ಅಂಧ ಕಲಾವಿದರ ಸಂಘದ ವಾರ್ಷಿಕೋತ್ಸವ

7

ಅಂಧ ಕಲಾವಿದರ ಸಂಘದ ವಾರ್ಷಿಕೋತ್ಸವ

Published:
Updated:

ಬಳ್ಳಾರಿ: ಅದೊಂದು ಅವಿಸ್ಮರಣೀಯ ಸಮಾರಂಭ. ಅಲ್ಲಿ ಆಡಂಬರ ಇರಲಿಲ್ಲ. ರಾಜಕಾರಣಿಗಳ ದಂಡು ನೆರೆದಿರಲಿಲ್ಲ (ಬರುವುದಾಗಿ ಹೇಳಿಯೂ ಅವರು ಬಂದಿರಲಿಲ್ಲ). ಹೊಗಳಿಕೆ, ತೆಗಳಿಕೆಯ ಲವಲೇಶವೂ ಇರಲಿಲ್ಲ.

 

ಅಲ್ಲಿ ನೆರೆದ ಬಹುತೇಕರ ಬದುಕನ್ನು ರೂಪಿಸಲು ನೆರವಾದ ದಿವ್ಯಾತ್ಮದ ಜನ್ಮದಿನದ ಕಾರ್ಯಕ್ರಮ ಅದು.

ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರ ಸನ್ಮಾನ ಕಾರ್ಯಕ್ರಮವೂ ಅದಾಗಿತ್ತು. ಅಷ್ಟೇ ಅಲ್ಲ ತಮ್ಮ ಅಸ್ತಿತ್ವವನ್ನು ಜೀವಂತವಾಗಿ ಇಡಬಲ್ಲ ಸಂಘವು 17ರ ಹರೆಯಕ್ಕೆ ಹೆಜ್ಜೆ ಇರಿಸಿದ ಅಂಗವಾಗಿ ನಡೆಸಲಾದ ಕಾರ್ಯಕ್ರಮವದು.ಅಲ್ಲಿ  ಭಾಗವಹಿಸಿದವರನ್ನೂ, ಸಂಗೀತದ ರಸಧಾರೆಯನ್ನು ಸವಿದವ ರನ್ನೂ,  ಹಿತವಚನ ನೀಡಿದವರನ್ನು ಅಲ್ಲಿ ನೆರೆದವರು ನೋಡಲು ಸಾಧ್ಯವಾಗುತ್ತಿ ರಲಿಲ್ಲ. ಅಂಧರೇ, ಅಂಧರಿಗಾಗಿ ನಡೆಸಿದ ಕಾರ್ಯಕ್ರಮ ಆಗಿದ್ದರಿಂದ ಕಣ್ಣಿಂದ ನೋಡುವದಕ್ಕೆ ಸಾಧ್ಯವಾಗದಿದ್ದರೂ, ನಾಡಿನ ವಿವಿಧೆಡೆಯಿಂದ ಬಂದಿದ್ದ ಆ ಅಂಧರಿಗೆ ಅದೊಂದು ಅವಿಸ್ಮರಣೀಯ ಘಳಿಗೆ.ಅಖಿಲ ಕರ್ನಾಟಕ ಪಂಡಿತ್ ಪಂಚಾಕ್ಷರಿ ಗವಾಯಿಯವರ ಅಂಧ ಕಲಾವಿದರ ಸಂಘದ 17ನೇ ವಾರ್ಷಿಕೋತ್ಸವ ಹಾಗೂ ಪಂಚಾಕ್ಷರಿ ಗವಾಯಿಯವರ 120ನೇ ಜನ್ಮ ದಿನೋತ್ಸವ ಆಚರಣೆಯ ಅಂಗವಾಗಿ ನಗರದ ರಾಘವ ಕಲಾಮಂದಿರದಲ್ಲಿ ಶನಿವಾರ ಸಂಜೆ ನಡೆದ ಆ ಸಮಾರಂಭದಲ್ಲಿ 400ಕ್ಕೂ ಅಧಿಕ ಅಂಧ ಕಲಾವಿದರು ಭಾಗವಹಿಸಿದ್ದರು.ದೂರದ ಊರುಗಳಿಂದ ತಮ್ಮವರನ್ನು ಊರುಗೋಲಿನಂತೆ ಕರೆದುಕೊಂಡು, ಅವರ ನೆರವಿನೊಂದಿಗೆ ಗಣಿ ನಾಡು ಬಳ್ಳಾರಿಗೆ ಬಂದು, ತಮಗೆ ಕಣ್ಣಾದ ದಿವ್ಯ ಚೇತನವನ್ನು ಸ್ಮರಿಸಲೆಂದೇ ಅವರೆಲ್ಲ ಅಲ್ಲಿ ನೆರೆದಿದ್ದರು. ತಮ್ಮ ಬದುಕಿಗೂ ಸಾರ್ಥಕತೆ ಕಲ್ಪಿಸಿಕೊಟ್ಟ ಗದುಗಿನ ವೀರೇಶ್ವರ ಪುಣ್ಯಾಶ್ರಮವನ್ನು ಸ್ಮರಿಸಿದರು.ಪಂಡಿತ್ ಪಂಚಾಕ್ಷರಿ ಗವಾಯಿ, ಪಂಡಿತ್ ಪುಟ್ಟರಾಜ ಕವಿ ಗವಾಯಿ ಯವರ ಆಶ್ರಮದಲ್ಲಿ ಆಶ್ರಯ ಪಡೆದು, ಸಂಗೀತಾಭ್ಯಾಸ ಮಾಡಿ, ಗಾಯನ, ತಬಲಾ, ಕೊಳಲು, ಹಾರ್ಮೋನಿಯಂ ಮತ್ತಿತರ ವಾದ್ಯಗಳ ಮೇಲೆ ಪ್ರಾಬಲ್ಯ ಸಾಧಿಸಿ ತನ್ಮೂಲಕ ಜೀವನೋಪಾಯ ಕ್ಕೊಂದು ಮಾರ್ಗ ಕಂಡುಕೊಂಡಿರುವ ಅವರೆಲ್ಲ ಹಿಂದೆ ಒಂದಿಲ್ಲೊಂದು ಕಡೆ ಪರಸ್ಪರ ಭೇಟಿಯಾದವರೇ ಆಗಿದ್ದರು.ಅವರಲ್ಲಿ ಅನೇಕರು ಮದುವೆ ಯಾಗಿದ್ದಾರೆ. ಮಕ್ಕಳನ್ನೂ ಪಡೆದು ಹೊಸ ಜೀವನ ಆರಂಭಿಸಿದ್ದಾರೆ. ಅಂತೆಯೇ ತಮ್ಮ ಬಾಳ ಸಂಗಾತಿ ಯೊಂದಿಗೆ ಬೀಗುತ್ತಲೇ ವೇದಿಕೆ ಏರಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅಷ್ಟೇ ಅಲ್ಲ, ತಮ್ಮವರೊಂದಿಗೇ ಕುಳಿತು ಸಣ್ಣದೊಂದು ಸನ್ಮಾನವನ್ನೂ ಸ್ವೀಕರಿಸಿ, ಗುರುವೃಂದಕ್ಕೆ ನಮಿಸಿ ಕೃತಾರ್ಥರಾದರು.ಪ್ರತಿ ವರ್ಷವೂ ರಾಜ್ಯದ ವಿವಿಧೆಡೆ ತನ್ನ ವಾರ್ಷಿಕೋತ್ಸವ ಆಚರಿಸಿ ಕೊಳ್ಳುವ ಸಂಘವು, ಜತೆಜತೆಗೆ ಪಂಚಾಕ್ಷರಿ ಗವಾಯಿಯವರ ಜಯಂತಿ ಯನ್ನೂ ಆಚರಿಸುವುದು ವಾಡಿಕೆ.ಗದುಗಿನಲ್ಲಿ 16 ವರ್ಷಗಳ ಹಿಂದೆ ಜನ್ಮತಾಳಿರುವ ಈ ಸಂಘದ ಸದಸ್ಯರು ರಾಜಧಾನಿಯಿಂದ ಹಿಡಿದು ಹಳ್ಳಿ ಗಾಡಿನವರೆಗೂ ವ್ಯಾಪಿಸಿದ್ದು, ಅವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವುದೇ ಈ ಕಾರ್ಯಕ್ರಮದ ವಿಶೇಷ.

ತಮ್ಮ ಹಾಡುಗಾರಿಕೆ, ವಾದ್ಯ ನುಡಿಸುವಿಕೆ, ಕೀರ್ತನ ಗಾಯನ, ಪುರಾಣ ಪ್ರವಚನದೊಂದಿಗೆ ಗುರುತಿಸಿ ಕೊಂಡು ನೆಲೆ ಕಂಡುಕೊಂಡಿರುವ ಅವರೆಲ್ಲರಿಗೂ ಕಳೆದ ವರ್ಷ ಪಂಡಿತ್ ಪುಟ್ಟರಾಜ ಗವಾಯಿಯವರು

ದೈವಾಧೀನರಾಗಿದ್ದು ಅನಾಥ ಪ್ರಜ್ಞೆಯನ್ನು ಮೂಡಿಸಿದೆ.

 ಆದರೂ ಅವರ ಉತ್ತರಾಧಿಕಾರಿ ಕಲ್ಲಯ್ಯಜ್ಜ ಅವರ ಆಶೀರ್ವಾದ ಮತ್ತು ಆತ್ಮೀಯತೆಯಲ್ಲೇ ತಮ್ಮಂತಹ ಅನೇಕ ಅಂಧರ, ಅನಾಥರ, ಅಂಗವಿಕಲರ ಬದುಕು ರೂಪುಗೊಳ್ಳುತ್ತಿರುವುದು ಹರ್ಷ ಉಂಟುಮಾಡಿದೆ ಎಂಬುದನ್ನೇ ಅನೇಕರು ಸಾರಿಹೇಳಿದರು.ರಾಘವ ಮೆಮೋರಿಯಲ್ ಅಸೋಸಿ ಯೇಷನ್ ಸಹಯೋಗದಲ್ಲಿ ನಡೆದ ಆ ಭವ್ಯ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಮಹದೇವಪ್ಪ ಹಳ್ಳಿ ಅವರು ಸಾಧಕರನ್ನು ಸನ್ಮಾನಿಸಿ, ಗೌರವಿಸಿದ್ದಷ್ಟೇ ಅಲ್ಲದೆ, ಗುರುವಿನ ಸ್ಮರಣೆಯ ಅಂಗವಾಗಿ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಕಲ್ಪಿಸಿ ಅವರ ಜವಾಬ್ದಾರಿಯನ್ನೂ ನೆನಪಿಸಿದರು.ಗದುಗಿನಿಂದ ಬಂದಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರು, ಸ್ಥಳೀಯ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿಯವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿತವಚನ ನುಡಿದರು.ಸಂಜೆ 6ರಿಂದ ರಾತ್ರಿ 11.30ರವರೆಗೆ ನಡೆದ ಆ ಕಾರ್ಯಕ್ರಮದಲ್ಲಿ ಸಂಗೀತ ಲೋಕವೇ ಸೃಷ್ಟಿಯಾಗಿತ್ತು. ಅನೇಕ ಅಂಧ ಕಲಾವಿದರು ಪ್ರತಿಭೆ ಮೆರೆದರು.ಕಲಾವಿದರಾದ ವಿರೂಪಾಕ್ಷಪ್ಪ ಕಲಭಾವಿ, ಜಗದೀಶ ಮೇಟಿ, ಹನುಮಂತ ದಾಸರ, ಶೇಖರಗೌಡ ಮದಗಾನೂರ, ದೊಡ್ಡಯ್ಯ ಕಲ್ಲೂರ, ಉಮೇಶ ಪತ್ತಾರ, ಮಾರೆಪ್ಪ ಸಿರಿಗೇರಿ, ಜೀವಪ್ಪ ಮಜ್ಜಗಿ, ಕೃಷ್ಣಪ್ಪ ನದಿಚಾಗಿ, ಶರಣಗೌಡ ಪೂಜಾರ, ಗವಿಸಿದ್ದ ಶ್ರೀಧರಗಡ್ಡೆ, ಈರಪ್ಪ ಬಮ್ಮಸಾಗರ, ದೊಡ್ಡಬಸವ ಗವಾಯಿ ಡಿ.ಕಗ್ಗಲ್, ಕೊಟ್ರೇಶ ಚಿಲಕೋಡ, ಶಂಕ್ರಯ್ಯ ಹಿರೇಮಠ, ಮಲ್ಲೇಶ ಪೂಜಾರ ಅವರನ್ನು ಗೌರವಿಸಲಾಯಿತು.ಹೆಡಿಗ್ಗೊಂಡದ ಹೇಮರಾಜ ಶಾಸ್ತ್ರಿ, ನೀಲಕಂಠ ಶಾಸ್ತ್ರಿ, ಪರ್ವತರಾಜ ಶಾಸ್ತ್ರಿ, ಗುರುಸಿದ್ದಯ್ಯ ಶಾಸ್ತ್ರಿ, ಕೆ.ಚೆನ್ನಪ್ಪ ಮತ್ತಿತರರು ನೆರವು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry