ಭಾನುವಾರ, ಏಪ್ರಿಲ್ 18, 2021
31 °C

ಅಂಧ ಕ್ರೀಡಾಪಟುವಿಗೆ ಸಂಭ್ರಮದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಧ ಕ್ರೀಡಾಪಟುವಿಗೆ ಸಂಭ್ರಮದ ಸ್ವಾಗತ

ಚಿಕ್ಕಮಗಳೂರು: ಟರ್ಕಿಯಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಅಂಧರ ಕ್ರೀಡಾಕೂಟದಲ್ಲಿ 800 ಮೀ. ಓಟದಲ್ಲಿ ಕಂಚಿನ ಪದಕ ಗಳಿಸಿ ತಾಯ್ನಾಡಿಗೆ ಮರಳಿದ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿ ಜೆ.ಎಂ.ಷವಾದ್‌ಗೆ ಗುರುವಾರ ಆತ್ಮೀಯ ಸ್ವಾಗತ ದೊರೆಯಿತು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ ಷವಾದ್‌ನನ್ನು ಬಸ್ ನಿಲ್ದಾಣದಲ್ಲಿ ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷ ನಿಂಗೇಗೌಡ, ಆಶಾಕಿರಣ ಅಂಧ ಮಕ್ಕಳ ಶಾಲೆ ಆಡಳಿತ ಮಂಡಳಿ ಸದಸ್ಯರು, ಸಂಘ-ಸಂಸ್ಥೆಗಳ ಕ್ರೀಡಾಭಿಮಾನಿಗಳು ಹಾರ ಹಾಕಿ ಸ್ವಾಗತಿಸಿದರು.ಷವಾದ್ ಬಸ್‌ನಿಂದ ಇಳಿಯುತ್ತಿದ್ದಂತೆ ಸುತ್ತುವರಿದ ಕ್ರೀಡಾಪ್ರೇಮಿಗಳು ಜಯಘೋಷ ಹಾಕಿ ದೇಶಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುವನ್ನು ಮೇಲೆತ್ತಿ ಕುಣಿದು ಸಂಭ್ರಮಿಸಿದರು. ಷವಾದ್ ಸಹಪಾಠಿಗಳು ಆರತಿ ಎತ್ತಿದರು. ನಂತರ ಮೆರವಣಿಗೆಯಲ್ಲಿ ಶಾಲೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡ ಶಾಲೆ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಲೆಗೆ ಕೀರ್ತಿ ಲಭಿಸಿರುವುದು ಅತ್ಯಂತ ಹೆಮ್ಮೆ ಮತ್ತು ಸಾರ್ಥಕತೆ ತಂದಿದೆ ಎಂದರು.ವೀರಶೈವಶೈವ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಗೌರಮ್ಮ, ಲಯನ್ಸ್ ಅಧ್ಯಕ್ಷ ಎಚ್.ಸಿ.ಶಶಿಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ಸೇರಿದಂತೆ ಹಲವು ಗಣ್ಯರು ಮೆರವಣಿಗೆಯಲ್ಲಿದ್ದರು. ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುವನ್ನು ಸ್ವಾಗತಿಸಲು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದಿಂದ ಯಾವುದೇ ಅಧಿಕಾರಿ ಬಂದಿಲ್ಲ ಎಂದು ಕ್ರೀಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.