ಅಂಧ ರಾಮು ಜಾದು ಪ್ರದರ್ಶನ ಇಂದು

7

ಅಂಧ ರಾಮು ಜಾದು ಪ್ರದರ್ಶನ ಇಂದು

Published:
Updated:

ಹುಬ್ಬಳ್ಳಿ: ಕಣ್ಣಿದ್ದವರು ಬಟ್ಟೆ ಕಟ್ಟಿಕೊಂಡು ಜಾದು ಮಾಡುವುದನ್ನು ನೋಡುತ್ತೇವೆ. ಆದರೆ ಹರಿಹರದ ರಾಮು ಅವರು ಅಂಧರಾಗಿದ್ದು, ಜಾದು ಮಾಡುತ್ತಾರೆ. ಅವರು ಮಾಡುವ ಜಾದುವನ್ನು ಇದೇ ಮೂರರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿಯ ವಿನಾಯಕನಗರದಲ್ಲಿಯ ಉಷಸ್ ವಿಶೇಷ ಮಕ್ಕಳ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.ಇದು ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿಶೇಷ ಪ್ರದರ್ಶನ. ಇನ್ನೊಂದು ವಿಶೇಷ ಎಂದರೆ; 57 ವರ್ಷದ ರಾಮು ಅವರು ಜಾದು ಕಲಿತದ್ದು ನಗರದ ಕೇಂದ್ರೀಯ ವಿದ್ಯಾಲಯದ ನಂ. 1ರ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಪಿ. ಆಶೀಶ್ ಬಳಿ. ಕೇವಲ ಒಂದು ವಾರ ತರಬೇತಿ ಪಡೆದು 15 ನಿಮಿಷಗಳ ಜಾದು ಕಾರ್ಯಕ್ರಮ ನೀಡುವಷ್ಟು ಅವರು ಪಳಗಿದ್ದಾರೆ.ಏಳನೇ ವರ್ಷದಲ್ಲಿದ್ದಾಗ ಚಿಕನ್ ಫಾಕ್ಸ್ ಬಂದ ಪರಿಣಾಮ ಕಣ್ಣು ಕಳೆದುಕೊಂಡ ರಾಮು ಅವರ ಮೊದಲಿನ ಹೆಸರು ಶಿವಮೂರ್ತಿ. ಆದರೆ ಅವರ ತಾಯಿ ರಾಮು ಎಂದು ಕರೆದ ಪರಿಣಾಮ ಅದೇ ಹೆಸರೇ ಕಾಯಂ ಆಯಿತು. ಮೂರನೇ ತರಗತಿಯವರೆಗೆ ಓದಿದ ನಂತರ ಮೈಸೂರಿನ ಅಂಧರ ಶಾಲೆಯಲ್ಲಿ ಒಂಬತ್ತನೆಯ ತರಗತಿವರೆಗೆ ಓದಿದರು.ಆಮೇಲೆ ತಬಲಾ ಬಾರಿಸುವುದನ್ನು ಹಾಗೂ ಕೊಳಲು ನುಡಿಸುವುದನ್ನು ಕಲಿತರು. ಜೊತೆಗೆ ಭಕ್ತಿಗೀತೆ ಹಾಗೂ ಭಾವಗೀತೆಗಳನ್ನು ಹಾಡುತ್ತಾರೆ. ನಾಯಕನಟ ಸುದೀಪ್ ಅಭಿನಯಿಸಿ, ನಿರ್ದೇಶಿಸಿರುವ `ಮೈ ಆಟೋಗ್ರಾಫ್' ಸಿನಿಮಾದ `ಅರಳುವ ಹೂವುಗಳೇ ಆಲಿಸಿರಿ, ಬಾಳೆಂಬ ಹೋರಾಟ ಮರೆಯದಿರಿ' ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿ ಕೊಳಲು ನುಡಿಸಿದ್ದಾರೆ.ಇಂಥ ರಾಮು ಅವರು ರೈಲುಗಳಲ್ಲಿ ಕೊಳಲು ನುಡಿಸುವಾಗ ರೈಲ್ವೆ ಇಲಾಖೆಯಲ್ಲಿ ಹಿರಿಯ ಲೋಕೋ ಪೈಲಟ್ ಆಗಿರುವ ಪಿ. ಮಂಜುನಾಥ ಭೇಟಿಯಾದರು. ಇಂಥ ವ್ಯಕ್ತಿಗೆ ಜಾದು ಕಲಿಸಬೇಕು ಅದರಲ್ಲೂ ತಮ್ಮ ಪುತ್ರ ಆಶೀಶ್ ಮೂಲಕ ಕಲಿಸಬೇಕೆಂದು ನಿರ್ಧರಿಸಿದರು. ಇದರ ಪರಿಣಾಮ ರಾಮು ಅವರು ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.`ಜಾದು ಹೇಳಲಾಗದು. ಮಾಡಿ ತೋರಿಸುವೆ' ಎನ್ನುವ ರಾಮು ಕುರುಡು ಪತ್ನಿ ಶಾರದಮ್ಮ ಅವರೊಂದಿಗೆ ಹರಿಹರದಲ್ಲಿ ನೆಲೆಸಿದ್ದಾರೆ. ಅವರಿಗೆ ಪುತ್ರಿ ರೇಣುಕಮ್ಮ ಹಾಗೂ ಪುತ್ರ ಮಂಜುನಾಥ ಮಕ್ಕಳಿದ್ದಾರೆ. ರೇಣುಕಮ್ಮ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. `ಅವರೆಲ್ಲ ಆರೋಗ್ಯವಾಗಿದ್ದಾರೆ. ಸೋಮವಾರ ಕಾರ್ಯಕ್ರಮವಿದ್ದರೂ ಭಾನುವಾರವೇ ಹುಬ್ಬಳ್ಳಿಗೆ ಬಂದೆ. ಬಹಳ ಖುಷಿಯಾಗಿದೆ. ನೋಡಲು ಕಣ್ಣಿಲ್ಲ. ಆದರೆ ಅನುಭವಿಸಲು ಕಾತರನಾಗಿರುವೆ' ಎನ್ನುತ್ತಾರೆ ರಾಮು.`ಭಾರತ ವಿಕಾಸ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಮು ಅವರ ಜಾದು ಪ್ರದರ್ಶನದ ನಂತರ ಉಷಸ್ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ' ಎಂದು ಜಾದುಗಾರ ಪಿ. ಮಂಜುನಾಥ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪಿ. ಆಶೀಶ್, ಭಾರತ ವಿಕಾಸ ಪರಿಷತ್ ಪದಾಧಿಕಾರಿಗಳಾದ ಅಮೃತಭಾಯಿ ಪಟೇಲ್, ದಯಾಭಾಯಿ ಪಟೇಲ್ ಹಾಗೂ ನರೇಂದ್ರ ನಾಯಕ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry