ಅಂಧರ ಲೋಕದ ಕ್ರಿಕೆಟ್ `ಹಬ್ಬ'

7

ಅಂಧರ ಲೋಕದ ಕ್ರಿಕೆಟ್ `ಹಬ್ಬ'

Published:
Updated:

ಅಂಧರ ಚೊಚ್ಚಲ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಬೆಂಗಳೂರು ಸಾಕ್ಷಿಯಾಗಿದೆ. ಅಂಧರ ಕ್ರಿಕೆಟ್ ಜನಪ್ರಿಯಗೊಳ್ಳಲು ಈ ಚುಟುಕು ಆಟ ವೇದಿಕೆಯಾಗಲಿದೆ. ಜೀವನ ಬರೀ ಕತ್ತಲು ಎಂದುಕೊಂಡ ಆಟಗಾರರ ಬದುಕಿನಲ್ಲಿ ಬೆಳಕು ಮೂಡಿಸುವ ಪ್ರಯತ್ನ ಇದಾಗಿದೆ.

`ನಿನಗೆ ಜಗತ್ತು ಕಾಣುವುದಿಲ್ಲ ಎನ್ನುವ ಬೇಸರ ಎಂದಿಗೂ ನಿನ್ನ ಮನದಲ್ಲಿ ಕಾಡದಿರಲಿ. ನಿನಗೆ ಏನೂ ಕಾಣದಿದ್ದರೂ ಜಗತ್ತೇ ನಿನ್ನತ್ತ ಕಣ್ಣರಳಿಸಿ ನೋಡುವಂತಹ ಸಾಧನೆ ನಿನ್ನಿಂದ ಮೂಡಿಬರಲಿ. ನಿನ್ನ ಬದುಕು ಕತ್ತಲಾದರೂ, ಈಡೀ ಜಗತ್ತೇ ನಿನ್ನಿಂದ ಸ್ಫೂರ್ತಿ ಪಡೆಯುವಂತಹ ಸಾಧನೆ ಮಾಡು...'

ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ ಅವರ ತಾಯಿ ಜಮೀಲಾಬಾಯಿ ಅಂಧ ಮಗನ ಮುಂದೆ ತಮ್ಮ ಆಸೆಯನ್ನು ತೋಡಿಕೊಂಡ ರೀತಿಯಿದು. ತಾಯಿಯ ಆ ಒಂದು ಮಾತು ಶಿವಮೊಗ್ಗದಿಂದ ಕೊಂಚ ದೂರದಲ್ಲಿರುವ ಹರಕೆರೆ ಎಂಬ ಪುಟ್ಟ ತಾಂಡಾದ ಹುಡುಗನನ್ನು ಇಂದು ಭಾರತ ಅಂಧರ ಕ್ರಿಕೆಟ್ ತಂಡದ ನಾಯಕನನ್ನಾಗಿ ರೂಪಿಸಿದೆ.ಉತ್ತಮ ಭವಿಷ್ಯ ಕೊಟ್ಟಿದೆ. ಇದೆಲ್ಲಾ ನೆನಪಾಗಲು ಕಾರಣ ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್. ವಿವಿಧ ರಾಷ್ಟ್ರಗಳ ಅಂಧ ಕ್ರಿಕೆಟಿಗರು ಸೇರಿಕೊಂಡು ಚೊಚ್ಚಲ ವಿಶ್ವಕಪ್‌ಗೆ ರಂಗು ತುಂಬುತ್ತಿದ್ದಾರೆ. ಭಾರತ ಕೂಡಾ ಇಂಗ್ಲೆಂಡ್, ಪಾಕಿಸ್ತಾನಕ್ಕೆ ತೆರಳಿ ಸಾಕಷ್ಟು ಅಂತರರಾಷ್ಟ್ರೀಯ ಟೂರ್ನಿಗಳಲ್ಲೂ ಆಡಿ ಬಂದಿದೆ.

ಆದರೆ, ಚುಟುಕು ಆಟದ ಸವಿ ಅನುಭವಿಸುವ ಮೊದಲ ಅವಕಾಶ ಮಾತ್ರ ಕರ್ನಾಟಕದ ಜನರಿಗೆ ಲಭಿಸಿದೆ. ನಿನ್ನೆ (ಭಾನುವಾರ) ಆರಂಭವಾಗಿರುವ ಈ ವಿಶ್ವಕಪ್ ಟೂರ್ನಿ ಡಿಸೆಂಬರ್ 13ರ ವರೆಗೆ ನಡೆಯಲಿದೆ. ಆತಿಥೇಯ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿವೆ.

ಅಂಧರ ಲೋಕದ 13 ದಿನಗಳ ಕ್ರಿಕೆಟ್ ಹಬ್ಬದಲ್ಲಿ ಒಟ್ಟು 39 ಪಂದ್ಯಗಳು ನಡೆಯಲಿದ್ದು, ಮಾಜಿ ಕ್ರಿಕೆಟಿಗರಾದ ಬಿ.ಎಸ್. ಚಂದ್ರಶೇಖರ್, ಸಯ್ಯದ್ ಕೀರ್ಮಾನಿ, ಅರ್ಜುನ್ ರಣತುಂಗಾ ಅವರು ಆಟಗಾರರನ್ನು ಬೆಂಬಲಿಸಿ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ರಾಯಭಾರಿಯಾಗಿ ಅಂಧರ ಕಣ್ಣುಗಳಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಬೇಕಿದೆ ಬಿಸಿಸಿಐ ಕೃಪೆ:

ಭಾರತ ಅಂಧರ ಕ್ರಿಕೆಟ್ ತಂಡ ಸಾಕಷ್ಟು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ಬಂದಿದ್ದರೂ, ಇದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಮಾನ್ಯತೆ ಸಿಕ್ಕಿಲ್ಲ. ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿದಂತೆ ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಅಂಧರ ಕ್ರಿಕೆಟ್‌ಗೆ ಆಯಾ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ಮಾನ್ಯತೆಯಿದೆ. ಆದರೆ, ಭಾರತದಲ್ಲಿ ಮಾತ್ರ ಇದು ಇನ್ನೂ ಸಾಧ್ಯವಾಗಿಲ್ಲ. ಭಾರತ ಅಂಧರ ತಂಡ ವಿಶ್ವ ಅಂಧರ ಕ್ರಿಕೆಟ್ ಮಂಡಳಿಯ (ಡಬ್ಲ್ಯುಬಿಸಿಸಿ) ಅನುಮೋದನೆ ಮಾತ್ರ ಪಡೆದಿದೆ.

ಪುರುಷರ ಕ್ರಿಕೆಟ್‌ಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿರುವ ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೂ ಬಿಸಿಸಿಐನಿಂದ ಸೂಕ್ತ ಬೆಂಬಲ ಸಿಕ್ಕಿಲ್ಲ. 2006ರಲ್ಲಿಯೇ ಮಹಿಳಾ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ ನೀಡಿದೆಯಾದರೂ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳಾ ಕ್ರಿಕೆಟ್ ಹೆಚ್ಚು ಅಭಿವೃದ್ಧಿಯಾಗಿಲ್ಲ. ಇದೇ ರೀತಿಯ ಸ್ಥಿತಿ ಈಗ ಅಂಧ ಕ್ರಿಕೆಟಿಗರದ್ದು.

ಚೊಚ್ಚಲ ಅಂಧರ ವಿಶ್ವಕಪ್‌ಗೆ ಸಮರ್ಥನಂ ಅಂಗವಿಕಲರ ಸಂಸ್ಥೆ ನೆರವಾಗಿ ನಿಂತಿದ್ದು, ಅಂಧರ ತಂಡಕ್ಕೂ ಮಾನ್ಯತೆ ನೀಡಬೇಕು ಎಂದು `ಸಮರ್ಥನಂ' ಕ್ರಿಕೆಟ್ ಮಂಡಳಿಯನ್ನು ಸತತವಾಗಿ ಒತ್ತಾಯಿಸುತ್ತಲೇ ಬಂದಿದೆ. ಆದರೆ, ಬಿಸಿಸಿಐ ಮಾತ್ರ ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

`ಬಿಸಿಸಿಐ ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಬೇಕು ಎಂದು ಪದೇ ಪದೇ ಮನವಿ ಮಾಡಿಕೊಂಡಿದ್ದೇವೆ. ಅಂಧರ ಆಟ ಕೂಡಾ ಇನ್ನೂ ಹೆಚ್ಚು ಪ್ರಖ್ಯಾತಿ ಪಡೆಯಬೇಕು ಎನ್ನುವ ಕಾರಣಕ್ಕೆ ಈ ಚುಟುಕು ವಿಶ್ವಕಪ್ ಆಯೋಜಿಸಿದ್ದೇವೆ. ಇದರಲ್ಲಿ ಯಶಸ್ಸು ಸಿಕ್ಕರೆ, ನಮ್ಮ ಬೇಡಿಕೆಯನ್ನು ಮತ್ತೆ ಬಿಸಿಸಿಐ ಮುಂದಿಡಬಹುದು.ಅಂಧರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ ಸಿಕ್ಕರೆ ಇನ್ನೂ ಹೆಚ್ಚು ಅಭಿವೃದ್ಧಿಯಾಗುತ್ತದೆ. ದೇಶದಲ್ಲಿ ಎಲ್ಲಿಯೇ ಕ್ರಿಕೆಟ್ ನಡೆದರೂ ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಕ್ರೀಡಾಂಗಣ ಲಭಿಸುತ್ತದೆ' ಎನ್ನುತ್ತಾರೆ ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ನಾಗೇಶ್.

`ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಅಂಧರ ಕ್ರಿಕೆಟ್‌ಗೆ ಮಾನ್ಯತೆ ಸಿಕ್ಕಿರುವುದರಿಂದ ಆ ತಂಡಗಳಿಗೆ ಅನುದಾನವೂ ಸಿಗುತ್ತದೆ. ಇದರಿಂದ ಆಟಗಾರರೂ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಕತ್ತಲೇ ನಮ್ಮ ಜಗತ್ತು ಎಂದುಕೊಂಡವರ ಬದುಕಿನಲ್ಲೂ ಬೆಳಕು ಮೂಡುತ್ತದೆ. ಆದ್ದರಿಂದ ಬಿಸಿಸಿಐ ಈ ಕುರಿತು ಗಮನ ನೀಡಬೇಕು' ಎಂದು ಅಂಧರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಜಿ.ಕೆ. ಮಹಾಂತೇಶ್ ಹೇಳುತ್ತಾರೆ.

ಕನ್ನಡಿಗರ ಪಾತ್ರ:

ಅಂಧರ ತಂಡದಲ್ಲಿ ಕನ್ನಡಿಗರದ್ದೇ ಪಾರುಪಾತ್ಯ. ಭಾರತ ತಂಡದಲ್ಲಿ ಒಟ್ಟು ಮೂವರು ಆಟಗಾರರು ಕರ್ನಾಟಕದವರು. ನಾಯಕ ಸ್ಥಾನ ಪಡೆದಿರುವ ಶೇಖರ್ ನಾಯ್ಕ, ಎಸ್. ರವಿ ಹಾಗೂ ಪ್ರಕಾಶ್ ಜಯರಾಮಯ್ಯ ಅವರು ಭಾರತ ತಂಡದಲ್ಲಿರುವ ಕನ್ನಡಿಗರು.

ಸಾಧನೆ: 12 ವರ್ಷಗಳ ಈಚೆಗೆ ಭಾರತ ತಂಡ ಉತ್ತಮ ಪ್ರದರ್ಶನದ ಹಾದಿಯಲ್ಲಿ ಸಾಗಿದೆ. 2004 ಮತ್ತು ಈಚೆಗೆ 2011ರಲ್ಲಿ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯನ್ನಾಡಿತ್ತು. 2005ರಲ್ಲಿ ಪಾಕ್ ಅಂಧರ ತಂಡ ಭಾರತಕ್ಕೆ ಬಂದಾಗ ಏಕದಿನ ಸರಣಿ ನಡೆದಿತ್ತು. ಆಗ ಭಾರತ 5-0ರಲ್ಲಿ ಸರಣಿಯನ್ನು `ಕ್ಲೀನ್ ಸ್ವೀಪ್' ಮಾಡಿತ್ತು. 2006ರಲ್ಲಿ ನಡೆದ ಅಂಧರ ಏಕದಿನ ವಿಶ್ವಕಪ್‌ನಲ್ಲೂ ಭಾರತ ಪಾಲ್ಗೊಂಡಿತ್ತು.

ನಿಯಮಗಳು

*ಒಂದು ತಂಡದಲ್ಲಿ ಒಟ್ಟು 17 ಜನ ಆಟಗಾರರು ಇರುತ್ತಾರೆ. ಅದರಲ್ಲಿ ಕಣಕ್ಕಿಳಿಯುವವರು 11 ಜನ

*ಬಿ-1 (ಪೂರ್ಣ ಕುರುಡರು), ಬಿ-2 (ಅಲ್ಪ ಕಣ್ಣುಕಾಣುವವರು), ಬಿ-3: (ಒಂದು ಕಣ್ಣುಮಾತ್ರ ಕಾಣುವವರು) ಮೂರು ವರ್ಗದ ಆಟಗಾರರು ಇರಬೇಕು

*ಪಿಚ್‌ನ ಅರ್ಧ ಭಾಗಕ್ಕಿಂತಲೂ ಈಚೆ ಚೆಂಡು ಪುಟಿಯುವಂತೆ ಹಾಕಬೇಕು. ಇಲ್ಲವಾದರೆ, ಅದು ಡೆಡ್‌ಬೌಲ್ ಆಗುತ್ತದೆ.

*ಚೆಂಡನ್ನು ಬೌಲಿಂಗ್ ಮಾಡುವುದಿಲ್ಲ. ಬದಲಾಗಿ ಉರುಳಿಸಲಾಗುತ್ತದೆ

*ಬಿ-1ನಲ್ಲಿ ನಾಲ್ಕು, ಬಿ-2ನಲ್ಲಿ ಮೂರು ಹಾಗೂ ಬಿ-3ಯಲ್ಲಿ ಮೂರು ಆಟಗಾರರಿರಬೇಕು

*ಸಹಜ ಕ್ರಿಕೆಟ್‌ನಲ್ಲಿ ಇರುವಂತೆ ವೈಡ್ ಇರುತ್ತದೆ. ಆದರೆ, ಫುಲ್‌ಟಾಸ್ ಬೌಲ್ ಹಾಕುವಂತಿಲ್ಲ.

*ವಿಜಯಿ ತಂಡ ಮೂರು ಅಂಕ, ಡ್ರಾ ಆದಲ್ಲಿ ಉಭಯ ತಂಡಗಳಿಗೂ ತಲಾ ಒಂದು ಅಂಕ

*ಕಬ್ಬಿಣದಿಂದ ವಿಕೆಟ್‌ಗಳನ್ನು ಮಾಡಿರಲಾಗುತ್ತದೆ. ಪ್ಲಾಸ್ಟಿಕ್ ಚೆಂಡು ವಿಕೆಟ್‌ಗೆ ಬಡಿದಾಗ ಬ್ಯಾಟ್ಸ್‌ಮನ್‌ಗಳು ಔಟಾಗಿದ್ದು ಗೊತ್ತಾಗಲು ಈ ವ್ಯವಸ್ಥೆ

*`ಬೇರಿಂಗ್' ಹಾಕಿದ ಪ್ಲಾಸ್ಟಿಕ್ ಚೆಂಡಿನ (ರ‌್ಯಾಟಲಿಂಗ್ ಬೌಲ್) ಮೂಲಕ ಪಂದ್ಯವನ್ನಾಡಲಾಗುತ್ತದೆ.

*ಪಿಚ್‌ನ ಅರ್ಧ ಭಾಗಕ್ಕೂ ಮುನ್ನವೇ ಚೆಂಡು ಪುಟಿದಾಗ ಚೆಂಡಿನಲ್ಲಿರುವ ಬೇರಿಂಗ್ ಸದ್ದು ಮಾಡುತ್ತವೆ. ಆಗ ಬ್ಯಾಟ್ಸ್‌ಮನ್ ನಿಖರವಾಗಿ ಬ್ಯಾಟ್ ಬೀಸಲು ಸಾಧ್ಯವಾಗುತ್ತದೆ.

*ನೋಬಾಲ್ ಇರುವುದರಿಂದ ಬೌಲಿಂಗ್ ಗೆರೆಯನ್ನು ದಾಟದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

*ಬ್ಯಾಟ್ಸ್‌ಮನ್ ರನ್ ಗಳಿಕೆಗೆ ಓಡುವಾಗ ಪಿಚ್ ತುಳಿಯುವಂತಿಲ್ಲ.

*ಸ್ಟ್ರೈಕ್ ಬ್ಯಾಟ್ಸ್‌ಮನ್ ರನ್ ಗಳಿಸಲು ತನ್ನ ಎಡಬದಿಯಿಂದ ಓಡಿದರೆ, ನಾನ್ ಸ್ಟ್ರೈಕರ್ ತನ್ನ ಬಲ ಬದಿಯಿಂದ ಓಡಬೇಕು.

*ಬಿ-1 ವರ್ಗದವರಿಗೆ ಸಹಾಯಕ ರನ್ನರ್ ಇರುತ್ತಾರೆ. ಈ ಆಟಗಾರ ಒಂದು ಪಿಚ್ ಬಿದ್ದ ಮೇಲೆ ಕ್ಯಾಚ್ ಹಿಡಿದರೂ ಬ್ಯಾಟ್ಸ್‌ಮನ್ ಔಟ್.

*ಬಿ-1 ಬ್ಯಾಟ್ಸ್‌ಮನ್ ಎಷ್ಟೇ ರನ್ ಗಳಿಸಿದರೂ, ಅದು ಎರಡರಷ್ಟು ರನ್ ಎಂದು ಲೆಕ್ಕ ಹಾಕಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry