ಶುಕ್ರವಾರ, ಮೇ 20, 2022
23 °C

ಅಂಧ ಯುವತಿ ಕೊಲೆಗೆ ಅತ್ಯಾಚಾರ ಆರೋಪಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಅಂಧ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ದೈಹಿಕ ಸಂಪರ್ಕ ನಡೆಸಿ, ಆಕೆ ಗರ್ಭ ಧರಿಸಿದ ನಂತರ ನೀರಿಲ್ಲದ ಬಾವಿಗೆ ನೂಕಿ ಸಾಯಿಸಲು ಯತ್ನಿಸಿದ ಅಮಾನವೀಯ ಘಟನೆ ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.



ಊಟ ಮತ್ತು ನೀರು ಇಲ್ಲದೆ ಬಾವಿಯಲ್ಲೇ ನರಳಾಡುತ್ತಿದ್ದ ಯುವತಿಯನ್ನು ಕುರಿ ಮೇಯಿಸುವರು ರಕ್ಷಿಸಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.



ಅತ್ಯಾಚಾರ ಎಸಗಿದ ಆರೋಪಿ ಆದೆಪ್ಪ (43) ಪರಾರಿಯಾಗ್ದ್ದಿದಾನೆ. `ನಮ್ಮದು ಕೃಷಿ ಕುಟುಂಬ. ಅಪ್ಪ- ಅಮ್ಮ ಕೂಲಿ ಕೆಲಸಕ್ಕೆ ಹೋಗುತ್ತಾರೆ. ನಮ್ಮ ತಂದೆಯನ್ನು ಭೇಟಿಯಾಗಲು ಆದೆಪ್ಪ ಪದೇ ಪದೇ ಮನೆಗೆ ಬರುತ್ತಿದ್ದ. ನನ್ನೊಂದಿಗೆ ಸಲಿಗೆ ಬೆಳೆಸಿಕೊಂಡ ಆತ ಮದುವೆಯಾಗುವುದಾಗಿ ನಂಬಿಸಿದ. ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡ. ಆತ ಹೇಗಿದ್ದರೂ ಮದುವೆಯಾಗುತ್ತಾನೆ ಎಂದು ನಾನು ಆತನೊಂದಿಗೆ ಸಂಬಂಧ ಹೊಂದಿರುವ ವಿಷಯವನ್ನು ಯಾರಿಗೂ ಹೇಳಲಿಲ್ಲ. ಆದರೆ, ನನ್ನನ್ನು ಗರ್ಭಿಣಿಯಾಗಿಸಿದ ಆತ ಭಾನುವಾರ ರಾತ್ರಿ ಬಾವಿಯೊಳಗೆ ನೂಕಿ ಸಾಯಿಸಲು ಯತ್ನಿಸಿದ' ಎಂದು ಯುವತಿ ಸುದ್ದಿಗಾರರಿಗೆ ತಿಳಿಸಿದರು.



`ಗರ್ಭಿಣಿಯಾಗಿರುವ ವಿಷಯ ತಿಳಿಸಿದಾಗ, ಆತ ಏನನ್ನೂ ನೇರವಾಗಿ ಪ್ರತಿಕ್ರಿಯಿಸಲಿಲ್ಲ. ಭಾನುವಾರ ಸಂಜೆ ಮನೆಗೆ ಬಂದ ಆತ ಮದುವೆ ಮಾಡಿಕೊಳ್ಳಲು ಅರಿಶಿಣ ಕೊಂಬು ತಂದಿರುವುದಾಗಿ ತಿಳಿಸಿದ. ದೂರ ಎಲ್ಲಿಯಾದರೂ ಹೋಗಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿದ. ಮನೆಯಿಂದ ನಾನು ಹೊರಬಂದ ಕೂಡಲೇ ಆತ `ಮತ್ತು' ಬರುವಂಥ ನೀರು ಕುಡಿಸಿದ. ನನಗೆ ಪ್ರಜ್ಞೆ ತಪ್ಪಿದಂತಾಯಿತು. ಬಾವಿಯಲ್ಲಿ ನೂಕಿದ್ದಂತೆ ಅನ್ನಿಸಿತು. ಬಾವಿಯಲ್ಲಿನ ಕಲ್ಲು ತಲೆಗೆ ಬಡಿದು ಮತ್ತೆ ಪ್ರಜ್ಞೆ ಕಳೆದುಕೊಂಡೆ.



ಸೋಮವಾರ ಬೆಳಿಗ್ಗೆ ಪ್ರಜ್ಞೆ ಬಂದಾಗ ನಾನು ಕಿರುಚುತ್ತಿರುವುದನ್ನು ಕೇಳಿ ಕುರಿ ಮೇಯಿಸುವರು ಅಲ್ಲಿಂದ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದರು' ಎಂದು ಯುವತಿ ಘಟನೆ ಬಗ್ಗೆ ವಿವರಿಸಿದರು.



`ಆದೆಪ್ಪ ಈಗಾಗಲೇ ವಿವಾಹಿತನಾಗಿದ್ದು, ಪತ್ನಿ, ಮಕ್ಕಳಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಆತ ಮೋಸ ಮಾಡಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ಆಕೆ ಸಾವನ್ನಪ್ಪಿರುವುದಾಗಿ ಆತ ಭಾವಿಸಿದ್ದ.  ಆಕೆಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆಕೆಯ ತಂದೆ-ತಾಯಿ ಮತ್ತು ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸಲಾಗುವುದು' ಎಂದು ಸಿಪಿಐ ಕೆ.ಪಿ.ಗೋಪಾಲರೆಡ್ಡಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.