ಅಂಧರ ವಿಶ್ವಕಪ್ ಟಿ-20ಗೆ ವರ್ಣರಂಜಿತ ಚಾಲನೆ

7

ಅಂಧರ ವಿಶ್ವಕಪ್ ಟಿ-20ಗೆ ವರ್ಣರಂಜಿತ ಚಾಲನೆ

Published:
Updated:

ಬೆಂಗಳೂರು: ಡೊಳ್ಳುಕುಣಿತ, ವೀರಗಾಸೆ, ಧ್ವಜಸ್ಥಂಬದಂತಹ ಸಾಂಸ್ಕೃತಿಕ ಕಲೆಗಳ ಸಂಗಮ, ಒಂಬತ್ತು ರಾಷ್ಟ್ರಗಳ ಅಂಧ ಕ್ರಿಕೆಟ್ ತಂಡಗಳ ಆಟಗಾರರ ಸಂಭ್ರಮದ ಮಧ್ಯೆ ಚೊಚ್ಚಲ ಅಂಧರ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಉದ್ಯಾನನಗರಿಯಲ್ಲಿ ಶನಿವಾರ ಚಾಲನೆ ಲಭಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಆತಿಥೇಯ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳ ಆಟಗಾರರು ತಮ್ಮ ರಾಷ್ಟ್ರಧ್ವಜದೊಂದಿಗೆ ಪಥಸಂಚಲನ ನಡೆಸಿದರು. ಎಲ್ಲಾ ರಾಷ್ಟ್ರಗಳ ತಂಡಗಳ ಧ್ವಜದಾರಿಯಾಗಿ ಉದ್ಯಾನನಗರಿಯ ವೈಟ್‌ಫೀಲ್ಡ್‌ನ ಗ್ಲೋಬಲ್ ಶಾಲೆ ಮತ್ತು ವಾಣಿ ಎಜುಕೇಷನ್ ಶಾಲೆಯ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದರು.

ಕನ್ನಡಿಗ ಶೇಖರ್ ನಾಯ್ಕ ನೇತೃತ್ವದ ಭಾರತ ಆಂಧರ ಕ್ರಿಕೆಟ್ ತಂಡ ಸಾಗಿಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದ ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಹಾಡು, ನೃತ್ಯ ಕಾರ್ಯಕ್ರಮಗಳು ನಡೆದವು.ಉದ್ಘಾಟನೆಯ ನಂತರ ಬಾಣಬಿರುಸುಗಳು, ಬಲೂನುಗಳು ಆಗಸದತ್ತ ಮುಖ ಮಾಡುತ್ತಿದ್ದರೆ, ಇತ್ತ ಕ್ರೀಡಾಪ್ರೇಮಿಗಳು ಚಪ್ಪಾಳೆ ತಟ್ಟಿ ಅಂಧ ಆಟಗಾರರನ್ನು ಹುರಿದುಂಬಿಸಿದರು. ಸರ್ಕಾರಿ ಶಾಲೆಯ 2000 ಮಕ್ಕಳಿಂದ ನಡೆದ ಯೋಗ ಕಾರ್ಯಕ್ರಮ ಪ್ರೇಕ್ಷಕರ ಮನಗೆದ್ದಿತು.

ಪ್ರೀತಿ ಮಾತ್ರ ಸಿಗುತ್ತದೆ:

`12 ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿ ಆಡುತ್ತಿದ್ದೇನೆ. ಮೂರು ಸಲ ಭಾರತಕ್ಕೆ ಬಂದಿದ್ದೇನೆ. ಪ್ರತಿ ಸಲ ಬಂದಾಗಲೂ ಇಲ್ಲಿನ ಕ್ರೀಡಾಪ್ರೇಮಿಗಳಿಂದ ಪ್ರೀತಿ ಸಿಕ್ಕಿದೆ. ಇಲ್ಲಿಗೆ ಯಾವಾಗ ಬಂದರೂ ಜನ ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಭಾರತದ ಕ್ರಿಕೆಟಿಗರನ್ನು ಮೆಚ್ಚಿಕೊಳ್ಳುವಂತೆ ನಮ್ಮ ದೇಶದ ಆಟಗಾರರನ್ನೂ ಗೌರವಿಸುತ್ತಾರೆ' ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖ್ ಅಬ್ಬಾಸ್ ಸಂತಸ ವ್ಯಕ್ತಪಡಿಸಿದರು.

ಶೇಖ್ ಅಬ್ಬಾಸ್ ಮತ್ತು ಭಾರತ ತಂಡದ ಸಾರಥ್ಯ ವಹಿಸಿಕೊಂಡಿರುವ ಶೇಖರ್ ಅವರು ಒಟ್ಟುಗೂಡಿ ಮಾಧ್ಯಮದ ಮುಂದೆ ಛಾಯಾಚಿತ್ರಕ್ಕೆ ಫೋಸ್ ನೀಡಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಕ್ರೀಡಾಪ್ರೇಮಿಗಳ ಕರತಾಡನ ಹಾಗೂ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

`ಸೌರವ್ ಗಂಗೂಲಿಯನ್ನು ನಾವೆಲ್ಲರೂ ತುಂಬಾ ಇಷ್ಟಪಡುತ್ತೇವೆ. ನಮ್ಮ ತಂಡದಲ್ಲೂ ಉತ್ತಮ ಆಲ್‌ರೌಂಡ್ ಆಟಗಾರರಿದ್ದಾರೆ. ಟಿ-20 ವಿಶ್ವಕಪ್‌ನೊಂದಿಗೆ ಸ್ವದೇಶಕ್ಕೆ ಮರಳಬೇಕು' ಎನ್ನುವ ಗುರಿಯೊಂದಿಗೆ ಭಾರತಕ್ಕೆ ಬಂದಿದ್ದೇವೆ. ಅದಕ್ಕಾಗಿ ಯಾವ ತಂಡವನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ನಮಗೆ ಪ್ರಬಲ ಎದುರಾಳಿಗಳಾಗಿವೆ' ಎನ್ನುತ್ತಾರೆ ಅಬ್ಬಾಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry