮುಚ್ಚಿದ ಬಾಗಿಲೆಡೆಗೆ ನಾವು ತುಂಬಾ ಹೊತ್ತು ನೋಡುತ್ತಿರುತ್ತೇವೆಯೇ ಹೊರತು ನಮಗಾಗಿ ತೆರೆದ ಬಾಗಿಲಿನತ್ತ ಕಣ್ಣು ಹರಿಸುವುದೇ ಇಲ್ಲ~ನೋಡಬೇಕೆಂದರೆ ಕಾಣದ ಹಾಗೂ ಆಲಿಸಬೇಕೆಂದರೆ ಕೇಳದ ಅಮೆರಿಕದ ಖ್ಯಾತ ಲೇಖಕಿ ಹೆಲೆನ್ ಕೆಲ್ಲರ್ ಅಂಗವಿಕಲರಿಗೆ ಸ್ಫೂರ್ತಿ ಉಂಟು ಮಾಡಲು ಹೇಳಿದ ಮಾತಿದು. ಅದೆಷ್ಟು ಮಂದಿಗೆ ಈ ಮಾತು ಸ್ಫೂರ್ತಿ ಆಗಿದೆಯೋ ಗೊತ್ತಿಲ್ಲ. ಆದರೆ ಶಿವಮೊಗ್ಗದ ಹುಡುಗ ಶೇಖರ್ ನಾಯಕ್ ಈಗ ಎಲ್ಲರಂತೆ ಬದುಕಲು ಆ ನುಡಿಗಳು ಪ್ರೇರಣೆ ಆಗಿವೆ.ಅಂದ ಹಾಗೆ, ಮಂದ ದೃಷ್ಟಿಯ ಶೇಖರ್ ಈಗ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ. ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಆಡಿ ರಾಜ್ಯಕ್ಕೆ ಹೆಮ್ಮೆ ತಂದ ಆಟಗಾರ. ಆದರೆ ಈ ಹುಡುಗ ನಡೆದು ಬಂದ ಹಾದಿಯ ಕಥೆಗೆ ಕಿವಿ ಕೊಟ್ಟರೆ ನಿಮ್ಮ ಹೃದಯ ಕಲಕದೇ ಇರದು, ಕಣ್ಣಂಚಿನಲ್ಲಿ ನೀರು ಜಿನುಗದೇ ಇರದು.ಶೇಖರ್ ಅವರ ಅಮ್ಮ ಜಮಿಲಾ ಬಾಯಿ ಕೂಡ ಅಂಧರು. ಅಷ್ಟೇ ಅಲ್ಲ, ಜಮಿಲಾ ಅವರ ನಾಲ್ಕು ಮಂದಿ ಸಹೋದರಿಯರಿಗೂ ಕಣ್ಣು ಕಾಣಿಸುವುದಿಲ್ಲವಂತೆ. `ನಿನಗೆ ಸರಿಯಾಗಿ ಕಣ್ಣು ಕಾಣಿಸದೇ ಇರಬಹುದು. ಆದರೆ ಇಡೀ ಪ್ರಪಂಚಕ್ಕೆ ನೀನು ಕಾಣಿಸಬೇಕು.

 

ನೀನು ಯಾರು ಎಂದು ಎಲ್ಲರಿಗೂ ಗೊತ್ತಾಗಬೇಕು ಎಂದು ಅಮ್ಮ ಹೇಳುತ್ತಿದ್ದಳು. ಅವಳೀಗ ಇಲ್ಲ. ಆದರೆ ಆ ಮಾತುಗಳನ್ನು ನಾನು ಸವಾಲಾಗಿ ಸ್ವೀಕರಿಸಿದೆ~ ಎನ್ನುತ್ತಾರೆ ಶೇಖರ್.`ಹುಟ್ಟಿನಿಂದಲೇ ನನಗೆ ಈ ಸಮಸ್ಯೆ ಇದೆ. ಆದರೆ ನನ್ನ ಜೀವನ ಸಾಗಿಸಲು ಹಾಗೂ ಅಂದುಕೊಂಡ ಗುರಿ ಮುಟ್ಟಲು ಇದು ಯಾವತ್ತೂ ಅಡ್ಡಿ ಆಗಿಲ್ಲ. ಅದನ್ನು ತನ್ನ ದೌರ್ಬಲ್ಯ ಎಂದು ಭಾವಿಸಿಲ್ಲ.  ಏನಾದರೂ ಸಾಧನೆ ಮಾಡಲು ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರ ಕ್ರಿಕೆಟ್~ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡುತ್ತಾ ಶೇಖರ್ ತಮ್ಮ ಕಥೆಯನ್ನು ಬಿಚ್ಚಿಟ್ಟರು.ಜೀವನದಲ್ಲಿ ವಿಧಿ ಪ್ರಮುಖ ಪಾತ್ರ ವಹಿಸುತ್ತದೆ.       ಕೆಲವರಿಗೆ ಏನನ್ನೂ ಕೇಳದೆ ಎಲ್ಲವನ್ನು ಧಾರಾಳವಾಗಿ ನೀಡುತ್ತದೆ. ಆದರೆ ಇನ್ನು ಕೆಲವರಿಗೆ ಬದುಕಿನಲ್ಲಿ ಏನನ್ನೂ ಕೊಡುವುದಿಲ್ಲ. ಬದಲಿಗೆ ಇರುವುದನ್ನೇ ಕಿತ್ತುಕೊಂಡು ಬಿಡುತ್ತದೆ. ಅಲ್ಲವೇ?`ನಾನು ಜನಿಸಿ ಎಂಟು ವರ್ಷಗಳವರೆಗೆ ಪೂರ್ಣ ಅಂಧನಾಗಿದ್ದೆ. ಒಮ್ಮೆ ಕಾಲುವೆಯಲ್ಲಿ ಬಿದ್ದಾಗ ಕಣ್ಣಿಗೆ ಪೆಟ್ಟಾಗಿತ್ತು. ಆಗ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೆ. ಹಾಗಾಗಿ ಕೊಂಚ ದೃಷ್ಟಿ ಪಡೆಯಲು ಸಾಧ್ಯವಾಯಿತು.

 

ಆದರೆ ಅದಾಗಿ 15 ದಿನಗಳಲ್ಲಿ ಅಪ್ಪ ಲಚ್ಮಾ ನಾಯಕ್ ತೀರಿಕೊಂಡರು. ಅಪ್ಪನ ಮುಖವನ್ನು ಸರಿಯಾಗಿ ನೋಡಲು ಕೂಡ ದೇವರು ನನಗೆ ಅವಕಾಶ ನೀಡಲಿಲ್ಲ. ಕೆಲ ವರ್ಷಗಳ ಬಳಿಕ ಅಮ್ಮ ಸಾವನ್ನಪ್ಪಿದಳು~ ಎಂದಾಗ ಶೇಖರ್ ಕಣ್ಣುಗಳು ನೀರಾಡಿದವು.

1997ರಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದ ಶೇಖರ್ 2000ರಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆ ಆದರು.  2004ರಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಶೇಖರ್ 198 ರನ್ ಗಳಿಸಿದಾಗ ಇಡೀ ಅಂಧರ ಕ್ರಿಕೆಟ್ ವಲಯ ಭೇಷ್ ಎಂದಿತ್ತು. ಅವರು 2002 ಹಾಗೂ 2006 ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದಾರೆ.

 

2010ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಭಾರತ ತಂಡದ ಸಾರಥ್ಯವನ್ನು ಶೇಖರ್ ವಹಿಸಿದ್ದರು. 2011ರ ನವೆಂಬರ್‌ನಲ್ಲಿ ಭಾರತ ತಂಡ ಪಾಕ್ ಪ್ರವಾಸ ಕೈಗೊಂಡಿತ್ತು. ಈಗ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರು ಇದ್ದಾರೆ. ಮತ್ತೊಬ್ಬ ಆಟಗಾರ ಪ್ರಕಾಶ್.`ನೀನು ಕುರುಡನಲ್ಲ, ಚೆನ್ನಾಗಿ ಕಣ್ಣು ಕಾಣಿಸುವ ನಾವು ಕುರುಡರು~ ಎಂದು ಕೆಲವರು ನನ್ನ ಆಟಕ್ಕೆ ಬೆನ್ನು ತಟ್ಟಿದಾಗ ಆಗುವ ಖುಷಿಯಲ್ಲಿಯೇ ನಾನು ಬದುಕುತ್ತಿದ್ದೇನೆ ಎನ್ನುವ 26 ವರ್ಷ ವಯಸ್ಸಿನ ಶೇಖರ್ `ಚೆಂಡು ಎಂಬುದು ಒಂದು ಜೀವನ. ಅದನ್ನು ಬೆನ್ನಟ್ಟಿ ಹಿಡಿಯಲು ಮುಂದಾಗುವುದೇ ಗುರಿ ಮುಟ್ಟುವುದು ಎಂದರ್ಥ.

 

ನಮ್ಮಲ್ಲಿ ಏನು ಇರುತ್ತದೆಯೋ ಅಷ್ಟಕ್ಕೆ ತೃಪ್ತಿಪಟ್ಟುಕೊಂಡು ಸಾಧನೆಯತ್ತ ಗಮನ ಹರಿಸಬೇಕು. ಏಕೆಂದರೆ ಈ ಜಗತ್ತಿನಲ್ಲಿ ಏನಿದ್ದರೂ, ಎಷ್ಟಿದ್ದರೂ ಸಾಲುವುದಿಲ್ಲ~ ಎಂದು ಅವರು ಜೀವನವನ್ನು ವಿಶ್ಲೇಷಿಸುತ್ತಾರೆ.ಶೇಖರ್ ಪತ್ನಿ ಹೆಸರು ಕೆ.ಸಿ.ರೂಪಾ. ನೃತ್ಯಗಾರ್ತಿ ಆಗಿರುವ ಅವರೂ ಅರೆದೃಷ್ಟಿ ಹೊಂದಿದ್ದಾರೆ. ಇವರದ್ದು ಪ್ರೇಮ ವಿವಾಹ.`ಕೆಲ ಹುಡುಗರು ಬೇರೆ ಬೇರೆ ರೀತಿಯಲ್ಲಿ ನನ್ನನ್ನು ಹೀಯಾಳಿಸುತ್ತಿದ್ದರು. ಕುರುಡ ಎಂದು ಜೋರಾಗಿ ಕೂಗಿ ಕರೆಯುತ್ತಿದ್ದರು. ತುಂಬಾ ನೋವಾಗುತಿತ್ತು. ಆದರೆ ನಗುತ್ತಲೇ ಅವರ ಕರೆಗೆ ಓ ಎನ್ನುತ್ತಿದ್ದೆ. ಈ ರೀತಿ ಹೀಯಾಳಿಸುತ್ತಿದ್ದವರು ಈಗ ಏನಾಗಿದ್ದಾರೆಯೋ ಗೊತ್ತಿಲ್ಲ.ಆದರೆ ನಾನು ಭಾರತ ತಂಡದ ನಾಯಕ~ ಎಂದು ಶೇಖರ್ ಹೆಮ್ಮೆಯಿಂದ ನುಡಿಯುತ್ತಾರೆ.ರೇಸ್‌ನಲ್ಲಿ ಕೊನೆಯ ಸ್ಥಾನ ಪಡೆಯುವವ ಸೋತವನಲ್ಲ. ಆದರೆ ಒಮ್ಮೆಯೂ ಓಡಲು ಪ್ರಯತ್ನಿಸದವನು, ಓಡಿದರೆ ಸೋಲು ಎದುರಾಗುತ್ತದೆ ಎಂದು ಭಯ ಪಡುವವನು ಸೋತವ~ ಎಂದು ಯಾರೋ ಹೇಳಿದ ಮಾತು ನೆನಪಾಗುತ್ತಿದೆ.

 ಕ್ರಿಕೆಟ್ ಆಟದ ಪ್ರೀತಿಗೆ ಕಣ್ಣೇಕೆ?

* * * * * *

ಭಾರತ ಅಂಧರ ಕ್ರಿಕೆಟ್ ಸಂಸ್ಥೆ

ಸಮರ್ಥರ ಕ್ರಿಕೆಟಿಗರಿಗೆ ಐಸಿಸಿ ಇರುವಂತೆ ವಿಶ್ವ ಅಂಧರ ಕ್ರಿಕೆಟ್ ಮಂಡಳಿ ಇದೆ. ಇದು ಇಂಗ್ಲೆಂಡ್‌ನಲ್ಲಿದೆ. ಸಮರ್ಥರು ಕ್ರಿಕೆಟ್ ಆಡುವ ದೇಶಗಳೆಲ್ಲಾ ಅಂಧರ ಕ್ರಿಕೆಟ್‌ನಲ್ಲೂ ಪಾಲ್ಗೊಳ್ಳುತ್ತವೆ.ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಬಿಸಿಸಿಐ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದೆ. ಈ ಸಂಸ್ಥೆಯ ಅಧ್ಯಕ್ಷ ಎಸ್.ನಾಗೇಶ್ ಹಾಗೂ ಕಾರ್ಯದರ್ಶಿ ಜಿ.ಕೆ.ಮಹಾಂತೇಶ್. ಇವರಿಬ್ಬರೂ ಅಂಧರು ಹಾಗೂ ಮಾಜಿ ಆಟಗಾರರು. ಇದಕ್ಕೆ ಆರ್ಥಿಕ ಸಹಾಯ ನೀಡುತ್ತಿರುವುದು ಸಮರ್ಥನಂ ಅಂಗವಿಕಲರ ಸಂಸ್ಥೆ.ಭಾರತ ತಂಡ ಈಗಾಗಲೇ 25 ಅಂತರರಾಷ್ಟ್ರೀಯ ಏಕದಿನ ಹಾಗೂ ಮೂರು ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದೆ. ಕರ್ನಾಟಕದಲ್ಲಿ 23 ಜಿಲ್ಲಾ ತಂಡಗಳಿವೆ. ಸುಮಾರು 700 ಅಂಧ ಕ್ರಿಕೆಟಿಗರಿದ್ದಾರೆ.

 

ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಆಯೋಜಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಅದು ಬೆಂಗಳೂರಿನಲ್ಲಿ ಡಿಸೆಂಬರ್ ಎರಡರಿಂದ 10ರವರೆಗೆ ಜರುಗಲಿದೆ. 10 ದೇಶಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. `ಇದೊಂದು ಹೆಮ್ಮೆಯ ವಿಷಯ~ ಎನ್ನುತ್ತಾರೆ ಮಹಾಂತೇಶ್.

                                                  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry